

ಹಿಂದೂಧರ್ಮ! ಬಹುಶಃ ಇದಕ್ಕಿಂತಲೂ ಅಧ್ಯಯನಯೋಗ್ಯ ವಿಷಯ ಮತ್ತೊಂದಿರಲಾರದು. ಕಾರಣ ಇಷ್ಟೇ. ಇಡೀ ಸೃಷ್ಟಿ, ಅದರ ವಿವಿಧ ಅಂಗಗಳು, ಪ್ರತಿಯೊಂದರ ರಚನೆ, ಅವುಗಳ ನಡುವಿನ ಸಂಬಂಧ, ಹೋಲಿಕೆಗಳು ಮತ್ತು ವ್ಯತ್ಯಾಸಗಳು, ಪ್ರತಿಯೊಂದರ ಅಸ್ತಿತ್ವದ ಉದ್ದೇಶ ಇವೆಲ್ಲವುಗಳ ನಡುವೆ ಕಿರೀಟದಂತಿರುವ ಮನುಷ್ಯ, ಅವನ ಸೃಷ್ಟಿ, ವಿಕಾಸ, ಗುರಿ ಇಂಥ ಸಾರ್ವಕಾಲಿಕ ಪ್ರಸ್ತುತ ಹಾಗೂ ಗಹನ ವಿಚಾರಗಳ ಬಗ್ಗೆ ಮತ್ತಾವ ಧರ್ಮದಲ್ಲೂ, ವಿಜ್ಞಾನಗಳಲ್ಲೂ ಸಿಗದಷ್ಟು ಪರಿಪೂರ್ಣ ಮತ್ತು ಕರಾರುವಾಕ್ಕಾದ ವಿವರಗಳು ಬುದ್ಧಪೂರ್ವ ಹಲವು ಸಹಸ್ರಮಾನಗಳಷ್ಟು ಹಿಂದೆಯೇ ಸಂಶೋಧಿಸಿ ಮಾನವ ಜಗತ್ತಿನ ಮುಂದೆ ಪ್ರಸ್ತುತಪಡಿಸಲ್ಪಟ್ಟ ಆ ಪ್ರಾಚೀನ ಹಾಗೂ ಆಕರ ಜ್ಞಾನರಾಶಿಗೆ ಇಂದು ನಾವು ಕರೆಯುತ್ತಿರುವುದು ಹಿಂದೂಧರ್ಮ ಎಂದು!
ನಾನು ಬರೆಯುತ್ತಿರುವ ಒಂದೊಂದು ವಾಕ್ಯವನ್ನೂ ಪ್ರಪಂಚದ ಯಾವ ವೇದಿಕೆಯಲ್ಲಾದರೂ ಸಾಬೀತುಪಡಿಸಬಲ್ಲೆ. ವಿದೇಶಗಳಲ್ಲಿ, ಸ್ವದೇಶದಲ್ಲಿ ಮತ್ತು ಹಲವಾರು ಸಭೆಗಳಲ್ಲಿ ಈ ಮಾತು ಹೇಳಿದ್ದೇನೆ. ಮುಂದೆ ಸ್ವಾಮಿ ವಿವೇಕಾನಂದರೆಂದು ಪ್ರಸಿದ್ಧರಾದ ಯುವಕ ನರೇಂದ್ರ ತಾನು ಅಧ್ಯಯನ ಮಾಡಿದ ಅದರಲ್ಲೂ ಧರ್ಮದ ಬಗ್ಗೆ ತನ್ನ ಗಮನಕ್ಕೆ ಬಂದ ಪ್ರತಿ ಪದ, ವಾಕ್ಯವನ್ನೂ ನೂರು ದೃಷ್ಟಿಕೋನಗಳಿಂದ ಸಂದೇಹಿಸಿ, ಪ್ರಶ್ನಿಸಿ, ವಿಶ್ಲೇಷಿಸಿ, ಪರಿಶೀಲನೆ ಮಾಡಿ ಒಪ್ಪಿಗೆ ಮುದ್ರೆ ಕೊಟ್ಟವನು. ನಮ್ಮ ಇಂದ್ರಿಯಗಳೇ ನಮಗೆ ಮೋಸ ಮಾಡುತ್ತವೆ. ನಮ್ಮ ಮನಸ್ಸೇ ನಮ್ಮನ್ನು ಭ್ರಾಂತಿಗೆ ತಳ್ಳುತ್ತದೆ ಎಂಬ ವೇದಾಂತ ಹಾಗೂ ಪಾಶ್ಚಾತ್ಯ ವಿದ್ವಾಂಸರ ಅನಿಸಿಕೆಯನ್ನು ನೂರಕ್ಕೆ ನೂರು ಆಧಾರವಾಗಿಟ್ಟುಕೊಂಡು ಪ್ರತಿಯೊಂದನ್ನೂ ಅಧ್ಯಯನ ಮಾಡಿದವನು. ರಾಮಕೃಷ್ಣರು ಅವನ ಕೈಯಲ್ಲಿ ಅಷ್ಠಾವಕ್ರ ಸಂಹಿತೆ ಓದಿಸಿದಾಗ ಅವರ ಮುಂದೆಯೇ ಆ ಚಿಂತನೆಯನ್ನು ಹಂಗಿಸಿ ಅವರಿಗೇ ಸವಾಲೆಸೆಯುವಂತೆ ನಕ್ಕಿದವನು. ಅವನ ಉದ್ದೇಶ ಕೇವಲ ಸತ್ಯಾನ್ವೇಷಣೆ! ಯಾವುದೋ ಪುಸ್ತಕದಲ್ಲಿದೆ; ಯಾರೋ ಮಹಾತ್ಮ ಹೇಳಿದ್ದಾರೆ ಎನ್ನುವುದು ಲೆಕ್ಕಕ್ಕೇ ಇಲ್ಲ ಅವನಿಗೆ. ಅಂಥ ವಿವೇಕಾನಂದರು ಕೊನೆಗೆ ಸಂಪೂರ್ಣವಾಗಿ ಶರಣಾಗಿದ್ದು ವೇದಾಂತ ಅಥವಾ ಅದರ ಭಾರತೀಯ ಆವೃತ್ತಿ (version) ಆದ ಹಿಂದೂಧರ್ಮಕ್ಕೆ. ಕಾರಣವಿಷ್ಟೇ! ಅದರ ಮಿತಿಯಿಲ್ಲದ ವ್ಯಾಪ್ತಿ (range) ಹುಬ್ಬೇರಿಸುವ ತರ್ಕಬದ್ಧತೆ (rationality) ಮತ್ತು ಮುದವೇರಿಸುವ ಸಾರ್ವತ್ರಿಕತೆ (universality), ಚಿಕಾಗೋ ಪಾರ್ಲಿಮೆಂಟಿನ ಕೊನೆಯ ಉಪನ್ಯಾಸದಲ್ಲಿ ವಿಶ್ವಧರ್ಮವೊಂದರ ಲಕ್ಷಣಗಳೇನು ಎಂಬುದನ್ನು ಸ್ಪಷ್ಟವಾಗಿ ವಿಷದಪಡಿಸುತ್ತಾರೆ. ಅದನ್ನು ಓದಿದವರಿಗೆ ಒಮ್ಮೆಲೆ ಅರ್ಥವಾಗುವುದು ಅವರು ’ಹಿಂದೂಧರ್ಮ’ವನ್ನು ಕುರಿತೇ ಪ್ರಸ್ತುತಪಡಿಸುತ್ತರುವುದು; ಹೆಸರನ್ನು ಹೇಳುತ್ತಿಲ್ಲ ಅಷ್ಟೇ ಎಂದು. ಇಲ್ಲದಿದ್ದಲ್ಲಿ ತಮ್ಮ ಲಾಹೋರ್ ಉಪನ್ಯಾಸದಲ್ಲಿ ನಾನು ಹಿಂದೂ ಎಂದು ಹೇಳಿಕೊಳ್ಳುವುದೇ ನನಗೊಂದು ಹೆಮ್ಮೆ. ಜಗತ್ತು ಎಂದೂ ಇನ್ನೆಲ್ಲಿಯೂ ಕಾಣದ ಮಹಾಮಹಿಮ ಋಷಿಗಳ ವಂಶಕ್ಕೆ ಸೇರಿದ ನೀವು ನನ್ನ ಬಾಂಧವರಾಗಿರುವುದೇ ನನಗೊಂದು ಹೆಮ್ಮೆ. ಆದ್ದರಿಂದ ಆತ್ಮಶ್ರದ್ಧೆ ಉಳ್ಳವರಾಗಿ ನಿಮ್ಮ ಹಿರಿಯರಿಂದ ನಿಮಗೆ ಅಪಕೀರ್ತಿ ತಾಗಿತೆನ್ನದಿರಿ. ಅವರಿಂದ ನಿಮಗೆ ಕೀರ್ತಿ ಬಂದಿತೆಂದು ಹೆಮ್ಮೆಪಡಿ ಎಂದು ಹೇಳುತ್ತಿರಲಿಲ್ಲ. ಅಷ್ಟೇ ಅಲ್ಲ ಮುಂದುವರೆದು ಸಂಪ್ರದಾಯಗಳಿಗಾಗಲಿ ಜನರಿಗಾಗಲಿ ಗಮನಕೊಡದೆ ‘ಹಿಂದೂ’ ಎಂಬ ಹೆಸರನ್ನು ತಾಳಿದ ಪ್ರತಿಯೊಬ್ಬರ ಮಹತ್ವವನ್ನು ತಿಳಿದು ಅವನನ್ನು ಆಲಂಗಿಸಿ, ಯಾವುದೇ ದೇಶಕ್ಕೆ ಸೇರಿದವರಾಗಲಿ, ಯಾವುದೇ ಭಾಷೆಯನ್ನು ಮಾತನಾಡುತ್ತಿರಲಿ ಹಿಂದೂ ಎಂಬ ಹೆಸರನ್ನು ಹೊತ್ತವನು ನಮಗೆ ಅತ್ಯಂತ ನಿಕಟನೂ, ಪ್ರಿಯನೂ ಆದಾಗ ಮಾತ್ರ ನೀವು ಹಿಂದೂಗಳು! ಎಂದು ’ಹಿಂದೂ’ ಎಂಬ ಹೆಸರನ್ನು ಕೇಳಿದ ತಕ್ಷಣ ನಮ್ಮಲ್ಲಿ ಶಕ್ತಿ ಉದ್ಭವಿಸುವುದೋ, ಎಂದು ಆ ಹೆಸರಿನಿಂದ ಜೀವಿಸುತ್ತಿರುವ ಪ್ರತಿಯೊಂದರ ಸಂಕಟವೂ ನಿಮ್ಮ ಮನಸ್ಸನ್ನು ತಾಗಿ ನಿಮ್ಮ ಪುತ್ರನ ಸಂಕಟ ನಿಮಗೆ ಎಷ್ಟು ವ್ಯಥೆಯನ್ನುಂಟುಮಾಡುವುದೋ ಅಷ್ಟೇ ವ್ಯಥೆಯನ್ನುಂಟು ಮಾಡುವುದೋ ಆಗ ನೀವು ನಿಜವಾದ ಹಿಂದೂಗಳು ಎಂದೂ ತಮ್ಮ ಅದೇ ಉಪನ್ಯಾಸದಲ್ಲಿ ಅಬ್ಬರಿಸುತ್ತಿರಲಿಲ್ಲ! ಕಾರಣವೇನು? ವಿಶ್ವಮಾನವನ ಈ ಅನನುಕರಣೀಯ ರಾಷ್ಟ್ರಪ್ರೇಮದ ಹಿಂದಿನ ನಾಡಿ ಮಿಡಿತ ಯಾವುದು ಎಂದು ವಿಶ್ಲೇಷಿಸಿದರೆ ಅವರೇ ಹೇಳುವಂತೆ ಇಡೀ ಮಾನವ ಜನಾಂಗಕ್ಕೆ ಅತ್ಯಂತ ಉತ್ಕೃ್ಟವಾದ, ಉನ್ನತವಾದ, ಶಾಶ್ವತವಾದ ಉದ್ಧಾರದ ನಾಡಿಯನ್ನು ನಿರ್ವಿುಸಿ ಕೊಡುಗೆಯನ್ನಾಗಿ ನೀಡಿದ ಜನಾಂಗ ಹಿಂದೂವಿನದ್ದು. ಇಡೀ ಮಾನವ ಜನಾಂಗಕ್ಕೆ! ಕೇವಲ ತಮ್ಮ ಜನರಿಗಾಗಿ ಅಲ್ಲ!!
