ಹಂದಿಗುಂದ ಗ್ರಾಮದ ಆರಾಧ್ಯದೈವ ಶ್ರೀ ಸಿದ್ಧೇಶ್ವರ ಶಿವಯೋಗಿಗಳ ರಥೋತ್ಸವ

03hnd1
Published on

ಸಕಲ ಜೀವರಿಗೂ ಲೇಸನ್ನು ಬಯಸಿದ ಬಸವಾದಿ ಶರಣರ ಪರಂಪರೆಯ ಭಾಗವಾಗಿ ಬಾಳಿ ಬದುಕಿದವರು ಶ್ರೀ ಸಿದ್ಧೇಶ್ವರ ಮಹಾ ಶಿವಯೋಗಿಗಳು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಗಡಿ ಹಂದಿಗುಂದ ಗ್ರಾಮದ ಆರಾಧ್ಯದೈವ ಶ್ರೀ ಸಿದ್ಧೇಶ್ವರರ 44ನೇ ಜಾತ್ರಾ ಮಹೋತ್ಸವ ಇದೇ ಫೆ. 7-8ರಂದು ಜರುಗಲಿದೆ.

ಶ್ರೀ ಶಿವಾನಂದ ಸ್ವಾಮಿಗಳು
ಶ್ರೀ ಶಿವಾನಂದ ಸ್ವಾಮಿಗಳು

ಬೆಳಗಾವಿ ಜಿಲ್ಲಾ ಕಲಾಮೇಳ, ರಾಯಬಾಗ ತಾಲೂಕಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ, ತಾಲೂಕಾ ಕೃಷಿ ಸಮ್ಮೇಳನ, ರಕ್ತದಾನ, ನೇತ್ರದಾನ ಶಿಬಿರ, ಜನಜಾಗೃತಿಗಾಗಿ ಪಾದಯಾತ್ರೆ ಇತ್ಯಾದಿಗಳನ್ನು ಆರಂಭಿಸಿದ ಹೆಗ್ಗಳಿಕೆ ವಿರಕ್ತಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಶಿವಯೋಗ ಮಂದಿರ, ಹುಬ್ಬಳ್ಳಿ, ಕಾಶಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ ಪೂಜ್ಯರು ಸಮಾಜದ ಕೈಂಕರ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಗಡಿಭಾಗದ ಹಂದಿಗುಂದ ಹಳ್ಳಿಯಲ್ಲಿ ಶಿಕ್ಷಣದ ಕೊರತೆ ಇದ್ದಾಗ ಕನ್ನಡ ಪ್ರೌಢಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಕನ್ನಡ, ಸಂಸ್ಕೃತ, ಹಿಂದಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತ ಬಂದಿದ್ದಾರೆ. ಕವಿಯಾಗಿ ಸಾಹಿತ್ಯಕೃಷಿ ಮಾಡಿರುವ ಸ್ವಾಮಿಗಳು ಆತ್ಮಸಖ, ತುಂತುರು ತುಷಾರ, ವಚನದಾಂಗುಡಿ, ವಚನ ಒರತೆ ಮುಂತಾದ ಕವನಸಂಕಲನಗಳನ್ನು ರಚಿಸಿದ್ದಾರೆ.

ಅವರ ನೇತೃತ್ವದಲ್ಲಿ ಇಂದು (ಫೆ. 6) ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದ್ದು, ನಾಳೆ (7) ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸುವ ಜನಪದ ಜಾತ್ರೆ ಹಾಗೂ ಹಂದಿಗುಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ ಆಧ್ಯಾತ್ಮಿಕ ಚಿಂತನಗೋಷ್ಠಿ, ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ. ಶನಿವಾರ (8) ವಚನ ಗ್ರಂಥಗಳ ಭವ್ಯ ಮೆರವಣಿಗೆ ‘ವಚನೋತ್ಸವ’ ಹಾಗೂ ‘ಶರಣ ಚರಿತಾಮೃತ’ ಪ್ರವಚನ ಮಹಾಮಂಗಲಗೊಳ್ಳಲಿದೆ. ಎರಡೂ ದಿನ ಶ್ರೀ ಸಿದ್ಧೇಶ್ವರ ಮಠದಿಂದ ಶ್ರೀ ಶಿವಲಿಂಗೇಶ್ವರ ಗದ್ದುಗೆಯವರೆಗೆ ಭವ್ಯ ರಥೋತ್ಸವ ಜರುಗಲಿದೆ. ಜತೆಗೆ ಪ್ರತಿದಿನ ಭಕ್ತರಿಗೆ ಮಠದ ವತಿಯಿಂದ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.

ಸಿ.ಎಸ್. ಹಿರೇಮಠ ಹಂದಿಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net