ಆತ್ಮಾನಂದದಲ್ಲಿ ಸಂತೃಪ್ತಿ ಕಾಣುವವನೇ ಸ್ಥಿತಪ್ರಜ್ಞ

Column F
Published on
ಭಗವದ್ಗೀತೆಯು ಎಲ್ಲ ಉಪನಿಷತ್ತುಗಳ ಸಾರವಾಗಿದೆ. ಗೀತೆಯ ಪ್ರಾರ್ಥನಾಶ್ಲೋಕಗಳಲ್ಲಿ ಹಸುವಿನ ಉದಾಹರಣೆಯೊಂದಿಗೆ, ಉಪನಿಷತ್ತುಗಳ ಸಾರವೇ ಭಗವದ್ಗೀತೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಉಪನಿಷತ್ತು ಎಂಬ ಹಸುವಿನಿಂದ ಗೋಪಾಲಕನಾದ ಕೃಷ್ಣನು, ಹಾಲಿನಂತಹ ಉಪನಿಷತ್ತುಗಳ ಸಾರವನ್ನು ಕರುವಿನ ಸ್ಥಾನದಲ್ಲಿರುವ ಅರ್ಜುನನಿಗೆ ಕುಡಿಸಿದ್ದಾನೆ.

ಆಧ್ಯಾತ್ಮಿಕತೆಯ ಸಾರವೆಂದರೆ ಬಹುಶಃ ಎಲ್ಲಾ ಮತ-ಧರ್ಮಗಳಲ್ಲಿಯೂ ಆಶಾರಹಿತ ಮನಸ್ಥಿತಿಯ ಗಳಿಕೆಯೆಂದು ಬೋಧಿಸಲಾಗಿದೆ. ‘ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾ. ನಮ್ಮ ಆಸೆಗಳು ಎಂದಿಗೂ ಅಂತ್ಯವಾಗುವುದಿಲ್ಲ; ಬದಲಾಗಿ ಅವುಗಳು ನಮ್ಮನ್ನೇ ಜೀರ್ಣಿಸಿಕೊಂಡು ಅಂತ್ಯಗೊಳಿಸುತ್ತವೆ’! ಎಂದು ಭರ್ತೃಹರಿಯು ತನ್ನ ‘ವೈರಾಗ್ಯಶತಕ’ದಲ್ಲಿ ಹೇಳಿದ್ದಾನೆ. ಮುಂಡಕೋಪನಿಷತ್ತಿನಲ್ಲಿಯೂ ‘ಕಾಮಭಿರ್ಜಾಯತೇ ತತ್ರ ತತ್ರ. ಆಸೆಗಳಿಂದಾಗಿಯೇ ನಾವು ಪುನಃ ಪುನಃ ಜನ್ಮವನ್ನು ಪಡೆಯುತ್ತೇವೆ’ ಎಂದು ಹೇಳಲಾಗಿದೆ. ಈ ಜನನ-ಮರಣಗಳ ಚಕ್ರದಿಂದ ತಪ್ಪಿಸಿಕೊಂಡು ಮೋಕ್ಷವನ್ನು ಪಡೆಯಲು ಹಲವಾರು ಸಾಧಕರು ಎಲ್ಲಾ ಪ್ರಾಪಂಚಿಕ ಚಟುವಟಿಕೆಗಳನ್ನು ತ್ಯಜಿಸಿ ಸಂನ್ಯಾಸವನ್ನು ಸ್ವೀಕರಿಸುತ್ತಾರೆ. ಇದರಿಂದ ಉಗಮವಾಗುವ ಪ್ರಶ್ನೆಯೆಂದರೆ, ಮೋಕ್ಷವನ್ನು ಪಡೆಯಲು ಸಂನ್ಯಾಸವನ್ನು ಸ್ವಿಕರಿಸುವುದೊಂದೇ ಮಾರ್ಗವಾದರೆ, ಈ ಸಮಾಜವನ್ನು ನಡೆಸುವವರಾರು ಹಾಗೂ ಸಾಮಾನ್ಯ ಜನರು ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲವೇ? ಇದೊಂದು ಚಮತ್ಕಾರಿಕ ಪ್ರಶ್ನೆಯಾದರೂ, ಉತ್ತರವಾಗಿ ಭಗವದ್ಗೀತೆಯು ಸಮಾಜದ ಚಟುವಟಿಕೆಗಳಲ್ಲಿ ಇದ್ದರೂ ಇಲ್ಲದಂತೆ ಇರುವುದು ಹೇಗೆಂದು ತಿಳಿಸುವುದರ ಮೂಲಕ ಮೋಕ್ಷವನ್ನು ಪಡೆಯುವ ದಾರಿಯನ್ನು ತೋರುತ್ತದೆ.

ಸಾಂಖ್ಯವೆಂದರೆ, ಜೀವನದಲ್ಲಿ ಅಥವಾ ಆಧ್ಯಾತ್ಮಿಕ ಸಾಧನೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ರ್ತಾಕ ವಿಶ್ಲೇಷಣೆಯ ಆಧಾರದಲ್ಲಿ ಪರಿಹರಿಸಿಕೊಳ್ಳುವ ಜ್ಞಾನವಾಗಿದೆ (ಛಛಿಛ್ಠ್ಚಜಿಡಛಿ kಟಡ್ಝಿಛಿಛಜಛಿ). ಎದುರಾಗುವ ವಾಸ್ತವಿಕ ಸನ್ನಿವೇಶಗಳನ್ನು ಕೂಲಂಕಷವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ರ್ತಾಕವಾಗಿ ವಿಶ್ಲೇಷಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಈ ಜ್ಞಾನವು ಸಹಾಯ ಮಾಡುತ್ತದೆ. ಯುದ್ಧರಂಗದ ಸನ್ನಿವೇಶದಲ್ಲಿ ಪರಮಾಚಾರ್ಯನಾದ ಶ್ರೀ ಕೃಷ್ಣನು, ಅರ್ಜುನನಿಗೆ ಈ ಜ್ಞಾನವನ್ನು ಉಪದೇಶಿಸಿ ಅವನ ದುರ್ಬಲ ಮನಸ್ಥಿತಿಯನ್ನು ಹೋಗಲಾಡಿಸುತ್ತಾನೆ. ತನ್ನವರೆಂಬ ಮೋಹದಿಂದ ಯುದ್ಧದಿಂದ ವಿಮುಖನಾದ ಅರ್ಜುನನಿಗೆ, ಅವನು ಯಾವ ಕಾರಣಕ್ಕಾಗಿ ಯುದ್ಧ ಮಾಡಲೇಬೇಕೆಂಬುದನ್ನು ರ್ತಾಕವಾಗಿ ವಿವರಿಸಿ ಹೇಳುತ್ತಾನೆ.

ವಿಷಾದದಿಂದ ತೊಳಲುತ್ತಿದ್ದ ಅರ್ಜುನನ ದುರ್ಬಲ ಮನಸ್ಸನ್ನು ಸ್ಥಿರಗೊಳಿಸಿ, ಆತನೊಬ್ಬ ಅದ್ವಿತೀಯ ವೀರನೆಂಬುದನ್ನು ನೆನಪಿಸುತ್ತಾ, ಶ್ರೀ ಕೃಷ್ಣನು, ಅವನನ್ನು ‘ಪರಂತಪ’ (ಶತ್ರುನಾಶಕ)ನೆಂದು ಕರೆಯುತ್ತಾನೆ! ‘ಕ್ಲೈಬ್ಯಂ ಮಾ ಸ್ಮಗಮಃ’ - ಹೇಡಿಯಂತೆ ವರ್ತಿಸುವುದು ನಿನಗೆ ಶೋಭಾಯಮಾನವಲ್ಲ ಎಂದು ಎಚ್ಚರಿಸಿ ಅವನಲ್ಲಿ ತಾತ್ಕಾಲಿಕವಾಗಿ ಮರೆಯಾದ ಧೈರ್ಯವನ್ನು ಬಡಿದೆಬ್ಬಿಸುತ್ತಾನೆ. ಇದರಿಂದ ಅರ್ಜುನನು ತನ್ನ ಭಯ-ವಿಷಾದಗಳನ್ನು ಬದಿಗಿಟ್ಟು, ಕೃಷ್ಣನ ಮುಂದೆ ಪ್ರಥಮ ಬಾರಿಗೆ, ಗುರುವಿನ ಎದುರಿನಲ್ಲಿ ಶಿಷ್ಯನಂತೆ ತನ್ನನ್ನು ತಾನು ಸಮರ್ಪಿಸಿಕೊಂಡು, ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಾನೆ. ಅರ್ಜುನನ ಪ್ರಾರ್ಥನೆಗೆ ಓಗೊಟ್ಟು ಶ್ರೀ ಕೃಷ್ಣನು ಭಗವದ್ಗೀತೆಯನ್ನು ಬೋಧಿಸುತ್ತಾನೆ.

