

ಈ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಸ್ನೇಹಿತರೊಬ್ಬರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರ ಪರಿಹಾರ ನಿಧಿಯಿಂದ ಧನಸಹಾಯ ಕೋರಲು ರಾಜಶೇಖರನಿಗೆ ಸೂಚಿಸಿದರು. ಅವರ ಸಲಹೆ ಮೇರೆಗೆ ದಂಪತಿ 2019 ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಬಂದರು. ಕೇಂದ್ರ ಬಸ್ ನಿಲ್ದಾಣದಲ್ಲಿ ಇಳಿದ ದಂಪತಿ ಮೊದಲಿಗೆ ಮುಖಮಾರ್ಜನ ಮಾಡಲು ಬಾತ್ರೂಂಗೆ ಹೋದರು.
ರಾಜಶೇಖರ ಶೌಚಗೃಹಕ್ಕೆ ಹೋದಾಗ ಅರುಣಾ ಬೆಂಚಿನ ಮೇಲೆ ಕುಳಿತು ಅಳುತ್ತಿದ್ದ ಮಗುವನ್ನು ಸಂತೈಸುತ್ತಿದ್ದಳು. ಆಗ ಅವಳ ಬಳಿಗೆ ಬಂದ ಒಬ್ಬ ಮಹಿಳೆ, ‘ಮಗು ಎಷ್ಟೊಂದು ಅಳುತ್ತಿದೆ, ನಾನು ಅದನ್ನು ಸಮಾಧಾನ ಮಾಡಿಕೊಡುತ್ತೇನೆ ಕೊಡಿ’ ಎಂದು ಆನಂದನನ್ನು ತನ್ನ ಕೈಗೆತ್ತಿಕೊಂಡಳು. ಮಗುವಿಗೆ ಬಿಸ್ಕತ್ ತಿನ್ನಿಸಿ ನೀರು ಕುಡಿಸಿದಳು. ಮಗುವಿನ ಅಳು ನಿಂತಿತು. ‘ನಿಮ್ಮ ಮಗ ಎಷ್ಟು ಮುದ್ದಾಗಿದ್ದಾನೆ’ ಎನ್ನುತ್ತ ಅದನ್ನು ಮುದ್ದು ಮಾಡಿ ಅರುಣಾ ಮತ್ತು ಅವಳ ಕುಟುಂಬದ ವಿವರ ಕಲೆಹಾಕಿದಳು. ‘ನಿಮ್ಮ ಗಂಡ ಎಲ್ಲಿ ಹೋಗಿದ್ದಾರೆ?’ ಎಂದು ಪ್ರಶ್ನಿಸಿ ‘ಅವರು ಬರುವವರೆಗೆ ನಾನು ನಿಮ್ಮ ಜತೆಯಲ್ಲಿಯೇ ಕುಳಿತಿರುವೆ’ ಎಂದಳು. ಆದರೆ ಆಕೆ ತನ್ನ ವಿವರಗಳನ್ನು ಅರುಣಾಗೆ ನೀಡಲಿಲ್ಲ. ಶೌಚಗೃಹಕ್ಕೆ ಹೋಗಿದ್ದ ರಾಜಶೇಖರ್ ಸ್ವಲ್ಪ ಹೊತ್ತಿನ ನಂತರ ವಾಪಸ್ ಬಂದು, ‘ಇನ್ನು ನೀನು ಶೌಚಗೃಹಕ್ಕೆ ಹೋಗು. ಮಗುವನ್ನು ನನ್ನ ಕೈಗೆ ಕೊಡು’ ಎಂದಾಗ, ಅರುಣಾ ಪಕ್ಕಕ್ಕೆ ತಿರುಗಿ, ‘ಇಲ್ಲಿಯೇ ಕುಳಿತಿರುವ ಹೆಣ್ಣುಮಗಳ ಕೈಯಲ್ಲಿ ಆನಂದ್ ಆಟವಾಡುತ್ತಿದ್ದಾನೆ’ ಎನ್ನುತ್ತ, ‘ರೀ, ಇವರೇ ನನ್ನ ಪತಿ. ಇವರ ಕೈಗೆ ಮಗುವನ್ನು ಕೊಡಿ, ನಿಮಗೆ ತುಂಬ ಥ್ಯಾಂಕ್ಸ್’ ಎಂದಳು. ಆಗ ಅಲ್ಲೇ ಇದ್ದ ಇನ್ನೊಬ್ಬ ಮಹಿಳೆ, ‘ನೋಡಿ, ಇಲ್ಲಿ ಮಗು ಎತ್ತಿಕೊಂಡಿರುವ ಯಾರೂ ಕುಳಿತಿಲ್ಲ. ನಿಮ್ಮ ಮಗು ತೆಗೆದುಕೊಂಡವರು ಅದನ್ನೆತ್ತಿಕೊಂಡು ಎಲ್ಲಿಯೋ ಹೋಗಿರಬೇಕು’ ಎಂದರು. ಕೆಲಕಾಲ ನೆರೆಯವರ ಸಹಾಯದಿಂದ ಆ ಮಹಿಳೆ ಅಲ್ಲೆಲ್ಲಾದರೂ ಇದ್ದಾಳೆಯೋ ಎಂದು ದಂಪತಿ ಹುಡುಕಿದರು. ಆದರೆ ಆ ಮಹಿಳೆ ನಾಪತ್ತೆಯಾಗಿದ್ದಳು. ರಾಜಶೇಖರ್ ಬೈಯ್ಯಲು ಆರಂಭಿಸಿದಾಗ ಅರುಣಾ ಜೋರಾಗಿ ಅಳಲು ಪ್ರಾರಂಭಿಸಿದಳು. ಸುತ್ತಲೂ ಜನ ನೆರೆದರು. ‘ನನ್ನ ಮಗುವನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ’ ಎಂದು ಆಕೆ ಅವರೆಲ್ಲರಿಗೂ ತಿಳಿಸಿದಳು. ಪಕ್ಕದ ಅಂಗಡಿಯವನೊಬ್ಬ ಅವರಿಬ್ಬರನ್ನು ಬಸ್ ನಿಲ್ದಾಣದಲ್ಲಿದ್ದ ಪೊಲೀಸ್ ಹೊರಠಾಣೆಗೆ ಕರೆದುಕೊಂಡು ಹೋದ. ಅಲ್ಲಿ ಅರುಣಾ ನಡೆದ ವಿಷಯ ತಿಳಿಸಿದಳು. ಪೊಲೀಸರು ಬಸ್ ನಿಲ್ದಾಣದಲ್ಲಿ, ಸುತ್ತಮುತ್ತಲಿನ ಅಂಗಡಿ, ಹೋಟೆಲ್ಲುಗಳಲ್ಲಿ ಹುಡುಕಾಡಿದರೂ ಮಗುವಾಗಲೀ ಅಥವಾ ಮಗುವನ್ನು ತೆಗೆದುಕೊಂಡಿದ್ದ ಮಹಿಳೆಯಾಗಲೀ ಕಾಣಸಿಗಲಿಲ್ಲ. ಕಡೆಗೆ ಅಂಧ ದಂಪತಿ ಪೊಲೀಸ್ ಠಾಣೆಗೆ ಹೋಗಿ ಮಗುವಿನ ಅಪಹರಣವಾಗಿದೆ ಎಂದು ದೂರು ನೀಡಿದರು. ಅಪಹರಣ ಪ್ರಕರಣ ಠಾಣೆಯಲ್ಲಿ ದಾಖಲಾಯಿತು.
