ಇಳಿ ವಯಸ್ಸಿನಲ್ಲೂ ಖುಷಿಯಿಂದ ಕೃಷಿ: ಸಾವಯವ ಕೃಷಿ ಮೂಲಕ ಯುವ ರೈತರಿಗೆ ಟಿ.ಎಸ್.ರಾಜು ಮಾದರಿ

Krishi
Published on

| ಎಂ.ಪಿ. ವೆಂಕಟೇಶ್ ಮದ್ದೂರು

ಇಳಿ ವಯಸ್ಸಿನಲ್ಲೂ ಬೇಸಾಯ ಮಾಡುವ ಮೂಲಕ ಯುವ ರೈತರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ ಮದ್ದೂರು ತಾಲೂಕು ತೈಲೂರು ಗ್ರಾಮದ ನಿವೃತ್ತ ಉಪನ್ಯಾಸಕ ಟಿ.ಎಸ್.ರಾಜು. 69 ವರ್ಷವಾದರೂ ವಿಶ್ರಾಂತಿ ಪಡೆಯದೆ, ಮಣ್ಣಿನ ಸೇವೆ ಮಾಡುತ್ತಿರುವ ಅವರು, ‘ಸವಿತಾ ರಾಜು’ಎಂಬ ಫಾರ್ಮ್​ ಹೌಸ್​ನ 2.20 ಎಕರೆ ಜಮೀನಿನಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ರಾಜು ಅವರ ತೋಟದಲ್ಲಿ ತೆಂಗು, ಶ್ರೀಗಂಧ, ಹೆಬ್ಬೇವು, ಮಹಾಗನಿ, ಹೊನ್ನೆ, ತೇಗ, ಸಿಲ್ವರ್, ಜುಮ್ಮುನೇರಳೆ, ನಿಂಬೆ, ನುಗ್ಗೆ, ಸಪೋಟ, ಹಲಸು, ಏಲ್ಲಕ್ಕಿ, ಪಚ್ಚಬಾಳೆ, ಪಪ್ಪಾಯ, ರಾಮಫಲ, ಸೀತಾಫಲ, ಅಡಕೆ, ಬೆಣ್ಣೆಹಣ್ಣು, (ಬಟರ್ ಫ್ರೂಟ್), ಹುಣಸೇ ಮರ, ಬುಗರಿ ಮರ ಸೇರಿ 1500ಕ್ಕೂ ಹೆಚ್ಚು ಗಿಡ-ಮರ ಬೆಳೆಸಲಾಗಿದೆ. ಜತೆಗೆ, ಆಯುರ್ವೆದ ಇನ್ಸೂಲಿನ್ ಗಿಡ, ಚಕ್ರಮುನಿ, ಮುತ್ತುಂಗ ಎಲೆ, ಗೋಡಂಬಿ, ಸೀಬೆ, ಕೋ ಕೋ ಹಣ್ಣು (ಚಾಕಲೇಟ್​ಗೆ ಬಳಸುವ ಹಣ್ಣು), ಸೀಬೆ, ಗಸಗಸೆ, ಕರಿಬೇವು, ಮಾವು, ದೊಡ್ಡಪತ್ರೆ, ಹೂವಿನ ಗಿಡಗಳಾದ ಕನಕಾಂಬರ, ದಾಸವಾಳ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲಾಗಿದೆ.

