ಒಂದು ಕಪ್ ಚಹಾದಲ್ಲಿದೆ ಆರೋಗ್ಯ…

tea
Published on

ಒಂದು ಕಪ್ ಟೀ ಸೇವನೆಯ ನಂತರ ಉಲ್ಲಸಿತರಾಗಿ ಹೊಸ ಹುಮ್ಮಸ್ಸಿನಿಂದ ಕೆಲಸದಲ್ಲಿ ತೊಡಗುವವರನ್ನು ನಾವು ನೋಡಿದ್ದೇವೆ. ಹಾಗಾದರೆ ಅಂತಹ ಕರಾಮತ್ತು ಇದರಲ್ಲೇನಿದೆ? ವೈದ್ಯ ಜಗತ್ತು ಇದರ ಬಗ್ಗೆ ಏನು ಹೇಳುತ್ತದೆ? ಯಾವ ಟೀ ಬಳಕೆ ಒಳ್ಳೆಯದು? ಅದನ್ನು ಮಾಡುವುದು ಹೇಗೆ? ಎಷ್ಟು ಬಗೆಯ ಟೀಗಳು ನಮ್ಮ ಕಣ್ಣ ಮುಂದಿವೆ? ಇದರಿಂದ ನಮಗಾಗುವ ಲಾಭಗಳೇನು? ಅದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.

ಇಲ್ಲಿ ನೀವೇ ಮನೆಯಲ್ಲಿ ಸ್ವತಃ ಮಾಡಬಹುದಾದಂಥ ಟೀ. ಅದರ ಪ್ರಯೋಜನವನ್ನು ಕೊಟ್ಟಿದ್ದೇವೆ. ರಿಲ್ಯಾಕ್ಸ್ ಆಗುವುದಕ್ಕೆ ಟೀ ಅಂತ ಒಂದಿದ್ದರೆ ಸಾಕು ಎನ್ನುತ್ತೀರಾ? ಚಾಯ್್ಸ ಈಸ್ ಯುವರ್ಸ್. ನೀವು ಉಪಯೋಗಿಸಿ, ಇತರರಿಗೂ ತಿಳಿಸಿ, ಆರೋಗ್ಯಯುತ ಜೀವನ ಸಾಗಿಸಿ.

ಮಸಾಲಾ ಟೀ: ಬೇಕಾಗುವ ಪದಾರ್ಥಗಳು: 1/4 ಕಪ್ ನೀರು, 1/2 ಕಪ್ ಹಾಲು, 1 ಟೀ ಸ್ಪೂನ್ ಸಾವಯವ ಸಕ್ಕರೆ, 1 ಲವಂಗ, ದಾಲ್ಚಿನ್ನಿ ಚೂರು, 1 ಚಿಕ್ಕ ಏಲಕ್ಕಿ, 1-2 ಕರಿಕಾಳು ಮೆಣಸು, 1/2 ಟೀ ಸ್ಪೂನ್ ಟೀ ಸೊಪ್ಪು ಅಥವಾ 1 ಟೀ ಬ್ಯಾಗ್.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು, ಹಾಲು ಮಿಶ್ರಣ ಮಾಡಿ ಕುದಿಸಿ. ನಂತರ ಸಕ್ಕರೆ, ಲವಂಗ, ದಾಲ್ಚಿನ್ನಿ ಚೂರು, ಏಲಕ್ಕಿ, ಕರಿಕಾಳು ಮೆಣಸು ಹಾಕಿ ಮತ್ತೆ ಹತ್ತು ನಿಮಿಷಗಳ ಕಾಲ ಕುದಿಸಿ. ಬಳಿಕ ಅದರಲ್ಲಿ ಟೀ ಸೊಪ್ಪು ಇಲ್ಲವೇ ಟೀ ಬ್ಯಾಗ್ ಇಡಿ. ಐದು ನಿಮಿಷಗಳ ಬಳಿಕ ಶೋಧಿಸಿ ಸೇವಿಸಿ. ಸಕ್ಕರೆ ಮತ್ತು ಹಾಲು ಮತ್ತಷ್ಟು ಬೇಕೆನಿಸಿದರೆ ಬಳಸಿ.

ಪ್ರಯೋಜನ: ಚಳಿ-ಜ್ವರ ಬರದಂತೆ ಕಾಪಾಡುತ್ತದೆ. ಆಲಸಿಕೆ, ನೀರಸತೆ ದೂರ ಮಾಡುತ್ತದೆ. ದೇಹದ ತೂಕ ದೂರ ಮಾಡಿ ಮಲಬದ್ಧತೆಯಿಂದ ಕಾಪಾಡುತ್ತದೆ.