ಅವರೇ ಹೇಳುವಂತೆ ಮಾನವನ ಮನಸ್ಸನ್ನು ಆವರಿಸಬಲ್ಲ ವಿಷಯಗಳಲ್ಲಿ ಮಹತ್ತಾದ ಘನವಾದ ಮತ್ತು ಅತ್ಯುನ್ನತವಾದ ಪ್ರಸಂಗ ಯಾವುದೆಂದರೆ ತತ್ವವಿಚಾರ ಮತ್ತು ಆತ್ಮವಿದ್ಯೆ. ಇವುಗಳನ್ನು ದಾನಮಾಡಿ ನಮ್ಮ ಭಾರತಭೂಮಿ ಈ ಜಗತ್ತಿನ ಪ್ರಗತಿಮಾರ್ಗಕ್ಕೆ ಮಹಾಸಹಾಯವನ್ನು ಮಾಡಿದೆ. ನಮ್ಮ ಪೂರ್ವಿಕರು ಇನ್ನೂ ಅನೇಕ ವಿಷಯಗಳನ್ನು ತಿಳಿಯಲು ಪ್ರಯತ್ನಿಸಿದ್ದರೆಂಬುದೂ ಇತರ ಜನಾಂಗದವರಂತೆ ಅವರು ಬಾಹ್ಯಪ್ರಪಂಚದ ಗುಟ್ಟನ್ನೂ ಹೊರಗೆಡವಲು ಯತ್ನಿಸುತ್ತಿದ್ದರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಈ ವಿಷಯದಲ್ಲಿ ಅತ್ಯಂತ ಪ್ರತಿಭಾವಂತರಾದ ಈ ಅದ್ಭುತ ಜನರು ಜಗತ್ತು ಹೆಮ್ಮೆ ಪಡುವಂತಹ ಪವಾಡ ಸದೃಶವಾದ ಸಂಗತಿಗಳನ್ನು ಪ್ರಕಟಿಸಬಹುದಾಗಿತ್ತು. ಆದರೆ ಇದಕ್ಕೂ ಅತಿಶಯವಾದ ಇನ್ನೊಂದು ವಿಷಯದ ಸಲುವಾಗಿ ಬಾಹ್ಯ ವಿಷಯಗಳ ಪ್ರಸ್ತಾಪವನ್ನು ಬಿಟ್ಟರು. ಈ ಬಾಹ್ಯ ವಿಷಯಗಳಿಗಿಂತಲೂ ಅತ್ಯುತ್ತಮವಾದ ವಿಷಯಗಳನ್ನು ನಮ್ಮ ವೇದಗಳು ಸಾರುತ್ತವೆ. ವಿಕಾರ ರಹಿತವಾದ ಪರಮಾತ್ಮನನ್ನು ನಮಗೆ ಯಾವುದು ತೋರಿಸಿಕೊಡುವುದೋ ಅದೇ ಸವೋತ್ಕ್ರಷ್ಟವಾದ ವಿಜ್ಞಾನ ಎಂದು ಅವು ಸಾರುತ್ತಿರುವವು. ಸಾವು ಕೇಡು, ಸುಖ ದುಃಖ ಇವುಗಳಿಂದ ತುಂಬಿರುವ, ವಿಕಾರ ಹೊಂದುವ ಬಾಹ್ಯಪ್ರಪಂಚದ ಅರಿವನ್ನು ನಮಗೆ ಮಾಡಿಕೊಡುವ ವಿಜ್ಞಾನವು ಮಹತ್ವವಾಗಿರಬಹುದು ನಿಜ. ಆದರೆ ಯಾವನಿಂದ ಶಾಂತಿ ಅಮೃತತ್ವ ಪರಿಪೂರ್ಣತೆ ಇವು ಲಭಿಸಿ, ದುಃಖ ಎಂಬುದು ಸಂಪೂರ್ಣವಾಗಿ ಅಳಿಸಿಹೋಗುವುದೋ ಅಂತಹ ಅಚ್ಯುತನೂ, ಅನಂತನೂ ಮಂಗಳಮಯನೂ ಆದ ಪರಬ್ರಹ್ಮನನ್ನು ತೋರಿಸುವ ಜ್ಞಾನವೇ ಅತಿ ಭವ್ಯವಾದುದೆಂದು ನಮ್ಮ ಪ್ರಾಚೀನರು