ನಗೆಯ ರಕ್ಷಾಕವಚ ಧರಿಸಿ ಖುಷಿಯಾಗಿರಿ; ವಿಜಯವಾಣಿ ಸಂಡೆ ಸೆಲೆಬ್ರಿಟಿ ಎಂ.ಎಸ್​.ನರಸಿಂಹಮೂರ್ತಿ

Nagu
Published on
ಒಂದೇ ರೈಲಿನಲ್ಲಿ ಹೊರಟವರು ಒಂದೇ ಸಮಯಕ್ಕೆ ಗುರಿ ತಲುಪುತ್ತಾರೆ. ಆದರೆ, ಒಂದೇ ಸಂಸ್ಥೆಯಲ್ಲಿ ಓದಿದವರು ಒಂದೇ ರೀತಿ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಕಾರಣ, ವ್ಯಕ್ತಿಯಿಂದ ವ್ಯಕ್ತಿಗೆ ಸ್ವಭಾವದಲ್ಲಿ ಬದಲಾವಣೆ ಇರುತ್ತದೆ. ಮಾತು, ನಡತೆ, ಧೈರ್ಯದ ಜೊತೆಗೆ ನಗೆಯೂ ಇಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕೆಲವರನ್ನು ನೋಡಿದಾಗ ಮಾತಾಡಿಸಬೇಕು ಅಂತ ಮನಸ್ಸು ಹಾತೊರೆಯುತ್ತೆ. ಇನ್ನು ಕೆಲವರು ಎದುರಾದಾಗ ಯಾಕಾಗಿ ನಾನು ಇಲ್ಲಿಗೆ ಬಂದೆನೋ ಅಂತ ಬೇಜಾರಾಗುತ್ತೆ. ವಾಸ್ತವದಲ್ಲಿ ಅವರು ನಮಗೆ ಯಾವುದೇ ಬಗೆಯಲ್ಲಿ ತೊಂದರೆ ಕೊಟ್ಟಿರೋಲ್ಲ. ಆದ್ರೂ ವ್ಯಕ್ತಿಯ ಮುಖ ನೋಡಿದಾಗ ಅಸಹನೆ. ಇದಕ್ಕೆ ಕಾರಣ ಭಿನ್ನ ವ್ಯಕ್ತಿತ್ವ, ಮಾತಿನ ವರಸೆ ಮತ್ತು ಸಹಿಸಲಾಗದ ಸ್ವಭಾವ.

ಎಲ್ಲಿ ನಗೆ ಇರುತ್ತೋ ಅಲ್ಲಿ ಜನ ಸೇರ್ತಾರೆ. ನಗೆ ಇಲ್ಲದವನ ಮೋರೆ ಭುಸುಗುಡುವ ಯಂತ್ರ!

ನಗೆ ಎಂಬುದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲಸ ಅರಸಿ ಇಂಟರ್​ವ್ಯೂಗೆ ಹೋದಾಗ ಅಲ್ಲಿ ಯಾವ ರೀತಿ ನಗುತ್ತೀರ ಎಂಬುದನ್ನು ಸಹ ಗಮನಿಸುತ್ತಾರೆ, ಸ್ವಂತ ಉದ್ಯೋಗ ಮಾಡುವವರಿಗೆ ಜನರನ್ನಾಕರ್ಷಿಸಲು ನಗೆ ಇರಲೇಬೇಕು. ‘ನಿನ್ನ ಮುಖದ ಮೇಲೆ ನಗೆ ಇಲ್ಲವಾದರೆ ನೀನು ಅಂಗಡಿಯನ್ನು ತೆರೆಯಬೇಡ’ ಎನ್ನುತ್ತದೆ ಜಪಾನಿನ ಗಾದೆ. ‘ಹೊರಗಡೆ ಪ್ರಪಂಚ ನಗ್​ನಗ್ತಾ ಇದೆ. ನೀನು ಜೋಲು ಮುಖ ಹೊತ್ಕೊಂಡು ರಸ್ತೆಗೆ ಬರಬೇಡ’ ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ‘ನನ್ನ ಜೀವನದಲ್ಲಿ ನಗೆ ಇಲ್ಲದೆ ಹೋಗಿದ್ರೆ ನಾನು ಯಾವತ್ತೋ ಆತ್ಮಹತ್ಯೆ ಮಾಡ್ಕೊಳ್ತಿದ್ದೆ!’ ಎಂಬ ಗಾಂಧೀಜಿಯವರ ಮಾತು ಅರ್ಥಪೂರ್ಣ.

