

ಬಿಪಿ ಎಂದೇ ಪ್ರಸಿದ್ಧಿ ಪಡೆದ ಅಧಿಕ ರಕ್ತದ ಒತ್ತಡ 3 ಅಸಾಂಕ್ರಾಮಿಕ ಬೇನೆಗಳಲ್ಲಿ ಒಂದು. ಇನ್ನುಳಿದೆರಡು ಮಧುಮೇಹ ಹಾಗೂ ಹೃದಯಾಘಾತ. ಈ ಮೂರೂ ಹತ್ತಿರದ ಸಂಬಂಧಿಗಳು. ಬಿಪಿ ವಯಸ್ಸಾದಂತೆ ಹೆಚ್ಚುತ್ತ್ತೆ. ಶೇ. 15 ರಷ್ಟು ಜನರಿಗೆ ಬಿಪಿ ಇದ್ದು, ಪರೀಕ್ಷಿಸಿದಾಗ ಮಾತ್ರ ಪತ್ತೆಯಾಗುತ್ತದೆ! ಒಮ್ಮೆ ಬಿಪಿ ಪ್ರಾರಂಭವಾದರೆ ನೂರಕ್ಕೆ 98 ಜನರಲ್ಲಿ ಜೀವನ ಪರ್ಯಂತ ಉಳಿಯುತ್ತದೆ. ಇದು ನಿಯಂತ್ರಿಸಬಲ್ಲ ಬೇನೆಯೇ ಹೊರತು ಗುಣಪಡಿಸುವ ಬೇನೆಯಲ್ಲ.
ಬಿಪಿ ಪತ್ತೆಗೆ ಅಂಕಿ-ಸಂಖ್ಯೆಗಳನ್ನು ಉಪಯೋಗಿಸಲಾಗುತ್ತದೆ. ಸಿಸ್ಟೋಲಿಕ್ ಮತ್ತು ಡಾಯಸ್ಟೋಲಿಕ್ ಎಂಬ ಎರಡು ಪ್ರಕಾರಗಳು. ಬಿಪಿ ಚೆಕ್ ಮಾಡಿದಾಗ ಮೊದಲನೇ ನಂಬರ್ ಅನ್ನು ‘ಸಿಸ್ಟೋಲಿಕ್’ಎನ್ನುತ್ತಾರೆ. ಇದು ರಕ್ತವು ರಕ್ತನಾಳಗಳ ಮೇಲೆ ಎಷ್ಟು ಒತ್ತಡ ಹೇರುತ್ತಿದೆ ಎಂದು ತಿಳಿಸುತ್ತದೆ. ಎರಡನೆಯದು ‘ಡಾಯಸ್ಟೋಲಿಕ್’. ಇದು ಹೃದಯದ ಎರಡು ಬಡಿತದ ನಡುವೆ ರಕ್ತವು ರಕ್ತನಾಳಗಳ ಮೇಲೆ ಹೇರುವ ಒತ್ತಡವನ್ನು ತಿಳಿಸುತ್ತದೆ.
ಉದಾಹರಣೆ: ಶಂಕರನ ಬಿಪಿಯನ್ನು ವೈದ್ಯರು 150/100 ಎಂದು ಬರೆಯುತ್ತಾರೆ. ಅಂದರೆ 150 ಸಿಸ್ಟೊಲಿಕ್ ಹಾಗೂ 100 ಡಾಯಸ್ಟೋಲಿಕ್ ಒತ್ತಡ. ಇದನ್ನು ಮಿಲಿ ಮೀಟರ್ ಎಚ್.ಜಿ. ಎಂದು ಬರೆಯುತ್ತಾರೆ. ಮೇಲಿನ ಅಂಕಿಯು ಸಿಸ್ಟೋಲಿಕ್. ಕೆಳಗಿನ ಅಂಕಿಯು ಡಾಯಸ್ಟೋಲಿಕ್.
5 ನಮೂನೆಯ ಬಿಪಿಯ ಶ್ರೇಣಿ (ಹಂತ)ಗಳನ್ನು ನಮೂದಿಸಲಾಗಿದೆ.