ಶ್ರೀ ಕೃಷ್ಣನು ಪರಮೋಚ್ಛ ಸತ್ಯವಾದ ‘ಆತ್ಮ’ ತತ್ವದ ವಿವರಣೆಯೊಂದಿಗೆ ಬೋಧನೆಯನ್ನು ಪ್ರಾರಂಭಿಸುತ್ತಾನೆ. ಆತ್ಮಕ್ಕೆ ಸಾವಿಲ್ಲ; ಸಾವು ದೇಹಕ್ಕೆ ಮಾತ್ರ. ಸುಲಭವಾಗಿ ಅರ್ಥವಾಗುವ ಉಪಮಾನವನ್ನು ಕೊಡುತ್ತಾ,

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ / ನವಾನಿ ಗೃಹ್ಣಾತಿ ನರೋಪರಾಣಿ |

ತಥಾ ಶರೀರಾಣಿ ವಿಹಾಯ ಜೀರ್ಣಾ-/ ನ್ಯನ್ಯಾನಿ ಸಂಯಾತಿ ನವಾನಿ ದೇಹೀ || 2.22 ||

‘ದೇಹವು ಒಂದು ವಸ್ತ›ವಿದ್ದಂತೆ, ಹೇಗೆ ನಾವು ಹರಿದುಹೋದ ವಸ್ತ›ಗಳನ್ನು ತ್ಯಜಿಸಿ, ಹೊಸ ವಸ್ತ›ಗಳನ್ನು ಧರಿಸುತ್ತೇವೆಯೋ, ಹಾಗೆಯೇ ಆತ್ಮವು ಹಳೆಯದಾದ ಈ ದೇಹವನ್ನು ತೊರೆದು ಹೊಸ ದೇಹವನ್ನು ಧಾರಣೆ ಮಾಡುತ್ತದೆ. ಯಾರು ಯಾರನ್ನೂ ನಿಜವಾಗಿ ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ನೀನು ಯುದ್ಧ ಮಾಡಲು ಹಿಂಜರಿಯದೆ ನಿನ್ನ ಧರ್ಮಬದ್ಧ ಕರ್ತವ್ಯವನ್ನು ಮಾಡು’ ಎಂದು ಪ್ರೇರೇಪಿಸುತ್ತಾನೆ. ಈ ವಿವರಣೆಯಿಂದ ತೃಪ್ತನಾಗದ ಅರ್ಜುನನನ್ನು ಕುರಿತು, ಕೃಷ್ಣನು ಮುಂದುವರಿದು,

ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ | ತಸ್ಮಾದಪರಿಹಾರ್ಯುರ್ಥೆ ನ ತ್ವಂ ಶೋಚಿತುಮರ್ಹಸಿ || 2.27 ||

‘ಹುಟ್ಟಿದ ಪ್ರತಿಯೊಂದು ಜೀವಿಯೂ ಸಹ ಮರಣವನ್ನು ಹೊಂದಲೇಬೇಕು ಹಾಗೂ ಮರಣಿಸಿದ ಪ್ರತಿ ಜೀವಿಯೂ ಸಹ ಮರಳಿ ಜನನವನ್ನು ಪಡೆಯಲೇಬೇಕು. ಇದು ಜನನ-ಮರಣ ಚಕ್ರದ ನಿಯಮವಾಗಿದೆ. ಆದ್ದರಿಂದ ಅನಿವಾರ್ಯವಾದ ಈ ಯುದ್ಧದಲ್ಲಿ ಮರಣಿಸುವ ಬಂಧು-ಬಾಂಧವರನ್ನು ಕುರಿತು ಶೋಕಿಸುವುದು ಸರಿಯಲ್ಲ’ ಎಂದು ಬೋಧಿಸುತ್ತಾನೆ.

ಇದರಿಂದಲೂ ಸಂತೃಪ್ತನಾಗದ ಅರ್ಜುನನಿಗೆ ಕೃಷ್ಣನು, ಅವನು ಒಬ್ಬ ಕ್ಷತ್ರಿಯನೆಂಬುದನ್ನು ನೆನಪಿಸಿ, ಧರ್ಮರಕ್ಷಣೆಗಾಗಿ ಯುದ್ಧ ಮಾಡುವುದು ಅವನ ಕರ್ತವ್ಯವಾಗಿದೆಯೆಂದು ಹುರಿದುಂಬಿಸಿ,

ಅಕೀರ್ತಿಂ ಚಾಪಿ ಭೂತಾನಿ/ ಕಥಯಿಷ್ಯಂತಿ ತೇವ್ಯಯಾಂ |

ಸಂಭಾವಿತಸ್ಯ ಚಾಕೀರ್ತಿ-/ರ್ಮರಣಾದತಿರಿಚ್ಯತೇ || 2.34 ||

‘ನೀನು ಈಗ ಯುದ್ಧದಿಂದ ಹಿಂಜರಿದರೆ, ಅಪಕೀರ್ತಿಗೆ ತುತ್ತಾಗುತ್ತೀಯ; ಜನರು ನಿನ್ನ ಅಪಯಶಸ್ಸನ್ನು ಎಂದೆಂದಿಗೂ ಅಣಕ ಮಾಡುತ್ತಾರೆ. ಗೌರವಸ್ಥನಿಗೆ ಅಪಕೀರ್ತಿಯು ಮರಣಕ್ಕಿಂತ ಹೆಚ್ಚು’ ಎಂದು ಎಚ್ಚರಿಸುತ್ತಾನೆ.

ಹೀಗೆ ಶ್ರೀ ಕೃಷ್ಣನು, ಅನೇಕ ರ್ತಾಕ ಕಾರಣಗಳನ್ನು ನೀಡಿ, ಯುದ್ಧವಿಮುಖನಾದ ಅರ್ಜುನನನ್ನು ಯುದ್ಧ ಮಾಡಲು ಪ್ರೇರೇಪಿಸಿಸುತ್ತಾನೆ. ಇಷ್ಟಕ್ಕೇ ಕೃಷ್ಣನು ತೃಪ್ತಿ ತೃಪ್ತಿಪಟ್ಟುಕೊಳ್ಳಲಿಲ್ಲ. ಇನ್ನೂ ಮುಂದುವರಿದು,

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |

ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ || 2.38 ||

‘ಸುಖ-ದುಃಖ, ಲಾಭ-ನಷ್ಟ, ಜಯ- ಅಪಜಯ ಗಳನ್ನು ಸಮತ್ವಭಾವದಿಂದ ಸ್ವೀಕರಿಸಿ, ಅನಂತರ ನೀನು ಯುದ್ಧಕ್ಕೆ ಸಿದ್ಧನಾಗು. ಆಗ ನಿನಗೆ ಯಾವ ಪಾಪವೂ ಅಂಟುವುದಿಲ್ಲ’ ಎಂದು ಸಂತೈಸುತ್ತಾನೆ.