ನಗುವುದನ್ನು ಯಾರಿಗೆ ಯಾರೂ ಕಲಿಸುವ ಅಗತ್ಯವಿಲ್ಲ. ಅದು ಮೂಲ ಮಾನವನಿಂದ ಪ್ರಾರಂಭವಾಗಿ ಇವತ್ತಿನವರೆಗೆ ಹರಿದು ಬಂದಿರುವ ಶಾರೀರಿಕ ತಂತ್ರ. ಎಳೆಯ ಮಗು ತೊಟ್ಟಿಲಲ್ಲಿ ನಗುತ್ತೆ. ನಿದ್ದೆಯಲ್ಲೇ ನಗಲು ಮಗುವಿಗೆ ಹೇಳಿದವರು ಯಾರು? ಅದು ಯಾರಿಂದ ಕಲಿಯಿತು? ನಗೆ ಎಂಬುದು ದೈವದತ್ತ ವರ. ಆದರೆ, ಮನುಷ್ಯ ಬೆಳೆದಂತೆಲ್ಲ ನಗೆಯನ್ನು ಕಡಿಮೆ ಮಾಡ್ತಾನೆ. ಎಲ್ಲ ಮಕ್ಕಳೂ ಹುಟ್ತಾ ವಿಶ್ವಮಾನವರೇ. ಬೆಳೆದ ಮೇಲೆ ಕೆಲವರು ಅಲ್ಪಮಾನವರಾಗುತ್ತಾರೆ. ಅದಕ್ಕೆ ಕಾರಣಗಳು ಹಲವಾರು. ನಗುವುದರಿಂದ ತನಗೇನು ಲಾಭ ಇದೆ ಎಂದು ಯೋಚಿಸುವ ಹಂತಕ್ಕೆ ಮನುಷ್ಯ ತಲುಪಿದರೆ ಅವನ ಮುಸುಡಿ ಹರಳೆಣ್ಣೆಯ ಗಡಿಗೆಯಾಗುತ್ತದೆ. ನನ್ನ ಗೆಳೆಯನೊಬ್ಬ ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ನಗುವುದನ್ನೇ ಮರೆತುಬಿಟ್ಟ.

‘ಯಾವಾಗ ನಗ್ತೀಯಾ ಗೆಳೆಯಾ?’ ಎಂದು ಕೇಳಿದೆ.

‘ಭಾನುವಾರ ಮಾತ್ರ ನಗ್ತೀನಿ’ ಅಂದ.

‘ಯಾಕೆ ಹೀಗೆ’

‘ಆಫೀಸಲ್ಲಿ ನಕ್ಕರೆ ರೇಟ್ ಕಡಿಮೆ ಆಗುತ್ತೆ’ ಎಂದ!

ಅಲ್ಲಿಗೆ ನಗೆಗೂ, ರೇಟಿಗೂ ಸಂಬಂಧ ಇದೆ ಅಂತ ಆಯ್ತು. ನಗುವು ಸ್ನೇಹಕ್ಕೆ ಪೂರಕ, ಲಾಭಕ್ಕೆ ಮಾರಕ.

ಅನೇಕ ಉದ್ಯೋಗಗಳಲ್ಲಿ ನಗೆಗೆ ಮಹತ್ವ ನೀಡುತ್ತಾರೆ. ರಿಸೆಪ್ಷನಿಸ್ಟು, ಏರ್ ಹೋಸ್ಟೆಸ್ಸು, ವೈದ್ಯರು ಮುಂತಾದ ಕೆಲಸಗಳಿಗೆ ನಾವು ಅಪ್ಲೈ ಮಾಡಿದಾಗ ನಗುಮುಖ ಗ್ರೇಸ್ ಅಂಕ ತಂದುಕೊಡುತ್ತದೆ.

