ಹೆಲ್ಮೆಟ್ ಕಡ್ಡಾಯ ಆದೇಶದ ನಿರ್ಧಾರ ಮರು ಪರಿಶೀಲಿಸಿ: ಜನಮತದಲ್ಲಿ ಓದುಗರ ಅಭಿಮತ

helmet
Published on

ದ್ವಿಚಕ್ರ ವಾಹನ ಚಾಲಕರ ಜೊತೆಗೆ ಹಿಂಬದಿ ಸವಾರರಿಗೂ (4ವರ್ಷ ಮೇಲ್ಪಟ್ಟವರೆಲ್ಲರೂ) ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸುವ ಆದೇಶವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಆದರೆ, ಜನಸಾಮಾನ್ಯರ ಅನುಕೂಲಕ್ಕಾಗಿ ಹಿಂಬದಿ ಸವಾರರಿಗೆ ಮತ್ತು ಚಿಕ್ಕಮಕ್ಕಳಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಬೇಕು. ಹಿಂಬದಿ ಸವಾರರು ಬಹುತೇಕ ಮಹಿಳೆಯರು ಹಾಗೂ ಮಕ್ಕಳೇ ಆಗಿರುತ್ತಾರೆ.

ಹಿಂಬದಿ ಸವಾರರು ಹಲವಾರು ಸಲ ಅನಿರೀಕ್ಷಿತ ಸವಾರರಾಗಿರುತ್ತಾರೆ. ಅವರಿಗೆ ದ್ವಿಚಕ್ರ ವಾಹನ ಇಲ್ಲದಿದ್ದರೂ ಹೆಲ್ಮೆಟ್ ಕೊಂಡೊಯ್ಯುವ ಸ್ಥಿತಿ ನಿರ್ವಣವಾಗುತ್ತದೆ. ಅಪಘಾತ ತಪ್ಪಿಸುವ ಸಂದರ್ಭದಲ್ಲಿ ಗಾಯಾಳುಗಳು ಅಥವಾ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಸಂದರ್ಭ ಬಂದಾಗ ಹೆಲ್ಮೆಟ್ ಇಲ್ಲ ಎಂಬ ಕಾರಣಕ್ಕೆ ಅನೇಕ ಜೀವಗಳು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಪ್ರತಿನಿತ್ಯ ಪಾಲಕರು ಮಕ್ಕಳನ್ನು ಶಾಲೆಗೆ ಬಿಟ್ಟು ತಮ್ಮ ಮುಂದಿನ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಹೆಲ್ಮೆಟ್​ಗಳನ್ನು ಹೊರುವ ಅಸಹನೀಯ ಸ್ಥಿತಿ ಉಂಟಾಗುತ್ತದೆ. ಇಲ್ಲವೆ ಶಾಲೆಯಲ್ಲಿ ಹೆಲ್ಮೆಟ್​ಗಳನ್ನು ಕಾಯ್ದಿಡಲು ವಿಶೇಷ ವ್ಯವಸ್ಥೆ ಮಾಡಬೇಕಾಗುತ್ತದೆ.

ಕಳಪೆ ಗುಣಮಟ್ಟದ ರಸ್ತೆ, ರಸ್ತೆಗಳಲ್ಲಿನ ಗುಂಡಿಗಳು, ಅವೈಜ್ಞಾನಿಕ ಹಂಪ್ಸ್​ಗಳು, ಟ್ರಾಫಿಕ್ ಸಿಗ್ನಲ್​ಗಳಲ್ಲಿ ಅಸಮರ್ಪಕ ನಿರ್ವಹಣೆ ಹೀಗೆ ಹಲವಾರು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳಿಗೆ ನಾಗರಿಕರಷ್ಟೇ ಸರ್ಕಾರವೂ ಹೊಣೆ. ತನ್ನ ಪಾಲಿನ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಜನರ ಮೇಲೆ ಏಕಪಕ್ಷೀಯ ಕ್ರಮ ಕೈಗೊಳ್ಳುವದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲಿ.

| ಉದಯ ಮ. ಯಂಡಿಗೇರಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net