ಪ್ರಾಚೀನ ನವೀನ ಚಿಂತನೆಗಳ ಸಂಗಮ; ಇಂದು 54ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ

Heggade
Published on

| ಡಾ. ಶ್ರೀಧರ ಭಟ್ಟ ಉಜಿರೆ

ಐವತ್ತನಾಲ್ಕು ವರ್ಷಗಳ ಹಿಂದೆ ಅಂದರೆ 1968 ಅಕ್ಟೋಬರ್ 24ರಂದು 20 ವರ್ಷದ ವೀರೇಂದ್ರರು ಧರ್ಮಸ್ಥಳದ 21ನೇ ಧರ್ವಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ‘ಧರ್ವಧಿಕಾರಿಪಟ್ಟ’ ಎಂಬುದು ಆಗ ಅನಿರೀಕ್ಷಿತವಾಗಿ ಒದಗಿಬಂದುದಾದರೂ, ಅದು ಪೂರ್ಣ ದೈವಸಂಕಲ್ಪದಿಂದ ಕೂಡಿದ ಕಾರ್ಯವೆಂಬುದು ಇಂದು ದಿಟವಾಗಿದೆ. ವೀರೇಂದ್ರ ಹೆಗ್ಗಡೆಯವರು ತಮ್ಮ ತಾಯಿಯಾದ ರತ್ನಮ್ಮ ಅವರ ಗರ್ಭಾಂಬುಧಿಯಿಂದ ಜನಿಸಿದಾಗ, ಅಂದಿನ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆಯವರು ಹೇಳಿದ ‘ಧರ್ಮಸ್ಥಳದ ದೀಪ ಬೆಳಗಿತು’ ಎಂಬ ಮಾತು ಅಕ್ಷರಶಃ ಅರ್ಥಪೂರ್ಣವಾದದ್ದು ಎಂಬುದು ಇಂದು ನಮಗೆಲ್ಲ ಮನವರಿಕೆಯಾಗಿದೆ. 20ರ ಹರೆಯದ ಬಾಲಕನಾದ ವೀರೇಂದ್ರರು ಸ್ವಾಮಿಯ ಸಂಕಲ್ಪದಂತೆ, ಕ್ಷೇತ್ರದ ಸಂಪ್ರದಾಯ ಮತ್ತು ಪರಂಪರೆಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುತ್ತ, ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬಂತೆ ಆಧುನಿಕ ದೃಷ್ಟಿಕೋನದಿಂದ ಶ್ರೀಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಿದರು. ‘ಕುಡುಮ’ ಎಂಬುದು ಧರ್ಮಸ್ಥಳದ ಮೊದಲಿನ ಹೆಸರು. ಈ ಶಬ್ದಕ್ಕೆ ದಾನ ಅಥವಾ ದಾನ ನಡೆಯುವ ಸ್ಥಳ ಎಂಬ ಅರ್ಥವಿದೆ. ಅಂದರೆ ಧರ್ಮಸ್ಥಳದ ಇತಿಹಾಸವನ್ನು ನೋಡಿದರೆ, ಧರ್ಮದೇವತೆಗಳು ಇಲ್ಲಿ ಬಂದು ನೆಲೆಸಿದ್ದು ಬರ್ಮಣ್ಣ ಹೆಗ್ಗಡೆ ಮತ್ತು ಅಮ್ಮು ಬಲ್ಲಾಳ್ತಿಯವರ ಸಾತ್ವಿಕ ಜೀವನ ಮತ್ತು ಅವರ ಸಾತ್ವಿಕದಾನದ ಕಾರಣದಿಂದಲೇ. ಆದ್ದರಿಂದಲೇ 15ನೇ ಶತಮಾನದಲ್ಲಿ ಇಲ್ಲಿಗೆ ಬಂದ ಉಡುಪಿಯ ಸೋದೆ ಮಠದ ವಾದಿರಾಜ ಯತಿಗಳು ಈ ಸ್ಥಳಕ್ಕೆ ‘ಧರ್ಮಸ್ಥಳ’ ಎಂದು ಮರುನಾಮಕರಣ ಮಾಡಿದರು. ಅಂದಿನಿಂದ ‘ಶ್ರೀಕ್ಷೇತ್ರ ಧರ್ಮಸ್ಥಳ’ ಎಂಬುದಾಗಿಯೇ ಇದು ಲೋಕದಲ್ಲಿ ಪ್ರಸಿದ್ಧಿ ಪಡೆದಿದೆ. ಚತುರ್ದಾನಗಳಿಗೆ ತವನಿಧಿಯಾದ ಧರ್ಮಸ್ಥಳ ಇಂದು ಕೂಡ ಈ ಚತುರ್ದಾನ ಪರಂಪರೆಯನ್ನು ಜೋಪಾನವಾಗಿ ಮತ್ತು ಧರ್ಮಮಾರ್ಗದಲ್ಲಿ ಕಾಪಾಡಿಕೊಂಡು, ವಿಸ್ತರಿಸಿಕೊಂಡಿದೆ. ಪದ್ಮವಿಭೂಷಣ ಡಿ.ವೀರೇಂದ್ರ ಹೆಗ್ಗಡೆಯವರ ಸಾಧನೆಗಳನ್ನು ಲೋಕಮುಖಕ್ಕೆ ಪರಿಚಯಿಸುವ ದೃಷ್ಟಿಯಿಂದ ಅವರ ಪಟ್ಟಾಭಿಷೇಕದ ಸುವರ್ಣಮಹೋತ್ಸವದ ನೆನಪಿನಲ್ಲಿ ‘ಸುವರ್ಣ ಸಂಪುಟ’ ಎಂಬ 25 ಗ್ರಂಥಗಳನ್ನು ಹೊರತರಲಾಗಿದೆ. ಆ ಗ್ರಂಥಗಳು ಶ್ರೀಕ್ಷೇತ್ರದ ಹಲವು ಮುಖಗಳ ಸಾಧನೆಯನ್ನು ದಾಖಲಿಸಿವೆ. ಅದಲ್ಲದೆ ಹೆಗ್ಗಡೆಯವರ ವ್ಯಕ್ತಿ ಪರಿಚಯವನ್ನು ಒಳಗೊಂಡ ‘ಧರ್ಮಯಾನ’ ಮುಂತಾದ ಗ್ರಂಥಗಳು ಪ್ರಕಟಗೊಂಡಿವೆ.