ನವರಸಗಳಲ್ಲಿ ಹಾಸ್ಯ ಎರಡನೇ ಸ್ಥಾನದಲ್ಲಿ ಕುಳಿತಿದೆ. ಶೃಂಗಾರದ ಜೊತೆ ಅದು ಹದವಾಗಿ ಬೆರೆಯುತ್ತದೆ. ತಾನೇ ನಗುವುದು ಆತ್ಮಸ್ಥ. ಇನ್ನೊಬ್ಬರನ್ನು ನಗಿಸುವುದು ಪರಸ್ಥ. ನಗು ಇದ್ದ ಕಡೆ ದ್ವೇಷ ಅಡಗುತ್ತೆ. ಕೋಪ ಇಳಿಯುತ್ತೆ. ಯಾರಾದರೂ ನಮ್ಮ ಜೊತೆ ಜಗಳಕ್ಕೆ ಇಳಿದರು ಅಂತ ಇಟ್ಕೊಳ್ಳೋಣ. ಆಗ ನಾವು ನಗ್ತಾ ಅವರ ಮುಖ ನೋಡ್ತಿದ್ರೆ ಸಾಕು, ಅರ್ಧಜಗಳ ಕಡಿಮೆ ಆದ ಹಾಗೆಯೇ. ‘ಏನ್ರೀ ಹಾಗೆ ನಗ್ತೀರಾ?’ ಎಂದು ಅವರು ಸಿಟ್ಟಾದಾಗ ಮತ್ತೆ ನಗಬೇಕು. ನಮ್ಮ ನಗು ನೋಡಿ ಅವರು ತಣ್ಣಗಾಗುವ ಸಾಧ್ಯತೆಗಳಿರುತ್ತವೆ. ಬೆಂಗಳೂರಿನಂಥ ಷಹರುಗಳಲ್ಲಿ ವಾಹನಗಳನ್ನು ಓಡಿಸುವಾಗ ಒಂದಕ್ಕೊಂದು ತಾಕುವುದು ಸಹಜ. ಸಣ್ಣ ವಿಷಯಕ್ಕೆ ಅನಗತ್ಯವಾಗಿ ಮುಖ ಸಿಂಡರಿಸಿಕೊಳ್ಳದೆ ಮುಗುಳ್ನಕ್ಕು ಸ್ವಾರಿ ಹೇಳಿದರೆ ಅದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಬಿ.ಪಿ. ಏರುವುದಿಲ್ಲ, ಜನ ಸೇರುವುದಿಲ್ಲ. ಆದರೆ ಇದು ಸಾಮಾನ್ಯ ನಿಯಮವಿಲ್ಲ. ಏಕೆಂದರೆ, ಜನರ ಸ್ವಭಾವ ಒಂದೇ ರೀತಿ ಇರುವುದಿಲ್ಲ.

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ 1978ರಲ್ಲಿ ಅಮೆರಿಕಕ್ಕೆ ಭೇಟಿ ಕೊಟ್ಟಿದ್ದರು. ಸರ್ಕಸ್ ನೋಡಲು ಹೋದಾಗ ರೆಸ್ಟ್​ರೂಂನಿಂದ ಹೊರಗಡೆ ಬರಲು ಗೊತ್ತಾಗದೆ ಯಾವುದೋ ಗುಂಡಿಯನ್ನು ಒತ್ತಿದರು. ಫೈರ್ ಅಲಾರಾಂ ಹೊಡೆದುಕೊಂಡಿತು. ಫೈರ್ ಇಂಜಿನ್ಸ್ ಧಾವಿಸಿ ಬಂದವು. ಅಕಾರಣವಾಗಿ ಗುಂಡಿ ಒತ್ತಿದರೆ ಶಿಕ್ಷೆ ಆಗಬೇಕು. ಆದರೆ ಗೊರೂರು ರಾಮಸ್ವಾಮಿಯವರು ತಮ್ಮ ಅಸಹಾಯಕ ಸ್ಥಿತಿಯನ್ನು ವರ್ಣಿಸಿದರು. ‘ಎಲ್ಲರೂ ಹೊರಟುಬಿಟ್ಟರು. ನಾನೊಬ್ಬನೇ ರೆಸ್ಟ್​ರೂಮಲ್ಲಿ ಸಿಕ್ಕಿ ಬಿದ್ದೆ. ಹಲವಾರು ಗುಂಡಿಗಳು ಇದ್ದವು. ಬಾಗಿಲು ತೆಗೆಯಲು ಯಾವುದೋ ಗುಂಡಿ ಒತ್ತಿದೆ. ಕ್ಷಮಿಸಿ, ‘ಅಟ್ಟದಿಂದ ಬಿದ್ದವನ್ನ ಛಡಿಯಿಂದ ಚಚ್ಚಿದ್ರು’ ಅಂತ ಕನ್ನಡದಲ್ಲಿ ಪ್ರಾವರ್ಬ್ ಇದೆ’ ಅಂತ ವಿವರಿಸಿದರು. ಅದರ ಅರ್ಥ ಏನು ಎಂದಾಗ, ಇಂಗ್ಲಿಷ್​ನಲ್ಲಿ ವರ್ಣಿಸಿದರು. ಇದನ್ನು ಕೇಳಿದವರಿಗೆಲ್ಲ ನಗು ಬಂತು. ಅದೇ ರೀತಿಯ ಎರಡು ಗಾದೆಗಳನ್ನು ಹೇಳಿ ರಂಜಿಸಿದರು. ಇದರಿಂದ ಸುಪ್ರೀತರಾದ ಅಗ್ನಿಶಾಮಕದಳದವರು ಗೊರೂರು ಅವರನ್ನು ಕಳಿಸಿಕೊಟ್ಟರು.