ಮಹಿಳಾ ಇನ್ಸ್ಪೆಕ್ಟರ್ ಕಾತ್ಯಾಯಿನಿ ತಂಡ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಅಳವಡಿಸಲಾಗಿದ್ದ 17 ಸಿಸಿಟಿವಿ ಕ್ಯಾಮರಾಗಳಲ್ಲಿನ ರೆಕಾರ್ಡಿಂಗ್ಗಳನ್ನು ಪರಿಶೀಲಿಸಿದಾಗ ಶೇಕಡ 80ರಷ್ಟು ಕ್ಯಾಮರಾಗಳು ಕೆಟ್ಟಿದ್ದಾಗಿ ತಿಳಿಯಿತು. ಉಳಿದ ಕ್ಯಾಮರಾಗಳಲ್ಲಿ ಮಗುವಾಗಲೀ ಅಥವಾ ಮಗುವನ್ನು ಎತ್ತಿಕೊಂಡು ಹೋದವರಾಗಲೀ ಕಾಣಸಿಗಲಿಲ್ಲ. ವಿಚಲಿತರಾದ ಪೊಲೀಸರು ದಂಪತಿಗೆ ಅಪಹೃತ ಮಗುವಿನ ಭಾವಚಿತ್ರ ಕೊಡಲು ವಿನಂತಿಸಿದರು. ಆದರೆ ಆ ಜೋಡಿ ಉಪಯೋಗಿಸುತ್ತಿದ್ದ ಮೊಬೈಲ್ ಫೋನುಗಳು ಸ್ಮಾರ್ಟ್ ಫೋನುಗಳಲ್ಲದ ಕಾರಣ ಅವರ ಫೋನಿನಲ್ಲಿ ಯಾವುದೇ ಚಿತ್ರವಿರಲಿಲ್ಲ. ರಾಜಶೇಖರನ ಮನೆಯವರಿಗೆ ಫೋನ್ ಮಾಡಿ ಅವರ ಬಳಿ ಬಾಲಕನ ಚಿತ್ರವೇನಾದರೂ ಇದ್ದರೆ ಅದನ್ನು ವಾಟ್ಸ್ಆಪ್ ಮೂಲಕ ಕಳುಹಿಸಲು ಕೋರಲಾಯಿತು. ಒಂದು ಗಂಟೆ ನಂತರ ಆನಂದ್ನ ಫೋಟೋ ಪೊಲೀಸರಿಗೆ ಲಭ್ಯವಾಯಿತು.
ಏತನ್ಮಧ್ಯೆ ದಂಪತಿಯ ಕೆಲ ಪರಿಚಯಸ್ಥರು ರಾಜಶೇಖರ್ ಮೇಲೆಯೇ ಸಂಶಯ ವ್ಯಕ್ತಪಡಿಸಿ, ‘ಅವನೇ ಹಣದಾಸೆಗಾಗಿ ಬಾಲಕನನ್ನು ಯಾರಿಗೋ ಮಾರಿರಬಹುದು’ ಎಂದರು. ಅಲ್ಲಿಯವರೆಗೆ ರಾಜಶೇಖರನ ನಡವಳಿಕೆ ಸಂಶಯ ಬರಿಸದೇ ಹೋಗಿದ್ದರೂ ಈ ನಿಟ್ಟಿನಲ್ಲೂ ಪೊಲೀಸರು ವಿಚಾರಣೆ ನಡೆಸಿದರು. ಆದರೆ ಆ ಮಾಹಿತಿ ಸುಳ್ಳೆಂದು ತಿಳಿಯಿತು. ಏತನ್ಮಧ್ಯೆ ಕಾತ್ಯಾಯಿನಿ ಮಾಧ್ಯಮದವರನ್ನು ಠಾಣೆಗೆ ಕರೆಸಿ, ನಾಪತ್ತೆಯಾಗಿದ್ದ ಮಗುವಿನ ಚಿತ್ರವನ್ನು ಹಂಚಿದರು. ಇದಲ್ಲದೆ ಪೊಲೀಸರು ತಮ್ಮ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಬಾಲಕನ ಫೋಟೋ ಮತ್ತು ಮಾಹಿತಿಯನ್ನು ಹಂಚಿಕೊಂಡರು. ಕೆಲವೇ ಗಂಟೆಗಳಲ್ಲಿ ಈ ಸುದ್ದಿ ವೈರಲ್ ಆಗಿ ಹಲವಾರು ಜನರು ಕಾಣೆಯಾದ ಮಗುವಿಗಾಗಿ ಹುಡುಕಾಟ ಮಾಡತೊಡಗಿದರು. ಪೊಲೀಸರು ದಂಪತಿಗೆ ಅವರ ಊರಿಗೆ ವಾಪಸಾಗಲು ತಿಳಿಸಿದರು.