ಸಂಪ್ರದಾಯ ನಿಷ್ಠರು-ಆಧುನಿಕತೆಗೂ ಬದ್ಧರು: ವೀರೇಂದ್ರ ಹೆಗ್ಗಡೆಯವರಿಗೆ ಕ್ಷೇತ್ರದ ಸಂಪ್ರದಾಯದಲ್ಲಿ ಅಮಿತವಾದ ಶ್ರದ್ಧೆ ಇದೆ. ಇದನ್ನು ಅವರು ಕರ್ತವ್ಯದೃಷ್ಟಿಯಿಂದಲೂ, ಸಂಪ್ರದಾಯ ಎಂಬ ದೃಷ್ಟಿಯಿಂದಲೂ ಮತ್ತು ಭಗವಂತನ ಪ್ರತಿನಿಧಿಯಾಗಿಯೂ ನಡೆಸಿಕೊಂಡು ಬರುತ್ತಿದ್ದಾರೆ. ಹೆಗ್ಗಡೆಯವರು ವಾಸಿಸುವ ಮನೆಗೆ ಬೀಡು ಎಂದು ಹೆಸರು. ಧರ್ಮಸ್ಥಳಕ್ಕೆ ಸ್ವಾಮಿಯ ದರ್ಶನಕ್ಕೆ ಬಂದ ಅನೇಕ ಭಕ್ತರು ಹೆಗ್ಗಡೆಯವರನ್ನು ಅವರ ಬೀಡಿನಲ್ಲಿ ಭೇಟಿಯಾಗುತ್ತಾರೆ. ಕ್ಷೇತ್ರದ ಸಂಪ್ರದಾಯದಂತೆ ಬಂದ ಭಕ್ತರಿಗೆ ಸಾಂತ್ವನ ಮತ್ತು ಅಭಯ ದಾನ ನೀಡುವುದು ಹೆಗ್ಗಡೆಯವರ ಕರ್ತವ್ಯಗಳಲ್ಲೊಂದು. ಅದಕ್ಕಾಗಿ ಹೆಗ್ಗಡೆಯವರ ಬೀಡಿಗೆ ಎಷ್ಟೇ ದೊಡ್ಡ ವ್ಯಕ್ತಿಗಳು ಬಂದಿದ್ದರೂ ಅವರ ಮೊದಲ ಆದ್ಯತೆ ಎಂಬುದು ಸಾಮಾನ್ಯ ಭಕ್ತರನ್ನು ಭೇಟಿಯಾಗುವುದು ಹಾಗೂ ಅವರ ಅಹವಾಲುಗಳನ್ನು ಕೇಳಿ ಪರಿಹರಿಸುವುದೇ ಆಗಿರುತ್ತದೆ. ಅವರು ತಮ್ಮ ಚಾವಡಿಗೆ ಬಂದಾಗ ಒಮ್ಮೆ ದೃಷ್ಟಿ ಹಾಯಿಸಿ ಯಾರ್ಯಾರು ಬಂದಿದ್ದಾರೆ ಎಂಬುದನ್ನು ಕೂಡಲೇ ಗ್ರಹಿಸಿಕೊಳ್ಳುತ್ತಾರೆ. ಆನಂತರ ಸಾಮಾನ್ಯ ಭಕ್ತರನ್ನು ಅಂದರೆ ಹೆಗ್ಗಡೆಯವರ ದೃಷ್ಟಿಯಲ್ಲಿ ವಿಶೇಷ ಭಕ್ತರನ್ನು ಅವರು ಮಾತನಾಡಿಸುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಭಗವಂತನ ಪ್ರೇರಣೆಯಿಂದ ಯಾವುದು ಸ್ಪುರಿಸುತ್ತದೆಯೋ ಅದನ್ನು ಪರಿಹಾರ ರೂಪವಾಗಿ ಸೂಚಿಸುತ್ತಾರೆ. ಅವಶ್ಯಕತೆಗನುಗುಣವಾಗಿ ದಾನಮಾನಾದಿಗಳನ್ನು ಮಾಡುತ್ತಾರೆ. ಆನಂತರವೇ ಉಳಿದವರನ್ನು ಮಾತನಾಡಲು ಕರೆಯುತ್ತಾರೆ. ಈ ವ್ಯವಸ್ಥೆಯನ್ನು ಕಳೆದ ಐವತ್ತನಾಲ್ಕು ವರ್ಷಗಳಿಂದಲೂ ಅವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

