ಅಬ್ಬಬ್ಬಾ.. ಹೀಗೂ ಇರುತ್ತಾ ಸರ್ಕಾರಿ ಶಾಲೆ!; ಆನೆಗದ್ದೆ ಗ್ರಾಮದಲ್ಲಿದೆ ಮಾದರಿ ಸ್ಕೂಲ್

Putani 1
Published on

ನೀವು ಈ ಶಾಲೆಯ ಒಳಹೊಕ್ಕರೆ ಹುಬ್ಬೇರಿಸೋದು ಗ್ಯಾರಂಟಿ. ಪ್ರತಿ ಹೆಜ್ಜೆಗೂ ಪಠ್ಯ ಹಾಗೂ ಸಾಮಾನ್ಯ ಜ್ಞಾನ ಕಲಿಕೆಗೆ ಪೂರಕವಾದ ವಾತಾವರಣ ಇದೆ. ಆಡಿ ನಲಿಯಲು, ನೋಡಿ ಕಲಿಯಲು ಬೇಕಾದ ಎಲ್ಲ ಪರಿಕರಗಳೂ ಇಲ್ಲಿವೆ. ಶಿಕ್ಷಕ ಮನಸ್ಸು ಮಾಡಿದ್ರೆ ಶಾಲಾ ಪಠ್ಯದ ಕಲಿಕೆಯ ಜತೆಗೆ ಮಕ್ಕಳ ಭವಿಷ್ಯವನ್ನೇ ಬದಲಿಸಬಹುದು ಎಂಬುದಕ್ಕೇ ಆನೆಗದ್ದೆ ಶಾಲೆಯೇ ತಾಜಾ ಉದಾಹರಣೆ.

| ರಮೇಶ್ ಹೆಗಡೆ ಗುಂಡೂಮನೆ ಸಾಗರ

ಕರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಕ್ಕಳು ಬಾರದೆ, ಬಹುತೇಕ ಶಾಲೆಗಳ ಆವರಣ ಕಸ-ಕಡ್ಡಿಯಿಂದ ತುಂಬಿದೆ ಎಂಬ ಮಾತು ಎಲ್ಲೆಡೆ ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಈ ಮಾತಿಗೆ ವಿರುದ್ಧ. ಇದು ವರ್ಷದ 365 ದಿನವೂ ಯಾವುದೋ ಉತ್ಸವಕ್ಕೆ ಶೃಂಗರಿಸಿದ ದೇವಾಲಯದಂತೆ ಭಾಸವಾಗುತ್ತದೆ. ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸರಸ್ವತಿ ದೇವಿಯ ದರ್ಶನ, ಹಚ್ಚಹಸಿರ ಬಳ್ಳಿ, ಹೂವುಗಳಿಂದ ಕಂಗೊಳಿಸುತ್ತಿದೆ. ಹಾಗೆಯೇ ಮುಂದೆ ಸಾಗಿದರೆ ಮಡಕೆಗಳಲ್ಲಿ ಹರಿಯುತ್ತಿರುವ ನೀರು, ತಾಯಿ-ಮಗು ವನ, ದಾರಿಯುದ್ದಕ್ಕೂ ಜ್ಞಾನದ ಫಲಕ, ಕೊಠಡಿಯೊಳಗೆ ನಲಿಕಲಿ... ಎತ್ತ ಕಣ್ಣು ಹಾಯಿಸಿದರೂ ಜ್ಞಾನ ಸಂಪತ್ತು ಕೈಬೀಸಿ ಕರೆಯುತ್ತದೆ. ಇದು ಶಿಕ್ಷಕ ಅವಿನಾಶ್ ಅವರು ಮಕ್ಕಳ, ಪಾಲಕರ ಮತ್ತು ಶಾಲಾ ಸಮಿತಿಯ ಸಹಕಾರ ಪಡೆದು ರೂಪಿಸಿರುವ ಶಾಲಾ ಆವರಣ ಹಾಗೂ ಬೋಧನಾ ವಿಧಾನ. ರಾಜ್ಯದ ಇತರ ಶಾಲೆಗಳಿಗೆ ಮಾದರಿ. ಅಂದದ ಉದ್ಯಾನವನದಲ್ಲಿ ಅ ಆ ಇ ಈ ಅಕ್ಷರಗಳಿಂದ ಹಿಡಿದು ಭಾರತ ದೇಶದ ಒಟ್ಟು ವಿಸ್ತೀರ್ಣದವರೆಗಿನ ಮಾಹಿತಿಯನ್ನೊಳಗೊಂಡ ಸುಂದರ ಫಲಕಗಳನ್ನು ಅಳವಡಿಸಲಾಗಿದೆ. ಕನ್ನಡ-ಇಂಗ್ಲಿಷ್ ಅಕ್ಷರಗಳಲ್ಲಿ ಮೂಡಿರುವ ಫಲಕಗಳು ಕೆಲಕಾಲ ಅಲ್ಲೇ ನಿಂತು ಓದುವಂತೆ ಮಾಡುತ್ತವೆ. ಉದ್ಯಾನವನದಲ್ಲಿ ಎರಡು ಭಾಗವಾಗಿ ವಿಂಗಡಿಸಿ ಅದೇ ಆವರಣದ ಆಚೆ-ಈಚೆ ಹೋಗುವಾಗಲೂ ಕಲಿಯಲು ಪೂರಕವಾಗಿ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳ ಫಲಕಗಳನ್ನು ಹಾಕಲಾಗಿದೆ. ಕರೊನಾ ವೇಳೆ ಶಾಲೆಗೆ ರಜೆ ಇದ್ದರೂ ಆನೆಗದ್ದೆ ಶಾಲೆ ಮಾತ್ರ ಎಂದಿನಂತೆ ನಳನಳಿಸುತ್ತಲೇ ಇದೆ.

