ಅಭಿವೃದ್ಧಿಯ ಭ್ರಮೆ ವೈವಿಧ್ಯತೆಗೆ ಮಾರಕವಾಗುತ್ತಿದೆಯೇ?

Western
Published on

ಸಮಾನತೆ, ಸುಧಾರಣೆ, ಬದಲಾವಣೆ ಎಂದು ಹೇಳುತ್ತ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಹುಡುಕಲು ಹೊರಟಿದ್ದೀವಿ. ಬಹುಶಃ ಇದುವೇ ನಾವು ಮಾಡುತ್ತಿರುವ ದೊಡ್ಡ ತಪ್ಪು. ಹಾಗಾದರೆ ಸರಿ ಯಾವುದು? ಉತ್ತರ ಶೋಧಿಸಬೇಕಿದೆ. ಈ ಬಗ್ಗೆ ಚಿಂತನೆ ಆರಂಭಿಸಬೇಕಿದೆ.

ವೈವಿಧ್ಯತೆ ಈ ಭೂಮಿಯ ವಿಶೇಷತೆ. ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ. ಭಾಷೆ, ಆಹಾರ, ಉಡುಗೆ-ತೊಡುಗೆ, ಜೀವನಪದ್ಧತಿ ಎಲ್ಲದರಲ್ಲೂ ವೈವಿಧ್ಯ. ಮತ್ತು ಇದುವೇ ದೇಶದ ಜೀವಾಳ ಕೂಡ ಹೌದು. ಇಂಥ ವೈವಿಧ್ಯನಶಿಸುತ್ತ ಬರುತ್ತಿದ್ದು, ಹಲವು ಬಗೆಯ ಸಮಸ್ಯೆ ಮತ್ತು ತಲ್ಲಣಗಳಿಗೆ ಕಾರಣವಾಗುತ್ತಿದೆ ಎಂಬುದರ ಬಗ್ಗೆ ಕಳೆದ ಅಂಕಣದಲ್ಲಿ  ಚರ್ಚಿಸಿದ್ದೆವು. ಇದಕ್ಕೆ ಕಾರಣವೇನು ಮತ್ತು ಇದರಿಂದಾಗುತ್ತಿರುವ ದೊಡ್ಡ ಪಲ್ಲಟದ ಕುರಿತು ಈಗ ಚಿಂತಿಸೋಣ.

ಎಲ್ಲ ಕೆಲಸದಲ್ಲಿ ಅಂಧಾನುಕರಣೆ, ಕಾಪಿ ಆಂಡ್ ಪೇಸ್ಟ್ ಮಾಡಿ ಅಳವಡಿಸಿಕೊಂಡಿದ್ದರ ಪರಿಣಾಮ ಈ ಸಮಸ್ಯೆಗಳು. ಮಕ್ಕಳು ಮಾಡುತ್ತಿರುವ ಶಾಲೆಯ ಹೋಂವರ್ಕ್ ಕಾಪಿ. ಮಕ್ಕಳಷ್ಟೇ ಅಲ್ಲ, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪ್ರೊಫೆಸರ್​ಗಳ ಪ್ರಾಜೆಕ್ಟ್ ರಿಪೋರ್ಟ್ ಕೂಡ ಕಾಪಿ. ದೊಡ್ಡ ದೊಡ್ಡ ಕೈಗಾರಿಕೆಗಳ ಅವಸ್ಥೆ ಕೂಡ ಇದುವೇ. ಡಿಪಿಆರ್ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವರದಿ ತಯಾರಿಸುತ್ತಾರೆ. ಆದರೆ, ಒಂದು ವರದಿಯ ಸಾಲುಗಳೇ ಮತ್ತೊಂದರಲ್ಲಿ! ಅಲ್ಲಿ ತಪ್ಪಾಗಿದ್ದರೆ ಇಲ್ಲಿಯೂ ಅದೇ ತಪ್ಪು ಮರುಕಳಿಸಿರುತ್ತದೆ. ಇದು ಬರೀ ದಾಖಲಾತಿಗಳಿಗೆ ಸೀಮಿತವಾಗಿಲ್ಲ. ಈ ಕಾಪಿ ಆಂಡ್ ಪೇಸ್ಟ್ ನಮ್ಮ ಸ್ವಭಾವದಲ್ಲಿ, ವೃತ್ತಿ-ಪ್ರವೃತ್ತಿಯಲ್ಲೂ ಕಂಡುಬರುತ್ತಿರುವುದು ನಿಜಕ್ಕೂ ಖೇದಕರ. ಇದರಿಂದ ಆಧುನಿಕತೆಯ ಭ್ರಮೆಗಳಲ್ಲೇ ಬದುಕುತ್ತಿರುವ ನಾವು, ನಮ್ಮ ಪ್ರಕೃತಿಯನ್ನು, ಗುರು-ಹಿರಿಯರನ್ನು ಗೌರವಿಸುತ್ತಿಲ್ಲ. ನಮ್ಮ ಹಳೆಯ ಪದ್ಧತಿಗಳನ್ನು, ಸಾವಿರಾರು ವರ್ಷಗಳಿಂದ ಬಂದ ರೂಢಿಗಳನ್ನು ಬಿಟ್ಟು ಸುಧಾರಣೆ, ಅಭಿವೃದ್ಧಿಯ ಹೆಸರಲ್ಲಿ ಅಂಧಾನುಕರಣೆ ಮಾಡುತ್ತಿದ್ದೇವೆ.

