

ಇದಕ್ಕೆ ಪೂರಕವೆಂಬಂತೆ ಮೊನ್ನೆ ಬೆಳಗಾವಿ ಜಿಲ್ಲೆಯಿಂದ ಪಾಲಕರು ತಮ್ಮ ಮಗನೊಂದಿಗೆ ಬಂದಿದ್ದರು. ಅವರ ಮಗನಿಗೆ 6 ವರ್ಷ. ಬಲು ತುಂಟ, ಅಷ್ಟೇ ಕ್ರಿಯಾಶೀಲ. ಈತನ ಈ ಪಾದರಸದ ವ್ಯಕ್ತಿತ್ವ ಅಥವಾ ಕ್ರಿಯಾಶೀಲತೆಯಿಂದ ಈತನ ಪಾಲಕರೂ ಸಂತಸಗೊಂಡಿದ್ದರು. ಆದರೆ ಕೆಲ ದಿನಗಳಿಂದ ಈತನಲ್ಲಿ ಒಂದು ನ್ಯೂನತೆ ಕಂಡು ಬಂದಿತು. ಇದನ್ನು ಮಗುವಿನ ತಾಯಿ ಬಲು ಸೂಕ್ಷ್ಮವಾಗಿ ಗಮನಿಸಿದಳು. ಆಕೆಯೂ ಉನ್ನತ ಶಿಕ್ಷಣ ಪಡೆದವಳು. ಮೇಲಾಗಿ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಖಾಸಗಿ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ. ಈಕೆಗೆ ಮಗ ಒಂದು ಕ್ಷಣ ಅಬ್ಬಬ್ಬಾ ಎಂದರೆ ಒಂದು ಸೆಕೆಂಡ್ ಸಂಪೂರ್ಣ ಸ್ತಬ್ಧನಾಗಿ ಬಿಡುತ್ತಾನೆ ಎಂಬುದು ಗಮನಕ್ಕೆ ಬಂದಿದೆ. ಈ ವೇಳೆ ಆತನನ್ನು ನೀವು ಏನೇ ಕೇಳಿದರೂ ನಿರುತ್ತರ. ಅದಾದ ಕೂಡಲೇ ಮತ್ತೆ ಎಂದಿನಂತೆ ಕ್ರಿಯಾಶೀಲನಾಗುತ್ತಾನೆ. ತಾಯಿ ಹೇಳುವಂತೆ ಮನೆಗೆ ಬಂದ ಅತಿಥಿಗಳು ಆತನನ್ನು ನೀನು ಯಾವ ತರಗತಿಯಲ್ಲಿ ಓದುತ್ತೀಯಾ? ನಿನ್ನ ಹೆಸರೇನು? ನಿಮ್ಮ ಊರು ಯಾವುದು? ಎಂದೆಲ್ಲಾ ಕೇಳಿದಾಗ ಸರಿಯಾಗಿ ಉತ್ತರಿಸಿದ್ದಾನೆ. ಆದರೆ ಒಂದು ಕ್ಷಣ ಆತನ ಮಿದುಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಅವರು ಕೇಳಿದ ನಿನ್ನ ಸ್ಕೂಲ್ ಹೆಸರೇನು? ಎನ್ನುವ ಪ್ರಶ್ನೆಗೆ ಉತ್ತರಿಸಲು ಆಗಲಿಲ್ಲ. ಇದನ್ನು ಗಮನಿಸಿದ ತಾಯಿಗೆ ಏನೋ ಸಮಸ್ಯೆ ಇದೆ ಎಂದು ಗೊತ್ತಾಗಿ ಕೂಡಲೇ ಚಿಕಿತ್ಸೆಗೆಂದು ಬಂದಿದ್ದಾಳೆ. ಆದರೆ ಅಷ್ಟರಲ್ಲಿ ಆಕೆಯ ಅತ್ತೆ, ಪತಿ ‘ಏ ಅವನಿಗೆ ಏನೂ ಆಗಿಲ್ಲ. ನಿನಗೆ ಭ್ರಮೆ’ ಎಂದು ಹೇಳಿದ್ದಾರೆ. ಇದು ಮಗುವಿನ ತಾಯಿ ಮತ್ತು ಉಳಿದವರು ಗಮನಿಸಿದ ವೈಖರಿಯಲ್ಲಿನ ವ್ಯತ್ಯಾಸ. ನೀವು ನಿರಂತರ ಆತನನ್ನೇ ನೋಡ್ತಾ ಇದ್ದರೆ ಈ ವ್ಯತ್ಯಾಸ ಗಮನಿಸಬಹುದು. ಪ್ರತಿ 10ರಿಂದ 15 ನಿಮಿಷಕ್ಕೊಮ್ಮೆ ಈ ತರಹ ಅವನಿಗೆ ಆಗುತ್ತದೆ ಎಂದು ತಾಯಿ ವಿವರಿಸಿದಳು. ಎಷ್ಟು ದಿನಗಳಿಂದ ಈ ತರಹ ಆಗುತ್ತಿದೆ? ಹಿಂದೆ ಈತ ಚಿಕ್ಕವನಿದ್ದಾಗ ಏನಾದರೂ ಅಸ್ವಸ್ಥನಾಗಿದ್ದನೇ? ಎಂದು ಕೇಳಿದೆ. ‘ಹೌದು ಸರ್. ಆತ ಎರಡು ವರ್ಷದವನಿದ್ದಾಗ ಜ್ವರ ಬಂದು ಕಣ್ಣು ಬೆಳ್ಳಗೆ ಮಾಡಿದ್ದ. ಜ್ವರ ನೆತ್ತಿಗೇರಿತ್ತು. ನಂತರ ಹುಷಾರಾದ’ ಎಂದು ತಿಳಿಸಿದರು. ಅಂದಿನ ಆ ಜ್ವರದ ಪರಿಣಾಮ ಮಿದುಳಿನ ಮೇಲಾಗಿರುತ್ತದೆ. ಅದರ ಪ್ರಭಾವದಿಂದಾಗಿ ಈ ಅರೆಪ್ರಜ್ಞಾವಸ್ಥೆ ಸಮಸ್ಯೆ ಈತನಲ್ಲಿ ಕಾಣಿಸಿಕೊಂಡಿದೆ. ಭಯ ಬೇಕಿಲ್ಲ. ಹುಷಾರಾಗ್ತಾನೆ ಎಂದು ಹೇಳಿದೆ. ಆಗ ಆ ತಾಯಿಗೆ ನಿರುಮ್ಮಳ ಭಾವ.