ಖ್ಯಾತ ನಗೆ ಬರಹಗಾರ ಹಾಗೂ ಪತ್ರಿಕೋದ್ಯಮಿ ಆಗಿದ್ದ ನಾಡಿಗೇರ್ ಕೃಷ್ಣರಾಯರು ಬಡತನದಲ್ಲಿ ಬೆಂದವರು, ಆದರೆ ನೊಂದವರಲ್ಲ. ಎಂಥ ಕಷ್ಟ ಬಂದಾಗಲೂ ನಗುತ್ತಲೇ ಇದ್ದವರು. ನಾಡಿಗೇರ್​ಗೆ ಹೆಣ್ಣುಮಕ್ಕಳಿಲ್ಲ. ‘ನಾಡಿಗೇರ್​ರ ಮಗಳಿಗೆ ಮದುವೆ, ಧನಸಹಾಯ ಮಾಡಿ’ ಎಂದು ಯಾವನೋ ಕಿಲಾಡಿ ಫ್ರಾಡ್ ಹುಡುಗ ಸಾಕಷ್ಟು ಹಣವನ್ನು ವಸೂಲಿ ಮಾಡಿದ್ದ. ಸಚಿವರ ಬಳಿಯೆಲ್ಲ ಹಣ ಕಮಾಯಿಸಿ ಕಡೆಗೂ ಸಿಕ್ಕಿ ಬಿದ್ದ. ಆ ಕಾಲಕ್ಕೆ ಅದು ದೊಡ್ಡ ಮೊತ್ತ, ಅವನು ಸುಮಾರು ಹತ್ತು ಸಾವಿರದಷ್ಟು ಸಂಗ್ರಹಿಸಿದ್ದ. ಇದನ್ನು ನನಗೆ ತಿಳಿಸಿದ ನಾಡಿಗೇರರು ಬಡತನದಲ್ಲೂ ಜೋಕನ್ನು ಮಾಡಿದರು. ‘ಆ ಹುಡುಗನಿಗೂ ಕಷ್ಟ ಇದೆ, ನನಗೂ ಕಷ್ಟ ಇದೆ. ಅವನು ಮೊದಲೇ ನನ್ನ ಹತ್ರ ಬಂದು ಈ ವಿಷಯ ಹೇಳಿದ್ದಿದ್ರೆ ನಾವಿಬ್ರೂ ಪಾರ್ಟ್​ನರ್​ಶಿಪ್ ತಗೊಂಡು ಇಲ್ಲದೇ ಇರೋ ನನ್ನ ಮಗಳಿಗೆ ಮದ್ವೆ ಮಾಡೋಕೆ ಅಂತ ಇನ್ನೂ ಜಾಸ್ತಿ ಹಣ ವಸೂಲಿ ಮಾಡಬಹುದಿತ್ತು’ ಎಂದರು.

