

ನಾನು ಹೈಸ್ಕೂಲ್ ಓದಿದ್ದು ಕುಂದಾಪುರ ಬೋರ್ಡ್ ಹೈಸ್ಕೂಲ್ನಲ್ಲಿ. ಹಿಂಭಾಗ, ಮುಂಭಾಗದಲ್ಲಿ ವಿಶಾಲ ಮೈದಾನ; ಮಧ್ಯೆ ಕಂಗೊಳಿಸುತ್ತಿದ್ದ ಮಾದರಿ ಶಾಲೆಯದು. ಕವಿ ಮುದ್ದಣ ಕೆಲಸ ಮಾಡಿದ, ಡಾ.ಶಿವರಾಮ ಕಾರಂತರು, ಕವಿ ಅಡಿಗರು ಓದಿದ ಶಾಲೆ ಎಂಬ ಹೆಗ್ಗಳಿಕೆಯಿದೆ. ಅಂತಹ ಶಾಲೆಯಲ್ಲಿ ಕಲಿತ ನನ್ನ ನೆನಪಲ್ಲಿ ಉಳಿದ ಕೆಲವೇ ಶಿಕ್ಷಕರಲ್ಲಿ ಭಾರತೀ ಟೀಚರ್ ಒಬ್ಬರು. ನನಗೆ ಲೆಕ್ಕ ಅಂದರೆ ತುಂಬ ಕಷ್ಟ. ಆದರೆ ಭಾರತಿ ಟೀಚರ್ ಪಾಠ ಮಾಡಿದ್ದರಿಂದ ಅದು ನನಗೆ ಇಷ್ಟದ ಪಾಠವಾಗಿ ಬದಲಾಯಿತು. ಅವರು ಪಾಠ ಮಾಡುತ್ತಿದ್ದ ರೀತಿ, ಅವರ ಧ್ವನಿ, ವಿದ್ಯಾರ್ಥಿಗಳ ಬಗ್ಗೆ ಪ್ರೀತಿ ಇತ್ಯಾದಿ ಮರೆತೇ ಹೋಗದು. ಭಾರತಿ ಟೀಚರ್ ಅವರ ಲೆಕ್ಕದ ತರಗತಿ ಕವಿತೆಯಂತೆ ಇತ್ತು. ಬೀಜಗಣಿತ, ಅಂಕಗಣಿತ, ರೇಖಾಗಣಿತದಂತಹ ಕ್ಲಿಷ್ಟ ವಿಷಯಗಳನ್ನು ಸುಲಭ ರೀತಿಯಲ್ಲಿ ಮನದಟ್ಟು ಮಾಡುವ ಚಾತುರ್ಯ ಅವರಿಗೆ ಕರಗತವಾಗಿತ್ತು. ವಾತ್ಸಲ್ಯಭರಿತ ಧ್ವನಿಯಲ್ಲಿ ಅವರು ಪಾಠ ಮಾಡುವಾಗ ತಂತಾನೇ ಕ್ಲಾಸಿನಲ್ಲಿ ಏಕಾಗ್ರತೆ ಆವರಿಸುತ್ತಿತ್ತು. ಗಣಿತದಲ್ಲಿ ಆಗ ಜನರಲ್ ಮ್ಯಾತ್ಸ್ ಹಾಗೂ ಕಾಂಪೋಸಿಟ್ ಮ್ಯಾತ್ಸ್ ಅಂತ ಎರಡು ಬಗೆ. ಜನರಲ್ ಮ್ಯಾತ್ಸ್ ಸುಲಭ. ಕಾಂಪೋಸಿಟ್ ಮ್ಯಾತ್ಸ್ ಜಟಿಲ. ಇಂಜಿನಿಯರಿಂಗ್ ಓದುವವರಿಗೆ ಇದರಿಂದ ಅನುಕೂಲ. ಆದರೆ ನನಗೆ ಅಂಥ ಅಗತ್ಯವಿಲ್ಲದಿದ್ದರೂ ಭಾರತಿ ಟೀಚರ್ ಕಲಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಕಾಂಪೋಸಿಟ್ ಮ್ಯಾತ್ಸ್ ಆಯ್ದುಕೊಂಡಿದ್ದೆ. ಅವರು ಕಲಿಸಿದ ಕೆಲ ಪ್ರಮೇಯಗಳು ಸಾಹಿತ್ಯ ರಚಿಸುವ ನನಗೆ ಈಗಲೂ ಅನೇಕ ವಿಧದಲ್ಲಿ ಅರ್ಥ ಹೇಳಿಸುತ್ತ ನೆರವಾಗುತ್ತಿವೆ. ನನ್ನ ಮನದಲ್ಲಿ ಲೆಕ್ಕದ ಮೈತ್ರಿ ಬೆಳೆಸಿದ ಭಾರತಿ ಟೀಚರ್ ಇತ್ತೀಚೆಗಷ್ಟೇ ನಮ್ಮನ್ನಗಲಿದರು. ಆದರೇನು? ನನ್ನಂಥವರ ನೆನಪಲ್ಲಿ ತಮ್ಮ ಅಪರೂಪದ ವ್ಯಕ್ತಿತ್ವದಿಂದಾಗಿ ಅವರು ಅಮರರಾಗಿ ಉಳಿದಿರುವರು. ಆಳ ಅಂತಃಕರಣದಲ್ಲಿ ನೆಲೆಸಿರುವರು.
