

ಆರೋಗ್ಯದ ವಿಚಾರದಲ್ಲಿ ವೈದ್ಯ ಮತ್ತು ರೋಗಿಯ ನಂಬಿಕೆ ಇತ್ತೀಚೆಗೆ ಮಸುಕಾಗುತ್ತಿದೆ. ಗೂಗಲ್ನಲ್ಲಿ ಓದಿದ ಎಲ್ಲಾ ಕಾಯಿಲೆಯ ಲಕ್ಷಣಗಳೂ ತಮ್ಮಲ್ಲೇ ಇದೆಯೆಂದು ಭಾಸವಾಗಬಹುದು. ಹೀಗಾಗಿ ಬೇರೆ ಬೇರೆ ವೈದ್ಯರ ಬಳಿಗೆ ಅಲೆದಾಡಬಹುದು. ಎಲ್ಲಾ ಔಷಧಿಯ ಮೇಲೆ ಅದರದೇ ಆದ ಪರಿಣಾಮ ಮತ್ತು ದುಷ್ಪರಿಣಾಮದ ಬಗ್ಗೆ ಬರೆದಿರುವದರಿಂದ ಆಯಾ ಮಾತ್ರೆಯ ಮಾಹಿತಿ ನೋಡಿ ಅಪನಂಬಿಕೆಯಿಂದ ಮಾತ್ರೆಯನ್ನು ತೆಗೆದುಕೊಳ್ಳದೇ ಹೋಗಬಹುದು, ಅಥವಾ ಅದನ್ನೇ ನಂಬಿ ತಮಗೆ ತಿಳಿದಂತೆ ಮಾತ್ರೆಗಳನ್ನು ಸೇವಿಸಬಹುದು. ಅದರಲ್ಲಿಯ ಸವಿಸ್ತಾರವಾದ ಲಕ್ಷಣಗಳನ್ನು ನೋಡಿದರೆ ಅತಿಯಾದ ಭಯ, ಆತಂಕ, ದುಗುಡ ಸಹ ಆಗಬಹುದು. ‘ಡಾಕ್ಟ್ರೇ ನನಗೆ ಡಿಪ್ರೆಶನ್ ಅಗಿದೆ. ಮಾತ್ರೆ ಬೇಡ. ಕೇವಲ ಕೌನ್ಸೆಲಿಂಗ್ ಮಾಡಿ ಸಾಕು. ಮಿಕ್ಕಿದ್ದೆಲ್ಲಾ ಡಿಪ್ರೆಶನ್ ಬಗ್ಗೆ ನಾನು ಗೂಗಲ್ನಲ್ಲಿ ಓದಿ ತಿಳಿದುಕೊಂಡಿರುವೆ.’- ಹೀಗೆಂದು ಸುಮಾರು 28 ವರ್ಷದ ಯುವತಿ ನನ್ನಲ್ಲಿ ಹೇಳಿದಳು. ಆಕೆಗೆ ತನಗೇನೋ ಆಗಿದೆ ಎನ್ನುವ ಬಲವಾದ ವಿಶ್ವಾಸ. ಇದನ್ನು ಅರಿಯಲು ಆಕೆ ಮೊರೆ ಹೋಗಿದ್ದು ಗೂಗಲ್. ಇದನ್ನು ಅರಿಯುವ ಭರದಲ್ಲಿ ಆಕೆ ಅದಕ್ಕೆ ಉಪಶಮನದ ಕ್ರಮವನ್ನು ನಿರ್ಧರಿಸಿದ್ದು ಮಾತ್ರ ವಿಪರ್ಯಾಸ.
ಹೌದು, ಈಗೀಗ ಜ್ಞಾನಕ್ಕಾಗಿ ಗೂಗಲ್ ಸರ್ಚ್ ಲೋಕಾರೂಢಿಯಾಗಿದೆ. ಇದು ತಪ್ಪಲ್ಲ. ಆದರೆ ಅದೇ ಅಂತಿಮ ಎಂಬ ಬಾವನೆ ಸರಿಯಲ್ಲ. ಏಕೆಂದರೆ ಅದರಲ್ಲಿನ ಮಾಹಿತಿ ಸಾಮಾನ್ಯವಾಗಿರುತ್ತದೆ. ವಾಸ್ತವದಲ್ಲಿ ಪ್ರಕರಣಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುತ್ತವೆ. ಉದಾ: ಡಿಪ್ರೆಶನ್. ಅದರಲ್ಲಿ ಹಲವು ಬಗೆಗಳಿವೆ. ಎಲ್ಲದಕ್ಕೂ ಸಾಮಾನ್ಯ ಚಿಕಿತ್ಸೆ ಆಗದು. ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಇರುತ್ತದೆ. ಆದರೆ ಗೂಗಲ್ನಲ್ಲಿ ಸಿಗುವ ಮಾಹಿತಿ ಸಾಮಾನ್ಯದ್ದಾಗಿರುತ್ತದೆ. ದೈಹಿಕ, ಮಾನಸಿಕ ಆರೋಗ್ಯ ವಿಷಯಕ್ಕೆ ಬಂದಾಗ ಗೂಗಲ್ ಆಧರಿಸಿ ಚಿಕಿತ್ಸಾ ಕ್ರಮ ನಿರ್ಧರಿಸುವುದು ತಪ್ಪು. ಇದರಲ್ಲೇ ಚಿಕಿತ್ಸಾ ಕ್ರಮವೂ ಇದೆ ಎಂದು ಅದನ್ನು