

ತಂದೆ-ತಾಯಿಯ ಜತೆಗೆ ಬಂದು ನನ್ನೆದುರು ಕುಳಿತ ‘ಅಜಯ’ ಸುಮಾರು ಒಂಬತ್ತು ವರ್ಷದ ಹುಡುಗ. ಬಾಡಿ ಬೆದರಿದ ಮುಖಭಾವ, ಕಣ್ಣುಗಳಲ್ಲಿ ಏನನ್ನೋ ಮುಚ್ಚಿಟ್ಟುಕೊಳ್ಳಲು ಬಯಸುವ ತವಕ. ಮೂರನೇ ತರಗತಿ ಓದುತ್ತಿರುವ ಆತನನ್ನು ಅವನ ತರಗತಿಯ ಶಿಕ್ಷಕರು ನನ್ನೆಡೆಗೆ ಮನೋಚಿಕಿತ್ಸೆಗೆಂದು ಕಳುಹಿಸಿ ಕೊಟ್ಟಿದ್ದರು. ಅವನ ಸಮಸ್ಯೆಯನ್ನು ಪಾಲಕರು ವಿವರಿಸಿದ್ದು ಹೀಗೆ.
ತಂದೆ ಬ್ಯಾಂಕ್ ಉದ್ಯೋಗಿ. ತಾಯಿ ಸದ್ಗೃಣಿ. ಅಜಯ ಒಬ್ಬನೇ ಮಗ. ಉತ್ತಮ ಶಿಕ್ಷಣ ಕೊಡಿಸಲು ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದರು. ನಿತ್ಯ ಬೆಳಗ್ಗೆ ಸ್ನಾನ-ತಿಂಡಿ ಮುಗಿಸಿ ಊಟದ ಡಬ್ಬಿಯೊಂದಿಗೆ ಏಳು ಗಂಟೆಗೆ ಮನೆ ಬಿಟ್ಟು ಟ್ಯೂಷನ್ಗೆ ಹೋಗುತ್ತಿದ್ದ. ಅಲ್ಲಿಂದಲೇ ಟೀಚರ್ ಜತೆ ಶಾಲೆಗೆ ಹೋಗುತ್ತಿದ್ದ. ಮಧ್ಯಾಹ್ನ ಡಬ್ಬಿಯ ಊಟ. ಸಂಜೆ ಮನೆಗೆ ಬಂದ ಮೇಲೆ ಸ್ವಲ್ಪ ತಿಂಡಿ ತಿಂದು ಪುನಃ ಟ್ಯೂಷನ್ಗೆ ಹೋಗಿ ರಾತ್ರಿ ಹಿಂತಿರುಗುತ್ತಿದ್ದ. ಇಷ್ಟಾಗುವುದರಲ್ಲಿ ಸುಸ್ತಾಗಿ ಉಂಡು ಮಲಗಿಬಿಡುತ್ತಿದ್ದ. ಇದು ಆತನ ನಿತ್ಯದ ದಿನಚರಿ.
ಒಂದು ದಿನ ಎಂದಿನಂತೆ ಬೆಳಗ್ಗೆ ಏಳಕ್ಕೆ ಹೋದ ಅಜಯ ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ಮರಳಿದ. ಅಚ್ಚರಿಗೊಂಡ ತಾಯಿ ಏಕೆಂದು ಪ್ರಶ್ನಿಸಿದಾಗ ಅಳತೊಡಗಿದ. ಸಮಾಧಾನಪಡಿಸುತ್ತ ಕಾರಣ ಕೇಳಿದಾಗ - ‘ನಾನು ಎಂದಿನಂತೆ ಟ್ಯೂಷನ್ಗೆ ಹೊರಟಾಗ ಕಾರಿನಲ್ಲಿ ಬಂದ ಇಬ್ಬರು ಮೂಗು-ಬಾಯಿಗೆ ಏನೋ ಹಿಡಿದರು. ನನಗೆ ಎಚ್ಚರ ತಪ್ಪಿತು. ಎಚ್ಚರವಾದಾಗ ಹಾಳುಗುಂಡಿಯೊಂದರಲ್ಲಿ ಕೂಡಿಹಾಕಿದ್ದರು. ನಾನು ಅಳತೊಡಗಿದಾಗ ತಿನ್ನಲು ಹಣ್ಣು ಬಿಸ್ಕಿಟ್ಟು ಕೊಟ್ಟರು. ನಾನು ತಿನ್ನಲಿಲ್ಲ. ಯಾರಿಗೋ ಫೋನ್ ಮಾಡುತ್ತಿದ್ದರು. ಕೊನೆಗೆ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಕರೆತಂದು ಮನೆಯ ಹತ್ತಿರ ಬಿಟ್ಟುಹೋದರು’ ಎಂದೆಲ್ಲ ಹೇಳಿದ. ತಾಯಿಗೆ ಹೆದರಿಕೆಯಾಯಿತು. ಈ ವಿಷಯ ತಿಳಿದ ತಂದೆಗೂ ಭಯವಾಯಿತು. ಶಾಲೆಗೆ ಹೋಗಿ ಶಿಕ್ಷಕರ ಬಳಿ ಹೇಳಿದಾಗ ಅವರೂ ಆಶ್ಚರ್ಯಪಟ್ಟರು. ಕೊನೆಗೆ ತಂದೆ
