

ಅದೆಷ್ಟೋ ಜನರು ನಾನು ರಾತ್ರಿ ಊಟಬಿಟ್ಟಿದ್ದೇನೆ. ಎರಡು ಚಪಾತಿ, ಪಲ್ಯ ಮಾತ್ರವೇ ತಿನ್ನುತ್ತಿದ್ದೇನೆ ಎನ್ನುತ್ತಾರೆ. ಬಹಳ ಲಘುವಾದ ಆಹಾರ ಸೇವಿಸುತ್ತಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ರಾತ್ರಿಯ ಊಟ ಕಡಿಮೆ ಪ್ರಮಾಣದಲ್ಲಿ ಇರಬೇಕೆಂದು ಆಯುರ್ವೆದ ಹೇಳಿದ್ದನ್ನು ಕಟ್ಟುನಿಟ್ಟಾಗಿ ತಾವು ಪರಿಪಾಲಿಸುತ್ತಿದ್ದೇವೆ ಎಂದು ಅಂದುಕೊಂಡಿರುತ್ತಾರೆ. ನಿಜಕ್ಕೂ ಸ್ವಲ್ಪ ಅನ್ನ ಸಾರು, ಪಲ್ಯ, ಮಜ್ಜಿಗೆ ಊಟ ಮಾಡಿದರೆ ಅದುವೇ ಬೇಗನೆ ಸುಲಭವಾಗಿ ಜೀರ್ಣವಾಗುತ್ತದೆ ಹೊರತು ಚಪಾತಿಯಲ್ಲ. ಇಲ್ಲೊಂದು ಕುತೂಹಲಕಾರಿ ವಿಷಯವಿದೆ. ಆಯುರ್ವೆದದ ಮೂಲಗ್ರಂಥವಾದ ಚರಕ ಸಂಹಿತೆಯ ಸೂತ್ರಸ್ಥಾನದ ಐದನೆಯ ಅಧ್ಯಾಯದಲ್ಲಿ ಅರವತ್ತು ದಿನಗಳಲ್ಲಿ ಬೆಳೆಯುವ ಷಷ್ಟಿಕ ಅಕ್ಕಿ, ಕೆಂಪುಅಕ್ಕಿ, ಹೆಸರುಬೇಳೆ, ಸೈಂಧವ ಉಪ್ಪು, ಬೆಟ್ಟದ ನೆಲ್ಲಿಕಾಯಿ, ಬಾರ್ಲಿ, ಮಳೆನೀರು, ಹಾಲು, ತುಪ್ಪ, ಜೇನುತುಪ್ಪ, ಮಾಂಸಾಹಾರಿಗಳಿಗೆ ಒಳನಾಡಿನ ಪ್ರಾಣಿಗಳ ಮಾಂಸಗಳು ನಿತ್ಯಾಹಾರವಾಗಿ ಸೂಚಿಸಲ್ಪಟ್ಟಿವೆ. ಉಪ್ಪನ್ನು ಅಡುಗೆಗೆ ಎಷ್ಟು ಬೇಕೋ ಅಷ್ಟೇ ಬಳಸಬೇಕು, ಅತಿಯಾಗಿ ಬಳಸಬಾರದು ಎಂದಿದೆ. ಇಂದು ಗೋಧಿಯೇ ಪ್ರಧಾನ ಆಹಾರವಾಗಿರುವ ಉತ್ತರಭಾರತದಲ್ಲಿ ಬರೆಯಲ್ಪಟ್ಟ ಈ ಗ್ರಂಥದಲ್ಲಿ ಗೋಧಿಯನ್ನೇ ಹೇಳಿಲ್ಲವಲ್ಲ ಎಂದು ಅಚ್ಚರಿಯಾಗುತ್ತದೆ. ಪ್ರಾಚೀನ ಭಾರತದಲ್ಲಿ ದೇಶದಾದ್ಯಂತ ಅಕ್ಕಿಯನ್ನೇ ಮೂಲ ಆಹಾರವಾಗಿ ಬಳಸುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹಲವು ಶತಮಾನಗಳ ನಂತರ ಬಂದ ಸುಶ್ರುತ ಸಂಹಿತೆ, ಅಷ್ಟಾಂಗ ಸಂಗ್ರಹಗಳಲ್ಲಿ ಗೋಧಿಯನ್ನೂ ಸೇರಿಸಲಾಗಿದೆ! ಸುಶ್ರುತ ಸಂಹಿತೆಯಲ್ಲಿ ಗೋಧಿಯನ್ನು ಉಲ್ಲೇಖಿಸಿದ್ದರೂ ಹದಿನಾಲ್ಕು ವಿಧದ ಅಕ್ಕಿಗಳನ್ನು ನಿತ್ಯಬಳಕೆಗೆ ಪ್ರಮುಖವಾಗಿ ಹೇಳಿರುವುದು ಸ್ವಾಸ್ಥ್ಯದ ದೃಷ್ಟಿಯಿಂದ ಅಕ್ಕಿಗೆ ನೀಡಿದ ಮಹತ್ವಪೂರ್ಣ ಸ್ಥಾನಮಾನವನ್ನು ಹೇಳುತ್ತದೆ.
ಅಪಘಾನಿಸ್ತಾನ ಪ್ರದೇಶದಿಂದ ಭಾರತಕ್ಕೆ ಬಂದ ಗೋಧಿ ಉತ್ತರ ಭಾರತದಲ್ಲೆಲ್ಲಾ ಪ್ರಚುರವಾಯಿತೆಂದು ಇತಿಹಾಸದಲ್ಲಿ ದಾಖಲಾಗಿದೆ. ಮೂಲತಃ ಗೋಧಿ ಶೀತಲ ವೀರ್ಯ ಹೊಂದಿದೆ. ಕಾಲ ಕ್ರಮೇಣ ಅದರ ತಳಿಗಳಲ್ಲಾದ ಮಾರ್ಪಾಡುಗಳಿಂದ ಅದು ತನ್ನ ಶೀತಲ ಗುಣ ಕಳೆದುಕೊಂಡು ಉಷ್ಣ ಸ್ವಭಾವ ಹೊಂದಿತು. ಇದು ತದನಂತರ ಬಂದ ಆಯುರ್ವೆದದ ರಾಜ ನಿಘಂಟು ಎಂಬ ಗ್ರಂಥದಿಂದ ತಿಳಿಯುತ್ತದೆೆ. ಇಂದಿನ ಆಹಾರ ತಜ್ಞರೂ ತಳಿಗಳಲ್ಲಾಗಿರುವ ಬದಲಾವಣೆ ಬಗ್ಗೆ ಹೇಳುತ್ತಿದ್ದಾರೆ. ಹಾಗಾಗಿ ಪದ ಮತ್ತು ಗುಣಗಳ ಎರಡೂ ರೀತಿಯಲ್ಲಿ ಇಂದಿನ WHEATನಲ್ಲಿ HEAT ಇದೆ, RICEನಲ್ಲಿ ICE ಇದೆ! ದೇಶದಲ್ಲಿ ಸರ್ವವ್ಯಾಪಿಯಾಗಿ ಹರಡಿದ್ದ ಅಕ್ಕಿಯನ್ನು ಗೋಧಿಯನ್ನೇ ಪ್ರಧಾನವಾಗಿ ಅವಲಂಬಿಸಿರುವ ಉತ್ತರಭಾರತೀಯರು ಇಂದೂ ಮಿತಪ್ರಮಾಣದಲ್ಲಿ ಬಳಸುತ್ತಿದ್ದಾ ರೆಂಬುದೂ ವಾಸ್ತವ! ಪ್ರಾಚೀನ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿಧದ ಭತ್ತದ ತಳಿಗಳಿದ್ದವು. ಅವುಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ತಳಿಯ ಭತ್ತಗಳನ್ನು ಇಂದಿಗೂ ದೇಶದಾದ್ಯಂತ ಬೆಳೆಯಲಾಗುತ್ತಿದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಿರುವುದು, ಅದರಲ್ಲೂ ಉತ್ತರ ಭಾರತದಲ್ಲಿ ಭತ್ತದ ಬೆಳೆ ಸಮೃದ್ಧವಾಗಿರುವುದು ಭಾರತೀಯರೆಲ್ಲ ಅಕ್ಕಿಯನ್ನೇ ಅವಲಂಬಿಸಿದ್ದರು ಎನ್ನುವುದನ್ನು ಸೂಚಿಸುತ್ತದೆ. ನಮ್ಮ ಪರಂಪರೆಯ, ನಮ್ಮದೇ ಸಂಪ್ರದಾಯದ ಆಹಾರವೇ ಶರೀರಕ್ಕೆ ಶ್ರೇಷ್ಠ, ದೇಹಕ್ಕೆ ಸೂಕ್ತ ಎಂಬುದಿಲ್ಲಿ ಸ್ಮರಣೀಯ.
(ಪ್ರತಿಕ್ರಿಯಿಸಿ: vvsudina@gmail.com)