ಕರೊನಾ ನಂತರ ಉದುರುತ್ತಿದೆ ಕೂದಲು: ಸಮಸ್ಯೆಗೆ ಕಾರಣ-ಪರಿಹಾರ ಏನು?

Lalitha lead 2
Published on

| ಶ್ವೇತಾ ನಾಯ್ಕ್ ಬೆಂಗಳೂರು

ಕರೊನಾ ಬಂದು ಹೋದ ನಂತರ ಅತಿ ಹೆಚ್ಚು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವುದೂ ಒಂದು. ಪುರುಷರಲ್ಲೂ ಈ ಸಮಸ್ಯೆ ಇದೆಯಾದರೂ ಶೇ.90ರಷ್ಟು ಮಹಿಳೆಯರಿಗೆ ಕೂದಲು ಉದುರುತ್ತಿದೆ ಎಂದು ವರದಿಯಾಗಿದೆ. ಅತಿಯಾದ ಮಾತ್ರೆ ಸೇವನೆ, ಆಹಾರದಲ್ಲಿ ಬದಲಾವಣೆ, ತೂಕದಲ್ಲಿ ಏರುಪೇರು, ಥೈರಾಯ್್ಡ ಹೀಗೆ ಅನೇಕ ಸಮಸ್ಯೆಗಳಿಂದಲೂ ಕೂದಲು ಉದುರುವ ಸಂಭವವಿರುತ್ತದೆ. ಬಹುತೇಕ ವೈದ್ಯರು ಹೇಳುವ ಪ್ರಕಾರ ಅಶಕ್ತ ಮಹಿಳೆಯರಲ್ಲೇ ಇಂತಹ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಮೂರು ತಿಂಗಳ ಬಳಿಕ ಆರಂಭ: ಕರೊನಾ ಬಂದು ಹೋದ ಮೂರು ತಿಂಗಳ ಬಳಿಕ ಕೂದಲು ಉದುರಲು ಪ್ರಾರಂಭವಾಗುತ್ತದೆ. ಕರೊನಾ ಎರಡನೇ ಅಲೆ ಬಳಿಕ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ ಸಮಸ್ಯೆ ಕಾಡುತ್ತಿದ್ದರೂ 30ರಿಂದ 45ರ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಕರೊನಾ ಪೀಡಿತರಾಗಿದ್ದ ಸಮಯದಲ್ಲಿ ಅತಿಯಾದ ಭಯ, ಮಾನಸಿಕ ಒತ್ತಡ, ಪೌಷ್ಟಿಕಾಂಶದಲ್ಲಿ ವ್ಯತ್ಯಯ, ಔಷಧ ಬಳಕೆಗಳೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಟೆಲೊಜೆನ್ ಎಫ್ಲುವಿಯಮ್: ಟೆಲೊಜೆನ್ ಎಫ್ಲುವಿಯಮ್ ಅಂದರೆ ಸಾಮಾನ್ಯವಾಗಿ ಆರೋಗ್ಯಕರ ಮಹಿಳೆ ಅಥವಾ ಪುರುಷರಲ್ಲಿ ದಿನಕ್ಕೆ 20ರಿಂದ 30 ಕೂದಲು ಉದುರುವ ಸಂಭವವಿರುತ್ತದೆ. ಆದರೆ. ಕರೊನಾ ಬಂದು ಹೋದವರಿಗೆ ದಿನಕ್ಕೆ 100ರಿಂದ 200 ಕೂದಲು ಉದುರುತ್ತದೆ ಎಂದು ಹೇಳಲಾಗುತ್ತಿದೆ. ಕರೊನಾ ಮೊದಲ ಹಂತದಲ್ಲಿರುವವರಿಗೆ ಮತ್ತು ಉಲ್ಬಣಗೊಂಡವರಿಬ್ಬರಿಗೂ ಒಂದೇ ರೀತಿಯ ಮಾತ್ರೆ ಕೊಡುತ್ತಿದ್ದರು. ಹಲವರಿಗೆ ಅಷ್ಟು ಮಾತ್ರೆಯ ಅಗತ್ಯ ಇರಲಿಲ್ಲ. ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಸಾಕಿತ್ತು. ಔಷಧಗಳ ಪಾರ್ಶ್ವ ಪರಿಣಾಮವೂ ಇದಕ್ಕೊಂದು ಕಾರಣ.

ಮಹಿಳೆಯರ ಹಾಮೋನ್​ನಲ್ಲಿ ಬದಲಾವಣೆ ಆಗುವುದರಿಂದ ಅವರಲ್ಲೇ ಕೂದಲು ಉದುರುವ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಊಟ, ನಿದ್ದೆ ಸರಿಯಾಗಿದ್ದು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಒಂದರಿಂದ ಎರಡು ತಿಂಗಳಲ್ಲಿ ಕೂದಲು ಉದುರುವುದು ನಿಲ್ಲುತ್ತದೆ.

| ಡಾ.ವಸುಂಧರಾ ಭೂಪತಿ ಆಯುರ್ವೇದ ತಜ್ಞೆ

ಕರೊನಾ ಬಂದುಹೋದ ನಂತರ ಆಗುವ ಇತರ ಸಮಸ್ಯೆಗಳ ನಡುವೆ ಕೂದಲು ಉದುರುವುದೂ ಒಂದು. ಕಾಯಿಲೆ ತರಿಸಿಕೊಳ್ಳುವ ಅಶಕ್ತತೆ ಇರುವವರಿಗೇ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಔಷಧಿಯ ದುಷ್ಪರಿಣಾಮವೂ ಇದಕ್ಕೊಂದು ಕಾರಣ. ಕೂದಲು ಉದುರುವುದನ್ನು ತಡೆಯಲು ಮತ್ತು ಬೆಳೆಯಲು ಹೋಮಿಯೋಪಥಿಯಲ್ಲಿ ಚಿಕಿತ್ಸೆ ಇದೆ.