ನಮಗೆ ನಮ್ಮದೇ ಆದ ಭವ್ಯ, ಶ್ರೀಮಂತ ಸಂಸ್ಕೃತಿಯೇ ಇರುವಾಗ ಮತ್ತು ವೈವಿಧ್ಯತೆ ಜೀವನಧರ್ಮವಾಗಿ ಅನುಸರಿಸಲ್ಪಡುತ್ತಿರುವಾಗ ‘ಎಲ್ಲವನ್ನೂ ಒಂದೇ ಬಗೆ’ ಮಾಡಲು ಹೊರಟಿದ್ದು ವಿಪರ್ಯಾಸ. ನಮ್ಮಲ್ಲಿರುವ ಪ್ರಾಕೃತಿಕ, ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವೈವಿಧ್ಯಗಳು ವೇಗವಾಗಿ ನಶಿಸುತ್ತಿವೆ. ಅವರಾರೋ ಮಾಡಿದರು ಎಂದು ನಾವು ಅನುಕರಣೆ ಮಾಡಿದೆವು. ಇದನ್ನು ನಮ್ಮ ಮೇಲೂ ಹೇರಿಕೊಳ್ಳುತ್ತಿದ್ದೇವೆ, ಮಕ್ಕಳ ಮೇಲೂ ಹೇರುತ್ತಿದ್ದೇವೆ. ಎಲ್ಲರೂ ಅದೇ ಪಾಠ ಕಲಿಯಬೇಕು, ಅದೇ ಹಾಡು ಹೇಳಬೇಕು, ಅದೇ ಬಟ್ಟೆ ಹಾಕಬೇಕು, ಎಲ್ಲರೂ ಅದೇ ಊಟ ಮಾಡಬೇಕು! ಬೆಳಗ್ಗೆ ಎದ್ದಾಕ್ಷಣ ಸ್ಯಾಂಡ್​ವಿಚ್, ಜತೆಗೆ ಕಿತ್ತಳೆ ಜ್ಯೂಸ್! ಅಲ್ಲಿ ಎಲ್ಲೋ ಸ್ಥಳೀಯವಾಗಿ ಕಿತ್ತಳೆ ಬೆಳೆಯಲಾಗುತ್ತದೆ, ಸುಲಭವಾಗಿ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ಅವರು ಬಳಸಿದರೆ, ಮತ್ತೊಂದು ಭಾಗದವರು ಅದನ್ನು ಪ್ರತಿಷ್ಠೆಯೆಂದು ತಿಳಿದು ಬೆಳಗಿನ ತಿಂಡಿ ಜತೆಗೆ ಆರೆಂಜ್ ಜ್ಯೂಸ್, ಬ್ರೆಡ್ ಜಾಮ್ ಸ್ಯಾಂಡ್​ವಿಚ್, ಓಟ್ಸ್ ಸೇವಿಸುತ್ತಾರೆ.

ಕಳೆದುಕೊಂಡಿದ್ದೇ ಹೆಚ್ಚು: ಇದೇ ರೀತಿ, ಭಾಷೆ, ವಿಚಾರ ಮಾಡುವ ರೀತಿಯನ್ನು ಹೇರುತ್ತಿದ್ದೇವೆ. ಇದೇ ಓದಬೇಕು ಎಂದು ಮಕ್ಕಳ ಮೇಲೆ ದಬ್ಬಾಳಿಕೆ. ಕೊನೆಗೇನು? ಎಲ್ಲರೂ ಇಂಜಿನಿಯರಿಂಗ್ ಓದಬೇಕು, ಎಲ್ಲರೂ ಐಎಎಸ್ ಮಾಡಬೇಕು, ಎಲ್ಲರೂ ಮೊದಲ ನಂಬರ್ ಬರಬೇಕು, ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆಯಬೇಕು, ಹೀಗೆ ಮಾಡ್ತಾ ಮಾಡ್ತಾ ಎಷ್ಟೆಲ್ಲ ಸಂಗತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಯೋಚಿಸಿದ್ದೇವೆಯೇ? ಉದಾಹರಣೆಗೆ, ಒಬ್ಬ ವಿದ್ಯಾರ್ಥಿಗೆ ಸಂಗೀತದಲ್ಲೋ, ಚಿತ್ರಕಲೆಯಲ್ಲೋ, ಕ್ರೀಡೆಯಲ್ಲೋ ವಿಶೇಷ ಆಸಕ್ತಿ, ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ, ಗೌರವಿಸುವ ಪ್ರವೃತ್ತಿಯೇ ನಶಿಸಿದೆ. ಹೊರಗಡೆ ಮಾರುಕಟ್ಟೆಯಲ್ಲಿ ಏನು ಓಡುತ್ತಿದೆಯೋ ಅದನ್ನೇ ಮಾಡಲು ಒತ್ತಡ ಹೇರಲಾಗುತ್ತದೆ. ಸಾಫ್ಟ್​ವೇರ್ ರಂಗಕ್ಕೆ ಬೇಡಿಕೆ ಇದೆಯೆಂದು, ಎಲ್ಲರನ್ನೂ ಅದೇ ಕ್ಷೇತ್ರಕ್ಕೆ ನೂಕುವುದು. ಟೊಮ್ಯಾಟೋಗೆ ಒಳ್ಳೆಯ ಬೆಲೆ ಇದೆಯೆಂದು ಎಲ್ಲರೂ ಟೊಮ್ಯಾಟೋ ಬೆಳೆದು, ಉತ್ಪಾದನೆ ಹೆಚ್ಚಾಗಿ, ಬೆಲೆ ಪಾತಾಳಕ್ಕೆ ಕುಸಿದು ಕೊನೆಗೆ ರಸ್ತೆಗೆ ಸುರಿಯುವಂಥ ಸ್ಥಿತಿ. ಟೊಮ್ಯಾಟೋವನ್ನು ರಸ್ತೆಗೆ ಚೆಲ್ಲಿದರೂ, ಅದನ್ನು ಮತ್ತೊಮ್ಮೆ ಬೆಳೆಯುವ ಅವಕಾಶ ಉಂಟು. ಆದರೆ ಮಕ್ಕಳ ಭವಿಷ್ಯ ಒಮ್ಮೆ ಹಾಳಾದರೆ, ಅದನ್ನು ಸರಿಮಾಡಲು ಸಾಧ್ಯವೇ?

ಸಮಾನತೆ, ಸುಧಾರಣೆ, ಬದಲಾವಣೆ ಎಂದು ಹೇಳುತ್ತ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಹುಡುಕಲು ಹೊರಟಿದ್ದೇವೆ. ಬಹುಶಃ ಇದುವೇ ನಾವು ಮಾಡುತ್ತಿರುವ ದೊಡ್ಡ ತಪ್ಪು. ಹಾಗಾದರೆ ಸರಿ ಯಾವುದು? ಉತ್ತರ ಶೋಧಿಸಬೇಕಿದೆ. ಈ ಬಗ್ಗೆ ಚಿಂತನೆ ಆರಂಭಿಸಬೇಕಿದೆ.

