

ಕುಟುಂಬದೊಳಗೆ ಕೊನೆಯಿಲ್ಲದಷ್ಟು ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಯರು ತಮ್ಮ ಸಾಮರ್ಥ್ಯ ಅಷ್ಟಕ್ಕೇ ಸೀಮಿತವಲ್ಲ ಎಂಬುದನ್ನು ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಪರಕೀಯರ ದಾಳಿಯ ಸಂದರ್ಭದಲ್ಲಿ ರಾಜ್ಯದ ಪ್ರಜೆಗಳ ರಕ್ಷಣೆಗಾಗಿ ಸ್ವತಃ ಖಡ್ಗ ಹಿಡಿದು ಹೋರಾಡಿದ ನೂರಾರು ವೀರವನಿತೆಯರು ಕನ್ನಡನಾಡಿನಲ್ಲಿ ಇತಿಹಾಸದುದ್ದಕ್ಕೂ ಕಾಣಸಿಗುತ್ತಾರೆ. ಅವರ ತ್ಯಾಗ, ಪರಿಶ್ರಮ, ಶೌರ್ಯ, ಧೀಮಂತಶಕ್ತಿ ಎಲ್ಲರಿಗೂ ಆದರ್ಶಪ್ರಾಯ. ‘ಅಂತಾರಾಷ್ಟ್ರೀಯ ಮಹಿಳಾ ದಿನ’ವಾದ ಇಂದು ಆ ಎಲ್ಲ ವೀರವನಿತೆಯರಿಗೆ ನಮ್ಮದೊಂದು ಸಲಾಂ.
ಮಹಿಳೆಯ ಮನಸ್ಸು ಮೃದು, ಮಧುರ. ಹೆಣ್ಣು ಅಬಲೆ, ಕೋಮಲೆ; ಅವಳು ಏನಿದ್ದರೂ ನಾಲ್ಕು ಗೋಡೆಯ ಮಧ್ಯೆ ಅಡುಗೆ ಮನೆಗೆ ಸೀಮಿತಳು ಎಂದು ಉಪೇಕ್ಷಿಸಲ್ಪಟ್ಟಿದ್ದಳು. ಆದರೆ ಮೇಲ್ನೋಟಕ್ಕೆ ಹಾಗೆ ಕಂಡರೂ ಆಂತರ್ಯದಲ್ಲಿ ಆಕೆಯ ಸಂಕಲ್ಪ ಶಕ್ತಿ ದೃಢವಾಗಿರುತ್ತದೆ. ಅವಳ ಸ್ವಪ್ರತಿಭೆ ಕ್ರಿಯಾಶೀಲತೆಯಿಂದಾಗಿ ತಾನು ಸಬಲೆ ಎಂದು ತೋರಿಸಿಕೊಟ್ಟಿದ್ದಾಳೆ. ‘‘ದೈಹಿಕವಾಗಿ ಬಲಾಢ್ಯವಾಗಿದ್ದರೆ ಮಾತ್ರ ಅವರು ನಾಯಕರಾಗಬೇಕೆಂದಿಲ್ಲ. ಬದಲಾಗಿ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ, ಸೃಜನಶೀಲತೆ, ವಿನೂತನ ವಿಚಾರ ಇರುವವರು ನಾಯಕರಾಗಲು ಅರ್ಹರು. ಇಲ್ಲಿ ಸ್ತ್ರೀ ಪುರುಷ ಭೇದ ಬರುವುದಿಲ್ಲ’’ ಎಂದು ನೊಬೆಲ್ ಪುರಸ್ಕೃತ ಕೀನ್ಯಾದ ಸಾಹಿತಿ ವಾಂಗರಿ ಮಥಾಯ್ ಹೇಳಿರುವ ಮಾತು ಇತಿಹಾಸದ ಪುಟಗಳನ್ನು ತಿರುವಿದಾಗ ಸತ್ಯ ಅನಿಸದೇ ಇರದು. ಯಾಕೆಂದರೆ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷ ಸಮಾನ ಕೆಲಸ ಕಾರ್ಯಗಳನ್ನು ಮಾಡಿದ್ದಾಳೆ, ಮಾಡುತ್ತಿದ್ದಾಳೆ. ಅವಳು ಸಾಹಸಿ, ಧೈರ್ಯವಂತೆ ಎನ್ನುವುದಕ್ಕೆ ಕರ್ನಾಟಕದಲ್ಲಿ ಆಗಿಹೋದ ವೀರವನಿತೆಯರು ಉತ್ತಮ ನಿದರ್ಶನವಾಗಿದ್ದಾರೆ.
