

ಶಾಸ್ತ›ಗಳ ಪ್ರಕಾರ ಸಂಸ್ಕಾರಕ್ರಿಯೆಗಳ ಆಚರಣೆಗೆ ಮೂರು ಕಾರಣಗಳೆಂದರೆ, ‘ದೋಷಮಾರ್ಜನಂ’ (ದೋಷಗಳ ನಿವಾರಣೆ), ‘ಗುಣದಾನಂ’ (ಉತ್ತಮ ಗುಣಗಳ ಕೃಷಿ) ಹಾಗೂ ‘ಹೀನಾಂಗಪೂರ್ತಿ’ (ಇಲ್ಲದಿರುವ ಅಗತ್ಯ ಮೌಲ್ಯಗಳ ಪೂರೈಕೆ). ಉದಾಹರಣೆಗೆ ಸುವರ್ಣಾಭರಣ ಸಿದ್ಧಗೊಳಿಸಬೇಕಾದರೆ ಮೊದಲು ಭೂಮಿಯಿಂದ ಬಂಗಾರದ ಅದಿರನ್ನು ತೆಗೆದು ಅದನ್ನು ಸಂಸ್ಕರಿಸಿ ಬಂಗಾರವನ್ನು ಪಡೆಯಬೇಕಾಗುತ್ತದೆ. ಹೀಗೆ ಪಡೆದ ಅಶುದ್ಧವಾದ ಬಂಗಾರವನ್ನು ಕುಲುಮೆಯಲ್ಲಿ ಕಾಯಿಸಿ ಪರಿಶುದ್ಧಗೊಳಿಸಿ ಶುದ್ಧ ಬಂಗಾರ ತಯಾರಿಸಿ, ಅದರಿಂದ ಆಭರಣಗಳನ್ನು ಮಾಡುತ್ತೇವೆ. ಮಾನವನ ಅಂತಃಕರಣದಲ್ಲಿ ತಮಸ್ಸು, ರಜಸ್ಸು ಹಾಗೂ ಸತ್ವವೆಂಬ ತ್ರಿಗುಣಾಧಾರಿತ ವಾಸನೆಗಳ ಮಿಶ್ರಣವಿರುತ್ತದೆ. ಇಂತಹ ಅಂತಃಕರಣವನ್ನು ಪರಿಶುದ್ಧಗೊಳಿಸುವುದೇ ಸಂಸ್ಕಾರಗಳ ಉದ್ದೇಶ. ಮಾನವಜೀವನವು ಭಗವಂತನು ಧರಿಸಲು ಯೋಗ್ಯವಾದ ಆಭರಣವಾಗಿ ಮಾರ್ಪಡಬೇಕಾದರೆ, ಈ ಸಂಸ್ಕಾರಗಳು ಮಹತ್ತರ ಪಾತ್ರ ವಹಿಸುತ್ತವೆ.
ವಿವಿಧ ಶಾಸ್ತ್ರ›ಗಳು ವಿವಿಧ ಸಂಖ್ಯೆಯ ಸಂಸ್ಕಾರಗಳ ಕುರಿತಾಗಿ ಹೇಳುತ್ತವೆ. ಉದಾಹರಣೆಗೆ ಗೌತಮ ಧರ್ಮಸೂತ್ರ ಹಾಗೂ ಸಂನ್ಯಾಸ ಉಪನಿಷತ್ತುಗಳಲ್ಲಿ ನಲವತ್ತು ಸಂಸ್ಕಾರಗಳ ಉಲ್ಲೇಖವಿದೆ. ಮನುಸೃ್ಮಯು ಷೋಡಶಸಂಸ್ಕಾರಗಳನ್ನು ವಿಧಿಸುತ್ತದೆ. ಈ ಸಂಸ್ಕಾರಗಳ ಉದ್ದೇಶ ಕೇವಲ ಆಧ್ಯಾತ್ಮಿಕವಾಗಿರದೆ, ಸಾಮಾಜಿಕವೂ ಸಾಂಸ್ಕೃತಿಕವೂ ಆಗಿರುತ್ತದೆ. ಇಲ್ಲಿ ನಾವು ಈ ಸಂಸ್ಕಾರಗಳ ಆಧ್ಯಾತ್ಮಿಕ ಕಾರಣಗಳನ್ನು ತಿಳಿದುಕೊಳ್ಳೋಣ.