ತಾಳ್ಮೆಯ ಮೂರ್ತಿ: ಯಾವುದೇ ವಿಷಯವನ್ನಾದರೂ ಸಹನೆಯಿಂದ ಕೇಳಿಸಿಕೊಳ್ಳುತ್ತಾರೆ. ಆನಂತರವೇ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಪ್ರತಿದಿನವೂ ಅವರನ್ನು ಕಾಣಲು ಬರುವವರು ತಮ್ಮ ಮನಸ್ಸಿನ ಅನಿಸಿಕೆಯನ್ನು ನಿವೇದಿಸಿಕೊಳ್ಳಲು ಬಯಸುತ್ತಾರೆ. ಅದನ್ನು ಆಲಿಸಿದ ನಂತರವೇ ಧಾರ್ವಿುಕ ಅಥವಾ ಲೌಕಿಕವಾದ ಪರಿಹಾರವನ್ನು ಸೂಚಿಸುತ್ತಾರೆ. ದಿನನಿತ್ಯವೂ ಸಾವಿರಾರು ಜನರ ಅಹವಾಲುಗಳನ್ನು ಕೇಳಬೇಕೆಂದರೆ ತಾಳ್ಮೆ ಇರಲೇ ಬೇಕಲ್ಲವೇ? ಒಮ್ಮೆ ನಾವು ಕಾಲೇಜಿನ ವಾರ್ಷಿಕ ಸಂಚಿಕೆ ‘ಮನೀಷಾ’ವನ್ನು ಅವರಿಗೆ ತೋರಿಸಿದೆವು. ಸುಮಾರು ಮುನ್ನೂರೈವತ್ತು ಪುಟದ ಆ ಸಂಚಿಕೆಯನ್ನು ಆದ್ಯಂತವಾಗಿ ಪ್ರತೀ ಪುಟವನ್ನು ತೆಗೆದು ನೋಡಿದ ಅವರು ಕೆಲವು ಪ್ರಶ್ನೆಗಳನ್ನೂ ಕೇಳಿದರು. ಇದು ಹೆಗ್ಗಡೆಯವರಲ್ಲಿ ನಾವು ಕಾಣುವ ಸಹನೆ ಎಂಬ ಗುಣ.