ಸತ್ಯಬೋಧಕನಾದ ಪರಮಾಚಾರ್ಯ ಕೃಷ್ಣನು ಅತ್ಯಂತ ಕರುಣೆಯಿಂದ ತನ್ನ ಪ್ರಿಯಶಿಷ್ಯನಾದ ಅರ್ಜುನನಿಗೆ ಇನ್ನೂ ಹೆಚ್ಚಿನ ಧೈರ್ಯವನ್ನು ತುಂಬಲು,

ಏಷಾ ತೇಭಿಹಿತಾ ಸಾಂಖ್ಯೇ/ ಬುದ್ಧಿರ್ಯೋಗೇ ತ್ವಿಮಾಂ ಶೃಣು | ಬುದ್ಧಾ್ಯಯುಕ್ತೋ ಯಯಾ ಪಾರ್ಥ/ ಕರ್ಮಬಂಧಂ ಪ್ರಹಾಸ್ಯಸಿ || 2.39 ||

‘ಸುಲಭವಾಗಿ ಆತ್ಮಜ್ಞಾನವನ್ನು ಪಡೆಯಲು ನೆರವಾಗುವ ಬುದ್ಧಿಯೋಗವನ್ನು ನಿನಗೆ ನೀಡುತ್ತಿದ್ದೇನೆ. ಇದರಿಂದ ನೀನು ಕರ್ಮಬಂಧನದಿಂದ ಮುಕ್ತನಾಗುತ್ತೀಯ’ ಎಂದು ಅಭಯ ನೀಡುತ್ತಾನೆ. ಮುಂದುವರಿದು ತನ್ನ ಪ್ರಿಯಮಿತ್ರನಿಗೆ ಕರ್ಮರಹಸ್ಯವನ್ನು ಅರುಹಲು,

ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ |

ಮಾ ಕರ್ಮಫಲಹೇತುರ್ಭರ್ವ ತೇ ಸಂಗೋಸ್ತ್ವಕರ್ಮಣಿ || 2.47 ||

‘ಕರ್ಮ ಮಾಡಲು ಮಾತ್ರ ನಿನಗೆ ಅಧಿಕಾರ. ಅದರ ಫಲದಲ್ಲಿ ಎಂದಿಗೂ ಆಸಕ್ತನಾಗಬೇಡ. ಕರ್ಮಫಲದ ಆಸೆಯನ್ನು ತ್ಯಜಿಸಬೇಕೇ ಹೊರತು, ಎಂದಿಗೂ ಕರ್ಮವನ್ನು ತ್ಯಜಿಸಬಾರದು’ ಎಂದು ಉಪದೇಶಿಸುತ್ತಾನೆ.

ಕರ್ಮಫಲದಲ್ಲಿ ಆಸಕ್ತಿಯಿಲ್ಲದೆ ಮಾಡುವ ಕರ್ಮವೇ ಮಾನವನನ್ನು ಮಾಧವನಲ್ಲಿಗೆ ಕರೆದುಕೊಂಡು ಹೋಗುವ ಯೋಗವಾಗುತ್ತದೆಯೆಂದು ತಿಳಿಸುತ್ತಾ ಕೃಷ್ಣನು,

ಯೋಗಸ್ಥಃ ಕುರು ಕರ್ವಣಿ ಸಂಗಂ ತ್ಯಕ್ತಾ್ವ ಧನಂಜಯ | ಸಿದ್ಧ್ಯಸಿದ್ಧೊ್ಯೕ: ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ || 2.48 ||

‘ಕರ್ಮದ ಸಿದ್ಧಿ-ಅಸಿದ್ಧಿಗಳಲ್ಲಿ ಸಮಭಾವ ತಳೆದು ಕರ್ಮವನ್ನು ಆಚರಿಸಿದಾಗ, ಯೋಗಸಿದ್ಧಿಯಾಗುತ್ತದೆ. ಇಂತಹ ಸಮತ್ವವೇ ಯೋಗದ ಗುರಿಯಾದ ಪರಮಾತ್ಮ ದರ್ಶನವನ್ನು ಮಾಡಿಸುತ್ತದೆ’ ಎಂದು ತಿಳಿಸುತ್ತಾನೆ.