ಗಾರ್ಲಿಕ್ ಟೀ: ಬೇಕಾಗುವ ಪದಾರ್ಥಗಳು: ಒಂದು ಕಪ್ ನೀರು, ಚಿಕ್ಕ ಬೆಳ್ಳುಳ್ಳಿಯಲ್ಲಿ ಅರ್ಧ ಭಾಗ, ಅರ್ಧ ಕಪ್ ಜೇನು, ಅರ್ಧ ಕಪ್ ತಾಜಾ ನಿಂಬೆರಸ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಮತ್ತು ಚಿಕ್ಕ ಚೂರುಗಳನ್ನಾಗಿ ಮಾಡಿಕೊಂಡ ಬೆಳುಳ್ಳಿ ಹಾಕಿ ಕುದಿಸಿ. ಆರಿದ ನಂತರ ಜೇನು, ನಿಂಬೆರಸ, ಬೆರೆಸಿ ಕುಡಿಯಿರಿ. ಪ್ರಯೋಜನ: ದಿನಕ್ಕೆ 3 ಬಾರಿ ಕುಡಿಯಿರಿ. ಚಳಿ, ನೆಗಡಿ ದೂರ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಎನ್ನುವ ಔಷಧ ಅಂಶಗಳ ಜೊತೆ ಪೋಷಕಾಂಶಗಳಿರುವುದರಿಂದ ಇದನ್ನು ಸೇವಿಸಿದರೆ ಜ್ವರ, ಕೆಮ್ಮು ಬರದಂತೆ ಕಾಪಾಡುತ್ತದೆ.

ಜಿಂಜರ್ ಹನಿ ಟೀ: ಬೇಕಾಗುವ ಪದಾರ್ಥಗಳು: 1 ಅಂಗುಲದಷ್ಟು ಶುಂಠಿ ಚೂರು, ನಿಂಬೆ ಹಣ್ಣು, 1 ಕಪ್ ನೀರು, 1/2 ಕಪ್ ಜೇನು, 1 ಕಪ್ ನಿಂಬೆ ರಸ.

ಮಾಡುವ ವಿಧಾನ: ಒಂದು ಚಿಕ್ಕ ಪಾತ್ರೆಯಲ್ಲಿ ನೀರು, ಚಿಕ್ಕ ಚೂರುಗಳನ್ನಾಗಿ ಮಾಡಿಕೊಂಡ ಶುಂಠಿ, ನಿಂಬೆ ಸಿಪ್ಪೆ, ಜೇನು ಬೆರೆಸಿ ಕುದಿಸಿ. ನಂತರ ಕೆಳಗಿಳಿಸಿ ನಿಂಬೆರಸ ಬೆರೆಸಿ. ಹರ್ಬಲ್ ಟೀ ಬ್ಯಾಗ್ ಹಾಕಿ ಸ್ವಲ್ಪ ಸಮಯ ತಿರುಗಿಸಿ. ಬ್ಯಾಗ್ ತೆಗೆದು ಜಿಂಜರ್ ಹನಿ ಬೆರೆಸಿ ಕುಡಿಯಬೇಕು.

ಪ್ರಯೋಜನ: ಸೋಮಾರಿತನ ದೂರವಾಗುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶ್ವಾಸಕೋಶದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಬ್ಲ್ಯಾಕ್​ ಟೀ: ಬೇಕಾಗುವ ಪದಾರ್ಥಗಳು: 1 ಕಪ್ ನೀರು, 1 ಕಪ್ ಟೀ ಎಲೆ.

ಮಾಡುವ ವಿಧಾನ: ಟೀ ಪಾಟ್ ಬಿಸಿ ಮಾಡಿ ಅದರಲ್ಲಿ 1/4 ಕಪ್ ಬಿಸಿ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಟೀ ಎಲೆ ಹಾಕಿ 5 ನಿಮಿಷ ಕಾಲ ಮುಚ್ಚಿಡಿ. ಬಳಿಕ ಸರ್ವ್ ಮಾಡಿ. ಪ್ರಯೋಜನ: ಅತಿಸಾರ ನಿವಾರಿಸುತ್ತದೆ. ಗ್ಯಾಸ್ ದೂರ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net