ಸರ್ಕಾರದಿಂದ ಸವಲತ್ತು: ರಾಜು ಅವರ ಕುಟುಂಬ ಮಂಡ್ಯದಲ್ಲಿ ವಾಸವಿದ್ದರೂ, ಕೃಷಿ ಮೇಲಿನ ಪ್ರೀತಿಗೆ ತೋಟದಲ್ಲೇ ಮನೆ ಮಾಡಿಕೊಂಡು ಒಬ್ಬರೇ ವಾಸವಿದ್ದಾರೆ. ಇಷ್ಟೆಲ್ಲ ಬೆಳೆಗಳನ್ನು ಬೆಳೆಯಲು ಕೇವಲ 5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಅದೂ ತೋಟದ ತಂತಿ ಬೇಲಿಗೆ 3 ಲಕ್ಷ ರೂ., ಕೊಳವೆಬಾವಿ ಕೊರೆಸಲು 2 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಉಳಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಸರ್ಕಾರದಿಂದ ಪಡೆದುಕೊಂಡಿರುವುದು ವಿಶೇಷ. ನರೇಗಾ ಯೋಜನೆಯಡಿ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕೊಟ್ಟಿಗೆ, ಹಿಂಗುಗುಂಡಿ, ಎರೆಹುಳುತೊಟ್ಟಿ, ಶೌಚಗೃಹ, ಕೃಷಿ ಇಲಾಖೆಯಿಂದ ಕೃಷಿ ಹೊಂಡ, ಡಿಸೇಲ್ ಮೋಟಾರ್, ಔಷಧ ಸಿಂಪಡಿಸುವ ಯಂತ್ರ, ಟಾರ್ಪಾಲ್, ಕಬ್ಬಿಣದ ನೇಗಿಲು, ಕೂಪರ್, ತೋಟಗಾರಿಕೆ ಇಲಾಖೆಯಿಂದ ವಿವಿಧ ರೀತಿಯ ಸಸಿಗಳನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ. ಅಂಗಾಂಶ ಬಾಳೆ ಬೆಳೆ ಮತ್ತು ಹನಿ ನೀರಾವರಿಗೂ ಪೋ›ತ್ಸಾಹಧನ ಪಡೆದುಕೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಸಿಗುವ ಪೋ›ತ್ಸಾಹ ಧನವನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಿಗುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿಗದಿತ ಸಮಯಕ್ಕೆ ಬ್ಯಾಂಕ್​ಗೆ ಸಾಲ ಹಿಂದಿರುಗಿಸುವ ಮೂಲಕ ಶೇ. 4 ಬಡ್ಡಿ ಸಬ್ಸಿಡಿ ಪಡೆದುಕೊಂಡಿದ್ದೇನೆ ಎನ್ನುತ್ತಾರೆ ರಾಜು. 2013ರಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತಿಯಾದ ನಂತರ ಸುಮ್ಮನೆ ಕುಳಿತುಕೊಳ್ಳಬಾರದೆಂದು 9 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ ಕನಿಷ್ಠ 25 ರಿಂದ 30 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಾರೆ. ಪಪ್ಪಾಯ, ಸೀಬೆ, ತೆಂಗಿನಕಾಯಿ, ಸಪೋಟ, ಮಾವು ಇನ್ನಿತರ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಹಾಪ್​ಕಾಮ್ಸ್​ಗೆ ತೆಗೆದುಕೊಂಡು ಹೋಗಿ ಇವರೇ ಮಾರಾಟ ಮಾಡುತ್ತಾರೆ. ತೋಟದಲ್ಲಿ ಬಹುತೇಕ ಎಲ್ಲ ಕೆಲಸವನ್ನು ಇವರೇ ಮಾಡೊಕೊಳ್ಳುತ್ತಾರೆ.

ಕೃಷಿ ಅಧಿಕಾರಿಗಳಿಂದ ಮೆಚ್ಚುಗೆ: ಮದ್ದೂರು ತಾಲೂಕಿನಲ್ಲಿ ಪ್ರಥಮ ಕೃಷಿ ಹೊಂಡ ನಿರ್ವಣವಾಗಿರುವುದು ಇವರ ಫಾಮರ್್​ಹೌಸ್​ನಲ್ಲಿ ಎಂಬುದು ವಿಶೇಷ. ಕೃಷಿ ಹೊಂಡವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮಾದರಿಯಾಗಿದ್ದಾರೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ರಾಜು ಅವರಿಗೆ ಬೇಸಾಯದಲ್ಲಿ ಅಪಾರ ಅನುಭವ ಇರುವುದರಿಂದ ತೋಟಗಾರಿಕೆ ಇಲಾಖೆಯಿಂದ ತಾಲೂಕು ರೈತ ಸಲಹಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಹಲವು ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಿವೆ.

ಆಸಕ್ತರು ರಾಜು ಅವರನ್ನು ಮೊ.ನಂ. 9535115565 ಮೂಲಕ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net