ಧರ್ಮಸ್ಥಳದ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶದ ಸಮಯದಲ್ಲಿ ‘ಮಹಾಬಂಧ’ ಎಂಬ ವಿಶೇಷ ಗ್ರಂಥವನ್ನು ಹೊರತರಲಾಯಿತು. ಆ ಸಮಯದಲ್ಲಿ ಅವರು ಎಷ್ಟೇ ಕಾರ್ಯಾಂತರದಲ್ಲಿ ವ್ಯಸ್ತರಾಗಿದ್ದರೂ, ಆ ಗ್ರಂಥದ ಪ್ರತಿಯೊಂದು ಲೇಖನವನ್ನು ಓದಿ, ಬದಲಾವಣೆ ಬೇಕಿದ್ದಲ್ಲಿ ಸೂಚಿಸಿದ್ದರು. ಫೋಟೋ ಸೇರಿಸುವಾಗ ಯಾವ ಫೋಟೋ, ಅದು ಹೇಗಿರಬೇಕು, ಎಲ್ಲಿರಬೇಕೆಂಬುದನ್ನು ವಿಶೇಷ ಕಾಳಜಿಯಿಂದ ತಿಳಿಸಿದ್ದರು.

ಎಲ್ಲದರೊಳಗೊಂದಾಗುವ ಗುಣ: ಸಾಮಾನ್ಯವಾಗಿ ಜನಸಾಮಾನ್ಯರಿಗೆ ಒಂದೋ ಎರಡೋ ವಿಷಯಗಳಲ್ಲಿ ಆಸಕ್ತಿ ಇರಬಹುದು. ಹೆಚ್ಚೆಂದರೆ ಮೂರ್ನಾಲ್ಕು ಆಸಕ್ತಿಯ ಕ್ಷೇತ್ರಗಳಿರಬಹುದು. ಆದರೆ ಹೆಗ್ಗಡೆಯವರ ಆಸಕ್ತಿಯ ಕ್ಷೇತ್ರ ಸಮುದ್ರದಂತೆ ವಿಶಾಲವಾದದ್ದು. ಒಮ್ಮೆ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿರುವ ಪ್ರತಿಯೊಂದು ವಸ್ತುವಿನ ಇತಿಹಾಸವೇ ಹೆಗ್ಗಡೆಯವರ ಮಸ್ತಕದಲ್ಲಿದೆ. ಯಾವ ಕ್ಯಾಮರಾವನ್ನು ಎಲ್ಲಿಂದ ತಂದಿದ್ದು, ಕೊಟ್ಟ ಹಣ ಎಷ್ಟು, ಅಲ್ಲಿರುವ ನಾಣ್ಯಗಳು ಯಾವಾಗ ಚಲಾವಣೆಯಲ್ಲಿತ್ತು, ಟೈಪ್ರೖೆಟರ್ಗಳ ಹುಟ್ಟು, ಬೆಳವಣಿಗೆ, ವಿವಿಧ ಆಯುಧಗಳ ವಿವರಣೆ ಇತ್ಯಾದಿಗಳನ್ನು ಮನಮುಟ್ಟುವಂತೆ ವಿವರಿಸಿದ್ದರು. ಇವುಗಳ ವಿವರಣೆಯನ್ನು ನೀಡುವಾಗ ಅವರು ಅನುಭವಿಸುವ ಸಂತೋಷ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಫೋಟೋ ಸೆರೆಹಿಡಿಯುವುದು ಅವರ ಆಸಕ್ತಿಯ ಹವ್ಯಾಸ. ತಾಳೇಗರಿ ಗ್ರಂಥಗಳನ್ನು ಸಂಗ್ರಹಿಸಿ, ಸಂರಕ್ಷಿಸುವುದು ಇಷ್ಟದ ಕೆಲಸ. ಕೃಷಿ ಬಗ್ಗೆ ಸಮಗ್ರ ದೃಷ್ಟಿಕೋನವುಳ್ಳವರು, ಕಟ್ಟಡ ವಿನ್ಯಾಸ, ರಚನೆ ಮತ್ತು ಅವುಗಳಲ್ಲಿನ ಸೂಕ್ಷಾ್ಮತಿ ಸೂಕ್ಷ್ಮವನ್ನು ಗ್ರಹಿಸುವವರು ಹೆಗ್ಗಡೆಯವರು. ಉಜಿರೆಯ ಎಸ್​ಡಿಎಂ ಕಾಲೇಜಿನ ಕಟ್ಟಡ ಹೆಗ್ಗಡೆಯವರ ಮಾರ್ಗದರ್ಶನದಲ್ಲೇ ಸಿದ್ಧವಾದದ್ದು. ಲೆಕ್ಕಪತ್ರ ವಿಭಾಗದಲ್ಲೂ ನಿಖರವಾದ ತಿಳಿವಳಿಕೆ ಇವರಿಗಿದೆ. ಸಾಹಿತ್ಯ, ಸಂಗೀತ, ಕಲೆಗಳಲ್ಲಿ ತಲ್ಲೀನರಾಗುವ ಸ್ವಭಾವ ಅವರದ್ದು. ಇಡೀ ಧರ್ಮಸ್ಥಳವನ್ನೊಮ್ಮೆ ತಿರುಗಾಡಿದರೆ ಹೆಗ್ಗಡೆಯವರ ಆಸಕ್ತಿ ಕ್ಷೇತ್ರಗಳ ಅನಾವರಣವಾಗುತ್ತದೆ.