ಅನುಸರಿಸಲು ಹೋಗುವುದು ಸೂಕ್ತವಲ್ಲ. ಈಗ ಡಿಪ್ರೆಶನ್ ವಿಚಾರದಲ್ಲೇ ತಗೊಳ್ಳಿ. ನನಗೆ ಕೌನ್ಸೆಲಿಂಗ್ ಮಾಡಿ ಎಂದು ಬಂದ ಯುವತಿಗೆ ಖಿನ್ನತೆಯ ಬಗೆಗಳು ಮತ್ತು ಹಿನ್ನೆಲೆಯ ಅರಿವಿಲ್ಲ. ಮಾನಸಿಕ ಖಿನ್ನತೆಗೆ ಮನೋವೈದ್ಯರ ಬಳಿ ಹೋಗಬೇಕು ಎಂದು ತಿಳಿದಿರುತ್ತಾರೆ. ಅದಕ್ಕೆ ಅವರ ಬಳಿ ಬಂದಿದ್ದಾಳೆ. ಅವಳ ತಲೆಯಲ್ಲಿ ಏನಿದ್ದರೂ ಕೌನ್ಸೆಲಿಂಗ್ ಒಂದೇ ಇದಕ್ಕೆ ಮದ್ದು. ಹೀಗಿರುವಾಗ ನಾನು ಅವಳಿಗೆ ಎಂದಿನಿಂದ ಶುರುವಾಯ್ತು? ಏನಾಗುತ್ತೆ? ಎಂದೆಲ್ಲಾ ಕೇಳಲು ಹೊರಟರೆ ಅವಳಿಗೆ ಅದು ಇಷ್ಟವಿಲ್ಲ. ನಾನು ಆಕೆಯ ಮಾತುಗಳನ್ನು ಬಹಳ ಸಮಾಧಾನದಿಂದಲೇ ಕೇಳಿಸಿಕೊಂಡೆ. ನಂತರ ಖಿನ್ನತೆ ಬಗ್ಗೆ ವಿಸõತವಾಗಿ ಹೇಳಿದೆ. ಆಕೆಗೆ ಮನವರಿಕೆ ಆಯಿತು. ಇದು ಒಂದು ಉದಾಹರಣೆಯಷ್ಟೇ.
ಇಂತಹ ಅನೇಕ ಪ್ರಕರಣಗಳು ನಮ್ಮೆದುರಿಗಿವೆ. ಯಾವುದೇ ಒಂದು ಮನೋರೋಗಕ್ಕೆ ಕೇವಲ ಮನಸ್ಥಿತಿ ಒಂದೇ ಕಾರಣವಾಗಿರುವುದಿಲ್ಲ. ಜೈವಿಕ-ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ ಕಾಯಿಲೆ ಅವಲಂಬಿತವಾಗಿರುತ್ತದೆ. ಎಲ್ಲದಕ್ಕೂ ಸಿದ್ಧ ಮಾದರಿ ಇರುವುದಿಲ್ಲ. ಕಾಯಿಲೆಯ ತೀವ್ರತೆ ಅನುಸರಿಸಿ ಚಿಕಿತ್ಸಾ ಕ್ರಮ ಮತ್ತು ಪ್ರಮಾಣ ನಿರ್ಧರಿಸಲಾಗುತ್ತದೆ. ಈ ಮಾಹಿತಿ ನಮಗೆ ಗೂಗಲ್ನಲ್ಲಿ ಸಿಗುವುದಿಲ್ಲ. ಅದಕ್ಕೆ ವೈದ್ಯರ ಭೇಟಿ ಮತ್ತು ಮಾರ್ಗದರ್ಶನ ಅಗತ್ಯ. ಅಮೆರಿಕಾದ ಅಧ್ಯಯನವೊಂದರ ಪ್ರಕಾರ ಗೂಗಲ್ನಲ್ಲಿ ಆರೋಗ್ಯ ವಿಷಯಕ್ಕೆ ಶೇ.84 ರಷ್ಟು ಹುಡುಕಾಟ ಇದೆ. ಈ ಮಾಹಿತಿ ಅರಸುವವರಲ್ಲಿ ಯುವಕರೇ ಹೆಚ್ಚು ಎನ್ನುವುದು ವಿಶೇಷ. ಕೆಲ ವಿಷಯಗಳ ಮಾಹಿತಿ ಬೆನ್ನತ್ತಿ ಹೊರಟ ಅನೇಕರಿಗೆ ಪೂರ್ಣ ಪ್ರಮಾಣದ ಸ್ಪಷ್ಟತೆ ಸಿಕ್ಕಿಲ್ಲ. ಏಕೆಂದರೆ ಅದು ಪರಿಸ್ಥಿತಿ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಆರೋಗ್ಯ ಸಂಬಂಧಿ ಸಂಶಯಗಳಿದ್ದರೆ ಗೂಗಲ್ನಲ್ಲಿ ಓದಿ. ಆದರೆ ಅದೇ ಫೈನಲ್ ಎಂಬ ನಿರ್ಧಾರಕ್ಕೆ ಬರಬೇಡಿ. ವೈದ್ಯರ ಬಳಿ ನೀವು ಹೊಂದಿರುವ ಮಾಹಿತಿ ಮತ್ತು ಗುಣಲಕ್ಷಣಗಳ ಬಗ್ಗೆ ಮುಕ್ತವಾಗಿ ರ್ಚಚಿಸಿ. ವಾಸ್ತವ ಅರಿತು ಸಾಗಿ.