1. ಸಾಮಾನ್ಯ ಬಿಪಿ: 120/100 ಕ್ಕಿಂತ ಕಡಿಮೆ ಇದ್ದಲ್ಲಿ ಅದು ಸಾಮಾನ್ಯ ಬಿಪಿ. ಇದನ್ನು ಬಹುಕಾಲದವರೆಗೆ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ, ತೂಕದ ಸಮತೋಲನ, ಜೀವನ ಶೈಲಿಯ ಮಾರ್ಪಾಡು ಅವಶ್ಯ. 2. ಸ್ವಲ್ಪ ಏರಿದ ಬಿಪಿ: ಸಿಸ್ಟೋಲಿಕ್ ಬಿಪಿಯು 120-129, ಡಾಯಸ್ಟೋಲಿಕ್ 80ರ ಕೆಳಗೆ ಇರುವುದು. ಜೀವನ ಶೈಲಿಯನ್ನು ಅಲಕ್ಷಿಸಿದಲ್ಲಿ ಇವರಿಗೆ ಬಿಪಿ ಬರುವುದು ಖಚಿತ. 130/80 ಕ್ಕಿಂತ ಹೆಚ್ಚಿದ್ದಲ್ಲಿ ಬಿಪಿ ಇದೆ ಎಂದರ್ಥ.
3. ಹೆಚ್ಚಿದ ಬಿಪಿ- ಹಂತ 1: ಸಿಸ್ಟೋಲಿಕ್ 130-139 ಅಥವಾ ಡಯಸ್ಟೋಲಿಕ್ 80-89 ಇರುವುದು.
4. ಹೆಚ್ಚಿದ ಬಿಪಿ ಹಂತ 2: ಸಿಸ್ಟೋಲಿಕ್ ಬಿಪಿಯು 140 ಅಥವಾ ಹೆಚ್ಚು ಅಥವಾ ಡಯಸ್ಟೋಲಿಕ್ 90 ಅಥವಾ ಹೆಚ್ಚು.
5. ಅತೀ ಹೆಚ್ಚಿದ ಗಂಡಾಂತರ ಬಿಪಿ: 180ಕ್ಕಿಂತ ಹೆಚ್ಚು ಮತ್ತು/ ಡಾಯಸ್ಟೋಲಿಕ್ 120ಕ್ಕಿಂತ ಹೆಚ್ಚು.
ಹಲವರಿಗೆ ವೈದ್ಯರು ‘ಲೋ ಬಿಪಿ’ ಇದೆ ಎಂದು ಹೇಳುತ್ತಾರೆ. ಆದರೆ ಎಷ್ಟೋ ಜನರಲ್ಲಿ 100/60 ಸಾಮಾನ್ಯ ಬಿಪಿಯಾಗಿರುತ್ತದೆ. ‘ಲೋ ಬಿಪಿ’ ತೀರ ವಿರಳವಾದ ಬೇನೆ. ನುರಿತ ವೈದ್ಯರಿಂದ ಮಾತ್ರ ಅದರ ಕಾರಣವನ್ನು ಪತ್ತೆ ಹಚ್ಚಲು ಸಾಧ್ಯ. ಡಾಕ್ಟರ್ರನ್ನು, ಅದರಲ್ಲೂ ಹೆಚ್ಚು ಪ್ರಸಿದ್ಧವಿದ್ದ ವೈದ್ಯರನ್ನು ಕಾಣುವಾಗ ಬಿಪಿಯು ಹೆಚ್ಚುವುದು ಸಾಮಾನ್ಯ! ಅದಕ್ಕೆಂದೇ, ಬಿಪಿಯ ಮಾತ್ರೆಗಳನ್ನು ಪ್ರಾರಂಭಿಸುವ ಮುನ್ನ 3 ಬಾರಿ 5 ರಿಂದ 10 ನಿಮಿಷಗಳ ಅಂತರದಲ್ಲಿ ವಿಶ್ರಾಂತಿಯ ನಂತರ ಪರೀಕ್ಷಿಸಿ ಹೆಚ್ಚಿದ್ದಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುವುದು.