ಮಂಗಳೂರಿನ ಕಸ್ತೂರ ಬಾ ಮೆಡಿಕಲ್ ಕಾಲೇಜಿನಲ್ಲಿ ಬೋಧಿಸಿದ ಪ್ರೊ. ಬಿ.ಎಂ. ಹೆಗ್ಡೆ ಅವರೇ ನನ್ನ ಅಚ್ಚುಮೆಚ್ಚಿನ ಶಿಕ್ಷಕರು. 1988-94ರ ಅವಧಿಯಲ್ಲಿ ನಾನು ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದೆ. ಆಗ ಹೆಗ್ಡೆ ಅವರು ಅಲ್ಲಿ ಡೀನ್ ಆಗಿದ್ದರು. ನಾನು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದೆ. ಹೆಗ್ಡೆ ಸರಳ ವ್ಯಕ್ತಿತ್ವದವರು. ತಮಗಿರುವ ಜ್ಞಾನವನ್ನು ಹಂಚಿಕೊಳ್ಳುವ ಮುಕ್ತ ಮನಸ್ಸಿನವರು. ಯಾರು ತಪು್ಪ ಮಾಡಿದರೂ ಕ್ಷಮಿಸುವ ಗುಣ ಅವರದ್ದು. ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿ ನಾನು ವಿವಿಧ ಒತ್ತಾಯಗಳನ್ನು ಮಾಡಿದಾಗ ಪ್ರೋತ್ಸಾಹ ನೀಡುತ್ತಿದ್ದರು. ತಪು್ಪ ಮಾಡಿದಾಗ ತಿದ್ದಿ ಹೇಳುತ್ತಿದ್ದರು. ನಮ್ಮ ಗುಣವನ್ನು ಕೆಲಸದಲ್ಲಿ ತೋರಿಸಬೇಕು ಎಂದು ಅವರು ಸದಾ ಹೇಳುತ್ತಿದ್ದ ಮಾತು ಈಗಲೂ ಮನಸ್ಸಿನಲ್ಲಿದೆ. ಕಾಲೇಜಿನಲ್ಲಿ ನಾನು ಸಣ್ಣಪುಟ್ಟ ತರಲೆ ಮಾಡುತ್ತಿದ್ದಾಗ ‘ಮುಂದೆ ಇವನು ಆರೋಗ್ಯ ಮಂತ್ರಿ ಆಗೇ ಆಗುತ್ತಾನೆ’ ಎಂದು ತಮಾಷೆ ಮಾಡುತ್ತಿದ್ದರು. ಅವರ ಆಶೀರ್ವಾದ ನಾನೀಗ ಮಂತ್ರಿಯಾಗಿದ್ದೇನೆ. ಅವರೇ ಹೇಳಿದ ರೀತಿಯಲ್ಲಿ ಕರ್ತವ್ಯದ ಮೂಲಕ ಗುಣವನ್ನು ತೋರಿಸುತ್ತ ಗುರುಕಾಣಿಕೆ ಸಲ್ಲಿಸುತ್ತಿದ್ದೇನೆ.