ಈ ವಿಷಯವನ್ನು ಪೊಲೀಸರಿಗೆ ತಿಳಿಸುತ್ತೇನೆಂದರು. ಆಗ ಅಜಯನ ತರಗತಿ ಶಿಕ್ಷಕರು, ‘ಈಗಲೇ ತಿಳಿಸುವುದು ಬೇಡ. ಒಂದು ದಿನ ಸಮಯ ಕೊಡಿ’ ಎಂದು ಕೇಳಿಕೊಂಡರು. ಅಜಯನ ಚಲನವಲನ ಗಮನಿಸಿ ಅವನೊಂದಿಗೆ ವಿಶ್ವಾಸದಿಂದ ಮಾತಾಡಿದರು. ಕೊನೆಗೆ ಅವನ ತಂದೆಯನ್ನು ಭೇಟಿ ಮಾಡಿ, ‘ನಿಮ್ಮ ಮಗನನ್ನು ಮನೋವೈದ್ಯರಲ್ಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ’ ಎಂದು ಸಲಹೆ ಮಾಡಿದರು. ಆ ಪ್ರಕಾರ ಅಜಯ ನನ್ನ ಮುಂದೆ ಕುಳಿತಿದ್ದ.
ನಾನು ಅಜಯನನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತ ಆಪ್ತಸಮಾಲೋಚನೆ ಮಾಡಿದಾಗ ಆತನಿಗೆ ಚಿಕಿತ್ಸೆ ಅವಶ್ಯವೆನಿಸಿತು. ಕೊನೆಗೆ ಅಜಯ ತನ್ನ ಅಪಹರಣದ ಪ್ರಸಂಗವನ್ನು ಕಥಾರೂಪದಲ್ಲಿ ಬಿಚ್ಚಿಟ್ಟ.
‘ಮನೆಯಲ್ಲಿ ನನಗೆ ಪದೇಪದೆ ಓದಲು ಹೇಳುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಓದು, ಆಮೇಲೆ ಟ್ಯೂಷನ್, ನಂತರ ಶಾಲೆ, ಸಂಜೆಗೆ ಪುನಃ ಟ್ಯೂಷನ್, ರಾತ್ರಿ ಹೋಮ್ ವರ್ಕ್ - ಹೀಗೆ ಇಡೀ ದಿನ ಓದಿನಿಂದ ನನ್ನ ತಲೆ ಕೆಟ್ಟುಹೋಗಿದೆ. ಆಡಲು ಸಮಯವೇ ಇಲ್ಲ. ಹೀಗಾಗಿ ಓದು ಭಾರವೆನಿಸಿದೆ, ಭಯ ಹುಟ್ಟಿಸಿದೆ. ಹೀಗಾಗಿ ಮೊನ್ನೆ ಬೆಳಗ್ಗೆ ಏಳು ಗಂಟೆಗೆ ಮನೆ ಬಿಟ್ಟು ಟ್ಯೂಷನ್ಗೆ ಹೋಗದೆ ಗಾರ್ಡನ್ಗೆ ಹೋದೆ. ಅಲ್ಲಿ ಆಡುತ್ತಿದ್ದ ಇತರ ಮಕ್ಕಳೊಡನೆ ಆಡಿದೆ. ವಿವಿಧ ಗಿಡ-ಹೂ-ಹಕ್ಕಿ ನೋಡಿ ನಲಿದೆ. ಹಸಿವಾದಾಗ ಊಟ ಮಾಡಿದೆ. ಮನೆಯ ನೆನಪಾಗಿ ಮಧ್ಯಾಹ್ನ ಮರಳಿದೆ. ಮನೆಯಲ್ಲಿ ಏನು ಹೇಳುವುದೆಂದು ತಲೆ ಕೆಡಿಸಿಕೊಂಡಾಗ - ನಿನ್ನೆ ಟೀವಿಯಲ್ಲಿ ಹುಡುಗನ ಅಪಹರಣದ ದೃಶ್ಯ ನೋಡಿದ್ದೆ, ಅದು ನೆನಪಾಗಿ ಅದನ್ನೇ ಕಥೆ ಕಟ್ಟಿ ಹೇಳಿದೆ. ಒಂದು ದಿನವಾದರೂ ಸಂತೋಷದಿಂದ ಕಾಲ ಕಳೆದೆ’ ಎಂದೆಲ್ಲ ಹೇಳಿದ.