ಆ ಹಿರಿಯರ ಮಾತು: ಹಳೆಯ ಘಟನೆಯೊಂದು ನೆನಪಾಗುತ್ತಿದೆ. ಮೂರ್ನಾಲ್ಕು ವರ್ಷದ ಹಿಂದೆ ಬೆಂಗಳೂರು ಬಳಿಯ ಹಳ್ಳಿಯೊಂದಕ್ಕೆ ಕಾರ್ಯಕ್ರಮಕ್ಕೆಂದು ಹೋಗಿದ್ದೆ. ಅದಾದ ಬಳಿಕ ಊರಿನ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸಭೆ ಸೇರಿದ್ದರು. ತುಂಬ ವಿಷಯಗಳನ್ನು ತಿಳಿದುಕೊಂಡಿದ್ದ, ಆ ಊರಿಗೆ ಸಾಕಷ್ಟು ಸಹಾಯ ಮಾಡಿದ್ದ ಹಿರಿಯರೊಬ್ಬರು ಸಭೆಯಲ್ಲಿದ್ದರು. ಊರಿನ ಸುಧಾರಣೆ ಬಗ್ಗೆ, ನೀರಿನ ವಿತರಣೆ ಕುರಿತು ಚರ್ಚೆ ನಡೆಯಿತು. 200-250 ಮನೆಗಳಿರುವ ಗ್ರಾಮವದು. ಪ್ರತೀ ರಸ್ತೆಯ ಕೊನೆಗೆ, 25-30 ಮನೆಗಳಿಗೆ ಒಂದರಂತೆ ಎಂಟು ಟ್ಯಾಂಕ್​ಗಳನ್ನು ನಿರ್ವಿುಸಲಾಗಿತ್ತು. ಕೊಳವೆಬಾವಿ ಮೂಲಕ ಆ ಟ್ಯಾಂಕುಗಳನ್ನು ತುಂಬಿಸಲಾಗುತ್ತಿತ್ತು. ಅದಕ್ಕೆಂದೆ, ಒಬ್ಬ ವ್ಯಕ್ತಿಯನ್ನು ನಿಯೋಜನೆ ಮಾಡಲಾಗಿತ್ತು. ಗ್ರಾಮಸ್ಥರು ಆ ಟ್ಯಾಂಕ್​ಗಳ ಬಳಿ ಹೋಗಿ ಕೊಡದಲ್ಲಿ ನೀರು ತುಂಬಿಕೊಂಡು ಬರುತ್ತಿದ್ದರು. ತುಂಬ ವರ್ಷದಿಂದ ಈ ಪದ್ಧತಿ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿತ್ತು.

ಹೀಗಿರುವಾಗ, ಗ್ರಾಮದ ಯುವಕನೊಬ್ಬ ವಿದ್ಯಾವಂತನಾಗಿ ಬೆಂಗಳೂರಿಗೆ ಬಂದು, ಅಲ್ಲಿಂದ ವಿದೇಶಕ್ಕೆ ಹೋಗಿ ಡಾಲರ್​ಗಳಲ್ಲಿ ದುಡ್ಡು ಸಂಪಾದಿಸಿಕೊಂಡು ಬಂದ. ತಂದೆ-ತಾಯಿ ಹಳ್ಳಿಯಲ್ಲಿ ಸಣ್ಣ ಮನೆಯಲ್ಲಿ ಇದ್ದಾರಲ್ಲ ಎಂದುಕೊಂಡು ಅದೇ ಗ್ರಾಮದಲ್ಲಿ, ಎಲ್ಲರ ಕಣ್ಣಿಗೆ ಕುಕ್ಕುವಂತೆ ದೊಡ್ಡ ಬಂಗಲೆ ಕಟ್ಟಿದ. ಆಧುನಿಕ ಸೌಲಭ್ಯಗಳನ್ನೆಲ್ಲ ಒದಗಿಸಿದ. ಬೋರ್​ವೆಲ್ ಹಾಕಿಸಿ, ಸಂಪ್ ಕಟ್ಟಿ, ಛಾವಣಿ ಮೇಲೆ ಟ್ಯಾಂಕ್ ಇರಿಸಿ, ಮೋಟಾರ್​ನಿಂದ ಅದನ್ನು ತುಂಬಿಸಲಾಗುತ್ತಿತ್ತು. ಮುಂದೆ ಸಮಯ ಕಳೆದಂತೆ ಮತ್ತೆ ಕೆಲ ಅನುಕೂಲಸ್ಥರು ದೊಡ್ಡ ಮನೆ ಕಟ್ಟಿಕೊಂಡರು, ಸ್ವತಂತ್ರವಾಗಿ ಬೋರ್​ವೆಲ್ ಹಾಕಿಸಿ, ಸಂಪ್​ಗಳನ್ನು ನಿರ್ವಿುಸಿಕೊಂಡರು. ಹೀಗಾಗಿ, ಎಲ್ಲ ಮನೆಗಳಿಗೂ ಕೊಳಾಯಿ ಬೇಕು. ಟ್ಯಾಂಕ್​ಗಳ ಬಳಿ ಹೋಗಿ ನೀರು ತರುವುದು ಮಹಿಳೆಯರಿಗೆ ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಆ ಸಭೆಯಲ್ಲಿ ಹೊಮ್ಮಿತು. ಆದರೆ, ಈ ಹಿರಿಯರು, ಅದನ್ನು ವಿರೋಧಿಸಿ ಈಗಿರುವ ಪದ್ಧತಿಯೇ ಸೂಕ್ತವಾಗಿದೆ; ಹಾಗೇ ಮುಂದುವರಿಯಲಿ ಎಂದರು. ಇದನ್ನು ಕೇಳಿ ನನಗೂ ಆಶ್ಚರ್ಯವಾಯಿತು. ಮನೆವರೆಗೆ ಕೊಳಾಯಿ ಕೊಡುವುದು ಸರ್ಕಾರದ ಕರ್ತವ್ಯ; ಅದಕ್ಕೆ ಬೇಕಾದ ಅನುದಾನವೂ ಇದೆ. ಹೀಗಿರುವಾಗ ಇವರೇಕೆ, ಕೊಳಾಯಿ ಮನೆಯವರೆಗೂ ಬರುವುದು ಬೇಡ ಎನ್ನುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ.