ಮಾತನಾಡುವ ಮಂಜುನಾಥ: ಹೆಗ್ಗಡೆಯವರದ್ದು ನಿತ್ಯಸಂಚಾರದ ಬದುಕು. ಧಾರ್ವಿುಕ-ಸಾಮಾಜಿಕ ಕಾರ್ಯಕ್ರಮಗಳಿಗಾಗಿ ನಿರಂತರ ಪ್ರವಾಸ ಅವರದ್ದು. ಕೋವಿಡ್ ಅಲ್ಲದಿದ್ದರೆ ಅವರು ದಿನಕ್ಕೆ ಸರಾಸರಿ ಐವತ್ತು ಕಿಲೋಮೀಟರ್ ಸಂಚರಿಸುತ್ತಾರೆ. ವರ್ಷದಲ್ಲೊಮ್ಮೆ ವಿದೇಶಪ್ರವಾಸ ಮಾಡುತ್ತಾರೆ. ಬಹುತೇಕರಂತೆ ವಿದೇಶಪ್ರವಾಸ ಮೋಜಿಗಾಗಿ ಅಲ್ಲ. ಬದಲಾಗಿ ಅದೊಂದು ಅಧ್ಯಯನ-ಸಂಗ್ರಹ ಪ್ರವಾಸವಾಗಿರುತ್ತದೆ. ಮಂಜೂಷಾ ವಸ್ತುಸಂಗ್ರಹಾಲಯದ ವಸ್ತುಗಳು ಇಂತಹ ಪ್ರವಾಸದ ಫಲಶ್ರುತಿ. ಗ್ರಾಮೀಣಾಭಿವೃದ್ಧಿ ಸೇರಿ ಮೊದಲಾದ ಸೇವಾ ಚಟುವಟಿಕೆಗಳನ್ನು ಮಾಡಿದ್ದರೂ, ಸ್ವಾಮಿಯಾದ ಮಂಜುನಾಥನ ಸೇವೆ ಮಾಡಲಿಲ್ಲವೆಂಬ ಅನಿಸಿಕೆಯನ್ನು ಹೋಗಲಾಡಿಸುವುದಕ್ಕಾಗಿ ಗರ್ಭಗೃಹದ ಛಾವಣಿಗೆಗೆ ಬಂಗಾರದ ಹೊದಿಕೆಯನ್ನು ಮಾಡಿಸಿದ್ದಾರೆ. ದೇವರ ಪೂಜಾಪರಿಕರಗಳನ್ನು ನವೀಕರಿಸಿದ್ದಾರೆ. ಬ್ರಹ್ಮರಥವನ್ನು ಮಾಡಿಸಿ ಅದರಲ್ಲಿ ಸ್ವಾಮಿಯನ್ನು ಕಂಡು ಆನಂದಿಸಿದ್ದಾರೆ. ಆದ್ದರಿಂದ ಅವರ ಮಾತು ಭಗವಂತನ ನುಡಿ. ‘ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ಎಂಬಂತೆ ಭಗವರ್ದಪಿತ ಬುದ್ಧಿಯಿಂದ ಕರ್ತವ್ಯವನ್ನು ಮಾಡಿ ಹೊಸ ಎತ್ತರಕ್ಕೆ ಏರಿದವರು ಹೆಗ್ಗಡೆಯವರು.