ಮಹಿಳೆ ಮಾನವೀಯತೆಯ ಶಕ್ತಿಯಾಗಿ, ಸಮಾಜದ ಕನ್ನಡಿಯಾಗಿ, ಆಡಳಿತ ಚತುರೆಯಾಗಿ, ಅಗತ್ಯ ಬಂದಾಗ ದೇಶದ ಮಗಳಾಗಿ, ನೆಲದ ರಕ್ಷಕಿಯಾಗಿ ದೇಶ ರಕ್ಷಣೆಯಲ್ಲೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಟ್ಟವಳು. ಅಂದು, ಇಂದು, ಎಂದೆಂದೂ ತಾನು ಕೇವಲ ನಾಲ್ಕು ಗೋಡೆಯ ಮಧ್ಯೆ ಇದ್ದ ಕಾಲದಲ್ಲಿಯೂ ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಮಹಿಳೆಯರು, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂದು ಸಾಬೀತುಪಡಿಸಿದ ಮಹಿಳೆಯರು ಇತಿಹಾಸದಲ್ಲಿ ಆಗಿಹೋಗಿದ್ದಾರೆ. ಅದರಲ್ಲಿ ಕರ್ನಾಟಕದ ಮಹಿಳೆಯರೂ ಇದ್ದಾರೆ. ಅವರ ಸಾಧನೆಯೇನು ಎಂಬುದನ್ನು ಸಂಕ್ಷಿಪ್ತವಾಗಿ ಗಮನಿಸೋಣ. ಇತಿಹಾಸದಲ್ಲಿ ಮಹಿಳೆಯರು ಅಂದಾಕ್ಷಣ ನೆನಪಿಗೆ ಬರುವವರು ಸ್ವಾತಂತ್ರ್ಯಕ್ಕಾಗಿ, ತಮ್ಮನೆಲ, ಸಂಸ್ಕೃತಿಯನ್ನು ಉಳಿಸಲು ಉಸಿರಿರುವವರೆಗೆ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕ, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಮೊದಲಾದವರು. ಒಬ್ಬೊಬ್ಬರದೂ ಒಂದೊಂದು ಕಥೆಯಾದರೂ ಉದ್ದೇಶ ಮಾತ್ರ ಒಂದೇ. ಅದು ರಾಜ್ಯದ ರಕ್ಷಣೆ, ಪ್ರಜೆಗಳ ರಕ್ಷಣೆ. ಅಲ್ಲಿಂದ ಮುಂದುವರಿದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ. ಹೆಣ್ಣು ಯಾರಿಗೇನೂ ಕಡಿಮೆ ಇಲ್ಲ ಎಂದು ದಿಟ್ಟತನದಿಂದ ಹೋರಾಡಿ ದೇಶಕ್ಕಾಗಿ ಪ್ರಾಣ ತೆತ್ತವರು. ಅವರೆಲ್ಲರೂ ಸ್ತ್ರೀಸಂಕುಲಕ್ಕೆ ಮಾದರಿ.
ಪೋರ್ಚುಗೀಸರ ಸದ್ದಡಗಿಸಿದ ಸಾಹಸಿ ರಾಣಿ ಅಬ್ಬಕ್ಕ ದೇವಿ
ಬ್ರಿಟಿಷರನ್ನೇ ನಡುಗಿಸಿದ ಕಿತ್ತೂರ ಚೆನ್ನಮ್ಮ
ಒನಕೆಯಿಂದ ವೈರಿಪಡೆಯ ಸದೆಬಡಿದ ಓಬವ್ವ
ಔರಂಗಜೇಬನಿಗೂ ಹೆದರದ ಕೆಳದಿ ಚೆನ್ನಮ್ಮ
ಶಿವಾಜಿ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಬೆಳವಡಿ ಮಲ್ಲಮ್ಮ
ಪೂರ್ಣಿಮಾ ಸುಧಾಕರ ಶೆಟ್ಟಿ, ಮುಂಬಯಿ