ಹಿಂದೂ, ಹಿಂದುತ್ವ ಕಾಂಗ್ರೆಸ್ಸಿನ ಹೊಸ ಪ್ರಹಾರ!

Column F
Published on
ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ನಾಡಿನಲ್ಲಿ ಹಿಂದೂ ರಾಷ್ಟ್ರೀಯತೆ ಮೈದಳೆದಿದ್ದು ಕಂಡುಬಂತು. ಅಲ್ಲಿಯವರೆಗೂ ಹಿಂದೂ ರಾಷ್ಟ್ರೀಯತೆ ರಾಮಮಂದಿರ, ಆರ್ಟಿಕಲ್ 370, ಒಂದಷ್ಟು ಕೇಸರಿ ಬಾವುಟಗಳು ಇವುಗಳಾಚೆಗೆ ಹೊರಳಿರಲಿಲ್ಲ. ಎಲ್ಲರನ್ನೂ ಹಿಂದೂ ಛತ್ರಛಾಯೆಯಡಿ ತರುವ ಪ್ರಯತ್ನದಲ್ಲಿ ಮೋದಿ ಯಶಸ್ವಿಯಾದರು.

ಮೊದಲ ಬಾರಿಗೆ ರಾಹುಲ್ 2024ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಚಾರಕಾರ್ಯ ಆರಂಭಿಸಿಬಿಟ್ಟಿದ್ದಾರೆ. ಈ ದೇಶವನ್ನು ಭಿನ್ನ-ಭಿನ್ನ ಸ್ವರೂಪಗಳಲ್ಲಿ ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್ಸು ಯಾವಾಗಲೂ ಮಾಡಿಕೊಂಡು ಬಂದಿದೆ. ಒಮ್ಮೆ ಜಾತಿಯ ಹೆಸರಿನಲ್ಲಿ, ಮತ್ತೊಮ್ಮೆ ಭಾಷೆಯ ಹೆಸರಿನಲ್ಲಿ. ಮತ-ಪಂಥಗಳ ತಾಕಲಾಟಗಳನ್ನು ತುಷ್ಟೀಕರಣದ ಮೂಲಕ ಹೆಚ್ಚಿಸಿ ಬಹುಸಂಖ್ಯಾತರನ್ನು ಒಡೆದು ತಮ್ಮ ವೋಟ್​ಬ್ಯಾಂಕನ್ನು ವೃದ್ಧಿಸಿಕೊಳ್ಳುವ ಪ್ರಯತ್ನವನ್ನು ನೆಹರು ಕಾಲದಿಂದಲೂ ಮಾಡುತ್ತಲೇ ಬರಲಾಗಿದೆ. ಇಂದಿರಾ ಸೆಕ್ಯುಲರ್ ಪದವನ್ನು ಸಂವಿಧಾನಕ್ಕೆ ಸೇರಿಸಿ ಹಿಂದೂಗಳು ತಮ್ಮನ್ನೇ ತಾವು ಅನುಮಾನದಿಂದ ನೋಡುವಂತೆ ಮಾಡಿಬಿಟ್ಟಿದ್ದರು. ಸಿಖ್ಖರ ಮಾರಣಹೋಮವಾದಾಗ ರಾಜೀವ್ ‘ದೊಡ್ಡದೊಂದು ಮರ ಉರುಳಿದಾಗ ಒಂದಷ್ಟು ಸಾವುಗಳು ಖಚಿತ’ ಎಂದು ಹೇಳುವ ಮೂಲಕ ಸಿಖ್ಖರನ್ನು ಮುಖ್ಯವಾಹಿನಿಯಿಂದ ದೂರತಳ್ಳುವ ಪ್ರಯತ್ನ ಮಾಡಿಬಿಟ್ಟಿದ್ದರು. ಸೋನಿಯಾ ಅಧಿಕಾರ ನಡೆಯುವಾಗ ಸಾಚಾರ್ ಸಮಿತಿಯ ವರದಿಯ ಆಧಾರದ ಮೇಲೆ ಈ ದೇಶದ ಸಂಪನ್ಮೂಲಗಳ ಮೊದಲ ಹಕ್ಕು ಮುಸಲ್ಮಾನರದ್ದೇ ಎಂದು ಹೇಳುವ ಮೂಲಕ ದೊಡ್ಡದೊಂದು ಕಂದಕವನ್ನು ಹಿಂದೂ-ಮುಸಲ್ಮಾನರ ನಡುವೆ ಹುಟ್ಟುಹಾಕುವ ಪ್ರಯತ್ನ ಮಾಡಲಾಗಿತ್ತು. ರಾಹುಲ್ ಅದರ ಮುಂದಿನ ಹೆಜ್ಜೆ ಈಗ ಇಡುತ್ತಿದ್ದಾರೆ.

ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ನಾಡಿನಲ್ಲಿ ಹಿಂದೂ ರಾಷ್ಟ್ರೀಯತೆ ಮತ್ತೊಮ್ಮೆ ಮೈದಳೆದಿದ್ದು ಕಂಡುಬಂತು. ಅಲ್ಲಿಯವರೆಗೂ ಹಿಂದೂ ರಾಷ್ಟ್ರೀಯತೆ ರಾಮಮಂದಿರ, ಆರ್ಟಿಕಲ್ 370, ಒಂದಷ್ಟು ಕೇಸರಿ ಬಾವುಟಗಳು ಇವುಗಳಾಚೆಗೆ ಹೊರಳಿರಲಿಲ್ಲ. ರಾಮಮಂದಿರದ ಗುರಿಯನ್ನಿಟ್ಟುಕೊಂಡ ನಂತರವೂ ಎಲ್ಲ ಜಾತಿ-ಮತ-ಪಂಥಗಳನ್ನು ಒಗ್ಗೂಡಿಸುವ ಸಾಮರ್ಥ್ಯ ಬಿಜೆಪಿಗೆ ಬಂದಿರಲಿಲ್ಲ. ಮೋದಿ ವ್ಯವಸ್ಥಿತ ಲೆಕ್ಕಾಚಾರದ ಮೂಲಕ ಎಲ್ಲರನ್ನೂ ಹಿಂದೂ ಛತ್ರಛಾಯೆಯಡಿ ತರುವ ಪ್ರಯತ್ನ ಮಾಡಿ ಯಶಸ್ವಿಯೂ ಆಗಿಬಿಟ್ಟರು. ಯಾವ ದಿಕ್ಕಿನಿಂದ ನೋಡಿದರೂ ಮೋದಿಯ ಆಗಮನವಾಗದಿದ್ದರೆ ಕಾಂಗ್ರೆಸ್ಸು ದಶಕಗಳಷ್ಟು ದೀರ್ಘಕಾಲ ಅಧಿಕಾರ ಕಳೆದುಕೊಳ್ಳುವ ಸ್ಥಿತಿಯೇ ಸೃಷ್ಟಿಯಾಗುತ್ತಿರಲಿಲ್ಲ. ಹೀಗಾಗಿಯೇ ದೇವೇಗೌಡರು ‘ಮೋದಿ ಏಕಾಂಗಿಯಾಗಿ ಬಹುಮತ ಪಡೆದರೆ ದೇಶಬಿಟ್ಟು ಹೋಗುತ್ತೇನೆ’ ಎಂದು ಹೇಳಿದ್ದು. ಮೋದಿ ಎರಡೆರಡು ಬಾರಿ ಬಹುಮತ ಪಡೆದು ಅಂತಹ ಬಲಾಢ್ಯ ರಾಜಕೀಯ ಪಂಡಿತರನ್ನೇ ಅಚ್ಚರಿಗೆ ತಳ್ಳಿಬಿಟ್ಟರು. ಈಗಂತೂ ದಿನೇದಿನೇ ಹಿಂದುತ್ವದ ಚಿಂತನೆ ವಿಸ್ತಾರಗೊಳ್ಳುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಬ್ರಾಹ್ಮಣನ ಮುಖ ತೋರಿಸಿ ದಲಿತನ ವೋಟು ಕಬಳಿಸುವ, ಹಿಂದೂಗಳ ಚಿತ್ರ ತೋರಿಸಿ ಮುಸಲ್ಮಾನರ ವೋಟು ಕಬಳಿಸುವ ಪರಂಪರಾಗತ ಚುನಾವಣಾ ಪ್ರಕ್ರಿಯೆ ಮೋದಿಯ ಎದುರಲ್ಲಿ ಸೋಲುಕಂಡಿದೆ. ಫಲಿತಾಂಶದ ವೇಳೆ ದಲಿತರ ಮತಗಳನ್ನು ಹೆಚ್ಚಾಗಿ ಬಿಜೆಪಿಯೇ ಪಡೆಯುತ್ತಿರುವುದು ಪ್ರತಿಪಕ್ಷಗಳಿಗೆ ಹೊಟ್ಟೆಯುರಿಯಾಗಿದೆ. ಮುಸಲ್ಮಾನರಲ್ಲೂ ವಿಕಾಸವಾದಿಗಳು ಮೋದಿಯತ್ತ ವಾಲುತ್ತಿರುವುದು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿಯೇ ಈ ಬಾರಿ ರಾಹುಲ್ ಪ್ರಯೋಗಿಸಿರುವ ದಾಳ ಬಲುವಿಶಿಷ್ಟ.

ಕೆಲವಾರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ರಾಹುಲ್ ಭಾಷಣವೊಂದರಲ್ಲಿ ‘ಹಿಂದೂ ಬೇರೆ ಹಿಂದುತ್ವ ಬೇರೆ’ ಎಂಬ ಚಿಂತನೆಯನ್ನು ಹರಿಬಿಟ್ಟಾಗ ಎಂದಿನಂತೆ ಬಲಪಂಥೀಯರು ಆಡಿಕೊಂಡು ನಕ್ಕಿದ್ದರು. ಆದರೆ ಅಂದು ಅವರು ಬಿತ್ತಿದ ಬೀಜವನ್ನು ನೀರೆರೆದು ಪೋಷಿಸಿ ಹೆಮ್ಮರ ಮಾಡುವ ಪ್ರಯತ್ನವನ್ನು ಹಂತ-ಹಂತವಾಗಿ ಮಾಡಲಾಗುತ್ತಿದೆ. ನಿಸ್ಸಂಶಯವಾಗಿ ಇದು 2024ಕ್ಕೆ ಪೂರ್ವಭಾವಿಯಾಗಿರುವ ಬಲುಪ್ರಮುಖವಾದ ಚಿಂತನೆ. ನೆನಪು ಮಾಡಿಕೊಳ್ಳಿ, ಕೆಲವು ತಿಂಗಳ ಹಿಂದೆಯಷ್ಟೇ ಸ್ಟಾ ್ಯ್ಫರ್ಡ್, ಹಾರ್ವರ್ಡ್ ಸೇರಿದಂತೆ ವಿಶ್ವದ 40 ವಿಶ್ವವಿದ್ಯಾಲಯದವರು ‘ಡಿಸ್​ವ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ವಿಚಾರ ಸಂಕಿರಣವನ್ನು ಆಯೋಜಿಸಿದ್ದರು. ಅನೇಕ ಬುದ್ಧಿಜೀವಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತಲ್ಲದೆ ಹಿಂದುತ್ವವನ್ನು ಜಾಗತಿಕ ಮಟ್ಟದಲ್ಲಿ ಕೆಟ್ಟದ್ದಾಗಿ ಪ್ರತಿಬಿಂಬಿಸುವ ಪ್ರಯತ್ನವೂ ನಡೆದಿತ್ತು. ಮುಂಚಿತವಾಗಿಯೇ ಎಚ್ಚೆತ್ತುಕೊಂಡ ಬಲಪಂಥೀಯರ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ತೋರಿ ಇಡಿಯ ಕಾರ್ಯಕ್ರಮವನ್ನು ಹಳ್ಳ ಹಿಡಿಯುವಂತೆ ಮಾಡಿದ್ದರು. ಆದರೆ ಮುಂದಾಗಲಿರುವ ಘಟನೆಗಳಿಗೆ ಇದು ದಿಕ್ಸೂಚಿಯಾಗಿತ್ತು. ಅದರ ಹಿಂದೆಯೇ ರಾಹುಲ್ ಹಿಂದೂ ಮತ್ತು ಹಿಂದುತ್ವದ ಪ್ರಶ್ನೆಯನ್ನು ಎತ್ತಿ ಪ್ರತೀ ಕಾರ್ಯಕ್ರಮದಲ್ಲೂ ಅದನ್ನು ವಿಸ್ತಾರಗೊಳಿಸುತ್ತ ನಡೆದಿದ್ದಾರೆ. ಮೇಲ್ನೋಟಕ್ಕೆ ಹಿಂದೂ, ಹಿಂದುತ್ವ ಎರಡಕ್ಕೂ ವ್ಯತ್ಯಾಸವೇನೂ ಇಲ್ಲ. ಒಂದು ರೀತಿ ಕನ್ನಡ, ಕನ್ನಡತೆ ಇದ್ದಂತೆಯೇ ಇದು. ಹಿಂದೂವಿನ ಭಾವವನ್ನು ಕ್ರೋಡೀಕರಿಸಿದರೆ ಹಿಂದುತ್ವವಾದೀತು ಅಷ್ಟೇ. ಆದರೆ ರಾಹುಲ್ ಅದನ್ನು ಪ್ರಸ್ತುತಪಡಿಸುತ್ತಿರುವ ರೀತಿಯೇ ಬೇರೆ. ಅವರ ದೃಷ್ಟಿಯಲ್ಲಿ ಹಿಂದೂ ಸೌಮ್ಯವಾದಿ, ಹಿಂದುತ್ವ ಉಗ್ರವಾದಿ. ಹಿಂದೂ ಸೆಕ್ಯುಲರ್, ಹಿಂದುತ್ವ ಕೋಮುವಾದಿ. ಹಿಂದೂ ಎಲ್ಲರಿಗೂ ಬೇಕಾದವನು, ಹಿಂದುತ್ವ ಎಲ್ಲರ ಮೇಲೂ ಏರಿಹೋಗುವವನು. ಹಿಂದೂ ಎಲ್ಲರನ್ನೂ ಗೌರವಿಸುವವನು, ಹಿಂದುತ್ವ ಅಸಹಿಷ್ಣು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಂಘದ ಮಂದಿ ಹಿಂದುತ್ವವಾದಿಗಳು, ಈ ದೇಶದ ಉಳಿದವರೆಲ್ಲ ಹಿಂದೂಗಳು! ಈ ಮಾತುಗಳನ್ನು ರಾಹುಲ್ ಪದೇಪದೆ ಹೇಳುತ್ತ ಕಾಂಗ್ರೆಸ್ಸಿಗರೆಲ್ಲ ಹಿಂದೂಗಳೆಂದೂ, ಮೋದಿಯ ಹಿಂದಿರುವವರು ಹಿಂದುತ್ವವಾದಿಗಳೆಂದೂ ಮತ್ತೆ ಮತ್ತೆ ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. ಇದರಿಂದ ನಷ್ಟವೇನು ಎಂದು ಮೂಗು ಮುರಿಯಬೇಡಿ.

ಹಿಂದೆಲ್ಲ ಕಾಂಗ್ರೆಸ್ಸಿನ ಚುನಾವಣಾ ಕದನಗಳು ಬಿಜೆಪಿಯನ್ನು ಅನುಸರಿಸಿಕೊಂಡೇ ಇರುತ್ತಿದ್ದವು. ಮೊದಲೆಲ್ಲ ಮೋದಿ ಮಂದಿರಕ್ಕೆ ಹೋದರೆ ರಾಹುಲ್ ಅನುಸರಿಸುತ್ತಿದ್ದರು ಅಷ್ಟೇ. ಆ ಮೂಲಕ ಹಿಂದೂಗಳನ್ನು ಸೆಳೆಯಬಹುದೆಂಬ ಪ್ರಯತ್ನ ಅದು. ಎಲ್ಲಿಯವರೆಗೂ ಎದುರಾಳಿಗಳು ನಿಮ್ಮನ್ನು ಅನುಸರಿಸಿಕೊಂಡೇ ಪ್ರತಿಕ್ರಿಯಿಸುತ್ತಿರುತ್ತಾರೋ ಅಲ್ಲಿಯವರೆಗೂ ನಿಮ್ಮ ಗೆಲುವು ನಿಶ್ಚಿತ. ಏಕೆಂದರೆ ಮುಂದೆ ನೀವಿರುತ್ತೀರ, ಎದುರಾಳಿಗಳು ನಿಮ್ಮ ಹಿಂದು-ಹಿಂದೆ ಬರುತ್ತಿರುತ್ತಾರೆ. ಕಳೆದ ಎರಡೂ ಚುನಾವಣೆಗಳಲ್ಲಿ ಆದದ್ದೂ ಅದೇ. ಮೋದಿ ಕಾರ್ಯಸೂಚಿ ರೂಪಿಸುತ್ತಿದ್ದರು, ಪ್ರತಿಪಕ್ಷಗಳು ಅದಕ್ಕೆ ಉತ್ತರಕೊಟ್ಟು ಕಾಲ ತಳ್ಳುತ್ತಿದ್ದವು. ಆದರೆ ಈ ಬಾರಿ ಕಾಂಗ್ರೆಸ್ಸು ತಾನು ಮೊದಲು ಕಾರ್ಯಸೂಚಿ ರೂಪಿಸುತ್ತಿದೆ. ಇನ್ನು ಸ್ವಲ್ಪ ದಿನಗಳ ನಂತರ ಉಳಿದವರೆಲ್ಲ ಅನುಸರಿಸುವಂತೆ ಮಾಡುವ ಪ್ರಯತ್ನದಲ್ಲಿದೆ. ಬಹುಶಃ ಇದು ಪ್ರಶಾಂತ್ ಕಿಶೋರ್ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಿದ ನಂತರ ಬಂದಿರುವ ಬುದ್ಧಿ ಇದ್ದರೂ ಇರಬಹುದು.

ಮೇಲ್ನೋಟಕ್ಕೆ ಆತಂಕವೇನೂ ಇಲ್ಲ ನಿಜ. ಆದರೆ ಕಾಂಗ್ರೆಸ್ಸು ರೂಪಿಸುತ್ತಿರುವ ಈ ಚಿಂತನಾಕ್ರಮವನ್ನು ಎದುರಿಸುವುದು ಹೇಗೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಹಿಂದೂ ಮತ್ತು ಹಿಂದುತ್ವ ಬೇರೆಯಲ್ಲ; ಇದು ರಾಹುಲ್ ಮೂರ್ಖತನದ ಕಲ್ಪನೆ ಎಂದು ನೀವು ಹೇಳುವುದಾದರೆ, ಮೊದಲ ಬಾರಿಗೆ ಇವೆರಡೂ ಬೇರೆಯೆಂಬ ಸಿದ್ಧಾಂತವನ್ನು ಮಂಡಿಸಿದ್ದು ಸ್ವಾತಂತ್ರ್ಯವೀರ ಸಾವರ್ಕರರು. ಅವರು ಹಿಂದುತ್ವವನ್ನು ಹಿಂದೂಯಿಸಂ ಎನ್ನದೇ ಹಿಂದೂನೆಸ್ ಎಂದು ಹೇಳುತ್ತಾರೆ. ಸೈದ್ಧಾಂತಿಕವಾಗಿ ಅವರ ನಿಲುವು ಬಲು ಅರ್ಥಪೂರ್ಣವಾದದ್ದು. ಅದು ರಾಹುಲರಂತೆ ಒಡೆಯುವುದಲ್ಲ, ಬದಲಿಗೆ ಸಮಸ್ತ ಭಾರತೀಯರನ್ನು ಜಾತಿ-ಮತ-ಪಂಥಗಳ ತಾಕಲಾಟದಿಂದ ಮೀರಿ ಏಕಛತ್ರದಡಿ ಬೆಸೆಯುವಂತೆ ಮಾಡುವಂಥದ್ದು. ಹಿಂದೂ ಎಂಬ ಪದದ ಅರ್ಥವನ್ನು ಹೇಳುವಾಗ ವೇದ ಪ್ರಾಮಾಣ್ಯವನ್ನು ಒಪು್ಪವವನು ಎನ್ನಲಾಗುತ್ತದೆ. ಆ ಮೂಲಕ ಬೌದ್ಧ, ಜೈನ, ಸಿಖ್ಖರನ್ನು ನಾವು ಈ ಧರ್ಮದ ವ್ಯಾಪ್ತಿಯಿಂದ ಹೊರಗಿಡುತ್ತೇವೆ. ಈ ಕಾರಣಕ್ಕಾಗಿಯೇ ಅವರು ತಮ್ಮನ್ನು ತಾವು ಹಿಂದೂಗಳಲ್ಲ ಎಂದು ಕರೆದುಕೊಂಡುಬಿಡುತ್ತಾರೆ. ವ್ಯಾಖ್ಯೆಯ ದೃಷ್ಟಿಯಿಂದ ಅದು ಸರಿಯೂ ಹೌದು. ಹೀಗಾಗಿಯೇ ಹಿಂದುತ್ವಕ್ಕೊಂದು ವಿಸ್ತಾರವನ್ನು ಕಲ್ಪಿಸಿಕೊಟ್ಟ ಸಾವರ್ಕರರು, ಹಿಮಾಲಯದಿಂದ ಸಾಗರದವರೆಗೂ ಹಬ್ಬಿರುವ ವಿಸ್ತಾರವಾದ ಭಾರತವನ್ನು ಪಿತೃಭೂಮಿ, ಪುಣ್ಯಭೂಮಿ ಎಂದು ಭಾವಿಸುವ ಪ್ರತಿಯೊಬ್ಬರೂ ಹಿಂದೂಗಳು ಎಂದುಬಿಡುತ್ತಾರೆ. ಆ ಮೂಲಕ ಸಾವರ್ಕರರು ವೇದ ಪ್ರಾಮಾಣ್ಯವನ್ನು ಒಪು್ಪವವರೊಂದಿಗೆ ಭಾರತವನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರನ್ನೂ ಒಳಗೊಳ್ಳುವ ವ್ಯಾಖ್ಯೆ ನಿರೂಪಿಸುತ್ತಾರೆ. ಗುಜರಾತಿನ ಬೊಹ್ರಾಗಳು, ಖೋಜಾಗಳು ಇವರು ಮೇಲ್ನೋಟಕ್ಕೆ ಅನ್ಯಮತೀಯರೆನಿಸಿದರೂ ಅಪಾರ ರಾಷ್ಟ್ರಭಕ್ತಿಯುಳ್ಳವರಾದ್ದರಿಂದ ಅವರನ್ನು ಹಿಂದುತ್ವದಡಿಯಲ್ಲಿ ಒಂದುಗೂಡಿಸಬೇಕೆಂಬ ಚಿಂತನೆ ಅವರದ್ದು. ತಮ್ಮ ‘ಹಿಂದುತ್ವ’ ಎಂಬ ಕೃತಿಯಲ್ಲಿ ಈ ಕುರಿತು ವಿಸ್ತಾರವಾಗಿ ಅವರು ರ್ಚಚಿಸಿದ್ದಾರೆ. ಹಾಗೆ ನೋಡಿದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಇದನ್ನು ಆಮೂಲಾಗ್ರವಾಗಿ ಒಪ್ಪಿದಂತೆ ಕಾಣುತ್ತದೆ. ಹೀಗಾಗಿಯೇ ರಾಷ್ಟ್ರೀಯ ಮುಸ್ಲಿಂ ಮಂಚ್ ಥರದ ಸಂಘಟನೆಗಳು ಸಂಘದ ಅಡಿಯಲ್ಲಿ ವಿಸ್ತಾರವಾಗಿ ಬೆಳೆಯುತ್ತಿರೋದು. ಇಷ್ಟೂ ದಿನಗಳ ಕಾಲ ಈ ಕುರಿತಂತೆ ಆಲೋಚಿಸದ ಕಾಂಗ್ರೆಸ್ಸು ಈಗ ಏಕಾಏಕಿ ಈ ಪದಪ್ರಯೋಗಗಳನ್ನು ಮಾಡುತ್ತಿದೆ. ಈ ಪದಗಳನ್ನೇ ಮುಂದಿಟ್ಟುಕೊಂಡು ಇದನ್ನು ಹಾಸ್ಯಾಸ್ಪದವೆನ್ನುವುದಾದರೆ ಸಾವರ್ಕರರ ಸಿದ್ಧಾಂತದೊಂದಿಗೆ ಕಿತ್ತಾಡಬೇಕಾದ ಪ್ರಸಂಗ ಒದಗುತ್ತದೆ. ಹಾಗೇನಾದರೂ ಒಪ್ಪಿಕೊಂಡರೆ ಎರಡೂ ಒಂದೇ ಎಂದು ತೋರಿಸುವ ಅಥವಾ ರಾಹುಲ್ ಭಾಷೆಯ ಹಿಂದುತ್ವವಾದಿಗಳು ನಾವಲ್ಲವೆನ್ನುವ ವಿಚಾರ ಸಾಬೀತು ಮಾಡುವ ಅನಿವಾರ್ಯತೆಗೆ ಸಿಕ್ಕಿಬೀಳುತ್ತೇವೆ!