ಲಕ್ಷಾಂತರ ರೂ. ಖರ್ಚು: ಆನೆಗದ್ದೆ ಶಾಲೆಯನ್ನು ಇಷ್ಟು ಚೆಂದವಾಗಿಸಲು ಲಕ್ಷಾಂತರ ರೂ. ಖರ್ಚಾಗಿದೆ. ತಮ್ಮೂರ ಶಾಲೆಯನ್ನು ದೇಗುಲ ಮಾಡಹೊರಟ ಶಿಕ್ಷಕ ಹಗಲೂರಾತ್ರಿ ಕೆಲಸ ಮಾಡುವುದನ್ನು ನೋಡಿದ ಗ್ರಾಮಸ್ಥರು ಶ್ರಮದಾನದ ಮೂಲಕ ಸಹಕಾರ ನೀಡಿದ್ದಾರೆ. ಗ್ರಾಮದಲ್ಲೇ ಸಿಗುವ ಕಲ್ಲು ಮತ್ತು ಮರಳು ತಂದು ಖರ್ಚಿನ ಹೊರೆಯನ್ನು ತುಸು ಕಡಿಮೆ ಮಾಡಿದ್ದಾರೆ. ಗ್ರಾಮಸ್ಥರು ಮತ್ತು ಶಿಕ್ಷಕರ ನಡುವೆ ಸಮನ್ವಯ ಇದ್ದರೆ ಎಂತಹ ಶಾಲೆಯನ್ನೂ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಇದೇ ತಾಜಾ ಉದಾಹರಣೆ.

ನಾಲ್ಕು ವರ್ಷದ ಪರಿಶ್ರಮ: ಆನೆಗದ್ದೆಯ ಸರ್ಕಾರಿ ಶಾಲೆ ಆರಂಭವಾಗಿದ್ದು 1996ರಲ್ಲಿ. 4 ವರ್ಷದ ಹಿಂದೆ ಈ ಶಾಲೆಗೆ ಸಹಶಿಕ್ಷಕರಾಗಿ ಬಂದ ಅವಿನಾಶ್, ಶಾಲಾ ಆವರಣ ಹಾಗೂ ಬೋಧನಾ ಕೊಠಡಿಗೆ ಜೀವಕಳೆ ತುಂಬಲು ಆರಂಭಿಸಿದರು. ಮುಖ್ಯ ಶಿಕ್ಷಕರಿಲ್ಲದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ ಇತ್ತು. ಪ್ರಭಾರಿ ಜವಾಬ್ದಾರಿ ಪಡೆದ ಅವಿನಾಶ್, ಶಾಲೆಯ ಅಂದಚಂದ ಹೆಚ್ಚಿಸಿದ್ದು ಮಾತ್ರವಲ್ಲ, ಮಕ್ಕಳ ಉತ್ತಮ ಅಭ್ಯಾಸದತ್ತಲೂ ಹೆಚ್ಚು ಗಮನಹರಿಸಿದರು. ಅದಕ್ಕಾಗಿ ಅವಧಿಗೂ ಮೀರಿ ಕೆಲಸ ನಿರ್ವಹಿಸಿದರು. ಅಲ್ಲಿಯವರೆಗೂ ದೂರವೇ ಇದ್ದ ಗ್ರಾಮಸ್ಥರು ಮತ್ತು ಪಾಲಕರು ಶಿಕ್ಷಕರ ಉತ್ಸಾಹ ಕಂಡು ಹತ್ತಿರ ಬರಲಾರಂಭಿಸಿದರು. ಶಾಲಾ ಸಮಿತಿ ಹೆಚ್ಚು ಹೊಣೆ ಹೊರಲು ಸಿದ್ಧವಾಯ್ತು. ಮಕ್ಕಳ ಸಂಖ್ಯೆ ಕ್ಷೀಣಿಸಿ ಕದ ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯ ನೋಟ ಎರಡೇ ವರ್ಷದಲ್ಲಿ ಬದಲಾಯ್ತು. ಮಕ್ಕಳ ದಾಖಲಾತಿ ಹೆಚ್ಚಾಯ್ತು. 1ರಿಂದ 7ನೇ ತರಗತಿವರೆಗೆ ಇಲ್ಲಿ ಇರೋದು ಇಬ್ಬರೇ ಶಿಕ್ಷಕರು. ಸಹೋದ್ಯೋಗಿ ಅನ್ವಿತಾರ ಬೆಂಬಲ ಪಡೆದು ಅವಿನಾಶ್, ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದಾರೆ.

ಹೆಚ್ಚು ಸಮಯ ಮೀಸಲು: ಕೆಲಸದ ಅವಧಿ ಮುಗಿಯುವ ಮುನ್ನವೇ ಮನೆಯ ಕಡೆ ಹೆಜ್ಜೆ ಹಾಕುವವರ ಮಧ್ಯೆ ಶಿಕ್ಷಕ ಅವಿನಾಶ್ ವಿಭಿನ್ನವಾಗಿ ಕಾಣಿಸುತ್ತಾರೆ. ತರಗತಿ ಆರಂಭಕ್ಕೂ ಎರಡು ತಾಸು ಮೊದಲೇ ಶಾಲೆಗೆ ಹಾಜರ್ ಆಗುತ್ತಿದ್ದ ಅವಿನಾಶ್, ತರಗತಿ ಮುಗಿದರೂ ರಾತ್ರಿ 9 ಗಂಟೆವರೆಗೂ ಶಾಲೆಯಲ್ಲೇ ಇದ್ದು, ಮಕ್ಕಳಿಗಾಗಿ ಹೂದೋಟ ನಿರ್ವಿುಸುತ್ತಿದ್ದರು. ಈಗಲೂ ಅಷ್ಟೆ. ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆ ಗೊಬ್ಬರಕ್ಕಾಗಿ ಗೋವಿನ ಸಗಣಿ ತರುವ, ಸಸಿಗಳಿಗೆ ನೀರುಣಿಸುವ ಮೂಲಕವೇ ಇವರ ಶಾಲಾ ಕೆಲಸ ಶುರುವಾಗುತ್ತದೆ. ಸಹಶಿಕ್ಷಕರಾಗಿ ಬಂದ ಅವರು ಪ್ರಭಾರಿ ಮುಖ್ಯಶಿಕ್ಷಕರಾದರೂ ಇದುವರೆಗೂ ಮುಖ್ಯಶಿಕ್ಷಕರ ಕುರ್ಚಿಯಲ್ಲಿ ಕುಳಿತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net