

ಅವಳಿಗೆ 32 ವರ್ಷ. ಇಬ್ಬರು ಮುದ್ದಾದ ಮಕ್ಕಳಿರುವ ಗೃಹಿಣಿ. ನಾಲ್ಕು ವರ್ಷಗಳಿಂದ ವಿಪರೀತ ಮುಖದ ಬೇನೆಯಿಂದ ಬಳಲುತ್ತಿದ್ದಾಳೆ. ಒಮ್ಮೆ ಕಾಣಿಸಿಕೊಂಡರೆ 5-10 ನಿಮಿಷದವರೆಗೆ ಸತತ ಬೇನೆ. ಮಾತನಾಡಲೂ ಆಗದು. ತಿನ್ನುವಾಗ, ಅಗಿಯುವಾಗ ತಂಪು ಗಾಳಿ ಬೀಸಿದರೆ ನೋವು ವಿಪರೀತವಾಗುತ್ತದೆ. ‘ಡಾಕ್ಟರ್, ಇದಕ್ಕೆ ಸರಿಯಾದ ಚಿಕಿತ್ಸೆ ಕೊಡಿ, ಇಲ್ಲವೇ ಸ್ವಲ್ಪ ವಿಷ ಕೊಟ್ಟುಬಿಡಿ’ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವ ರೋಗಿ!
ರೋಗಿಗೆ ಎಂಆರ್ಐ ಸ್ಕ್ಯಾನ್ ಮಾಡಿದಾಗ ಮಿದುಳುಬಳ್ಳಿಯ ಹತ್ತಿರ ಗಡ್ಡೆ ಇದ್ದು ಐದನೆಯ ಕಪೋಲನರದ ಮೇಲೆ ತೀವ್ರತರವಾದ ಒತ್ತಡ ಉಂಟುಮಾಡುತ್ತಿದ್ದುದು ಕಂಡುಬಂತು. ನಾಲ್ಕು ಗಂಟೆಗಳ ಕಾಲ ಸತತವಾಗಿ ಸೂಕ್ಷ್ಮ ನರಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಿದುಳುಬಳ್ಳಿಯ ಹತ್ತಿರ ಹಬ್ಬಿಕೊಂಡಿದ್ದ ಎಪಿಡರ್ಮಾಯ್ಡ್ ಗಡ್ಡೆ ಐದನೆಯ ನರದ ಜೊತೆಗೆ, ಆರನೆಯ ನರದಿಂದ ಹನ್ನೊಂದನೆಯ ಕಪೋಲನರದ ಮೇಲೆ ಒತ್ತಡ ಉಂಟುಮಾಡುತ್ತಿತ್ತು. ಅತೀವ ಸೂಕ್ಷ್ಮವಾದ ಈ ಗಡ್ಡೆಯನ್ನು ತೆಗೆಯುವುದು ಕ್ಲಿಷ್ಟಕರ. ಆಧುನಿಕ ಅರವಳಿಕಾಶಾಸ್ತ್ರದ ವಿಧಾನಗಳು, ಸೂಕ್ಷ್ಮದರ್ಶಕ ಶಸ್ತ್ರಚಿಕಿತ್ಸಾ ವಿಧಾನಗಳಿಂದ ಇಂತಹ ಗಡ್ಡೆಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯ. ಈಗ ರೋಗಿ ಸಂಪೂರ್ಣವಾಗಿ ಗುಣಮುಖಳಾಗಿ ನೆಮ್ಮದಿಯಿಂದ ಇದ್ದಾಳೆ.
ಟ್ರಿಜೆಮಿನಲ್ ನ್ಯೂರಾಲ್ಜಿಯ ಎನ್ನುವುದು ಅತೀವ ನೋವಿನ, ಆಗಿಂದಾಗ್ಗೆ ಕಾಡುವ ನರಬೇನೆ. ನರ ಅಥವಾ ಐದನೆಯ ಕಪೋಲ ನರದ ಊತದಿಂದ ಈ ನರಬೇನೆ ಬರುತ್ತದೆ. ಇದು ಒಂದು ಬಗೆಯ ಮಿಶ್ರ ನರವಾಗಿದೆ. ಸಂವೇದನೆ ಹಾಗೂ ಚಲನೆ ಈ ಎರಡೂ ಕೆಲಸಗಳನ್ನು ಮಾಡುತ್ತದೆ. ಮಿದುಳಿನ ಬಳ್ಳಿಯಿಂದ ಉಗಮವಾಗಿ ಮುಖದ ಮೇಲ್ಮೈಯಿಂದ ಹೋಗುತ್ತದೆ. ಈ ನರಕ್ಕೆ ಮೂರು ಉಪಶಾಖೆಗಳಿವೆ. ಒಂದು ಉಪಶಾಖೆ ಕಣ್ಣಿನ ಕೆಳಭಾಗದಿಂದ ಹಣೆಯ ಮೇಲಿನವರೆಗೆ, ಎರಡನೆಯದು ಕೆನ್ನೆಯ ಭಾಗದ ಸಂವೇದನೆಯನ್ನು ಗ್ರಹಿಸಿದರೆ, ಮೂರನೆಯದು ದವಡೆಯ ಭಾಗದಿಂದ ಸಂವೇದನೆಯನ್ನು ಸಾಗಿಸುತ್ತದೆ. ಐದನೆಯ ನರದ ಒಂದು ಭಾಗ ದವಡೆಯ ಸ್ನಾಯುಗಳ ಚಲನೆಯನ್ನು ನಿರ್ದೇಶಿಸುತ್ತದೆ. ಈ ಮೂರು ಉಪಶಾಖೆಗಳನ್ನು ಸೇರಿ ಟ್ರಿಜೆಮಿನಲ್ ನರ ಎಂದು ಕರೆಯುತ್ತಾರೆ.
ಈ ನರದ ಉಪಶಾಖೆಗಳಿಂದ ಸಂವೇದನೆ ಪಡೆಯುವ ಮುಖಭಾಗದಲ್ಲಿ ಆಗಾಗ ಬರುವ ತೀವ್ರತರವಾದ ನೋವು ಒಮ್ಮೆ ಬೆಂಕಿಯಿಟ್ಟಂತೆ, ಇನ್ನೊಮ್ಮೆ ಹರಿತ ಚಾಕುವಿನಿಂದ ತಿವಿದಂತೆ ಭಾಸವಾಗುತ್ತದೆ. ಮುಖದಲ್ಲಿ ಮಿಂಚಿನಂತೆ ನೋವು ಕಂಡುಬಂದು, ಕಣ್ಣಲ್ಲಿ ನೀರು ಸುರಿಯುವುದು, ಮುಖ ಕೆಂಪಾಗುವುದು, ಜೊಲ್ಲು ಸುರಿಯುವುದು ಇವೆಲ್ಲ ಪರಿಣಾಮಗಳು ಉಂಟಾಗಬಹುದು.
ಸಾಮಾನ್ಯವಾಗಿ 50ರಿಂದ 70 ವರ್ಷ ವಯಸ್ಸಿನವರಲ್ಲಿ ರೋಗ ಕಂಡುಬರಬಹುದು. ಸತತವಾಗಿ ರಕ್ತನಾಳ ತನ್ನ ಆಕುಂಚನ ಪ್ರಸರಣದಿಂದ ಐದನೆಯ ನರದ ಮೇಲೆ ಒತ್ತಡ ಉಂಟುಮಾಡಿದಲ್ಲಿ ನರಶಸ್ತ್ರಚಿಕಿತ್ಸೆಯಿಂದ ಇದನ್ನು ಸರಿಪಡಿಸಬಹುದು. ರೋಗಿ ಶಸ್ತ್ರಚಿಕಿತ್ಸೆಗೆ ಸಶಕ್ತನಾಗಿಲ್ಲದ್ದಿದ್ದರೆ ಐದನೆಯ ನರಕ್ಕೆ ಮದ್ಯಸಾರವನ್ನು ಅಥವಾ ಸೂಕ್ಷ್ಮ ವಿದ್ಯುತ್ ತರಂಗಗಳನ್ನು ಕೊಟ್ಟು, ನೋವಿನ ಸಂವೇದನೆ ಸಾಗಿಸದಂತೆ ಬ್ಲಾಕ್ ಮಾಡುವ ಸಣ್ಣ ಚಿಕಿತ್ಸೆಯೂ ಉಂಟು. ನೋವು ಮಂದವಾಗಿದ್ದರೆ ಔಷಧಗಳಿಂದ ಹತೋಟಿಯಲ್ಲಿಡಬಹುದು. ಸೂಕ್ಷ್ಮ ನರಶಸ್ತ್ರಚಿಕಿತ್ಸೆಯು ಉತ್ತಮ ಹಾಗೂ ಶಾಶ್ವತ ಪರಿಹಾರವನ್ನು ಒದಗಿಸುತ್ತದೆ.