ಮೊದಲನೆಯ ಸಂಸ್ಕಾರವು ಜನನಕ್ಕಿಂತ ಮೊದಲು ಆಚರಿಸಲ್ಪಡುವ ‘ಗರ್ಭಾದಾನ.’ ಇದರ ಅರ್ಥ ಗರ್ಭದಲ್ಲಿ ಬೀಜವನ್ನು ಸ್ಥಾಪಿಸುವುದು. ವಿವಾಹ ಕಾರ್ಯಕ್ರಮದ ನಂತರ ಪತಿ-ಪತ್ನಿಯರ ಸಂಗಮಕ್ಕಿಂತ ಮೊದಲು ಪ್ರಶಸ್ತವಾದ ದಿನವನ್ನು ಆರಿಸಿಕೊಂಡು ಗರ್ಭಾದಾನವನ್ನು ಆಚರಿಸಲಾಗುತ್ತದೆ. ತದನಂತರವೇ ದಂಪತಿ ಜೊತೆಗೂಡಿ ಸಂತಾನೋತ್ಪತ್ತಿಯನ್ನು ಮಾಡುತ್ತಾರೆ. ಗೃಹಸ್ಥಾಶ್ರಮದ ಪ್ರಧಾನ ಕರ್ತವ್ಯವೆಂದರೆ, ಮಾನವ ಜನಾಂಗದ ವೃದ್ಧಿಗಾಗಿ ಸತ್ಪ›ಜೆಗಳಾದ ಮಕ್ಕಳನ್ನು ಸೃಷ್ಟಿಸಿ, ಬೆಳೆಸಿ, ಸಮಾಜಕ್ಕೆ ಸಮರ್ಪಿಸುವುದು. ಹೊರನೋಟಕ್ಕೆ ಕೇವಲ ದೈಹಿಕ ಕ್ರಿಯೆಯಂತೆ ತೋರುವ ಈ ಸಂಸ್ಕಾರದ ಮುಖ್ಯಭಾಗವೆಂದರೆ, ಯೋಗ್ಯ ಜೀವಿಯ ಗರ್ಭಪ್ರವೇಶಕ್ಕಾಗಿ ಭಗವಂತನಲ್ಲಿ ಹಾಗೂ ತಮ್ಮ ಪೂರ್ವಜರಲ್ಲಿ ಮಾಡುವ ಪ್ರಾರ್ಥನೆಗಳು. ಯೋಗ್ಯ ಶಿಶುವಿನ ಜನನದಿಂದ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಒಳಿತಾಗಲೆಂಬ ಪ್ರಾರ್ಥನೆಯು ಈ ಸಂಸ್ಕಾರವನ್ನು ಆಧ್ಯಾತ್ಮಿಕ ಮಟ್ಟಕ್ಕೇರಿಸುತ್ತದೆ.
ನಾರದ ಭಕ್ತಿಸೂತ್ರದಲ್ಲಿ ಹೇಳಿರುವಂತೆ,
ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾ ಚೇಯಂ ಭೂರ್ಭವತಿ || 71 ||
ಭಗವದ್ಭಕ್ತನಾದ ಮಹಾತ್ಮನು ಒಂದು ಕುಟುಂಬದಲ್ಲಿ ಜನಿಸಿದಾಗ ಪೂರ್ವಜರು ಸಂಭ್ರಮಿಸುತ್ತಾರೆ, ದೇವತೆಗಳು ನೃತ್ಯಮಾಡುತ್ತಾರೆ ಹಾಗೂ ಭೂಮಿಯು ಅನಾಥತೆಯಿಂದ ಸನಾಥತೆಗೆ ತಲುಪಿದ ಸಾಫಲ್ಯತೆಯನ್ನು ಅನುಭವಿಸುತ್ತದೆ. ದಂಪತಿಗಳು ಇಂತಹ ಶಿಶುಪ್ರಾಪ್ತಿಗಾಗಿ ಗರ್ಭಾದಾನ ಕ್ರಿಯೆಯ ಸಂದರ್ಭದಲ್ಲಿ ಪ್ರಾರ್ಥಿಸಬೇಕು.