ಸಮಸ್ಯೆಯ ಮೂಲ ತಿಳಿದಿತ್ತು. ತಂದೆ-ತಾಯಿಗೆ ವಿಷಯ ವಿವರಿಸಿ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟೆ. ಹಾಗೆಯೇ ಅಜಯನಿಗೂ ತಿಳಿಹೇಳಿ ಅಪಹರಣದ ಕೆಟ್ಟ ಪ್ರಸಂಗಗಳನ್ನು ಅನುಸರಿಸಬಾರದು, ಯೋಚಿಸಲೂಬಾರದು ಎಂದು ತಿಳಿಸಿ ಆಟದ ಜೊತೆಗೆ ಪಾಠದತ್ತ ಗಮನ ಕೊಡಲು ಹೇಳಿ ಕಳಿಸಿದೆ.
ಮಕ್ಕಳನ್ನು ದಿಢೀರೆಂದು ಡಾಕ್ಟರ್, ಇಂಜಿನಿಯರ್ ಮಾಡುವ ಮಹದಾಸೆ ಹೊತ್ತ ಇಂದಿನ ಪಾಲಕರಿಗೆ ‘ಅಜಯನ’ ಪ್ರಸಂಗ ಎಚ್ಚರಿಕೆಯ ಕರೆಘಂಟೆ. ನಮ್ಮ ಆಶೆಗಾಗಿ ಮಕ್ಕಳಿಗೆ ಒತ್ತಡ ಹಾಕಿ ಚಿಕ್ಕ ವಯಸ್ಸಿನಲ್ಲೇ ಅವರು ಮಾನಸಿಕ ಒತ್ತಡಗಳಿಗೆ ಒಳಗಾಗುವಂತೆ ಮಾಡುತ್ತಿದ್ದೇವೆ. ಹೀಗಾಗಿ ಮಕ್ಕಳು ಚೆನ್ನಾಗಿ ಕಲಿಯುವುದಿರಲಿ, ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುವ ದುರಂತಕ್ಕೆ ಕಾರಣರಾಗುತ್ತಿದ್ದೇವೆ. ಟಿವಿಯಂಥ ಪ್ರಬಲ ಮಾಧ್ಯಮಗಳು ಅಪಹರಣ, ಹಿಂಸೆ, ಕೊಲೆ, ದೊಂಬಿ ಇತ್ಯಾದಿ ವಿಷಯಗಳನ್ನೇ ಪರಿಣಾಮಕಾರಿಯಾಗಿ ತೋರಿಸುತ್ತಿವೆ. ಇದರಿಂದ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳನ್ನು ಯಾರೂ ಗಮನಿಸದಿರುವುದು ಶೋಚನೀಯ. ಆದರೆ ಅಜಯನ ಪ್ರಸಂಗದಲ್ಲಿ ಅವನ ಶಿಕ್ಷಕರು ಅತ್ಯಂತ ಜವಾಬ್ದಾರಿಯಿಂದ ಯೋಗ್ಯ ಮಾರ್ಗದರ್ಶನ ಮಾಡಿದ್ದು ಪ್ರಶಂಸನೀಯ. ಪ್ರತಿ ಪಾಲಕರೂ ಮಕ್ಕಳ ಮನಸ್ಸು ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು.
ಸಾಮಾಜಿಕ ಸಂದೇಶ: ಆಟ-ಊಟ-ಪಾಠ ಮಕ್ಕಳ ದಿನಚರಿ ಆಗಲಿ.