| ಡಾ. ಬಿ.ಟಿ. ರುದ್ರೇಶ್ ಹೋಮಿಯೋಪಥಿ ವೈದ್ಯ

ವ್ಯಕ್ತಿ ಕರೊನಾ ಬಂದು ಬಳಲಿದಾಗ ಬೆಳವಣಿಗೆಯ ಹಂತದಲ್ಲಿರವ ಕೂದಲು ನಿತ್ರಾಣದ ಹಂತಕ್ಕೆ ಹೋದಾಗ ಕೂದಲು ಉದುರಲು ಪ್ರಾರಂಭವಾಗುತ್ತದೆ. ಕರೊನಾ ಬಂದುಹೋದ ನೂರು ದಿನಗಳ ಬಳಿಕ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪೌಷ್ಟಿಕಾಂಶ, ವಿಟಮಿನ್ ಬಿ12 ಮತ್ತು ಡಿ ಕೊರತೆ ಮತ್ತು ಮಾನಸಿಕ ಒತ್ತಡದಿಂದ ಹೀಗಾಗುತ್ತದೆ.

| ಡಾ. ಗಿರೀಶ್ ಚರ್ಮರೋಗ ತಜ್ಞ

ಸಮಸ್ಯೆಗೆ ಕಾರಣ?

  • ರಕ್ತಹೀನತೆ, ಅನಿಮಿಯಾ, ಕ್ಯಾಲ್ಸಿಯಂ ಕೊರತೆ, ಥೈರಾಯ್್ಡ ಇದ್ದವರಿಗೆ ಕೂದಲು ಉದುರುತ್ತದೆ
  • ಕರೊನಾ ಬಂದ ಸಮಯದಲ್ಲಿ ಆಹಾರದಲ್ಲಿ ಏರುಪೇರು ಆಗುವುದರಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ
  • ಅತಿಯಾದ ಔಷಧ ಸೇವನೆಯಿಂದ ಡೋಸ್ ಜಾಸ್ತಿ ಆಗಿ ಕೂದಲು ಉದುರುತ್ತದೆ
  • ಕರೊನಾ ಬಂದಿದೆ ಎಂದು ಭಯ, ಆತಂಕಕ್ಕೆ ಒಳಗಾಗುವ ಮಹಿಳೆ ಯರಿಗೂ ಈ ಸಮಸ್ಯೆ ಕಾಡಿದೆ
  • ಕೂದಲು ಉದುರುತ್ತಿದೆ ಎಂಬ ಭಯಕ್ಕೇ ಇನ್ನೂ ಹೆಚ್ಚು ಉದುರಲು ಪ್ರಾರಂಭವಾಗುತ್ತದೆ

ಪರಿಹಾರವೇನು?

  1. ಯಾವ ಕಾರಣಕ್ಕಾಗಿ ಕೂದಲು ಉದುರುತ್ತಿದೆ ಎಂದು ನೋಡಿಕೊಂಡು ಅದಕ್ಕೆ ಅವಶ್ಯಕತೆ ಇರುವ ಚಿಕಿತ್ಸೆ ಪಡೆಯಬೇಕು
  2. ಆದಷ್ಟು ಪೌಷ್ಟಿಕಾಂಶ ಇರುವ ಆಹಾರ ಸೇವಿಸಬೇಕು
  3. ನಿದ್ದೆ ಸರಿಯಾಗಿ ಅಂದರೆ ದಿನಕ್ಕೆ ಕನಿಷ್ಠ 6ರಿಂದ 8 ಗಂಟೆ ನಿದ್ರೆ ಮಾಡಬೇಕು.
  4. ಮಾನಸಿಕ, ದೈಹಿಕ ಒತ್ತಡ ಮಾಡಿಕೊಳ್ಳದೆ ಆದಷ್ಟು ವಿಶ್ರಾಂತಿಯಲ್ಲಿರಬೇಕು
  5. ಒತ್ತಡ ಕಡಿಮೆ ಮಾಡಿಕೊಳ್ಳಲು ಓದುವುದು, ಸಂಗೀತ ಕೇಳುವುದು, ಬರೆಯುವುದನ್ನು ರೂಢಿಸಿಕೊಳ್ಳಬೇಕು
  6. ಮನಸ್ಸು ಒಂದೇ ಕಡೆ ಕೇಂದ್ರೀಕರಿಸಲು ಯೋಗ, ಧ್ಯಾನ ಮಾಡಬಹುದು
  7. ತಲೆ ಸ್ನಾನ ಮಾಡುವಾಗ ಆದಷ್ಟು ಬೆಚ್ಚಗಿನ ನೀರನ್ನು ಬಳಸಬೇಕು
  8. ಆಹಾರದಲ್ಲಿ ಪೌಷ್ಟಿಕಾಂಶ, ಪ್ರೋಟಿನ್ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು
  9. ಮೆಂತ್ಯ ಕಾಳು, ದಾಸವಾಳ, ಮೊಸರನ್ನು ತಲೆಗೆ ಹಚ್ಚಿ ಸ್ನಾನ ಮಾಡಬಹುದು
  10. ಮೂಲ ದೋಷ ಏನು ಎನ್ನುವುದನ್ನು ಪತ್ತೆಹಚ್ಚಿ ಔಷಧ ಪಡೆಯಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net