ಸಭೆಯ ನಂತರ ಆ ಹಿರಿಯರನ್ನು ‘ನೀವೇಕೆ ಬೇಡ ಎಂದಿರಿ?’ ಎಂದು ಕೇಳಿದೆ. ಅದಕ್ಕೆ ಕಾರಣ ಇದೆ ಕೇಳಿ ಎಂದ ಹಿರಿಯರು-‘ಈ ಗ್ರಾಮದ ಅಂತರ್ಜಲ ಮಟ್ಟ ಎಷ್ಟಿದೆ ಎಂಬುದು ನನಗೆ ಗೊತ್ತು. ಈಗ ಇಡೀ ಊರಿಗೆ 8-9 ಬೋರ್​ವೆಲ್​ಗಳಿರುವುದು ನಿಜ. ಇಷ್ಟು ಬೋರ್​ವೆಲ್​ಗಳ ಮೂಲಕ ಸಿಮೆಂಟ್ ಟ್ಯಾಂಕ್​ಗಳನ್ನು ತುಂಬಿಸುತ್ತಿದ್ದು, ಜನರು ಅಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ, ನೀರು ಸಾಕಾಗ್ತಾ ಇದೆ, ಬಳಕೆಯೂ ಕಡಿಮೆ ಇದೆ. ಒಮ್ಮೆ ಎಲ್ಲರ ಮನೆಗೂ ಸಂಪ್, ಓವರ್​ಹೆಡ್ ಟ್ಯಾಂಕ್ ಅಂತ ಆಗಿಬಿಟ್ಟರೆ, ನೀರಿನ ಬಳಕೆ ಅದಕ್ಕಿಂತಲೂ ಪೋಲು ಹೆಚ್ಚಾಗಿ ಮುಂದೆ ಕುಡಿಯುವ ನೀರಿಗೂ ತತ್ವಾರ ಪಡಬೇಕಾಗುತ್ತದೆ. ಅಲ್ಲದೆ, ನೀರಿನ ಮೂಲಗಳಿಂದ ನಾವು ತುಂಬ ದೂರದಲ್ಲಿದ್ದೇವೆ. ಹಾಗಾಗಿ, ಬೇರೆಡೆಯಿಂದ ಇಲ್ಲಿ ನೀರು ತರಲು ಸಾಧ್ಯವಿಲ್ಲ. ಅಂತರ್ಜಲ ಬರಿದಾದರೆ ಮುಂದೇನು ಮಾಡಬೇಕು?’ ಎಂದಾಗ ಅವರು ಹೇಳಿದ್ದು ಸರಿಯೆನಿಸಿತು. ಆ ಹಿರಿಯರು ಹೇಳಿದಂತೆ, ಜನರಿಗೆ ಹತ್ತಿರದಲ್ಲಿ ನೀರು ಕಲ್ಪಿಸುವುದು ಸುಧಾರಣೆ. ಅದನ್ನು ಬಿಟ್ಟು ಮನೆಯ ಬಚ್ಚಲುಮನೆ, ಅಡುಗೆ ಮನೆಯವರೆಗೆ ನೀರು ತಲುಪಿಸಿ, ಮುಂದಿನ 10-15 ವರ್ಷಗಳಲ್ಲಿ ಅಂತರ್ಜಲ ಬರಿದು ಮಾಡಿಬಿಟ್ಟರೆ ಅದು ಖಂಡಿತವಾಗಿಯೂ ಸುಧಾರಣೆಯಲ್ಲ. ಅದೇ ಹಣವನ್ನು ಗ್ರಾಮಕ್ಕೆ ವೈಫೈ ಸೌಲಭ್ಯ ಕಲ್ಪಿಸಲು, ಕಂಪ್ಯೂಟರ್ ಶಿಕ್ಷಣ ಇತ್ಯಾದಿ ಸುಧಾರಣೆಗಳಿಗೆ ಬಳಸಬಹುದಲ್ಲ. ಆದರೆ, ಇಂಥ ಚಿಂತನೆ, ಮುಂದಾಲೋಚನೆಯನ್ನು ಸಮಾಜದ ಪ್ರಮುಖರು ಮತ್ತು ಜನಪ್ರತಿನಿಧಿಗಳು ಕಳೆದುಕೊಂಡು ಬಿಟ್ಟಿದ್ದಾರಾ ಎಂದೆನಿಸುತ್ತದೆ. ಸ್ನಾನಕ್ಕೂ ಆರ್​ಒ ನೀರನ್ನು ಬಳಸುವ, ಏರ್​ಕಂಡೀಶನರ್ ಕೋಣೆಯಲ್ಲಿ ಕುಳಿತು, ಸಾವಿರಾರು ಮೈಲಿಯಿಂದ ಬಂದ ಬಾಟಲಿಯ ಠಟ್ಟಜ್ಞಿಜ ನೀರು ಕುಡಿಯುವವರಿಗೆ ಈ ತರಹದ ನಿರ್ಣಯಗಳು ಸಂದಿಗ್ಧ ಸ್ಥಿತಿ ತರುವುದಂತೂ ನಿಜ.