ಎರಡನೆಯ ಸಂಸ್ಕಾರವೆಂದರೆ, ‘ಪುಂಸವನ.’ ಸತಿಯು ಗರ್ಭಧರಿಸಿದ ಮೇಲೆ ಈ ಸಂಸ್ಕಾರವನ್ನು ನೀಡಲಾಗುತ್ತದೆ. ಪುಂಸವನವೆಂಬ ಪದವು ಗಂಡುಮಗುವನ್ನು ಸೂಚಿಸಿದರೂ, ಈ ಸಂಸ್ಕಾರವು ಗರ್ಭದಲ್ಲಿರುವ ಗಂಡುಮಗುವಿಗಾಗಲೀ ಅಥವಾ ಹೆಣ್ಣುಮಗುವಿಗಾಗಲೀ ಅನ್ವಯಿಸುತ್ತದೆ. ದಂಪತಿಗಳು ಗಂಡುಮಗುವನ್ನು ಆಶಿಸುವ ಮುಖ್ಯ ಉದ್ದೇಶವೆಂದರೆ, ವಂಶಾಭಿವೃದ್ಧಿ. ಇದರ ಅರ್ಥ ಹೆಣ್ಣುಮಗುವಿನ ಜನನದ ನಿರೋಧವೆಂದು ತಪ್ಪಾಗಿ ತಿಳಿದುಕೊಳ್ಳಬಾರದು. ವಂಶವನ್ನು ಮುಂದುವರಿಸಲು ದಂಪತಿಗಳು ಗಂಡುಮಗುವನ್ನು ಆಶಿಸುವುದು ಸಹಜ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. X ಹಾಗೂ Y ವರ್ಣತಂತು (Chromosome) ಗಳ ಪೈಕಿ ್ಗ ವರ್ಣತಂತು ಮಾತ್ರ ತಂದೆಯ ವಂಶವಾಹಿ (Genes) ಯನ್ನು ಹೊಂದಿರುತ್ತದೆ. ಇದರ ಆಧಾರದಲ್ಲಿಯೇ ಶಿಶುವಿನ ವಂಶ ಅಥವಾ ಗೋತ್ರವನ್ನು ನಿರ್ಧರಿಸಲಾಗುತ್ತದೆ. ಗಂಡುಮಗುವಿನಲ್ಲಿ ತಂದೆಯ Y ವರ್ಣತಂತು ಹಾಗೂ ತಾಯಿಯ X ವರ್ಣತಂತುಗಳು ಸೇರಿದ್ದರೆ, ಹೆಣ್ಣುಮಗುವಿನಲ್ಲಿ ತಾಯಿಯ X ವರ್ಣತಂತು ಮಾತ್ರ ಇರುತ್ತದೆ. ಇದರಿಂದಾಗಿ ಹೆಣ್ಣುಮಗುವಿನಲ್ಲಿ ಕುಟುಂಬದ ವಂಶವಾಹಿಗಳು ಇರುವುದಿಲ್ಲ. ಈ ಕಾರಣದಿಂದಲೇ ದಂಪತಿಗಳು ವಂಶಾಭಿವೃದ್ಧಿಗಾಗಿ ಗಂಡುಮಗುವನ್ನು ಆಶಿಸುವುದಾಗಿದೆ.
ಮೂರನೆಯ ಸಂಸ್ಕಾರವಾದ ‘ಸೀಮಂತೋನ್ನಯನ’ವನ್ನು ಗರ್ಭಧಾರಣೆಯ ಐದನೆಯ ಅಥವಾ ಏಳನೆಯ ಮಾಸದಲ್ಲಿ ಆಚರಿಸಲಾಗುತ್ತದೆ. ಭಾವೀ ತಾಯಿಯು ಹಿರಿಯ ತಾಯಂದಿರ ಹಾಗೂ ಹಿರಿಯ ದಂಪತಿಗಳ ಆಶೀರ್ವಾದವನ್ನು ಪಡೆಯುತ್ತಾಳೆ. ಹಿರಿಯರು ಧಾನ್ಯ, ಫಲ, ಸಿಹಿತಿಂಡಿ, ವಸ್ತ್ರ ಹಾಗೂ ಆಭರಣಗಳನ್ನು ನೀಡುತ್ತಾರೆ. ಈ ಸಂಸ್ಕಾರದ ವಾತಾವರಣವು ಭಾವೀ ತಾಯಿಯಲ್ಲಿ ಧನಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ. ಭಾವೀ ತಾಯಿಯ ಆಲೋಚನೆ ಹಾಗೂ ಭಾವನೆಗಳು ಗರ್ಭದಲ್ಲಿರುವ ಶಿಶುವಿನ ಅಂತರಂಗದ ಮೇಲೆ ಮಹತ್ತರ ಪ್ರಭಾವ ಬೀರುತ್ತವೆ. ಈ ಸಮಯದಲ್ಲಿಯೇ ಶಿಶುವಿನಲ್ಲಿ ಹೃದಯದ ಬಡಿತ ಪ್ರಾರಂಭವಾಗಿ ಜೀವಿಯ ಪ್ರವೇಶವಾಗುತ್ತದೆ.