ಸಂಸಾರಿಯಾದ ರಾಜರ್ಷಿ: ಹೇಮಾವತಿಯವರಿಂದೊಡಗೂಡಿದ ಸುಖೀ ಸಂಸಾರ ಹೆಗ್ಗಡೆಯವರದ್ದು. ಹೇಮಾವತಿ ಹೆಗ್ಗಡೆಯವರ ನಿರಂತರ ಅಧ್ಯಯನದ ತಿಳಿವಳಿಕೆ ಮತ್ತು ಮಾತೃವಾತ್ಸಲ್ಯ ಹೆಗ್ಗಡೆಯವರಿಗೊಂದು ಶಕ್ತಿ. ಸಹೋದರರು, ಮಕ್ಕಳು, ಮೊಮ್ಮಕ್ಕಳಿಂದ ಕೂಡಿದ ತುಂಬು ಸಂಸಾರ ಹೆಗ್ಗಡೆಯವರದ್ದು. ಸೀತಾರಾಮನಾದ ರಾಮನು ರಾಜಾರಾಮನಾದಂತೆ ಹೆಗ್ಗಡೆಯವರು ಸಂಸಾರಿಯಾಗಿದ್ದರೂ ರಾಜರ್ಷಿಗಳು. ‘ರಾಜಾ ಋಷಿಃ ಇವ’ ಎಂಬಂತೆ ಅಂದರೆ ರಾಜನಾಗಿದ್ದೂ ಋಷಿಸದೃಶ ಜೀವನ ನಡೆಸುವಂತೆ, ಧರ್ವಧಿಕಾರಿತ್ವದ ಜವಾಬ್ದಾರಿಯಂತೆ ವಿಧಿಗನುಗುಣವಾಗಿ ವ್ರತೋಪವಾಸಾದಿಗಳನ್ನು ಮಾಡುತ್ತ ಸ್ವಾಮಿಯ ಸೇವೆಗೆ ಬದ್ಧರಾದವರು ಹೆಗ್ಗಡೆಯವರು.

ಹೀಗೆ ಹೆಗ್ಗಡೆಯವರ ಸಾಧನೆಯನ್ನು ಹೇಳಲು ಆದಿಶೇಷನ ಸಾವಿರ ನಾಲಗೆಗಳೂ ಸಾಲದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು

ಯದ್ಯತ್ ವಿಭೂತಿಮತ್ಸತ್ವಂ ಶ್ರೀಮದೂರ್ಜಿತಮೇವ ವಾ |

ತತ್ತದೇವಾವಗಚ್ಛ ತ್ವಂ ಮಮ ತೇಜೋಂಶಸಂಭವಮ್ ||

‘ಯಾವುದು ಹೆಚ್ಚುಗಾರಿಕೆಯಿಂದ ಕೂಡಿದೆಯೋ, ಕಾಂತಿ ಯಿಂದ ಕೂಡಿದೆಯೋ, ಹೆಚ್ಚು ಬಲದಿಂದ ಕೂಡಿದೆಯೋ ಅದನ್ನು ನನ್ನ ಮಹಿಮೆಯ ಅಂಶದಿಂದ ಹುಟ್ಟಿದ್ದೆಂದು ನೀನು ತಿಳಿ’ ಎಂದು ಅರ್ಜುನನಿಗೆ ಹೇಳುತ್ತಾನೆ. ಇಂತಹ ವಿಭೂತಿಪುರುಷರ ಮಾರ್ಗದರ್ಶನ ಈ ನಾಡಿಗೆ ನೂರುಕಾಲ ದೊರಕಿ ಜನರೆಲ್ಲ ಸನ್ಮಾರ್ಗದಲ್ಲಿ ನಡೆಯುವಂತಾಗಲೆಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ.