ಈ ನಿಯಮಕ್ಕೆ ಅಪವಾದವೆಂದರೆ ತೀವ್ರ ಹೆಚ್ಚಿದ ಬಿಪಿ. ಉದಾಹರಣೆಗೆ 180/140ಎಂಎಂ ಎಚ್ಜಿ. ಈ ರೀತಿ ಹೆಚ್ಚಿದಾಗ ಇದು ‘ಮೆಡಿಕಲ್ ಎಮರ್ಜೆನ್ಸಿ’. ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗುವುದು. ಎದೆ ನೋವು, ತೀವ್ರ ತಲೆ ತಿರುಗುವುದು, ಏದುಸಿರು, ಬೆನ್ನು ನೋವು, ತೀವ್ರ ಅಶಕ್ತತೆ, ತಲೆ ನೋವು, ದೃಷ್ಟಿಯ ಮಾಂದ್ಯತೆ ಕಂಡು ಬರುವವು. ಅನಿಯಂತ್ರಿತ ಬಿಪಿಯಿಂದ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವಿಫಲತೆ, ಮಿದುಳಿನಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವ ಇತ್ಯಾದಿ ಉಂಟಾಗಬಹುದು. ಬಿಪಿಯನ್ನು ಇಲೆಕ್ಟ್ರಾನಿಕ್ ಉಪಕರಣಗಳಿಂದ ತಪಾಸಿಸುವುದು ಉತ್ತಮ. ಬಿಪಿ ಚಿಕಿತ್ಸೆಗೆ ನಾನಾ ನಮೂನೆಯ ಔಷಧಿಗಳು ಲಭ್ಯವಿದ್ದು, ನೂರಕ್ಕೆ 70 ಬಿಪಿ ಇದ್ದವರಲ್ಲಿ 2 ಕ್ಕಿಂತ ಹೆಚ್ಚು ಔಷಧಿಗಳು ಅವಶ್ಯವಾಗುತ್ತವೆ. ಈ ಔಷಧಿಗಳಿಂದ ಅಡ್ಡ ಪರಿಣಾಮವಾದರೆ ಔಷಧಿಯನ್ನು ಬದಲಾಯಿಸಲಾಗುವುದು.
ಬಿಪಿಯ ಲಕ್ಷಣಗಳಾದ ತಲೆ ತಿರುಗುವುದು, ತಲೆ ನೋವು ಸಾಮಾನ್ಯವಾಗಿದ್ದರಿಂದ ಇದಕ್ಕೆ ‘ಮೌನ ಹಂತಕ’ ಎಂದು ಹೆಸರು. ಉಪು್ಪಯುಕ್ತ ಪದಾರ್ಥಗಳು, ಕ್ಯಾನ್ನಲ್ಲಿ ಇರುವ ತಿಂಡಿಗಳು, ಚಿಪ್ಸ್ ಮುಂತಾದವುಗಳ ಹೆಚ್ಚು ಸೇವನೆ ಬಿಪಿಯನ್ನು ಹೆಚ್ಚಿಸುತ್ತವೆ. ಬಿಪಿ ಇದ್ದವರು ಮದ್ಯ ಸೇವನೆ ನಿಲ್ಲಿಸುವುದು ಉತ್ತಮ. ಕಿತ್ತಳೆ ಹಣ್ಣು, ಮೋಸಂಬಿ, ಲಿಂಬೆ ಉತ್ತಮ ಹಣ್ಣುಗಳು. ದಿನಕ್ಕೆ 2 ಬಾಳೆ ಹಣ್ಣು ಸೇವನೆಯು ಬಿಪಿಯನ್ನು ಕಡಿಮೆ ಮಾಡುತ್ತದೆ. ಒಮ್ಮೆ ಪ್ರಾರಂಭಿಸಿದ ಬಿಪಿಯ ಚಿಕಿತ್ಸೆಯನ್ನು ಸಾಮಾನ್ಯವಾಗಿ ಜೀವನ ಪರ್ಯಂತ ತೆಗೆದುಕೊಳ್ಳಬೇಕಾಗುತ್ತದೆ.