ಗರ್ಭವನ್ನು ಪ್ರವೇಶಿಸಿದ ಜೀವಾತ್ಮನ ಮನಸ್ಸಿನಲ್ಲಿ ಹಿಂದಿನ ಜನ್ಮಗಳ ಕರ್ಮ-ವಾಸನೆಗಳು ಮನೆಮಾಡಿಕೊಂಡಿದ್ದು ಆಗಿನಿಂದಲೇ ಅದರ ಮನಸ್ಸಿನ ಶುದ್ಧೀಕರಣ ಪ್ರಾರಂಭವಾಗಬೇಕಾಗುತ್ತದೆ. ಇದಕ್ಕಾಗಿ ಭಾವೀ ತಾಯಿಯು ವೇದಮಂತ್ರಗಳ ಹಾಗೂ ಭಕ್ತಿಗೀತೆಗಳ ಶ್ರವಣ ಮತ್ತು ಸತ್ಸಂಗಗಳಲ್ಲಿ ಭಾಗವಹಿಸಲು ಸೀಮಂತೋನ್ನಯನವು ಪ್ರಚೋದಿಸುತ್ತದೆ. ಇದರಿಂದಾಗಿ ಗರ್ಭದಲ್ಲಿರುವ ಶಿಶುವಿನ ಮನಸ್ಸಿನ ಮೇಲೆ ಉತ್ತಮ ಪ್ರಭಾವ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಇತಿಹಾಸ-ಪುರಾಣಗಳಲ್ಲಿ ಹಲವಾರು ಘಟನೆಗಳಿವೆ. ಉದಾಹರಣೆಗೆ, ಮಹಾಭಾರತ ಕಥೆಯಲ್ಲಿ ಅರ್ಜುನನ ಪತ್ನಿ ಸುಭದ್ರೆಯ ಗರ್ಭದಲ್ಲಿದ್ದ ಶಿಶು ಅಭಿಮನ್ಯುವು ತನ್ನ ತಾಯಿಗೆ ಅರ್ಜುನನು ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿದಾಗ ಅದನ್ನು ಅರ್ಥಮಾಡಿಕೊಳ್ಳುತ್ತದೆ. ಆದರೆ ತಂದೆಯು ಚಕ್ರವ್ಯೂಹ ನಿಷ್ಕ›ಮಣದ ಬಗ್ಗೆ ತಿಳಿಸುವ ಸಮಯಕ್ಕೆ ತಾಯಿ ನಿದ್ದೆ ಮಾಡಿದುದರಿಂದ ಅದನ್ನು ಅಭಿಮನ್ಯುವು ಕಲಿಯಲಾಗಲಿಲ್ಲ. ಇದರಿಂದಾಗಿ ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ವಧೆಯಾಯಿತು. ಅಷ್ಟಾವಕ್ರನು ಶಿಶುವಾಗಿ ತಾಯಿಯ ಗರ್ಭದಲ್ಲಿದ್ದಾಗ ತಂದೆಯು ಪಠಿಸುತ್ತಿದ್ದ ವೇದಮಂತ್ರಗಳನ್ನು ಕೇಳಿ ತನ್ನ ಹಿಂದಿನ ಜನ್ಮದ ಜ್ಞಾನದ ಆಧಾರದಲ್ಲಿ ತಂದೆ ಮಾಡುತ್ತಿದ್ದ ತಪ್ಪುಗಳನ್ನು ಕಂಡುಕೊಂಡು ಹೇಳುತ್ತಾನೆ. ಇದರಿಂದ ಕ್ರೋಧಾವಿಷ್ಟನಾದ ತಂದೆಯು ಮಗನಿಗೆ ಎಂಟು ವಕ್ರಗಳಿಂದ ಪೀಡಿತವಾಗುವಂತೆ ಶಪಿಸುತ್ತಾನೆ. ಇದರಿಂದಾಗಿಯೇ ಆ ಶಿಶುವಿನ ದೇಹವು ಎಂಟು ವಕ್ರತೆಗಳೊಡನೆ ಹುಟ್ಟುತ್ತದೆ. ಶಿಶು ಗರ್ಭದಲ್ಲಿರುವ ಈ ಅವಧಿಯಲ್ಲಿ ತಾಯಿಯ ಯೋಚನೆ, ಭಾವನೆ ಹಾಗೂ ಅನುಭವಗಳು ಶಿಶುವಿನ ಅಂತರಂಗದ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಗರ್ಭಿಣಿಯರು ತಾವು ನೋಡುವ, ಕೇಳುವ, ಯೋಚಿಸುವ, ತಿನ್ನುವ ಹಾಗೂ ರ್ಸ³ಸುವ ವಸ್ತು-ವಿಷಯಗಳ ಬಗ್ಗೆ ಬಹು ಜಾಗರೂಕರಾಗಿರಬೇಕಾಗುತ್ತದೆ; ಉತ್ತಮ ಸಂಗ-ಸಹವಾಸಗಳಲ್ಲಿ ಅವರು ಇರಬೇಕಾದುದು ಅಗತ್ಯ.