ಕಾಂಗ್ರೆಸ್ಸು ಈ ಬಾರಿ ಬಲುದೊಡ್ಡ ಮಟ್ಟದಲ್ಲಿ ಸಮಾಜವನ್ನು ಒಡೆಯಲು ನಿಂತಿದೆ. ಇನ್ನು ಮುಂದೆ ದಲಿತರ ಹೋರಾಟಗಳು ಹಿಂದೂವಿನ ಹೋರಾಟವೆನಿಸಿಕೊಂಡರೆ ಅವರು ಯಾರ ವಿರುದ್ಧ ಹೋರಾಡುತ್ತಾರೋ ಅವರೆಲ್ಲರೂ ಹಿಂದುತ್ವವಾದಿಗಳಾಗಿಬಿಡುತ್ತಾರೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಪಂಜಾಬಿನಲ್ಲಿ ಸಿಖ್ಖರು ಹಿಂದೂಗಳಾದರೆ ಏಕತೆಯ ಮಾತನಾಡುವ ಮಂದಿ ಹಿಂದುತ್ವವಾದಿಗಳಾಗಿಬಿಡುತ್ತಾರೆ. ಹರಿಯಾಣದಲ್ಲಿ ಜಾಟರನ್ನೂ ಹೀಗೆ ಪ್ರತ್ಯೇಕಿಸುವುದು ಸುಲಭ. ಹಿಂದೂಧರ್ಮದಿಂದ ಪ್ರತ್ಯೇಕವಾಗಬೇಕೆಂದು ಕಾಯುತ್ತಿದ್ದ ಕರ್ನಾಟಕದ ಕೆಲ ಪ್ರತ್ಯೇಕತಾವಾದಿಗಳಿಗೂ ಕೈಲೊಂದು ಅಸ್ತ್ರ ಕೊಟ್ಟಂತೆಯೇ. ಹಿಂದುತ್ವವಾದಿಗಳ ವಿರುದ್ಧ ಹೋರಾಟವನ್ನು ಅವರು ರೂಪಿಸಲಾರಂಭಿಸುತ್ತಾರೆ. ಇದು ಇಲ್ಲಿಗೇ ನಿಲ್ಲದೇ ಹಿಂದಿ ಮಾತನಾಡುವವರು ಹಿಂದುತ್ವವಾದಿಗಳಾಗಿಯೂ, ಇತರ ಸ್ಥಳೀಯ ಭಾಷಿಗರು ಹಿಂದೂಗಳಾಗಿಯೂ ವಿಭಜಿತಗೊಳ್ಳಲ್ಪಡುತ್ತಾರೆ. ಯಾವ ಹಿಂದೂ ಪದ ಬಳಸಿಕೊಂಡು ನರೇಂದ್ರ ಮೋದಿ ಎಲ್ಲ ಜಾತಿ-ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದರೋ ಅದೇ ಪದ ಇವರೆಲ್ಲರನ್ನು ಬೇರ್ಪಡಿಸಲು ಉಪಯೋಗವಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ಸು ಈ ಪದದ ಸುತ್ತ ಗಿರಕಿ ಹೊಡೆಯುತ್ತ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಿದೆ. ಆಮೇಲೆ ಬಲಪಂಥೀಯರೆನಿಸಿಕೊಂಡವರಿಗೆ ಇವರೆತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡುವುದಷ್ಟೇ ಕೆಲಸ. ಅಂದರೆ ಕಾಂಗ್ರೆಸ್ಸು ಸಮಸ್ಯೆಯ ನಿರೂಪಣೆ ಮಾಡುತ್ತದೆ. ಭಾಜಪ ಅದಕ್ಕೆ ಉತ್ತರ ಕೊಡುತ್ತ ಹಿಂದೆ ಹಿಂದೆ ಸಾಗುತ್ತದೆ. ಒಟ್ಟಾರೆ ಮೊದಲ ಹೆಜ್ಜೆ ಅವರೇ ಇಡುವಂತಾಗುತ್ತದೆ. ಈ ಸಮಸ್ಯೆಯನ್ನು ಭಾಜಪ ಗುರುತಿಸುವಲ್ಲಿ ಸೋತಿದೆ. ಅವರು ಎಂದಿನಂತೆ ಮೋದಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಸುಲಭವಾಗಿ ಮೋದಿಯ ಹೆಸರು ಬಳಸಿ ಗೆದ್ದುಬಿಡಬಹುದೆಂಬ ಭ್ರಾಮಕ ಕಲ್ಪನೆಯಲ್ಲಿದ್ದಾರೆ. 2014ರ ಅಲೆಯಷ್ಟು 2019ರಲ್ಲಿ ಇರಲಿಲ್ಲ. ಆದರೂ ಸೂಕ್ತವಾದ ಯೋಜನೆಗಳೊಂದಿಗೆ ಮೋದಿ ಹೆಚ್ಚು ಬಲಿಷ್ಠವೆನಿಸಿದರು. ಖಂಡಿತವಾಗಿಯೂ 2019ರಲ್ಲಿದ್ದಷ್ಟು ಮೋದಿಯ ಅಲೆ ಈಗ ಉಳಿದಿಲ್ಲ. ಮುಂದಿನ ಬಾರಿ ಚುನಾವಣೆಗೆ ಹೋಗುವಾಗ ಬೇರೆಯೇ ಯೋಜನೆಗಳು ಕೆಲಸ ಮಾಡುತ್ತಿರುತ್ತವೆ. ಇದನ್ನು ಊಹಿಸಲಾಗದೇ ತಮ್ಮದೇ ಆದ ಲೋಕದಲ್ಲಿ ಭಾಜಪದ ಮಂದಿ ಮೈಮರೆತಿದ್ದಾರೆ. ಧಾವಂತಕ್ಕೆ ಬಿದ್ದು 2024ರಲ್ಲಿ ಉಗ್ರ ಭಾಷಣಗಳನ್ನು ಮಾಡಿದರೆ, ಕಾಂಗ್ರೆಸ್ಸು ಸಲೀಸಾಗಿ ಅವರನ್ನು ಹಿಂದುತ್ವವಾದಿಗಳ ಪಟ್ಟಿಗೆ ಸೇರಿಸಿ, ತಾನು ಹೇಳಿದ್ದು ಸಾಬೀತಾಯ್ತು ಎನ್ನುತ್ತದೆ. ಅಷ್ಟೇ ಅಲ್ಲದೆ ಬಿಜೆಪಿಗೆ ಬೆನ್ನೆಲುಬಾಗಿರಬಹುದಾದ ಭಿನ್ನ ಭಿನ್ನ ಜಾತಿಗಳನ್ನೂ ಇದೇ ಹೆಸರಿನಲ್ಲಿ ವಿಭಜಿಸಿಬಿಡುತ್ತದೆ! ಈ ಆಲೋಚನೆಯ ಬೀಜವನ್ನು ಈಗಲೇ ಚಿವುಟಿ ಹಾಕದಿದ್ದರೆ ಹಿಂದೂ ಸಮಾಜ ಹಿಂದೆಂದಿಗಿಂತಲೂ ದೊಡ್ಡ ಆಘಾತವನ್ನು ಎದುರಿಸಲಿದೆ. ಹಿಂದುತ್ವವಾದಿಗಳು ಸಜ್ಜಾಗಿ ಈಗಲೇ ಈ ನಿರೂಪಣೆಯನ್ನು ಒಟ್ಟಾಗಿ ಎದುರಿಸಬೇಕಿದೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net