ಇಂತಹ ಸಮತ್ವಲಾಭವೇ ಸಾಂಖ್ಯಯೋಗದ ಸಾರ ಹಾಗೂ ಗುರಿ. ಸಮತ್ವದ ಸಿದ್ಧಿಯಾದಾಗ ಮಾನವನು ಪರಮಯೋಗಿಯಾಗಿ ಸ್ಥಿತಪ್ರಜ್ಞನೆಂದೆನಿಸಿಕೊಳ್ಳುತ್ತಾನೆ. ತನ್ನ ಎದುರಿನಲ್ಲಿಯೇ ಇದ್ದ ಇಂತಹ ಸ್ಥಿತಪ್ರಜ್ಞನಾದ ಶ್ರೀ ಕೃಷ್ಣನಿಂದಲೇ ಉಪದೇಶವನ್ನು ಪಡೆದ ಅರ್ಜುನನು, ಸ್ಥಿತಪ್ರಜ್ಞನಾದ ವ್ಯಕ್ತಿಯು ಜಗತ್ತಿನಲ್ಲಿ ಹೇಗೆ ನಡೆದುಕೊಳ್ಳುತ್ತಾನೆ? ಎಂದು ಕೇಳುವುದು ಆಶ್ಚರ್ಯವಲ್ಲವೇ!

ಕರುಣಾಮಯನಾದ ಶ್ರೀ ಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ವಿವರಿಸುತ್ತಾ,

ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |

ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ || 2.55 ||

ಸ್ಥಿತಪ್ರಜ್ಞನು ತನ್ನ ಹೃದಯದಲ್ಲಿ ಯಾವುದೇ ಆಸೆಗಳಿಗೆ ಸ್ಥಾನ ಕೊಡದೆ, ಸದಾ ಅಂತರಂಗದ ಆತ್ಮಾನಂದದಲ್ಲಿಯೇ ಸಂತೃಪ್ತನಾಗಿರುತ್ತಾನೆ. ಹೀಗಾಗಿ ಆಸೆಗಳಿಂದ ಉದ್ಭವವಾಗುವ ಯಾವುದೇ ಮೋಹ, ಭಯ, ಕ್ರೋಧಾದಿಗಳು ಅವನನ್ನು ಬಾಧಿಸುವುದಿಲ್ಲ; ಜೀವನದ ಏರುಪೇರುಗಳಿಂದ ಅವನು ವಿಚಲಿತನಾಗುವುದಿಲ್ಲ. ಇಂತಹ ಅಂತರಂಗದ ಸ್ಥಿತಿಯು ಸರ್ವ ಆಧ್ಯಾತ್ಮಿಕ ಸಾಧನೆಗಳ ಚರಮ ಗುರಿ ಎಂದು ಅರುಹುತ್ತಾನೆ.

ಅಜ್ಞಾನಿಯು ವಿವೇಕಶೂನ್ಯನಾಗಿ ಲೌಕಿಕ ಸುಖ-ಭೋಗಗಳ ಬೆನ್ನುಹತ್ತಿ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ. ಮನಸ್ಸು ತನ್ನ ಮುಂದಿಟ್ಟ ವಿಷಯಭೋಗದ ಕುರಿತು ಧ್ಯಾನಿಸುತ್ತಾ, ಅದರ ಬಗ್ಗೆ ತೀವ್ರ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಆದರೆ, ಆ ಆಸೆಯು ಈಡೇರದಿದ್ದರೆ, ಕ್ರೋಧಾವಿಷ್ಟನಾಗಿ ವಿವೇಕವನ್ನು ಮರೆತು ಬುದ್ಧಿಯನ್ನು ಕಳೆದುಕೊಳ್ಳುತ್ತಾನೆ. ಅದರಿಂದ ಅವನ ಸರ್ವನಾಶವಾಗುತ್ತದೆ.