ನಂತರದ ಸಂಸ್ಕಾರ ಕ್ರಿಯೆಗಳು ಶಿಶುವಿನ ಜನನವಾದ ಮೇಲೆ ಪ್ರಾರಂಭವಾಗುತ್ತವೆ. ಅವುಗಳಲ್ಲಿ ಮೊದಲನೆಯದು ‘ಜಾತಕರ್ಮ.’ ಆಚಾರ್ಯ ಚರಕ ತಿಳಿಸಿರುವಂತೆ ಜನಿಸಿದ ಶಿಶುವಿಗೆ ಉತ್ತಮ ಪೌಷ್ಟಿಕತೆ ಮತ್ತು ಆರೋಗ್ಯಪ್ರದ ವಾತಾವರಣವನ್ನು ನೀಡಿ ಸೋಂಕು ಹಾಗೂ ಋಣಾತ್ಮಕ ಪ್ರಭಾವಗಳಿಂದ ರಕ್ಷಿಸುವುದು ಅತ್ಯಂತ ಅಗತ್ಯ. ಇದಕ್ಕೆ ಸಹಾಯಕವಾದ ಜಾತಕರ್ಮ ಸಂಸ್ಕಾರಕ್ರಿಯೆಯನ್ನು ಶಿಶುವು ಜನಿಸಿದ ನಾಲ್ಕನೆಯ ದಿನದಂದು ಆಚರಿಸಲಾಗುತ್ತದೆ. ತದನಂತರ 10 ಅಥವಾ 11ನೆಯ ದಿನದಂದು ನಾಮಕರಣ ಸಂಸ್ಕಾರ ಏರ್ಪಡಿಸುತ್ತಾರೆ. ಶಿಶುವಿನ ಜನನದ ಸಮಯದಲ್ಲಿದ್ದ ನಕ್ಷತ್ರ ಹಾಗೂ ಗ್ರಹಗತಿಗಳ ಆಧಾರದಲ್ಲಿ ಜ್ಯೋತಿಷ್ಯಶಾಸ್ತ›ದ ಪ್ರಕಾರ ಲೆಕ್ಕಾಚಾರ ಮಾಡಿ, ಶಿಶುವಿಗೆ ನಾಮಕರಣ ಮಾಡುತ್ತಾರೆ. ಆದರೆ ಆಧುನಿಕ ಕಾಲದ ಪ್ರಭಾವದಿಂದಾಗಿ ಈಗ ಮಕ್ಕಳಿಗೆ ತಂದೆ-ತಾಯಿಗಳು ತಾವು ಇಷ್ಟಪಡುವ ಜನಪ್ರಿಯ ತಾರೆಯರ ಹೆಸರನ್ನಿಡುವ ದುರದೃಷ್ಟಕರ ವಿದ್ಯಮಾನವನ್ನು ಕಾಣಬಹುದು. ಭಾರತೀಯ ಪದ್ಧತಿಯಲ್ಲಿ ಭಗವಂತನನ್ನು ಸ್ಮರಣೆಗೆ ತರುವ ನಾಮಗಳನ್ನು ಮಕ್ಕಳಿಗೆ ನೀಡುತ್ತಿದ್ದರು. ಇದರಿಂದಾಗಿ ಮಕ್ಕಳು ದೈವ ಸಾಕ್ಷಾತ್ಕಾರವನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲದೆ, ತಂದೆ-ತಾಯಿಗಳಿಗೂ ಇದರಿಂದ ಅಂತಹ ಲಾಭವಾಗುತ್ತಿತ್ತು.