ಶುದ್ಧಮನಸಿನ ವ್ಯಕ್ತಿತ್ವ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಅಷ್ಟಬಂಧ ಮತ್ತು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಸಾಮೂಹಿಕ ಶಿವಸಹಸ್ರನಾಮ ಪಠಣ ಮಾಡಲಾಯಿತು. ಸಹಸ್ರನಾಮ ಪಠಿಸಿದ ನಂತರ ಓಂಕಾರವನ್ನು ಹೇಳಿ, ತದನಂತರ ಮೂರು ನಿಮಿಷಗಳ ಧ್ಯಾನವನ್ನು ಮಾಡಿದೆವು. ಆ ಸಂದರ್ಭದಲ್ಲಿ, ಆ ಮೂರೇ ನಿಮಿಷದಲ್ಲಿ ಹೆಗ್ಗಡೆಯವರು ಮನಸ್ಸಿನ ಆಳಕ್ಕೆ ಇಳಿದು, ಹೊಸ ಚೈತನ್ಯ ಪಡೆದು ಧ್ಯಾನವನ್ನು ಮುಗಿಸುತ್ತಿದ್ದರು. ಅಂದರೆ ಮನಸ್ಸು ಪರಿಶುದ್ಧವಾಗಿದ್ದರೆ ಮನಸ್ಸಿನ ಆಳಕ್ಕೆ ನಮ್ಮನ್ನು ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಕೇವಲ ಎರಡು ಅಥವಾ ಮೂರು ನಿಮಿಷದ ಸಮಯದ ಧ್ಯಾನದಲ್ಲಿ ಪೂರ್ಣ ತಲ್ಲೀನರಾಗಿ ಪುನಃ ಎಚ್ಚರದ ಸ್ಥಿತಿಗೆ ಬರುವುದು ಇದೆಯಲ್ಲ ಇದು ಶುದ್ಧ ಮತ್ತು ಸ್ಥಿರ ಮನಸ್ಸಿನವರಿಗೆ ಮಾತ್ರ ಸಾಧ್ಯ. ಈ ಶುದ್ಧ ಮನಸ್ಸು ಹೇಗೆ ಸಾಧಿತವಾಗುತ್ತದೆ ಎಂದರೆ,

ಗತಂ ನ ಚಿಂತಯೇತ್ ಪ್ರಾಜ್ಞಃ ಭವಿಷ್ಯಂ ನ ಚ ಚಿಂತಯೇತ್ |

ವರ್ತಮಾನೇನ ಕಾಲೇನ ವರ್ತಂತೆ ಹಿ ವಿಚಕ್ಷಣಾಃ ||

ಹಿಂದಿನದನ್ನು ಮರೆತುಬಿಡಬೇಕು. ಮುಂದಿನದರ ಬಗ್ಗೆ ಚಿಂತಿಸ ಬಾರದು. ಯಾವಾಗಲೂ ವರ್ತಮಾನ ಕಾಲದಲ್ಲಿಯೇ ಇರುವವರು ಆಗಿರಬೇಕು. ಸದಾ ವರ್ತಮಾನದಲ್ಲೇ ಇರುವ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಇಂತಹ ಶುದ್ಧವಾದ ಮನಸ್ಸನ್ನು ಹೊಂದಿರುವವರು. ಮನಃಪ್ರಶಮನ ಉಪಾಯವನ್ನು ಕರಗತ ಮಾಡಿಕೊಂಡವರು. ಆದ್ದರಿಂದಲೇ ಅವರು ಯಾರನ್ನೂ ತೆಗಳುವುದಿಲ್ಲ. ನಕಾರಾತ್ಮಕ ದೃಷ್ಟಿಯಿಂದ ಮಾತನಾಡುವುದಿಲ್ಲ. ಎಲ್ಲದರಲ್ಲಿ ಇರುವ ಒಳಿತನ್ನು ಗುರುತಿಸುವ, ಅದನ್ನು ಸ್ವೀಕರಿಸುವ ಶುದ್ಧ ಮನಸ್ಸು ಅವರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net