ಜ್ಞಾನಿಯು ಪರಮೋನ್ನತ ಸತ್ಯವನ್ನು ಅರಿತು, ಸದಾ ಅಂತರಂಗದ ಆನಂದದಲ್ಲಿಯೇ ತಲ್ಲೀನನಾಗಿದ್ದು, ಮನಸ್ಸು ಹಾಗೂ ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ. ಪ್ರಾಪಂಚಿಕ ಸುಖ-ಭೋಗಗಳ ಆಸೆ ಕೂಡಾ ಅವನಲ್ಲಿ ಉಂಟಾಗುವುದಿಲ್ಲ. ಇತರರು ಅಜ್ಞಾನದ ನಿದ್ರೆಯಲ್ಲಿ ಮುಳುಗಿದ್ದರೂ, ಸ್ಥಿತಪ್ರಜ್ಞನು ಆಧ್ಯಾತ್ಮಿಕ ಪ್ರಕಾಶದಲ್ಲಿ ಜಾಗೃತನಾಗಿರುತ್ತಾನೆ. ಎಷ್ಟೋ ನದಿಗಳು ತನ್ನನ್ನು ಬಂದು ಸೇರಿದರೂ, ವಿಚಲಿತವಾಗದೇ ಪ್ರಶಾಂತವಾಗಿರುವ ಸಾಗರದಂತೆ, ಅವನು ಜೀವನದ ಯಾವುದೇ ಸನ್ನಿವೇಶಗಳಿಂದ ವಿಚಲಿತನಾಗದೆ ಸದಾ ಪರಮ ಶಾಂತಿಯಲ್ಲಿ ನೆಲೆಸಿರುತ್ತಾನೆ.

ತಾವು ಆಧ್ಯಾತ್ಮಿಕ ಪಥದಲ್ಲಿ ಎಷ್ಟರಮಟ್ಟಿಗೆ ಪ್ರಗತಿ ಹೊಂದಿದ್ದೇವೆಂಬುದನ್ನು ಹೇಗೆ ತಿಳಿಯಬಹುದೆಂದು ಹಲವರು ನನ್ನನ್ನು ಕೇಳುತ್ತಿರುತ್ತಾರೆ. ಅವರಿಗೆ ನಾನು ಕೊಡುವ ಉತ್ತರವೊಂದೇ. ಯಾವುದೇ ಸನ್ನಿವೇಶದ ಪ್ರಭಾವಕ್ಕೊಳಗಾಗಿ ನಾವು ಸಮಚಿತ್ತತೆಯನ್ನು ಕಳೆದುಕೊಂಡಾಗ, ಎಷ್ಟು ಶೀಘ್ರವಾಗಿ ಪುನಃ ಸಮಸ್ಥಿತಿಗೆ ಬರುತ್ತೇವೆಯೋ, ಅಷ್ಟು ಆಧ್ಯಾತ್ಮಿಕ ಪ್ರಗತಿಯು ನಮ್ಮದಾಗಿರುತ್ತದೆ. ಇದುವೇ ನಮ್ಮ ಆಧ್ಯಾತ್ಮಿಕ ಪ್ರಗತಿಯ ಅಳತೆಗೋಲು. ತನ್ನ ಕರ್ತವ್ಯಗಳನ್ನು ತಾನು ನಿರ್ವಹಿಸುತ್ತಿದ್ದಾಗಲೂ, ಎಂತಹ ಸನ್ನಿವೇಶವು ಎದುರಾದರೂ, ಸಮಚಿತ್ತವನ್ನು ಎಳ್ಳಷ್ಟೂ ಕಳೆದುಕೊಳ್ಳದ ವ್ಯಕ್ತಿಯನ್ನು ನಾವು ಜ್ಞಾನಿಯೆಂದು ಕರೆಯಬಹುದು. ಇದುವೇ ಸಾಂಖ್ಯಯೋಗದ ಸಾರಸರ್ವಸ್ವವಾಗಿರುತ್ತದೆ.

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net