

‘ಜೀವನ ಎಂದರೆ ಚದುರಂಗ ಆಟದಂತೆ. ಮುಂದಿನ ದಾಳಗಳನ್ನು ಇಲ್ಲಿಡಬೇಕು, ಅಲ್ಲಿಡಬೇಕು ಎಂದೆಲ್ಲ ಯೋಚಿಸಿ, ಯೋಜಿಸಿ ಏನೆಲ್ಲ ಲೆಕ್ಕಾಚಾರಗಳನ್ನು ಹಾಕಿರುತ್ತೇವೆ. ಆದರೆ ಆ ಸೃಷ್ಟಿಕರ್ತನ ಲೆಕ್ಕಾಚಾರವೇ ಬೇರೆ. ಅವನು ಆಟದ ದಾಳಗಳನ್ನು ಬದಲು ಮಾಡುವುದಲ್ಲ, ಒಂದೇ ಬಾರಿಗೆ ಬೋರ್ಡ್ನ್ನೇ ಎತ್ತಿ ಹಾಕಿಬಿಡಬಹುದು’ ಎಂದು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಆಗಾಗ ಹೇಳುತ್ತಿದ್ದರು. ಕರೊನಾ ಸೋಂಕಿನ ದಾಳಿಯ ಸಂಕಟದ ಸಮಯದಲ್ಲಿ ಎಲ್ಲರೂ, ‘ಸುರಕ್ಷಿತವಾಗಿ ಮನೆಯಲ್ಲಿ ಇರಿ, ಸೋಂಕಿನ ಸರಪಳಿಯನ್ನು ತುಂಡು ಮಾಡಲು ಸಹಕರಿಸಿ’ ಎಂದು ಹೇಳುತ್ತಿದ್ದಾರೆ. ಅದೇನೋ ನಿಜ. ಆದರೆ, ಕಳೆದ 57 ದಿನಗಳಲ್ಲಿಯೇ ನಮ್ಮ ಇಷ್ಟು ವರ್ಷಗಳ ಜೀವನಶೈಲಿ ಬದಲಾಗಿ ಹೋಗಿದೆ. ಆತ್ಮವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ. ನಮ್ಮ ಮೂಲಭೂತ ಅವಶ್ಯಕತೆಗಳೇನು, ತೋರಿಕೆಗಾಗಿ ಏನೆಲ್ಲ ಮಾಡುತ್ತಿದ್ದೆವು, ರೂಢಿ ಹಿನ್ನೆಲೆಯಲ್ಲಿ ಏನೆಲ್ಲ ಮಾಡುತ್ತಿದ್ದೆವು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಬಗ್ಗೆ ಚಿಂತನೆ ಮಾಡಲು ಅವಕಾಶವೂ ಸಿಕ್ಕಿದೆ ಎನ್ನಿ.
ಈ ಆತ್ಮವಿಮರ್ಶೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮುಂದೆ ಹೊಸ, ಸಶಕ್ತ ಚಿಂತನೆಯನ್ನು ಮುಂದಿಟ್ಟಿದ್ದಾರೆ-ಆತ್ಮನಿರ್ಭರ ಭಾರತ ಎಂದು. ‘ಸರ್ವಂ ಆತ್ಮವಶಂ ಸುಖಂ’ ಎಂಬ ಶ್ಲೋಕ ಮನುಸ್ಮೃತಿಯಲ್ಲಿ ಇರುವಂಥದ್ದು. ಇದರ ಮುಂದಿನ ಶ್ಲೋಕವು-‘ಯಾವ ಯಾವ ಕರ್ಮಗಳಿಂದ ನಮ್ಮ ಆತ್ಮಕ್ಕೆ ಸಂತೋಷವಾಗುತ್ತದೆಯೋ, ಅಂಥ ಕರ್ಮ (ಕೆಲಸ) ಮಾತ್ರ ಮಾಡಿ’ ಎಂದು ಹೇಳುತ್ತದೆ. ಏನಿದು ‘ಆತ್ಮನಿರ್ಭರ’? ರಾಷ್ಟ್ರದ ಆತ್ಮ ಯಾವುದು? ಸುಖ ಎಂದರೆ ಯಾವುದು? ಭಾರತೀಯ ಆಧ್ಯಾತ್ಮಿಕ ಚಿಂತನೆಯಲ್ಲಿ ಇದೆಲ್ಲದಕ್ಕೂ ಉತ್ತರವಿದೆ, ಹಿರಿಯರು ಈ ಬಗ್ಗೆ ವಿವರವಾಗಿ ರ್ಚಚಿಸಿದ್ದಾರೆ. ಗ್ರಂಥಗಳನ್ನೂ ಬರೆದಿದ್ದಾರೆ, ಪ್ರವಚನಗಳ ಮೂಲಕವೂ ತಿಳಿಸಿದ್ದಾರೆ. ಕರ್ನಾಟಕದ ಸಂತಶ್ರೇಷ್ಠರಲ್ಲಿ ಒಬ್ಬರು ಶ್ರೀ ಗಣಪತ್ ರಾವ್ ಮಹಾರಾಜ್. ವಿಜಯಪುರದ ಕನ್ನೂರಿನ ಬಳಿ ಶಾಂತಿಕುಟೀರ ಆಶ್ರಮವಿದೆ, ಇಲ್ಲಿದ್ದು 92ನೇ ವಯಸ್ಸಿನವರೆಗೂ ಅಧ್ಯಾತ್ಮದ ವಿಷಯಗಳನ್ನು ಜನರಿಗೆ ಮನದಟ್ಟು ಮಾಡಿಕೊಟ್ಟ ಸಾಧಕ ಅವರು. ಗಣಪತ್ ರಾವ್ ಮಹಾರಾಜ್ ಬರೆದ ಶ್ರೇಷ್ಠ ಗ್ರಂಥ ‘ಸುಲಭ ಆತ್ಮಜ್ಞಾನ’ದ 2ನೇ ಅಧ್ಯಾಯದಲ್ಲಿ ‘ಸುಖ ಎಂದರೆ ಯಾವುದು?’ ಎಂದು ವಿವರಿಸುತ್ತ, ‘ಸುಖ ಎಂಬುದು ದೊಡ್ಡ ಕೆಲಸದಲ್ಲಿ, ದುಡ್ಡಿನಲ್ಲಿ ಇದೆ ಎಂದು ಭಾವಿಸಬೇಡ. ಸುಖ ಇರುವುದು ನಿನ್ನೊಳಗೇ. ನೀನು ಯಾರು ಎಂಬುದನ್ನು ತಿಳಿದುಕೋ. ಮತ್ತು ಆನಂದವಾಗಿರು’ ಎಂದಿದ್ದಾರೆ.
ಹಾಗಿದ್ದರೆ ರಾಷ್ಟ್ರಕ್ಕೆ ಆತ್ಮ ಯಾವುದು? ರಾಷ್ಟ್ರದ ಸುಖ ಎಂದರೆ ಯಾವುದು? ರಾಷ್ಟ್ರದ ದೃಷ್ಟಿಯಿಂದ ಯಾವುದನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬಹುದು? ಎಂದು ಹೇಳಬಹುದು. ನಾವು ದೇಶವನ್ನು ‘ರಾಷ್ಟ್ರಪುರುಷ’ ಅಥವಾ ‘ಭಾರತಮಾತೆ’ ಎಂದು ಕರೆದಿದ್ದೇವೆ. ನಮಗೆ ಹೇಗೆ ಆತ್ಮ ಇರುತ್ತದೆಯೋ ಹಾಗೇ 136 ಕೋಟಿ ಜನರ ಏಕಾತ್ಮವೇ ಭಾರತ ಮಾತೆ. ನರೇಂದ್ರ ಮೋದಿಯವರು ಹೇಳಿದ ‘ಆತ್ಮನಿರ್ಭರ ದೇಶ’ ಎಂಬುದು ಸ್ವದೇಶಿಯ ಮಂತ್ರ, ಸ್ವಾವಲಂಬನೆ ಸಾಧಿಸುವುದು. ಆ ಮೂಲಕ ಇತರರ ಅವಲಂಬನೆ ತಪ್ಪಿಸುವುದು, ನಮಗೆ ಬೇಕಾದ ಉತ್ಪನ್ನಗಳನ್ನು ನಾವೇ ತಯಾರಿಸಿಕೊಳ್ಳುವುದು. ಅದಕ್ಕಾಗಿ ದೇಸೀ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು. ಇದೆಲ್ಲವೂ ಅಗತ್ಯವಾಗಿ ಆಗಬೇಕಾದದ್ದೆ. ಆರ್ಥಿಕ ಸ್ವಾವಲಂಬನೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಆದರೆ, ಇಷ್ಟಕ್ಕೆ ಸೀಮಿತವಾಗಬೇಕಿಲ್ಲ ಎಂಬುದನ್ನು ಗಮನಿಸಬೇಕು. ಸಾವಿರಾರು ವರ್ಷಗಳಿಂದ ಜಗತ್ತಿಗೆ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಮಾರ್ಗ ತೋರಿಸಿದ, ಮಹಾನ್ ಅಸ್ಮಿತೆಯನ್ನು ಹೊಂದಿದ, ಸಾವಿರಾರು ವರ್ಷಗಳಿಂದ ಜಗದ್ಗುರು ಆಗಿರುವ ಭಾರತ ಆತ್ಮನಿರ್ಭರತೆಯ ನೈಜ ವ್ಯಾಖ್ಯಾನ ಅರಿಯಬೇಕಿದೆ. ಅದನ್ನು ಇಂದಿನ ಆಧುನಿಕ ಯುಗದಲ್ಲಿ, ಜನಜೀವನದಲ್ಲಿ ಹೇಗೆ ಅನುಷ್ಠಾನಕ್ಕೆ ತರುವುದು ಎಂಬ ಸವಾಲು ನಮ್ಮ ಮುಂದೆ ಇದೆ. ಸುಖ ಎಂಬುದು ಬಾಹ್ಯ ವಸ್ತು ಗಳಲ್ಲಿ ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ. ಅದು ಮತ್ತಷ್ಟು ಹುಡುಕಾಟಕ್ಕೆ ತೊಡಗಿಸುತ್ತದೆ. ಡಿಮಾಂಡ್ ವರ್ಸಸ್ ಸಪ್ಲೈ ಎನ್ನುವ ಸಾಂಪ್ರದಾಯಿಕ ಚಿಂತನೆಗಿಂತಲೂ ಭೂಮಿಯ ಮೇಲಿರುವ ಎಲ್ಲರ ಸುಖಕ್ಕಾಗಿ (ಸರ್ವೆ ಜನಾಃ ಸುಖಿನೋಭವಂತು) ಯೋಚಿಸಿದರೆ ಸಹಜವಾಗಿಯೇ ನಮ್ಮ ‘ಬೇಕು’, ‘ಬೇಡಿಕೆ’ಗಳಲ್ಲಿ ಗಮನಾರ್ಹ ಬದಲಾವಣೆ ಆಗುತ್ತದೆ.
ಇದನ್ನೂ ಓದಿ: ಜಲನಿಧಿಯನ್ನು ಬರಿದು ಮಾಡುವುದು ಬೇಡ
ಗಾಳಿಯನ್ನು ಕಲುಷಿತ ಮಾಡುವ, ನೀರನ್ನು ಕಲ್ಮಶ ಮಾಡುವ, ಬಟ್ಟೆಗಳನ್ನು ಕರಗಿಸುವ, ಇನ್ನೊಂದು ಜೀವಕ್ಕೆ ನೋವುಂಟು ಮಾಡಿ ತಯಾರಿಸುವ ವಸ್ತು ಅಥವಾ ಉತ್ಪನ್ನ ನಮಗೆ ಸುಖ ತರುವುದೇ ಎಂದು ನಾವು ಯೋಚಿಸಲು ಪ್ರಾರಂಭಿಸಿದರೆ, ನಮ್ಮಲ್ಲಿನ ಆತ್ಮ ಎಲ್ಲರಲ್ಲೂ ಇದೆ, ಪ್ರಾಣಿ-ಪಕ್ಷಿಗಳಲ್ಲಿ ಮಾತ್ರವಲ್ಲದೆ ಗಿಡ-ಮರಗಳಲ್ಲಿಯೂ ಇದೆ ಎಂದು ನಮಗೆ ಅನಿಸಲು ಆರಂಭಿಸಿದರೆ ನಿಜವಾದ ಸುಖವನ್ನು ಖಂಡಿತವಾಗಿಯೂ ಕಂಡುಕೊಳ್ಳುತ್ತೇವೆ. ನಾವು ಆತ್ಮನಿರ್ಭರರಾಗುತ್ತವೆ. ನಾವು ಆತ್ಮನಿರ್ಭರರಾದರೆ ದೇಶವೂ ಆತ್ಮನಿರ್ಭರವಾಗುತ್ತದೆ. ಕಳೆದ 55-60 ದಿನಗಳಲ್ಲಿ ಬದಲಾದ ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅರ್ಥಮಾಡಿಕೊಂಡು ನಮ್ಮ ಬೇಕುಗಳನ್ನು, ಅವಶ್ಯಕತೆಗಳನ್ನು ಮರು ಪರಿಶೀಲಿಸೋಣ. ಐವತ್ತೇಳು ದಿನಗಳಲ್ಲಿ ಗಂಗೆ ಒಂದು ರೂಪಾಯಿಯೂ ಖರ್ಚು ಮಾಡದೆ ಸ್ವಚ್ಛಗೊಂಡಿದೆ, ಬೆಂಗಳೂರಿನ ವೃಷಭಾವತಿ ಮೋರಿಯ ದುರ್ನಾತ ಕಡಿಮೆ ಆಗಿದೆ. ವಾಯುಮಾಲಿನ್ಯ ಇಲ್ಲವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಪಕ್ಷಿಗಳು ಆನಂದವಾಗಿ ಹಾರಾಡುತ್ತಿವೆ. ಕಮರ್ಷಿಯಲ್ ಸ್ಟ್ರೀಟ್ನಲ್ಲಿ ನವಿಲುಗಳು ನೃತ್ಯ ಮಾಡುತ್ತಿವೆ. ಮಾನವನ ಹಸ್ತಕ್ಷೇಪ ಕಡಿಮೆಯಾದಂತೆ ಪ್ರಕೃತಿ ಎಷ್ಟೊಂದು ಚೇತರಿಸಿಕೊಂಡಿದೆ ನೋಡಿ.
ದೇಶ ಆತ್ಮನಿರ್ಭರವಾಗಲು ನಾವೇನು ಮಾಡಬೇಕು?: ವೈಯಕ್ತಿಕವಾಗಿ ನಮಗೆ ಏನು ಬೇಕು, ಎಷ್ಟು ಬೇಕು ಅಷ್ಟನ್ನೇ ಬಳಸಲು ಪ್ರಯತ್ನ ಮಾಡೋಣ. ನಮ್ಮ ಅವಶ್ಯಕತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಾವೇ ಪೂರೈಸಿಕೊಳ್ಳಲು ಪ್ರಯತ್ನಿಸೋಣ ಅಥವಾ ಸ್ಥಳೀಯವಾಗಿ ಇರು ವುದನ್ನೇ ಉಪಯೋಗಿಸೋಣ. ಅನಂತಕುಮಾರ್ ಅವರು ಒತ್ತು ನೀಡಿದ ಹಸಿರು ಜೀವನಶೈಲಿ (ಮಿತಬಳಕೆ, ಮರುಬಳಕೆ) ಮಂತ್ರವನ್ನು ಪಾಲಿಸೋಣ. ಎಲ್ಲರನ್ನೂ ಸಮಭಾವದಿಂದ ನೋಡುವುದನ್ನು ಕಲಿಯೋಣ. ಕೇವಲ ಮನುಷ್ಯರನ್ನಷ್ಟೇ ಅಲ್ಲ ಗಿಡ-ಮರ, ಪ್ರಾಣಿ-ಪಕ್ಷಿಗಳಲ್ಲೂ ಸಹ ನಮ್ಮಲ್ಲಿ ಇರುವ ಪರಮಾತ್ಮ ಇದ್ದಾನೆ ಎಂಬುದನ್ನು ಗುರುತಿಸೋಣ. ಸುಖ ಯಾವುದು, ಸಂತೋಷ ಎಲ್ಲಿದೆ ಎಂಬುದನ್ನು ನಮ್ಮ ಸಂತರು, ಗುರು-ಹಿರಿಯರಿಂದ ಅರಿತುಕೊಳ್ಳೋಣ. ನಮಗೆ ಸಿಕ್ಕಿರುವ ಕೆಲಸ, ಅವಕಾಶಗಳಲ್ಲಿ ಸಂತೋಷವನ್ನು ಕಾಣುವ ಪ್ರಯತ್ನ ಮಾಡೋಣ. ಸಂತೋಷ, ಸುಖ ಎಂಬುದು ಸುಮ್ಮನೆ ಕುಳಿತುಕೊಂಡರೆ ಖಂಡಿತವಾಗಿಯೂ ಸಿಗುವುದಿಲ್ಲ. ಹಾಗಾಗಿಯೇ, ಸ್ವಾರ್ಥರಹಿತ ಕರ್ಮದಲ್ಲಿ (ಬೇರೆಯವರ ಹಿತಕ್ಕಾಗಿ ಪಡುವ ಪರಿಶ್ರಮ) ಸಂತೋಷ ಸಿಗುತ್ತದೆ ಎಂದು ಗುರು-ಹಿರಿಯರು ಹೇಳಿದ್ದಾರೆ. ಹಾಗಾಗಿ, ಅತಿ ಹೆಚ್ಚು ಪರಿಶ್ರಮವನ್ನು ಹಾಕಿ ಹೆಚ್ಚೆಚ್ಚು ಸಂತೋಷವನ್ನು ಅನುಭವಿಸೋಣ. ನಾನು ಮತ್ತು ಎಲ್ಲ ದೇಶವಾಸಿಗಳ ಅನ್ನ, ಅಕ್ಷರ, ಆರೋಗ್ಯದ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಲು ಬೇಕಾದ ಸಂಶೋಧನೆಗಳತ್ತಲೂ ಗಮನ ಹರಿಸೋಣ.
