

ಅದು ಒಂದು ಮಧ್ಯಮ ವರ್ಗದ ಕುಟುಂಬ. ತಂದೆ ಖಾಸಗಿ ಉದ್ಯೋಗಿ, ತಾಯಿ ಗೃಹಿಣಿ. ಇಬ್ಬರು ಮಕ್ಕಳು. ಹಿರಿಯ ಮಗ ಪಿಯುಸಿ ಸೈನ್ಸ್ ಓದುತ್ತಿದ್ದಾನೆ. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ. ಪಾಲಕರಿಗೆ ಮಗನನ್ನು ಡಾಕ್ಟರ್ ಓದಿಸಬೇಕೆನ್ನುವ ಇಚ್ಛೆ. ಮಗನಿಗೂ ಆಸೆ. ಆ ನಿಟ್ಟಿನಲ್ಲಿ ಪಿಯುಸಿ ಮೊದಲ ವರ್ಷದಿಂದಲೇ ಅಭ್ಯಾಸ ಮಾಡುತ್ತ ಬಂದಿದ್ದಾನೆ. ಸಮಾಜದಲ್ಲಿ ಪರಿಚಯದವರು ಅಥವಾ ಇನ್ನಾ್ಯರೋ ಉನ್ನತ ಸಾಧನೆ ಮಾಡಿದ ವಿಷಯ ಅವನ ಗಮನಕ್ಕೆ ಬರುತ್ತದೆ. ಪಾಲಕರು ಇವನೆದುರು ನೋಡು ಆತನ ಸಾಧನೆ, ಅಲ್ಲಿ ಸೀಟ್ ಸಿಕ್ತಂತೆ. ದೊಡ್ಡ ಕಾಲೇಜಿಗೆ ಹೊರಟನಂತೆ. ನೀನು ಹಾಗಾಗಬೇಕು ಎನ್ನುತ್ತಾರೆ. ಆಗ ಈ ವಿದ್ಯಾರ್ಥಿಗೆ ಎಲ್ಲೋ ಒಂದೆಡೆ ಒತ್ತಡ ಶುರುವಾಗಿದೆ. ಅದನ್ನು ಸಾಕಾರಗೊಳಿಸುವಲ್ಲಿ ಎಡವಿದರೆ ಎಲ್ಲಿ ಸಮಾಜ ಮತ್ತು ಮನೆ ಜನ ನನ್ನನ್ನು ತಿರಸ್ಕರಿಸುತ್ತಾರೋ? ಎಂಬ ಅಳಕು ಆತನಲ್ಲಿ ಮನೆ ಮಾಡಿತು. ಪರಿಣಾಮ ಖಿನ್ನತೆಗೆ ಒಳಗಾದ. ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಿತು. ಮನೆ ಮಂದಿ ಜತೆ ಮಾತೂ ಕಡಿಮೆಯಾಗಿತ್ತು.ಈ ವಿಷಯ ಪಾಲಕರ ಗಮನಕ್ಕೆ ಸ್ವಲ್ಪ ತಡವಾಗಿ ಬಂದಿತು. ಅವರು ಕೂಡಲೇ ನನ್ನ ಬಳಿ ಕರೆದುಕೊಂಡು ಬಂದರು. ನಾನು ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಿದೆ. ಮುಂದೆ ಆತ ಸರಿ ಹೋದ. ಮತ್ತೆ ಎಂದಿನಂತೆ ನಿರಾತಂಕವಾಗಿ ಓದುತ್ತಿದ್ದಾನೆ ಮತ್ತು ಬರುವ ಪಿಯುಸಿ ಪರೀಕ್ಷೆಗೆ ಸಿಧ್ಧನಾಗುತ್ತಿದ್ದಾನೆ. ನಾನು ಆಪ್ತ ಸಲಹೆ ನೀಡಿದ್ದು ಇಷ್ಟೆ: ಎಲ್ಲವನ್ನೂ ಓದಿದ್ದಿಯಾ, ನಿನ್ನ ನೆನಪಿನ ಭಂಡಾರದಲ್ಲಿ ಎಲ್ಲವೂ ಅಚ್ಚು ಮೂಡಿದೆ. ನಿನ್ನಲ್ಲಿ ಸಾಮರ್ಥ್ಯವಿದೆ. ಶಾಂತಚಿತ್ತದಿಂದ ಪರೀಕ್ಷೆಯನ್ನು ಧೈರ್ಯವಾಗಿ ಬರೆ ಅಂತ ಬೆನ್ನ ಮೇಲೆ ತಟ್ಟಿ ಆಲ್ ದಿ ಬೆಸ್ಟ್ ಅಂತ ಹೇಳಿದೆ.
