ಸುಖ ನಮ್ಮೊಳಗೇ ಇದೆ

Manollasa
Published on

| ಡಾ.ವಿ.ಎಚ್.ಮೂಲಿಮನಿ

ಆ ಮಹಿಳೆ ಬಡತನದಿಂದ ಬಂದವಳು. ಎಲ್ಲರಂತೆ ಅವಳೂ ಒಂದಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳು. ಆದರೆ ಆಕೆ ಆಶಿಸಿದಂತೆ ಯಾವುದೂ ಸರಿಯಾಗಿ ಆಗದೆ ವಯಸ್ಸಾಗುತ್ತಿದ್ದಂತೆ ನಿರುತ್ಸಾಹ, ಚಿಂತೆ, ಕೊರಗು, ಅಧೈರ್ಯ ಅವಳನ್ನು ಆವರಿಸಿ ಮುಖ ಒಣಗತೊಡಗಿತು. ಬೆಟ್ಟದಂತೆ ಚಿಂತೆಯನ್ನು ಹೊತ್ತುಕೊಂಡ ಹೆಂಡತಿಯ ಸ್ಥಿತಿಯನ್ನು ಕಂಡು ಗಂಡ ಗಾಬರಿಯಾದ. ನಾಲ್ಕು ದಿನ ಎಲ್ಲಿಗಾದರೂ ಪ್ರವಾಸ ಹೋದರೆ ಸರಿಯಾಗಬಹುದು ಎಂದುಕೊಂಡು ರಜೆ ಹಾಕಿ ಅಪರೂಪದ ನೆಂಟರ ಮನೆಗಳಿಗೆ ಕರೆದೊಯ್ದ. ಯಾವಾಗಲೂ ತಮಗಿಂತ ಅನುಕೂಲಸ್ಥರ ಮನೆಗೆ ಹೋಗಿ ಬರುತ್ತಿದ್ದವರು ಈ ಸಲ, ಹಳ್ಳಿಯಲ್ಲಿ ಬಡವರಾಗಿದ್ದ ಅವಳ ತವರುಮನೆಯವರ ಕಡೆಗೂ ಭೇಟಿ ನೀಡಿದರು. ಅವರೆಲ್ಲರ ಬದುಕನ್ನು ಕಣ್ಣಾರೆ ಕಂಡು ಈಕೆ ಗಾಬರಿಯಾದಳು. ಒಬ್ಬಳ ಒಂದೇ ಮಗುವಿಗೆ ಬುದ್ಧಿಮಾಂದ್ಯ. ಒಬ್ಬಳ ಸಂಸಾರ ಗಂಡನ ಅನೈತಿಕತೆಯಿಂದ ನೆಮ್ಮದಿ ಕಳೆದುಕೊಂಡಿತ್ತು. ಇನ್ನೊಂದು ಕಡೆ ಮೂರು ಹೊತ್ತು ಊಟಕ್ಕೇ ಸಾಲದು. ಇನ್ನೊಂದೆಡೆ ಮಕ್ಕಳೇ ಹೆತ್ತವರನ್ನು ಮನೆಯಿಂದ ಹೊರಗೆ ಹಾಕಿದ್ದರು. ಹೀಗೆ ಮುಗಿಯದ ಸಂಕಷ್ಟಗಳು, ನೋವುಗಳು. ಎಲ್ಲರ ಸ್ಥಿತಿಯನ್ನು ಅವಲೋಕಿಸಿ ತನ್ನ ಸ್ಥಿತಿಯೊಂದಿಗೆ ತೂಗಿ ನೋಡಿದ ಆಕೆಗೆ ಅವರಿಗಿಂತ ತಾನೆಷ್ಟು ಉತ್ತಮ ಸ್ಥಿತಿಯಲ್ಲಿದ್ದೇನೆ ಎಂಬುದರ ಅರಿವಾಯಿತು.