ನಾಲ್ಕು ದಿನಗಳ ನಂತರ ಇಬ್ಬರು ಮಹಿಳೆಯರು ಠಾಣೆಗೆ ಆಗಮಿಸಿ ಇನ್ಸ್ಪೆಕ್ಟರ್ ಕಾತ್ಯಾಯಿನಿಯನ್ನು ಭೇಟಿಯಾದರು. ‘ನನ್ನ ಹೆಸರು ಭಾರತಿ, ನನ್ನ ಜತೆ ಬಂದಿರುವವಳು ನನ್ನ ನಾದಿನಿ ರಮಾ’ ಎಂದು ಪರಿಚಯಿಸಿಕೊಂಡು, ‘ಮಗು ಇಲ್ಲಿದೆ, ತೆಗೆದುಕೊಳ್ಳಿ’ ಎಂದು ಆನಂದ್ನನ್ನು ಹಾಜರುಪಡಿಸಿದರು. ‘ಈ ಮಗು ನಿಮ್ಮ ಬಳಿ ಹೇಗೆ ಬಂತು?’ ಎಂದು ಪ್ರಶ್ನಿಸಿದಾಗ, ಭಾರತಿ, ‘ನನ್ನ ಮಗಳು ಪಾರ್ವತಿ ಕೆಂಗೇರಿಯ ಗಾರ್ವೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾಳೆ. ಆಕೆ ನಿನ್ನೆ ರಾತ್ರಿ ಬಸ್ ನಿಲ್ದಾಣದ ಶೌಚಗೃಹದ ಬಳಿ ನಿಂತಿದ್ದಾಗ ಯಾರೋ ಅವಳ ಬಳಿಗೆ ಬಂದು, ‘ನಾನು ಶೌಚಗೃಹಕ್ಕೆ ಹೋಗಿ ಬರುತ್ತೇನೆ. ಅಲ್ಲಿಯವರೆಗೆ ಈ ಮಗುವನ್ನು ನೋಡಿಕೊಳ್ಳಿ’ ಎಂದು ಮಗುವನ್ನು ಆಕೆ ಕೈಗೆ ಕೊಟ್ಟು ವಾಪಸಾಗದಿದ್ದಾಗ ಪಾರ್ವತಿ ಈ ಮಗುವನ್ನು ನಮ್ಮ ಬಳಿ ತಂದು ಬಿಟ್ಟಳು. ಟಿವಿಯಲ್ಲಿ ಅಪಹರಣದ ಸುದ್ದಿ ನೋಡಿ ನಿಮ್ಮ ಬಳಿ ಬಂದಿದ್ದೇವೆ’ ಎಂದಳು.