ಪಾಲಕರು, ಪೋಷಕರು ಗಮನಿಸಬೇಕಾದ ಮತ್ತು ಪಾಲಿಸಬೇಕಾದ ವಿಚಾರವೆಂದರೆ ಇಂತಿಷ್ಟೇ ಪರ್ಸಂಟೇಜ್ ಪಡೆಯಲೇಬೇಕು ಎನ್ನುವ ಟಾರ್ಗೆಟ್, ಇಂತಹ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎನ್ನುವ ಹಟ, ಬೇರೊಬ್ಬರಿಗಿಂತ ಇಷ್ಟು ಹೆಚ್ಚು ಸಾಧನೆ ಮಾಡಬೇಕು ಎನ್ನುವ ಮಹದಾಸೆ ಹೊಂದುವುದು ತಪ್ಪು. ಪ್ರತಿ ವಿದ್ಯಾರ್ಥಿಯ ಕೌಶಲ ಮತ್ತು ಬುದ್ಧಿಮಟ್ಟ ಭಿನ್ನವಾಗಿರುತ್ತದೆ. ಇದರ ಅರಿವು ನಮಗಿರಬೇಕು. ಎಲ್ಲರೂ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಮತ್ತೆ ಮೇಲಾಗಿ ಮಗ ಅಥವಾ ಮಗಳ ಆಸಕ್ತಿ, ಐಚ್ಛಿಕ ಕ್ಷೇತ್ರ ಯಾವುದು? ಅವರ ಮನಸ್ಸಿನಲ್ಲಿ ಏನಿದೆ? ಅವರು ಕಂಡ ಕನಸುಗಳು ಏನು? ಎಂಬುದರ ಸ್ಪಷ್ಟ ಚಿತ್ರಣ ಪಾಲಕರಿಗೆ ಅತ್ಯಗತ್ಯ. ಸಾಮಾಜಿಕ ಪ್ರತಿಷ್ಠೆಗಾಗಿ ಮಕ್ಕಳ ಮೇಲೆ ನಿರೀಕ್ಷೆಯ ಭಾರ
ಹಾಕಿದರೆ ಅದರ ಪರಿಣಾಮ ಅಪಾಯಕಾರಿಯಾಗುತ್ತದೆ.ವಿದ್ಯಾರ್ಥಿಗಳೂ ಅಷ್ಟೇ. ಯಾರನ್ನೋ ಹೋಲಿಸಿಕೊಂಡು ತಾವು ಅವರಿಗಿಂತ ಹಿಂದೆ ಬಿದ್ದಿದ್ದೇವೆ ಎನ್ನುವ ಕೀಳರಿಮೆ ಬೆಳೆಸಿಕೊಳ್ಳಬಾರದು. ಪದೇ ಪದೆ ಗುರಿ ಬದಲಾಯಿಸಬಾರದು. ವರ್ಷದ ಆರಂಭದಿಂದಲೂ ನಿಗದಿತ ವೇಳಾಪಟ್ಟಿ ಹಾಕಿಕೊಂಡು ಒತ್ತಡ ಇಲ್ಲದಂತೆ ನೋಡಿಕೊಳ್ಳಬೇಕು. ಇಷ್ಟಾಗಿಯೂ ಪರಿಹಾರ ತೋಚದಿದ್ದರೆ ಮನೋವೈದ್ಯರನ್ನು ಸಂರ್ಪಸಿ ಆಪ್ತಸಲಹೆ ಪಡೆಯಿರಿ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಹಗಲು ರಾತ್ರಿ ನಿದ್ದೆಗೆಟ್ಟು ಓದಲು ಹೋಗಬಾರದು. ನಕಾರಾತ್ಮಕ ಆಲೋಚನೆಗಳು ಬರದಂತೆ ಕೈಗೆ ಎಟಕುವ ಗುರಿ ಹೊಂದಿ. ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಗಮನಿಸಿ: ಪರೀಕ್ಷೆ ವಿಧ್ಯಾರ್ಥಿ ಜೀವನದಲ್ಲಿ ಒಂದು ಅಳತೆಗೋಲು ಮಾತ್ರ, ಅದು ಸರ್ವಸ್ವವಲ್ಲ. ವಿದ್ಯಾರ್ಥಿಯ ಪ್ರಯತ್ನ ನಿರಂತರವಾಗಿರಬೇಕು ಹಾಗೂ ಪ್ರಯತ್ನ100ಕ್ಕೆ 100 ಇರಬೇಕೆ ವಿನಃ ಅಂಕಗಳಲ್ಲ. ಫಲಿತಾಂಶ ಏನೇ ಬಂದರೂ ಅದನ್ನು ಧನಾತ್ಮಕ ದೃಷ್ಟಿಯಿಂದ ನೋಡಿ ಅವರ ಜೊತೆಗಿದ್ದು ಪೋ›ತ್ಸಾಹಿಸಬೇಕು. ಓದನ್ನು, ಪರೀಕ್ಷೆಯನ್ನು ಹಾಗೂ ಫಲಿತಾಂಶವನ್ನು ಆನಂದಿಸಲು ಕಲಿಸಿರಿ.