ಅಭಿಪ್ರಾಯಪಟ್ಟರು. ನಮ್ಮವರು ಇಷ್ಟಪಟ್ಟಿದ್ದರೆ ನಮಗೆ ಅನ್ನ, ವಸ್ತ್ರಗಳನ್ನು, ನಮ್ಮ ನೆರೆಹೊರೆಯವರ ಮೇಲೆ ಅಧಿಕಾರವನ್ನು, ಅನ್ಯರನ್ನು ಜಯಿಸಿ ಅವರನ್ನಾಳುವ ಮರ್ಮವನ್ನು, ಬಲಿಷ್ಠರು ದುರ್ಬಲರನ್ನು ಆಳುವುದನ್ನೂ ಕಲಿಸಿಕೊಡುವ ಶಾಸ್ತ್ರಗಳನ್ನು ರಚಿಸಬಹುದಾಗಿತ್ತು. ಆದರೆ ದೈವಕೃಪೆಯಿಂದ ಅವರು ಪ್ರಾರಂಭದಲ್ಲೇ ಅತಿ ಮಹತ್ತಾದ, ಅತ್ಯುನ್ನತವಾದ ಅತಿ ಮಂಗಳಕರವಾದ ಶಾಂತಿಯುತವಾದ ಬೇರೊಂದು ಮಾರ್ಗವನ್ನು ಹಿಡಿದರು. ಈ ಮಾರ್ಗವು ನಮ್ಮ ರಾಷ್ಟ್ರಲಕ್ಷಣವಾಗಿದೆ ನಮ್ಮಲ್ಲಿ ಈ ಗುಣವು ಸಾವಿರಾರು ವರ್ಷಗಳಿಂದಲೂ ವಂಶಪಾರಂಪರ್ಯವಾಗಿ ಬರುತ್ತಿದೆ. ಅದು ನಮ್ಮ ಮುಖ್ಯಾಂಶವಾಗಿಬಿಟ್ಟಿದೆ. ನಮ್ಮ ರಕ್ತನಾಳಗಳಲ್ಲಿ ಹರಿಯುವ ಒಂದೊಂದು ಬಿಂದುವಿನಲ್ಲಿಯೂ ಕಂಪಿಸತೊಡಗಿದೆ. ನಮ್ಮ ಎರಡನೆಯ ಸ್ವಭಾವವಾಗಿ ಪರಿಣಮಿಸಿದೆ. ಧರ್ಮ ಮತ್ತು ಹಿಂದೂ ಎಂಬ ಈ ಎರಡು ಶಬ್ಧಗಳು ಒಂದೇ ಅರ್ಥ ಕೊಡುವಂತೆ ಮಾಡಿದೆ. ಇದೇ ಜನಾಂಗದ ಜೀವಕಳೆ. ಕೋವಿಯನ್ನು ಮತ್ತು ಕತ್ತಿಯನ್ನು, ತಮ್ಮ ಅನಾಗರಿಕ ಧರ್ಮಗಳನ್ನು ತಂದ ಬರ್ಬರರು ರಾಷ್ಟ್ರದ ಈ ಸಾರವಸ್ತುವನ್ನು, ಈ ’ರತ್ನ’ವನ್ನೂ ಮುಟ್ಟಲಾಗಲಿಲ್ಲ. ಜನರ ಜೀವಶಕ್ತಿಯನ್ನು ರಕ್ಷಿಸಿ ಇಟ್ಟುಕೊಂಡಿರುವ ಈ ಪಕ್ಷಿಯನ್ನು ಕೊಲ್ಲಲು ಅವರು ಸಮರ್ಥರಾಗಲಿಲ್ಲ. ಇದೇ ಜನಾಂಗದ ಸತ್ವ, ಈ ಚೈತನ್ಯವಿರುವ ತನಕ ನಮ್ಮ ಜನಾಂಗವನ್ನು ಕೊಲ್ಲುವ ಶಕ್ತಿ ಯಾವುದೂ ಈ ಜಗತ್ತಿನಲ್ಲಿಲ್ಲ. ಈ ಶಬ್ಧಗಳಲ್ಲಿ ಸ್ವಾಮಿ ವಿವೇಕಾನಂದರು ನಮ್ಮ ಜನಾಂಗದ ಅಂತಃಸತ್ವವೇ ಸತ್ಯವನ್ನು ಅನಾವರಣಗೊಳಿಸುವಲ್ಲಿ ನಾವು ತೋರಿದ ಸಾಮರ್ಥ್ಯ ಹಾಗೂ ಆದ್ಯತೆ ಎಂಬುದನ್ನು ತೋರಿಸುತ್ತಾರೆ.