ರಾಯಚೂರಿನಲ್ಲಿದ್ದ ಅಂಧ ದಂಪತಿಗೆ ಪೊಲೀಸರು ಟ್ಯಾಕ್ಸಿ ಮಾಡಿಕೊಟ್ಟು ಬೆಂಗಳೂರಿಗೆ ಕರೆಸಿ, ಮಗುವನ್ನು ಒಪ್ಪಿಸಿದರು. ‘ನಿನಗೆ ಬಹುಮಾನ ಕೊಡುತ್ತೇವೆ’ ಎಂದು ಹೇಳಿ ಪೊಲೀಸರು ಪಾರ್ವತಿಯನ್ನು ಠಾಣೆಗೆ ಕರೆಸಿದರು. ಆಕೆ ಬಳಿ ಅಪಹೃತ ಬಾಲಕ ಹೇಗೆ ಬಂದನೆಂದು ಪ್ರಶ್ನಿಸಿದಾಗ ಆಕೆ ತಾಯಿಗೆ ಹೇಳಿದ್ದನ್ನೇ ಪುನರುಚ್ಚರಿಸಿದಳು. ಆಗ ಪಾರ್ವತಿಯ ಮೊಬೈಲ್ಫೋನನ್ನು ವಶಕ್ಕೆ ಪಡೆದ ಪೊಲೀಸರು ಆನಂದ್ ಅಪಹರಣವಾದ ವೇಳೆ ಹಾಗೂ ದಿನದಂದು ಆಕೆ ಎಲ್ಲಿದ್ದಳು ಎಂದು ಲೊಕೇಷನ್ ಪತ್ತೆಮಾಡಿದಾಗ ಆಕೆ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ಇದ್ದುದಾಗಿ ತಿಳಿಯಿತು. ಅವಳನ್ನು ತೀವ್ರವಾಗಿ ವಿಚಾರಣೆ ಮಾಡಿದಾಗ, ‘ನಾನು ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ಏಳು ವರ್ಷಗಳ ಹಿಂದೆ ನನ್ನ ಲಗ್ನವಾಗಿದ್ದು ಗಂಡನೊಡನೆ ಮನಸ್ತಾಪದ ಕಾರಣ ವಿಚ್ಛೇದನ ಪಡೆದಿದ್ದೇನೆ. ನನಗೆ ಮಕ್ಕಳಿಲ್ಲ, ತಾಯಿಯಾಗಬೇಕೆಂಬ ಹಂಬಲವಿದ್ದ ಕಾರಣ ಬಸ್ ನಿಲ್ದಾಣದಲ್ಲಿ ಅಂಧದಂಪತಿ ಮಗುವನ್ನು ನೋಡಿದ ಕೂಡಲೇ ಅದನ್ನು ಸಾಕಬೇಕೆಂಬ ಮನಸ್ಸಾಯಿತು. ಆದರೆ, ಅಪಹರಣದ ಸುದ್ದಿ ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾದ ಕಾರಣ ಕೃತ್ಯ ಬೆಳಕಿಗೆ ಬಂದು ತೊಂದರೆಯಾಗುತ್ತದೆ ಎಂದು ಹೆದರಿ, ನನಗೆ ಮಗುವನ್ನು ಕೆಂಗೇರಿಯಲ್ಲಿ ಯಾರೋ ಹಸ್ತಾಂತರಿಸಿ ಓಡಿಹೋದರೆಂಬ ತಪ್ಪು ಮಾಹಿತಿಯನ್ನು ತಾಯಿಗೆ ನೀಡಿದೆ’ ಎಂದು ತಿಳಿಸಿದಳು.
ಅಪಹರಣದ ಆರೋಪದ ಮೇಲೆ ಪಾರ್ವತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪಾರ್ವತಿ ಜಾಮೀನಿನ ಮೇಲಿದ್ದಾಳೆ. ‘ಭಗವಂತನೇ ಪೊಲೀಸರ ರೂಪದಲ್ಲಿ ಬಂದು ನಮಗೆ ಸಹಾಯ ಮಾಡಿದ’ ಎನ್ನುತ್ತಾರೆ ಅಂಧದಂಪತಿ. ‘ಕುರುಡನಿನ ಚಂದ್ರನನು ಕಣ್ಣಿ್ಣದ ಕಾಣುವನೆ, ಅರಿಯುವುಂ ಸೋಂಕಿಂದೆ ಬಿಸಿಲು ತಣಿವುಗಳ, ನರನುಮಂತೆಯೆ ಮನಸಿನನುಭವದಿ ಕಾಣುವನು, ಪರಸತ್ವ ಮಹಿಮೆಯನು ಮಂಕುತಿಮ್ಮ’ ಎಂಬುದು ಎಷ್ಟು ಪ್ರಸ್ತುತವಲ್ಲವೇ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)