

ಐಬಿಎಸ್ ಅನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ವಿಂಗಡಿಸುತ್ತಾರೆ. ಮೊದಲನೆಯದು ಐಬಿಎಸ್ ಸಿ (IBS – C – Constipation) ಅಂದರೆ ಮಲಬದ್ಧತೆ ಮುಖ್ಯವಾಗಿರುವ ಐಬಿಎಸ್. ಎರಡನೆಯದು ಐಬಿಎಸ್ ಡಿ (IBS – D – Diarrhoea) ಅಂದರೆ ಭೇದಿ ಪ್ರಧಾನವಾಗಿರುವ ಐಬಿಎಸ್. ಮೂರನೆಯದು ಐಬಿಎಸ್ ಎ (IBS – A – Alternating diarrhoea and constipation) ಅಂದರೆ ಭೇದಿ ಮತ್ತು ಮಲಬದ್ಧತೆ ಒಂದಾದ ನಂತರ ಇನ್ನೊಂದು ಕಾಣಿಸಿಕೊಳ್ಳುವ ಐಬಿಎಸ್ ಸಮಸ್ಯೆ.
ಮಲಬದ್ಧತೆ ಪ್ರಧಾನವಾಗಿರುವ ಐಬಿಎಸ್ ಸಮಸ್ಯೆಯಲ್ಲಿ ಇಸಬ್ಗೋಲ್, ಇನ್ಯುಲಿನ್, ತ್ರಿಫಲಾ ಚೂರ್ಣದಂತಹ ಔಷಧಗಳು ಸಹಾಯ ಮಾಡುತ್ತವೆ. ಶುಂಠಿ, ಸೋಂಪು, ಜೀರಿಗೆ, ಮೆಂತೆಯಂತಹ ಸಾಂಬಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಬಹುತೇಕ ಜನರಿಗೆ ಮಲಬದ್ಧತೆಗಿಂತ ಹೆಚ್ಚಾಗಿ ಭೇದಿಯ ಐಬಿಎಸ್ ಕಾಡುತ್ತದೆ. ಆಹಾರ ಸೇವನೆಯಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಮಲದಲ್ಲಿ ಆಮ (ಲೋಳೆಯಂತಹ ಪದಾರ್ಥ ಹೋಗುವುದು), ದಿನದಲ್ಲಿ ಮೂರ್ನಾಲ್ಕು ಅಥವಾ ಅದಕ್ಕೂ ಹೆಚ್ಚು ಬಾರಿ ಹೊಟ್ಟೆ ಕಿವುಚಿದಂತೆ ಆಗಿ ಮಲವಿಸರ್ಜನೆಯಾಗುವುದು, ಸೇವಿಸಿದ ಆಹಾರ ಜೀರ್ಣವಾಗದೆ ಹಾಗೇ ಹೋಗುವುದು, ಮಲವಿಸರ್ಜನೆಯ ನಂತರವೂ ಹೊಟ್ಟೆ ಶುದ್ಧ ಆಗಿಲ್ಲ ಎಂದೆನಿಸುವುದು ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಕೆಲವರಿಗೆ ನೀರಿನಂತೆ ಮಲವಿಸರ್ಜನೆಯಾದರೆ ಇನ್ನು ಕೆಲವರಿಗೆ ಅತ್ತ ಗಟ್ಟಿಯೂ ಅಲ್ಲದ ತೆಳ್ಳವೂ ಅಲ್ಲದ ಮಲ ವಿಸರ್ಜನೆಯಾಗುವುದು. ಪ್ರಾಣ ತೆಗೆಯದಿದ್ದರೂ ಪ್ರಾಣ ಹಿಂಡುವ ಈ ಸಮಸ್ಯೆಗಳನ್ನು ದೂರವಿಡಲು ಕಾರಣವಾದ ಅಂಶಗಳನ್ನು ಕಂಡುಹಿಡಿದು ಅವುಗಳನ್ನು ತ್ಯಜಿಸುವುದು ಮೊದಲನೇ ಚಿಕಿತ್ಸೆ. ಸಾಂಬಾರ ಪದಾರ್ಥಗಳು, ಮಜ್ಜಿಗೆ, ದಾಳಿಂಬೆ, ಜೀರ್ಣಕ್ಕೆ ಸುಲಭವಾದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಸೀಬೆಕಾಯಿ (ಚೇಪೆಕಾಯಿ / ಪೇರಲ) ಮರದ ಎಂಟರಿಂದ 10 ಚಿಗುರೆಲೆಗಳನ್ನು ತೆಗೆದುಕೊಂಡು ಒಂದು ಚಮಚ ಜೀರಿಗೆ ಹಾಕಿ ಪೇಸ್ಟ್ ಮಾಡಿ ಮಜ್ಜಿಗೆಯಲ್ಲಿ ದಿನಕೊಮ್ಮೆ ಊಟದ ನಂತರ ಸೇವಿಸುವುದರಿಂದ ಸಹಾಯವಾಗುತ್ತದೆ. ದಾಳಿಂಬೆ ಹಣ್ಣಿನ 50 ಗ್ರಾಂನಷ್ಟು ಚೆನ್ನಾಗಿ ಒಣಗಿದ ಸಿಪ್ಪೆಗಳ ಜೊತೆಗೆ ಶುಂಠಿ, ಹಿಪ್ಪಲಿ, ಕಾಳು ಮೆಣಸು, ಜೀರಿಗೆ, ಧನಿಯಾಗಳನ್ನು ತಲಾ 20 ಗ್ರಾಂ ಹಾಕಿ, ಜೊತೆಗೆ ಚಕ್ಕೆ, ದಾಲ್ಚಿನ್ನಿ ಎಲೆ ಮತ್ತು ಏಲಕ್ಕಿಗಳನ್ನು ತಲಾ ಹತ್ತು ಗ್ರಾಂ ಹಾಕಿ ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಅರ್ಧ ಚಮಚದಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಮಜ್ಜಿಗೆಗೆ ಹಾಕಿ ಆಹಾರದ ನಂತರ ಸೇವಿಸಿದರೆ ಐಬಿಎಸ್ ಸಮಸ್ಯೆಯಲ್ಲಿ ಅನುಕೂಲವಾಗುತ್ತದೆ.
ನಿಸರ್ಗ ಮನೆಯಲ್ಲಿ ಲಭ್ಯವಿರುವ ಐಬಿಎಸ್ ಕಷಾಯ ಪುಡಿಯನ್ನು ಎರಡು ಚಮಚ ತೆಗೆದುಕೊಂಡು ಅದಕ್ಕೆ ಎರಡು ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ ಬೆಳಿಗ್ಗೆ ಮತ್ತು ರಾತ್ರಿ ಅರ್ಧರ್ಧ ಲೋಟದಷ್ಟು ಸೇವಿಸುವುದರಿಂದ ಐಬಿಎಸ್ ಸಮಸ್ಯೆ ಬಹುಬೇಗ ಹತೋಟಿಗೆ ಬರುತ್ತದೆ. ಜೊತೆಗೆ ಪ್ರಿ-ಬಯೋಟಿಕ್, ಎಸ್ ಬಿ ಓ ಪೊ› ಬಯೋಟಿಕ್ನಂತಹ ಆಹಾರೌಷಧಗಳನ್ನು ಸೇವಿಸುವುದರಿಂದ ಸಹಾಯವಾಗುತ್ತದೆ. ದೀರ್ಘಕಾಲದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆಗಳಂತಹ ವಿಶೇಷ ಚಿಕಿತ್ಸೆಗಳ ಅವಶ್ಯಕತೆ ಇರುತ್ತದೆ. ಒಟ್ಟಿನಲ್ಲಿ ಐಬಿಎಸ್ ಸಮಸ್ಯೆ ಬರದಂತೆ ದಿನಚರಿಯನ್ನು ಇಟ್ಟುಕೊಳ್ಳಬೇಕು. ಒಂದೊಮ್ಮೆ ಬಂದರೂ ಪ್ರಾಥಮಿಕ ಹಂತದಲ್ಲಿಯೇ ಗುಣಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.