ಹಿಂದೂ ಯಾರು? ಹಿಂದೂಧರ್ಮ ಎಂದರೆ ಏನು? ಜಗತ್ತಿನ ಹಿತಕ್ಕೆ ಹಿಂದೂಗಳ ಕೊಡುಗೆ ಏನು? ಹಿಂದೂಧರ್ಮದ ಆಂತರಿಕ ಶಕ್ತಿ ಎಷ್ಟು ಅಜೇಯವಾಗಿದೆ? ಆಕ್ರಮಣಕಾರರು ಅಸಹಾಯಕರಾದದ್ದು ಎಲ್ಲಿ? ಎಂಬುದನ್ನು ವಿವೇಕಾನಂದರ ವಿಶ್ಲೇಷಣೆಯಲ್ಲಿ ಯಾರಿಗೂ ಅರ್ಥವಾಗುವಷ್ಟು ನಿಚ್ಚಳವಾಗಿದೆ. ಪ್ರಪಂಚದ ಬೇರೆಬೇರೆ ವಿಶ್ಲೇಷಕರು, ಚಿಂತಕ, ದಾರ್ಶನಿಕರು ’ಹಿಂದೂಧರ್ಮ’ವನ್ನು ಪ್ರಶಂಸಿಸುವುದನ್ನು ಸಂಗ್ರಹಿಸಿದರೆ ಅದೊಂದು ಬೃಹತ್ ಹೊತ್ತಿಗೆಯಾದೀತು! ಆಧುನಿಕ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಪ್ರಾಚೀನ ಹಿಂದೂ ಚಿಂತನೆಗಳ ಪ್ರತಿಧ್ವನಿ ಎಂದು ನೇರವಾಗಿ ಹೇಳಿದ್ದಾರೆ. ವಿಶ್ವವಿಖ್ಯಾತ ನೋಬೆಲ್ ಸಾಹಿತಿ.ಖ.ನೈಪಾಲ್ ನನಗೆ ವಯಸ್ಸಾದಂತೆಲ್ಲಾ ನಾನು ಹೆಚ್ಚು ಹೆಚ್ಚು ಹಿಂದುವಾಗುತ್ತಿದ್ದೇನೆ ಎಂದು ಉದ್ಘೋಷಿಸಿದ್ದಾರೆ. ಇದನ್ನು ನೋಡಿ ಕರ್ನಾಟಕದ ಸ್ವಘೊಷಿತ ಬುದ್ಧಿಜೀವಿಗಳು ತಳಮಳಿಸಿ ಮೈ ಪರಚಿಕೊಂಡು ಒದ್ದಾಡಿದ್ದು ನನಗೆ ನೆನಪಿದೆ. ನಲ್ವತ್ತು ವರ್ಷಗಳ ಕಾಲ ಪ್ರಪಂಚದ ಬೇರೆಬೇರೆ ಧರ್ಮಗಳ ಅಧ್ಯಯನ ಮಾಡಿದ ಶ್ರೀಮತಿ ಅನ್ನಿಬೆಸೆಂಟ್ ಕೊನೆಗೆ ಉದ್ಗರಿಸಿದ್ದು I have found none so scientific, so spiritual , so philosophical, so perfect as the great religion known by the name Hinduism ಎಂದು.
ಪ್ರಕೃತಿಯ ವಿಸ್ಮಯಕಾರಿ ಘಟನೆಗಳಿಂದ ಕುತೂಹಲಗೊಂಡು ಅವುಗಳ ರಹಸ್ಯಗಳನ್ನು ಬೇಧಿಸಹೊರಟ ’ಋಷಿ’ ಇಡೀ ವಿಶ್ವವನ್ನೇ ಅಧ್ಯಯನಮಾಡಿ ಮುಗಿಸಿ ವಿಶ್ರಮಿಸ ಹೊರಟಾಗ ಅವನ ಎದುರಿಗೆ ಪೆಡಂಭೂತದಂತೆ ನಿಂತು ಹಂಗಿಸತೊಡಗಿದ್ದು ಮನುಷ್ಯನ ಮೃತ್ಯು ಎಂಬ ಸವಾಲು. ಸಿದ್ಧಾರ್ಥನಿಗಾದಂತೆ. ಅದರ ರಹಸ್ಯವನ್ನೂ ಭೇದಿಸಿ ಆತ್ಮ , ಬ್ರಹ್ಮಗಳ ಐಕ್ಯವನ್ನು , ಜಗತ್ತು ಮತ್ತು ಮನಸ್ಸುಗಳ ಐಕ್ಯವನ್ನು , ಅಹಂ ಮತ್ತು ಆತ್ಮಗಳ ಪ್ರತ್ಯೇಕತೆಯನ್ನು ಬಿಚ್ಚಿಟ್ಟಾಗ ಅವನಿಗೆ ಉಳಿದಿದ್ದು ಯಾವುದೂ ಇರಲಿಲ್ಲ. ಇದನ್ನು ಮಾಡಿದ್ದು ಪಾಶ್ಚಾತ್ಯ ಜಗತ್ತು ಪೂರ್ಣಪ್ರಮಾಣದಲ್ಲಿ ಇನ್ನೂ ಮನುಷ್ಯನ್ನಾಗಿ ವಿಕಾಸಹೊಂದದಿದ್ದಾಗ.