ಚೆನ್ನಾಗಿ ನೋಡಿಕೊಳ್ಳುವ ಗಂಡ, ಬುದ್ಧಿವಂತರಾಗಿ ಅವರ ಬದುಕನ್ನು ಚೆನ್ನಾಗಿಯೇ ಸಾಗಿಸುತ್ತಿರುವ ಮಕ್ಕಳು, ಚಿಕ್ಕದಾದರೂ ಸ್ವಂತ ಮನೆ, ಆರೋಗ್ಯ ಎಲ್ಲವೂ ಇತ್ತು. ದಿನನಿತ್ಯ ಕೊರಗನ್ನೇ ಅಭ್ಯಾಸ ಮಾಡಿಕೊಂಡಿದ್ದ ಗೃಹಿಣಿ ಇದ್ದಕ್ಕಿದ್ದಂತೆ ಬದಲಾದಳು. ಗೆಲುವಾದಳು. ಮರುದಿನದಿಂದಲೇ ಸುಖ ಅವಳೊಡನೆ ಬಂದು ಸೇರಿಕೊಂಡಿತು! ಹೌದು, ನಾವು ಬದುಕಿನಲ್ಲಿ ಎಂದೂ ನಮಗಿಂತ ಕೆಳಗಿನವರನ್ನು ನೋಡುವುದೇ ಇಲ್ಲ. ನಮಗಿಂತ ಮೇಲೆ ಇರುವವರನ್ನೇ ನೋಡಿ, ಆ ಎಲ್ಲ ಸೌಕರ್ಯಗಳು, ಸುಖದ ಸುಪತ್ತಿಗೆ ನಮಗಿಲ್ಲ ಎಂದಷ್ಟೇ ಭಾವಿಸುತ್ತೇವೆ. ನಮಗಿರುವುದೇ ಚೆನ್ನಾಗಿದೆ ಎಂದು ಭಾವಿಸುವುದರಲ್ಲಿ ನಿಜವಾದ ಸುಖವಿದೆ. ಆಕೆಗಾಗಿದ್ದು ಇದೇ ಅನುಭವ.

ಸುಖ ಬೇಕಾದಷ್ಟು ಇದೆ. ಆದರೂ, ಸುಖ ಎಲ್ಲೆಲ್ಲೋ ಸಿಗಬಹುದು ಎಂದುಕೊಂಡು ಅದನ್ನು ಹುಡುಕುತ್ತ ಅಲೆಯುತ್ತೇವೆ. ಅದರ ಬದಲು ಸುಖ ನಮ್ಮ ಬದುಕಿನ ಜೊತೆಗೆ, ನಾವು ಮಾಡವ ಕೆಲಸದಲ್ಲಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಇರುವುದರಲ್ಲಿ ನಾವು ಸುಖವಾಗಿಯೇ ಇದ್ದೇವೆ ಎಂದು ತಿಳಿಯುವುದು ಉತ್ತಮ. ಸುಖ ಎಲ್ಲೂ ಇಲ್ಲ ಎಂದು ಭಾವಿಸಿದರೆ ಅದು ನಿಜಕ್ಕೂ ಸಿಗುವುದಿಲ್ಲ. ಇಲ್ಲೇ ಇದೆ ಎಂದುಕೊಂಡರೆ ತಕ್ಷಣ ಅದು ನಮ್ಮೊಳಗೆ ಬಂದು ಸೇರಿಕೊಂಡಿರುತ್ತದೆ. ಹಾಗಾಗಿ, ಇರುವುದರಲ್ಲಿ ಸಂತೃಪ್ತಿ ಕಾಣುವ, ಸಂತೋಷ ಪಡುವ ಮನೋಭಾವ ಬೇಕು. ಮತ್ತೊಬ್ಬರ ಕಷ್ಟಗಳು, ಸಮಸ್ಯೆಗಳು ಎಷ್ಟು ತೀವ್ರವಾಗಿರುತ್ತವೆ ಎಂಬುದನ್ನು ಅರ್ಥೈಸಿಕೊಂಡು, ಸಾಧ್ಯವಾದರೆ ಸ್ಪಂದಿಸೋಣ. ಇಲ್ಲವಾದಲ್ಲಿ, ನಮ್ಮ ಚಿಂತನೆಯನ್ನು, ದೃಷ್ಟಿಕೋನವನ್ನು ಬದಲಿಸಿಕೊಂಡು ಇರುವ ಸುಖ, ನೆಮ್ಮದಿಯನ್ನು ಅನುಭವಿಸೋಣ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ:manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net