ಯಾವುದೇ ಒಬ್ಬ ಮಗು ಚಿತ್ತ ಚಂಚಲತೆ, ನಡವಳಿಕೆ ಸಮಸ್ಯೆ ಹಾಗೂ ಸಹಜ ಕಲಿಕಾ ಸಮಸ್ಯೆ ಇದ್ದಾಗ ವೈದ್ಯರ ಬಳಿ ಕರೆತಂದಾಗ ಕೇಳುವ ಪ್ರಶ್ನೆ ಅಂದರೆ ಹೆರಿಗೆ ಸಹಜವಾಗಿದೆಯಾ?, ಪೂರ್ಣ ಅವಧಿಯ ಸಹಜ ಹೆರಿಗೆಯಾ? ಅಥವಾ ಸಿಜೆರಿನ್ ಆಗಿದೆಯಾ? ಮಗು ಹುಟ್ಟಿದ ತಕ್ಞಣ ಅತ್ತಿದೆಯಾ?... ಹೀಗೆ. ಅನೇಕ ಬಾರಿ ಹುಟ್ಟಿದ ತಕ್ಷಣ ಮಗು ಅಳದಿದ್ದಾಗ ಮಿದುಳಿಗೆ ಅಲ್ಪ ಸ್ವಲ್ಪ ಪ್ರಮಾಣದ ಆಮ್ಲಜನಕದ ಕೊರತೆಯಿಂದಾಗಿ ನರಕೋಶಗಳ ಸಮಸ್ಯೆಗಳಿಂದಾಗಿ ಈ ತರಹದ ಸಮಸ್ಯೆಯನ್ನು ನೋಡಬಹುದು. ಹೀಗಿದ್ದಾಗ ಅನೇಕ ಬಾರಿ ಚಿತ್ತ ಚಂಚಲತೆ, ಅಧ್ಯಯನದ ಸಮಸ್ಯೆ ಹಾಗೂ ಮೂರ್ಛೆ ರೋಗದ ಅಲ್ಪ-ಸ್ವಲ್ಪ ಸಮಸ್ಯೆಯನ್ನು ಕಾಣಬಹುದು. ಹೀಗಾಗಿ ಈ ವಿಷಯದಲ್ಲಿ ಮನಃಶಾಸ್ತ್ರಜ್ಞರು, ಆಪ್ತಸಲಹೆಗಾರರು, ನರರೋಗ ತಜ್ಞರು, ಫಿಜಿಯೋಥೆರಪಿಸ್ಟ್ ಎಲ್ಲರ ಸಹಕಾರ ಅವಶ್ಯವಾಗಬಹುದು.
ಇದೆಲ್ಲದರ ತಾತ್ಪರ್ಯವಿಷ್ಟೇ. ಪಾಲಕರಾದವರು ಮಕ್ಕಳ ಚಲನವಲನ ಮೇಲೆ ತೀವ್ರ ನಿಗಾ ಇಡಬೇಕು. ಅವರ ನಡವಳಿಕೆಯಲ್ಲಿ ಕೊಂಚ ಬದಲಾವಣೆ ಕಂಡು ಬಂದರೂ ಕೂಡಲೇ ವೈದ್ಯರನ್ನು ಸಂರ್ಪಸಬೇಕು. ಮೌಢ್ಯಗಳಿಗೆ ಮೊರೆ ಹೋಗಬಾರದು. ಯಾರೋ ನಮ್ಮ ಮಗನಿಗೆ ಏನೋ ಮಾಡಿಸಿದ್ದಾರೆ ಎನ್ನುವ ತೀರ್ವನಕ್ಕೆ ಬರಬಾರದು ಅಷ್ಟೇ.