ಇಂಥ ಅದ್ಭುತ ವಿಜ್ಞಾನಗಳ ರಾಶಿ, ಮೂಲ ವಿಜ್ಞಾನ, ಪೂರ್ಣವಿಜ್ಞಾನದ ಸ್ಥಾಪಕ ಯಾರು? ಅದರ ಹುಟ್ಟು ಯಾವಾಗ? ಯಾವೂರಲ್ಲಿ? ಎನ್ನುವ ಪ್ರಶ್ನೆಗಳಿಗೆ ಉತ್ತರ ಜಗತ್ತು ಹುಟ್ಟಿದ್ದು ಯಾವೂರಲ್ಲಿ? ಯಾವಾಗ? ಅದರ ಕತೃ ಯಾರು? ಎನ್ನುವ ಪ್ರತಿಪ್ರಶ್ನೆಯೇ. ಸತ್ಯದ ಸ್ಥಾಪಕ ಯಾರು? ಅದರ ಹುಟ್ಟೂರು ಯಾವುದು? ಹುಟ್ಟಿದ್ದು ಎಲ್ಲಿ? ಎನ್ನುವ ಮರು ಪ್ರಶ್ನೆಗಳೇ ಉತ್ತರ. ಅರವಿಂದರು ಹೇಳುವಂತೆ A continuously enlarging tradition of the Godward endeavour of the human spirit An immense many sided many staged provision for a spiritual self building self finding ಎನ್ನುವುದೇ ಹಿಂದೂ ಧರ್ಮ. ಇಲ್ಲಿ ಒಂದು ಕಾಲಕ್ಕೆ ಒಂದು ಸ್ಥಳಕ್ಕೆ ಒಂದು ಜನಾಂಗಕ್ಕೆ ಮಾತ್ರ ಅನ್ವಯಿಸುವ ಒಂದು ಪದವೂ ಇಲ್ಲ ಒಂದು ವಾಕ್ಯವೂ ಇಲ್ಲ. ಅದು ಆಧರಿಸಿರುವುದು ಇಡೀ ವಿಶ್ವವನ್ನು ಮತ್ತು ಮನುಷ್ಯನನ್ನು , ಮನುಷ್ಯನ ಒಳರಚನೆಯನ್ನು. ಅದಾದರೋ ಪ್ರತಿಯೊಬ್ಬನಿಗೂ ಒಂದೇ ಇದೆ. ಇತಿಹಾಸ ಇಣುಕಿ ನೋಡಲಾರದಷ್ಟು ಹಳೆಯದು ಅದು. ಮೆಗಾಸ್ತನೀಸ್ ತನ್ನ ’ಇಂಡಿಕಾ’ದಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ಬರುವ ವೇಳೆಗೆ ಈ ದೇಶವನ್ನು ನೂರೈವತ್ತಕ್ಕೂ ಹೆಚ್ಚು ತಲೆಮಾರುಗಳು ಆಳಿವೆ ಎಂದು ಉಲ್ಲೇಖಿಸುತ್ತಾನೆ. ಸೃಷ್ಟಿಕರ್ತ ತನ್ನ ಸೃಷ್ಟಿಯನ್ನು ಮಾಡಿದ್ದೇ ವೇದಗಳೆಂಬ ನೀಲನಕ್ಷೆಯನ್ನಾಧರಿಸಿ ಎಂಬ ವಾಕ್ಯ ಅರ್ತಾಕವೆಂದೇನೂ ಅನಿಸುವುದಿಲ್ಲ. ರಷ್ಯಾದ ವೋಲ್ಗಾ ನದಿಯಿಂದ ಹಿಡಿದು ಬಿಹಾರದ ಮಿಥಿಲೆಯವರೆಗೆ ಪಸರಿಸಿದ್ದ ಬೃಹತ್ ಬೀಡಿನಲ್ಲಿ ಸಾವಿರಾರು ಋಷಿಗಳು ಕೆಲ ಸಹಸ್ರಮಾನಗಳಲ್ಲಿ ರಚಿಸಿದ ವೇದಗಳೆಂಬ ಚಿಂತನ ಲೋಕದಲ್ಲಿ ಕಾಣುವ ಅದ್ಭುತ ಏಕಸೂತ್ರತೆ, ಎಲ್ಲೂ ಎರಡು ವಾಕ್ಯಗಳ ನಡುವೆ ವಿರೋಧಾಭಾಸ ಇಲ್ಲದಿರುವುದು ಮ್ಯಾಕ್ಸ್ ಮುಲ್ಲರ್, ಪಾಲ್ ಡ್ಯೂಸನ್, ಥೋರೋ, ವಿಲ್ ಡ್ಯೂರಂಟ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರನ್ನು ಮೂಕರನ್ನಾಗಿಸಿದೆ. ಅಷ್ಟೇ ಏಕೆ! ಸ್ವಯಂ ವಿವೇಕಾನಂದರೇ ತಮ್ಮ ಲಾಹೋರ್ ಉಪನ್ಯಾಸದಲ್ಲಿ ಎಷ್ಟು ಭಾವುಕರಾಗಿದ್ದರು ಎಂಬುದನ್ನು ನೋಡಿದ್ದೇವೆ. ಗಮನಿಸಿ ಯಾವಾಗಲೂ ಮಹಾಸತ್ಯಗಳಿಗೆ ಸ್ಥಾಪಕರಿರುವುದಿಲ್ಲ ಇದ್ದರೂ ಅವರು ಕೇವಲ ದೃಷ್ಟಾರರು ಮಾತ್ರ. ಯಾವ ವಿಜ್ಞಾನದ ವಿಷಯವೂ ಹಾಗೆಯೇ ತಾನೆ.
ನಮ್ಮಲ್ಲಿ ಬಹಳಷ್ಟು ಚಿಂತಕರಿಗೆ ಚಿಂತೆಯಾಗಿರುವುದೇ ಇಷ್ಟೆಲ್ಲಾ ವೈಭವ ಈ ಧರ್ಮಕ್ಕಿದೆಯಲ್ಲ ಎಂಬುದು. ಆದ್ದರಿಂದಲೇ ನೂರಾರು ವರ್ಷಗಳ ಹಿಂದೆಯೇ ಸ್ವಯಂ ವಿವೇಕಾನಂದರೇ ಇದನ್ನೆಲ್ಲ ಜಗಜ್ಜಾಹೀರುಗೊಳಿಸಿದ್ದರೂ ಅವರಿಗೆ ಅದೇನೋ ಜಾಣ ಕುರುಡುತನ. ಅವರ ಶಿಷ್ಯರೇ ಬರೆಯುವ ಪಠ್ಯಗಳಲ್ಲೂ ಅದೇ ಪ್ರತಿಫಲನ. ಅದೂ ಸರಿಯೇ ಸತ್ಯವನ್ನು ಜೀರ್ಣಿಸಿಕೊಳ್ಳುವುದು ಎಲ್ಲರಿಗೂ ಹೇಗೆ ಸಾಧ್ಯ! ಆಹಾರವನ್ನು ಜೀರ್ಣಿಸಿಕೊಳ್ಳುವಷ್ಟು ಸುಲಭವಲ್ಲವಲ್ಲ!! ಆದರೆ ನೆನಪಿಟ್ಟುಕೊಳ್ಳಬೇಕು ವಿಜ್ಞಾನದ ಪ್ರಥಮ ಶತೃ ಪೂರ್ವಾಗ್ರಹ ಮತ್ತು ಸತ್ಯಗಳನ್ನು ಮತ್ತು ಬೆಂಕಿಯನ್ನು ಬಹುಕಾಲ ಬಚ್ಚಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಸತ್ಯಮೇವ ಜಯತೇ ನಾನೃತಂ ಅರ್ಥಾತ್ ಸತ್ಯಕ್ಕೇ ಜಯ ಅನೃತಕ್ಕಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದು ನಮ್ಮ ದೇಶವೇ! ನಮ್ಮ ಉಪನಿಷತ್ತುಗಳೇ !!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)