ನಾಮಕರಣದ ನಂತರ ಬರುವ ಸಂಸ್ಕಾರ ‘ನಿಷ್ಕ›ಮಣ’. ನಿಷ್ಕ›ಮಣವೆಂದರೆ ಶಿಶುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವುದು. ಇದರ ಉದ್ದೇಶವು ಮಗುವಿನ ಮೇಲೆ ಸೂರ್ಯಕಿರಣಗಳು ಬೀಳುವಂತೆ ಮಾಡುವುದಲ್ಲದೆ, ಮಗುವನ್ನು ಸಮಾಜಕ್ಕೆ ಪರಿಚಯಿಸುವುದಾಗಿರುತ್ತದೆ. ಸಾಮಾನ್ಯವಾಗಿ ನಿಷ್ಕ›ಮಣವನ್ನು ಮಗುವಿಗೆ ನಾಲ್ಕು ಮಾಸ ತುಂಬಿದ ಮೇಲೆ ಮಾಡುತ್ತಿದ್ದರು. ಅಲ್ಲಿಯವರೆಗೆ ಮಗುವನ್ನು ಸೋಂಕುಗಳಿಂದ ರಕ್ಷಿಸಿರುವುದರಿಂದಾಗಿ ರೋಗನಿರೋಧಕ ಶಕ್ತಿ ಬೆಳೆದಿದ್ದು ನಿಷ್ಕ›ಮಣದ ನಂತರ ಅದಕ್ಕೆ ಹೊರಗಿನ ವಾತಾವರಣ ಎದುರಿಸುವ ಸಾಮರ್ಥ್ಯವಿರುತ್ತದೆ.
ನಿಷ್ಕ›ಮಣದಿಂದಾಗಿ ಮಗುವಿನ ಮೇಲೆ ಸೂರ್ಯಕಿರಣ ಬೀಳುವಂತೆ ಮಾಡುವುದು ಮುಂದಿನ ಸಂಸ್ಕಾರವಾದ ‘ಅನ್ನಪ್ರಾಶನ’ಕ್ಕೆ ಮಗುವನ್ನು ಸಿದ್ಧಪಡಿಸಲು ಅಗತ್ಯವಾಗಿರುತ್ತದೆ. ಅನ್ನಪ್ರಾಶನವೆಂದರೆ ಮಗುವಿಗೆ ಮೊದಲನೆಯ ಬಾರಿಗೆ ಘನ ಆಹಾರ ತಿನ್ನಿಸುವುದು. ಇಂತಹ ಆಹಾರವನ್ನು ಜೀರ್ಣ ಮಾಡಿಕೊಳ್ಳಲು ಸೂರ್ಯನ ಶಾಖಶಕ್ತಿ ಸಹಾಯ ಮಾಡುತ್ತದೆ. ಸೂರ್ಯನ ಶಾಖವು ಮಗುವಿನಲ್ಲಿ ಚಯಾಪಚಯ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಈ ಕಾರಣದಿಂದಾಗಿಯೇ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಲ್ಲಿ ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸ್ವೀಕರಿಸುವುದು ರೂಢಿಯಲ್ಲಿತ್ತು. ಜೈನರಲ್ಲಿ ಈ ಪದ್ಧತಿ ಇಂದಿಗೂ ಪ್ರಚಲಿತವಾಗಿದೆ.
ಸಾಮಾನ್ಯವಾಗಿ ಅನ್ನಪ್ರಾಶನ ಸಂಸ್ಕಾರವನ್ನು ಮಗುವಿಗೆ ಆರು ತಿಂಗಳ ನಂತರ ಮಾಡುತ್ತಾರೆ. ಈ ಸಂಸ್ಕಾರದ ಪ್ರಕಾರ ಮಗುವಿಗೆ ಮೊದಲು ಪಾಯಸವನ್ನು ತಿನ್ನಿಸುತ್ತಿದ್ದರು. ಹಾಲಿನಲ್ಲಿ ಅನ್ನವನ್ನು ಮಾಡಿ, ಅದಕ್ಕೆ ಜೇನುತುಪ್ಪ ಬೆರೆಸಿ ಇಂತಹ ಪಾಯಸ ತಯಾರಿಸುತ್ತಿದ್ದರು. ಕೇವಲ ತಾಯಿಯ ಹಾಲಿನಲ್ಲಿ ಲಭ್ಯವಿಲ್ಲದಿರುವ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವನ್ನು ಮಗುವಿಗೆ ನೀಡುವುದು ಅನ್ನಪ್ರಾಶನದಿಂದ ಪ್ರಾರಂಭವಾಗುತ್ತಿತ್ತು.
(ಮುಂದುವರಿಯುವುದು)
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)