ಸಂಸಾರದಲ್ಲಿ ನಗೆಗೆ ಮಹತ್ವದ ಸ್ಥಾನವಿದೆ. ನಾವು ಕೆಲಸ ಮಾಡುವ ಕಚೇರಿಗಳಲ್ಲೂ ನಗೆಯ ಲಾಭ ಪಡೆದರೆ ಕೆಲಸಗಳು ಸುಗಮವಾಗುತ್ತವೆ. ಆದರೆ ನಕ್ಕರೆ ತನ್ನ ಅಂತಸ್ತು ಎಲ್ಲಿ ಕಡಿಮೆ ಆಗುವುದೋ ಎಂದು ಹಲವರು ಗಂಭೀರವಾಗಿರುವುದುಂಟು. ಬದುಕಿನ ಅವಶ್ಯಕತೆಯ ಬಹುಭಾಗವನ್ನು ಈಗ ಹಣ ಆಕ್ರಮಿಸಿದೆ. ಹಣದ ಮುಂದೆ ಬಂಧುತ್ವ, ಸ್ನೇಹ ಏನೂ ಇಲ್ಲ. ಕರೊನಾದಿಂದ ಸತ್ತ ಅಪ್ಪನ ಶವವನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಬರಲು ಮಗ ಒಪ್ಪಲಿಲ್ಲ. ‘ಅಪ್ಪನ ಮೊಬೈಲು ಮತ್ತು ಹಣವನ್ನು ಮಾತ್ರ ನನಗೆ ಕೊಡಿ, ಬಾಡಿ ನೀವೇ ಡಿಸ್ಪೋಸ್ ಮಾಡಿ’ ಎಂದು ಮಗರಾಯ ಹೇಳಿದ್ದು ಸುದ್ದಿಯಾಗಿತ್ತು. ಮನುಷ್ಯ ಇಷ್ಟು ಸ್ವಾರ್ಥಿಯಾಗಬಾರದು.

ನಗೆಯನ್ನು ರೂಢಿಸಿಕೊಂಡರೆ ಎಷ್ಟೋ ಕಾಯಿಲೆಗಳು ವಾಸಿಯಾಗುತ್ತವೆ ಎನ್ನುತ್ತಾರೆ ಮನೋವಿಜ್ಞಾನಿಗಳು. ನಗೆ ಎಂಬ ದಿವ್ಯೌಷಧಿ ಒತ್ತಡ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಸುತ್ತಲಿನ ಸಮಾಜವನ್ನು ನಮ್ಮತ್ತ ಆಕರ್ಷಿಸುತ್ತದೆ. ವಿರಸವನ್ನು ತಿಳಿಗೊಳಿಸುತ್ತದೆ. ಇನ್ನೂ ಅನೇಕ ರೀತಿಯಲ್ಲಿ ನಗೆ ಸಹಾಯ ಮಾಡುತ್ತದೆ. ಎಲ್ಲಿ, ಯಾವಾಗ, ಎಷ್ಟು ನಗಬೇಕೆಂಬುದನ್ನು ಯೋಚಿಸಬೇಕು. ನೆಮ್ಮದಿಯ ಬದುಕಿಗೆ, ಸ್ವಸ್ಥ ಸಮಾಜಕ್ಕೆ ನಗು ಮುಖ್ಯ ಎಂಬುದು ನಿರ್ವಿವಾದ. ನಗೆಯ ರಕ್ಷಾಕವಚ ಧರಿಸಿದವನಿಗೆ ಬೇರೆ ತಾಯತ ಬೇಕಾಗುವುದಿಲ್ಲ.

ನಾಲ್ಕು ದಶಕಗಳ ಹಿಂದೆ ನಾನು ನಾಡಿಗೇರ್ ಕೃಷ್ಣರಾಯರನ್ನು ಸಂದರ್ಶನ ಮಾಡಿ ಬಸವನಗುಡಿಯಲ್ಲಿ ನಡೆದು ಬರುತ್ತಿದ್ದಾಗ ಅವರು ಹೇಳಿದ ಜೋಕು ನೆನಪಾಗಿ ಜೋರಾಗಿ ಒಬ್ಬನೇ ನಕ್ಕೆ. ನನ್ನ ಕಂಡ ರಸ್ತೆ ಜನ ಹೀಗೆ ಮರುಕಪಟ್ಟರು. ‘ಪಾಪ, ಚಿಕ್ಕವಯಸ್ಸಿಗೇ ಈ ಹುಡುಗನಿಗೆ ಹೀಗಾಗಬಾರದಿತ್ತು...’

(ಲೇಖಕರು ಖ್ಯಾತ ಹಾಸ್ಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net