

ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಕಾಲ ಮತ್ತು ನಿಸರ್ಗದ ಕೈಯಲ್ಲಿದೆ. ಕಾಲವನ್ನು ದಾಟಿ ಸಾಧನೆ ಮಾಡಿದವರು ಯಾರೂ ಇಲ್ಲ. ಕಾಲಕ್ಕೆ ತಕ್ಕಂತೆ ಒಗ್ಗಿಕೊಂಡು ಹೋಗುವುದೇ ಜೀವನ. ಅದು ಬಿಟ್ಟು ಅದೇನಾಗುತ್ತೆ? ಎಂದು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಇಂದು ನಾವು ಎದುರಿಸುತ್ತಿರುವ ಕರೊನಾ ಬಿಕ್ಕಟ್ಟೇ ಉದಾಹರಣೆ.
ಹೌದು ‘ವಕ್ತ್’ ಎಂಬ ಹಿಂದಿ ಚಿತ್ರದಲ್ಲಿ ನಾಯಕ ಬಲರಾಜ ಸಹಾನಿ ಒಂದು ಮಾತು ಹೇಳುತ್ತಾರೆ: ‘ನನಗೆ ಹಣೆಬರಹದ ಮೇಲೆ ನಂಬಿಕೆಯಿಲ್ಲ. ತೋಳ್ಬಲದ ಮೇಲೆ ವಿಶ್ವಾಸವಿದೆ. ಪ್ರಯತ್ನ ಪಟ್ಟರೆ ಹಣೆಬರಹವನ್ನೂ ಬದಲಿಸಬಹುದು’. ಇದಕ್ಕೆ ಪ್ರತಿಯಾಗಿ ಎದುರಿದ್ದ ಹಿರಿಯ ಇವನ ಮಾತಿಗೆ ಧ್ವನಿಗೂಡಿಸುತ್ತಾನೆ. ‘ಎಲ್ಲವೂ ಮತ್ತು ಎಲ್ಲರೂ ಕಾಲಾತೀತ. ಭೌತಿಕ ಸಂಪತ್ತು, ಹಣ ಇದೆಲ್ಲ ಮಾಯೆ. ಹಣ ಬೇಡವೆಂತಲ್ಲ, ಬೇಕು. ಆದರೆ ಅದುವೇ ಎಲ್ಲವೂ ಅಲ್ಲ. ಇಂದಿಗೂ ಅದೆಷ್ಟೋ ಮಂದಿ ಹತ್ತಿರ ಸಾಕಷ್ಟು ಹಣವಿದೆ. ಆದರೆ ಅನುಭವಿಸಲು ಆಗುತ್ತಿಲ್ಲ. ಆರೋಗ್ಯವಿಲ್ಲ. ಮಾನಸಿಕ ನೆಮ್ಮದಿಯಿಲ್ಲ. ಹೀಗಿದ್ದಾಗ ಆ ಸಂಪತ್ತು ಯಾವ ಪುರುಷಾರ್ಥಕ್ಕೆ? ಕಪ್ನಲ್ಲಿನ ಚಹಾ ಎತ್ತಿ ತುಟಿವರೆಗೆ ಒಯ್ಯುವ ತನಕ ಕುಡಿಯಬಲ್ಲೆ ಎನ್ನುವ ವಿಶ್ವಾಸವಿಲ್ಲ. ಅಂತಹ ವಿಷಮ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ’ ಎಂದು ಹೇಳುತ್ತಾನೆ. ಆ ಸಂಭಾಷಣೆ ಇಂದು ಹೆಚ್ಚು ಪ್ರಸ್ತುತ.
ಮನುಷ್ಯ ಇಂದು ಬಲು ಮಹಾತ್ವಾಕಾಂಕ್ಷಿಯಾಗುತ್ತಿದ್ದಾನೆ. ಸ್ಪರ್ಧಾ ಜಗತ್ತಿನಲ್ಲಿ ಇದು ಅಗತ್ಯವೂ ಹೌದು. ಆದರೆ ಅದುವೇ ಎಲ್ಲವೂ ಅಲ್ಲ. ನಿಸರ್ಗಕ್ಕೆ ವಿರುದ್ಧವಾಗಿ ಸ್ವೇಚ್ಛಾಚಾರದ ಫಲಶ್ರುತಿ ಇಂದಿನ ಸ್ಥಿತಿ. ಎಲ್ಲವೂ ಬೇಕು, ಕೂಡಲೇ ಬೇಕು ಎಂದುಕೊಂಡು ಸಾಗುತ್ತಿರುವ ನಾಗಾಲೋಟದ ಪರಿ ಕಾರ್ಯಸಾಧುವಲ್ಲ ಎನ್ನುವುದನ್ನು ಕರೊನಾ ಸಂದಿಗ್ಧದ ಸ್ಥಿತಿ ಮನವರಿಕೆ ಮಾಡಿಕೊಟ್ಟಿದೆ. ಕೈತುಂಬಾ ಹಣವಿದ್ದರೂ ಆಸ್ಪತ್ರೆಯಲ್ಲಿ ಬೆಡ್ ಸಿಗದ ಸಂಕಷ್ಟದ ಸ್ಥಿತಿ. ಸಕಾಲಕ್ಕೆ ಸೂಕ್ತ್ತ ಚಿಕಿತ್ಸೆಗಾಗಿ ಪರದಾಟ. ದಿಢೀರ್ ಅಸ್ವಸ್ಥತೆ... ಹೀಗೆ ಒಂದೇ ಎರಡೇ? ನೂರೆಂಟು ಸಂಕಷ್ಟಗಳ ಸುಳಿಯಲ್ಲಿ ಸಿಕ್ಕವರ ಉದಾಹರಣೆಗಳು ನಮ್ಮೆದುರು ಇವೆ. ಹಾಗಂತ ಇಲ್ಲಿಗೆ ಜೀವನ ಮುಗಿಯಿತು ಎಂತಲ್ಲ. ಜೀವನೋತ್ಸಾಹದ ಚಿಲುಮೆ ಬತ್ತಬಾರದು. ಆತ್ಮವಿಶ್ವಾಸದ ವರತೆ ಬಾಡಬಾರದು.
ಇಂದಿಗೂ ನನಗೆ ದಿನಕ್ಕೆ ಕನಿಷ್ಠ ಏಳೆಂಟು ಕರೆಗಳು ಬರುತ್ತವೆ. ‘ಏನ್ ಮಾಡ್ಲಿ ಸಾರ್, ನಮ್ಮ ಮನೆಯಲ್ಲಿ ಅವರು ತೀರಿದ್ರು, ಇವರು ತೀರಿದ್ರು,,, ಜೀವನವೇ ಬೇಸರವಾಗಿದೆ. ಭವಿಷ್ಯದ ಚಿಂತೆಯಾಗಿದೆ. ಇಷ್ಟು ದಿನ ನನ್ನ ಜತೆಗಿದ್ದವರು ಇಂದು ದಿಢೀರ್ನೆ ನಮ್ಮನ್ನು ಅಗಲಿದ್ದಾರೆ. ದಾರಿ ತೋಚದಾಗಿದೆ’ ಎಂದು ಅಲವತ್ತುಕೊಳ್ಳುತ್ತಾರೆ. ಅವರಿಗೆಲ್ಲ ನಾ ಹೇಳುವುದು ಇಷ್ಟೇ: ಏನೇ ಬರಲಿ, ಧೈರ್ಯಗುಂದಬೇಡಿ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸುವ, ಸಹಿಸಿಕೊಳ್ಳುವ ಛಾತಿ ಇರಲಿ. ವಿಲ್ ಪವರ್ ಗಟ್ಟಿಯಾಗಿರಲಿ. ಸಾವು ನೋವು ಯಾರ ಕೈಯಲ್ಲೂ ಇಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಳ್ಳಬೇಡಿ. ಜೀವನೋತ್ಸಾಹದ ಜತೆ ಕಠಿಣ ಪರಿಶ್ರಮ ಹಾಗೂ ಬದ್ಧತೆ ಮುಖ್ಯ. ಇವು ಎಂತಹ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ ತುಂಬುತ್ತವೆ. ಈ ಶಕ್ತಿಯನ್ನು ಸಮಾಜಕ್ಕೆ ಬಳಸಿ. ಅಶಕ್ತರ, ಅಸಹಾಯಕರ ನೆರವಿಗೆ ಮುಂದಾಗಿ. ಆಗ ಸಿಗುವ ಆತ್ಮತೃಪ್ತಿ ವರ್ಣನಾತೀತ. ಸಮಾಜಕ್ಕೋಸ್ಕರ ಬದುಕಿ. ಹಣ ಕೊಡಲಾಗದಿದ್ದರೂ ಸಮಯ ಮೀಸಲಿಡಿ. ಹೃದಯ ವೈಶಾಲ್ಯ ಅಳವಡಿಸಿಕೊಳ್ಳಿ. ಕಾಲನ ಕರೆ ಯಾವಾಗ ಯಾವ ರೂಪದಲ್ಲಿ ಬರುವುದೋ ಯಾರೂ ಕಂಡಿಲ್ಲ. ಇದ್ದಾಗ ಜ್ಞಾನ, ಪ್ರೀತಿ ಮತ್ತು ವಿಶ್ವಾಸ ಹಂಚಿ. ಮಾನಸಿಕ ಸದೃಢತೆ ತಂದುಕೊಳ್ಳಿ. ಒಳ್ಳೆಯ ವಿಚಾರ, ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ. ಕಾಲ ನಮ್ಮನ್ನು ಕಟ್ಟಿ ಹಾಕುತ್ತದೆ. ಎಲ್ಲವೂ ಇದ್ದರೂ ಏನೋ ಕಳೆದುಕೊಂಡ ಭಾವ. ಇಷ್ಟೆಲ್ಲಾ ಆಧುನಿಕ ವ್ಯವಸ್ಥೆಗಳ ಮಧ್ಯೆಯೂ ನಾವು ನಾವಾಗಿ ಉಳಿದಿಲ್ಲ. ಇದರ ಮಧ್ಯೆಯೂ ಬದುಕಿನ ಬಂಡಿ ಸಾಗಿಸಬೇಕಿದೆ. ಛಲವಿರಲಿ. ಎಲ್ಲರನ್ನು ಕಳೆದುಕೊಂಡೆ ಎನ್ನುವ ಹತಾಶೆ ಕಾಡದಿರಲಿ. ದು:ಖ ಬೇರೆ. ಹತಾಶೆ ಬೇರೆ. ದು:ಖ ಪಟ್ಟಾದ ಮೇಲೆ ಫಿನಿಕ್ಸ್ ನಂತೆ ಮೇಲೆದ್ದು ಬನ್ನಿ. ಉತ್ಸಾಹದ ಚಿಲಮೆಯಂತೆ ಪ್ರಜ್ವಲಿಸಿ. ಮನಸ್ಸೊಂದಿದ್ದರೆ ಏನಾದರೂ ಸಾಧಿಸಬಹುದು. ಆ ಮನಸ್ಸು ನಿಮ್ಮದೇ ಮತ್ತು ನಿಮ್ಮ ನಿಯಂತ್ರಣದಲ್ಲಿರಲಿ.