ಮರುವ್ಯಾಖ್ಯಾನ ಅಗತ್ಯ: ಪಶ್ಚಿಮ ಘಟ್ಟದ ದಟ್ಟವಾದ ಕಾಡಿನ ನಡುವೆಯೂ ನಮಗೆ ರೈಲ್ವೆ ಲೈನ್ ಬೇಕಾಗಿದೆ. ಹಾಗಾದರೆ, ಅಲ್ಲಿನ ಜನರಿಗೆ ಅಭಿವೃದ್ಧಿ ಯೋಜನೆ ಬೇಡವೇ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ, ಕಾಡಿನ ಮಧ್ಯೆ ರೈಲ್ವೆ ಯೋಜನೆಯನ್ನು ಕಾರ್ಯಗತಗೊಳಿಸುವುದೇ ಸುಧಾರಣೆಯ ಪ್ರತೀಕವೇ? ಕಾಡನ್ನು ನಾಶ ಮಾಡಿ ಸಾಧಿಸುವ ‘ತಥಾಕಥಿತ ಅಭಿವೃದ್ಧಿಗೆ’ ಯಾವ ಅರ್ಥವಿದೆ? ಇದು ಹೀಗೇ ಸಾಗಿದರೆ ಮುಂಬರುವ ದಿನಗಳಲ್ಲಿ ಕಾಡೂ ಉಳಿಯುವುದಿಲ್ಲ, ಸುಧಾರಣೆಯೂ ಆಗುವುದಿಲ್ಲ. ಆದರೆ, ಇದನ್ನು ದೊಡ್ಡದನಿಯಲ್ಲಿ ಹೇಳುವ ನೈತಿಕತೆ ಯಾರಿಗಿದೆ ಎಂಬುದು ಈಗಿನ ಸಂದಿಗ್ಧ ಪ್ರಶ್ನೆ. ಮತ್ತು ‘ಪರ್ಯಾಯ ವಿಧಾನ’ದ ಬಗ್ಗೆಯೂ ಯೋಚಿಸಬೇಕಿದೆ. ಈ ಬಗ್ಗೆ ಚಿಂತನೆ ಮಾಡುವ ನೇತೃತ್ವವನ್ನು ಕಂಡುಕೊಳ್ಳಬೇಕಿದೆ. ಆಧುನಿಕತೆ ಎಂದರೇನು? ಅಭಿವೃದ್ಧಿ ಎಂದರೇನು? ಎಂಬುದರ ಮರುವ್ಯಾಖ್ಯಾನ ಆಗಬೇಕಿದೆ. ಇಲ್ಲವಾದಲ್ಲಿ ಈ ಬಗೆಯ ಗೊಂದಲ ಮತ್ತು ಸಂದಿಗ್ಧತೆಗಳು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net