ಇದನ್ನೂ ಓದಿ: ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!
ಹೀಗೆ ಆತ್ಮನಿರ್ಭರ/ಸ್ವಾವಲಂಬಿ ಆಗುವ ಪ್ರಕ್ರಿಯೆ ನಮ್ಮಿಂದಲೇ ಆರಂಭವಾಗಬೇಕಿದೆ. ಈ ಪ್ರಕ್ರಿಯೆ ಬಾಹ್ಯವಷ್ಟೇ ಅಲ್ಲ, ಆಂತರಿಕವಾಗಿಯೂ ಆರಂಭಗೊಳ್ಳಬೇಕಿದೆ. ವ್ಯಷ್ಟಿ ಪ್ರಯತ್ನಗಳು ಸಮಷ್ಟಿಯಲ್ಲಿ ಸಾಕಾರವಾದರೆ ಅದರ ಪರಿಣಾಮಗಳು ಅದ್ಭುತ. ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡರೆ ಪ್ರಕೃತಿಯ ಮೇಲಿನ ಶೋಷಣೆಯೂ ಕಡಿಮೆ ಆಗುತ್ತದೆ. ಸ್ಥಳೀಯ ಉತ್ಪನ್ನಗಳನ್ನೇ ಬಳಸುವುದರಿಂದ ಪ್ರಧಾನಿ ಹೇಳಿರುವ ಆಶಯವೂ ಈಡೇರುತ್ತದೆ. ನಮ್ಮನ್ನು ನಾವು ಅರಿತುಕೊಳ್ಳಲು, ಸ್ವಾವಲಂಬನೆಯ ಹೊಸ ಮಾರ್ಗವನ್ನು ನಿರ್ವಿುಸಿಕೊಳ್ಳಲು ಕರೊನಾ ಸಂಕಷ್ಟ ಅವಕಾಶ ಕಲ್ಪಿಸಿದೆ. ಹಾಗಾಗಿ, ನಮ್ಮ ಶಕ್ತಿಯನ್ನು, ರಾಷ್ಟ್ರದ ಶಕ್ತಿಯನ್ನು ಜಾಗೃತಗೊಳಿಸಬೇಕಾದ ಸಮಯವಿದು. ಅಭಿವೃದ್ಧಿಯ ಹಾದಿ ಬೇಕು. ಆದರೆ, ಅದು ಪ್ರಕೃತಿಯನ್ನು, ಇತರರನ್ನು ಶೋಷಿಸದೆ ನಡೆಯಬೇಕು. ಈ ಚಿಂತನೆಗಳ ಪರಿಣಾಮಕಾರಿ ಅನುಷ್ಠಾನ ಆರಂಭವಾದರೆ ವ್ಯಕ್ತಿಯಿಂದ ಆರಂಭಗೊಳ್ಳುವ ಸ್ವಾವಲಂಬನೆಯ ಪ್ರಕ್ರಿಯೆ ಮನೆ, ಸಮಾಜಕ್ಕೆ ಆವರಿಸಿಕೊಂಡು ಇಡೀ ದೇಶ ಆತ್ಮನಿರ್ಭರವಾಗುತ್ತದೆ.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)