ಒಂದು ಸಮಯದಲ್ಲಿ ಇನ್ನೊಂದು ಕೆಲಸ ಮಾಡಬಾರದು ಎಂದು ಶಿಕ್ಷಕರು ಹೇಳಿದ ಕಿವಿಮಾತು ಮುಂದೆ ಜೀವನದಲ್ಲಿ ಯಶಸ್ಸು ಪಡೆಯಲು ಸಹಕಾರಿಯಾಯಿತು. ಜೀವನದಲ್ಲಿ ದಾರಿ ತೋರಿಸಿಕೊಟ್ಟವರು ನನ್ನ ಪಾಲಕರು ಮತ್ತು ಶಿಕ್ಷಕರು. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕ್ರೀಡೆಯಲ್ಲಿ ನನ್ನ ಆಸಕ್ತಿ ಜಾಸ್ತಿ ಇತ್ತು. ಆಗ ನಮ್ಮ ಜೂವಾಲಜಿ ಪ್ರೊಫೆಸರ್ ಒಬ್ಬರು ಕರೆದು, ‘ವಿದ್ಯೆಯಲ್ಲೂ ನೀನು ಪರಿಣಿತನಾಗಬೇಕು. ಕ್ರೀಡೆಯಲ್ಲೂ ಪರಿಣಿತನಾಗಬೇಕು. ಆದರೆ, ಎರಡಕ್ಕೂ ಬೇರೆ ಬೇರೆ ಸಮಯ ಮೀಸಲಿಡಬೇಕು. ಪಾಠ ಕೇಳುವಾಗ ಪಾಠದಲ್ಲೇ ಗಮನಹರಿಸಬೇಕು, ಕ್ರೀಡೆಯಲ್ಲಿ ಅಲ್ಲ. ಇದರಿಂದ ಮುಂದೆ ನಿನಗೆ ಲಾಭ ಆಗುತ್ತದೆ. ಕ್ರೀಡೆಯ ಸಮಯದಲ್ಲಿ ಪಾಠದ ಬಗ್ಗೆ ಯೋಚನೆ ಮಾಡುವುದು ಬೇಡ’ ಎಂದು ಕಿವಿಮಾತು ಹೇಳಿದ್ದರು. ಅದರಿಂದ ನನಗೆ ಮುಂದೆ ಬಹಳಷ್ಟು ಸಹಾಯವಾಯಿತು. ಕಚೇರಿ ಕೆಲಸವೇ ಇರಬಹುದು. ಕುಟುಂಬಕ್ಕೆ ಸಂಬಂಧಿಸಿದ ವಿಚಾರವೇ ಇರಬಹುದು. ಸಮಯವನ್ನು ಬೇರೆ-ಬೇರೆಯಾಗಿ ಮೀಸಲಿಟ್ಟರೆ ಬೆಲೆ ಹೆಚ್ಚಾಗಿರುತ್ತದೆ ಎಂಬುದು ಅನುಭವಕ್ಕೆ ಬಂದಿದೆ. ಇದ್ದದ್ದರಲ್ಲೇ ನಾವು ತೃಪ್ತಿ ಪಡಬೇಕು ಎಂಬುದನ್ನು ಪಾಲಕರು ನನಗೆ ಹೇಳಿಕೊಟ್ಟಿದ್ದಾರೆ. ನಾನು ಲೋಕಾಯುಕ್ತದಲ್ಲಿದ್ದಾಗ ಹಲವು ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ವರದಿ ಕೊಟ್ಟಿದ್ದೇನೆ. ನನ್ನಲ್ಲಿ ಯಾವುದೇ ನ್ಯೂನತೆಗಳಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ನನ್ನ ಹುಟ್ಟೂರು ಚಿಕ್ಕನಾಯಕನಹಳ್ಳಿಯ ಸಿಂಗಾಪುರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗುಂಡೂರಾವ್ ಹಾಗೂ ಹೊಯ್ಸಳಚಾರ್ ಎಂಬ ಇಬ್ಬರು ಶಿಕ್ಷಕರಿದ್ದರು. ಅಲ್ಲದೆ, ಎಂಎ ಮಾಡುವಾಗ ಪ್ರಾಧ್ಯಾಪಕರಾಗಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ನನ್ನ ನೆಚ್ಚಿನ ಗುರುಗಳು. ಗುಂಡೂರಾವ್ ಮತ್ತು ಹೊಯ್ಸಳಚಾರ್ ತುಂಬ ಪ್ರಭಾವ ಬೀರಿದ ಶಿಕ್ಷಕರು. ರಾಮಾಯಣ, ಮಹಾಭಾರತವನ್ನು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದು ಅವರಿಬ್ಬರು. ದಾನಶೂರ ಕರ್ಣನ ಕತೆಯನ್ನು ಬಿತ್ತಿದರು. ಅದೇ ನಾಟಕ ಮಾಡಿಸಿ ನನಗೆ ಕರ್ಣನ ಪಾತ್ರ ನೀಡಿದ್ದರು. ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಯಿಂದ ಆಚೆ ಕರೆತಂದು ಬದುಕಿನ ಲವಲವಿಕೆಯನ್ನು ಕಲಿಸಿದರು. ಪ್ರೀತಿ ಉಳಿಸಿದರು.
ಜಿ.ಎಸ್. ಶಿವರುದ್ರಪ್ಪ ನನ್ನ ಜೀವನವನ್ನು ತಿದ್ದಿದವರು. ಪ್ರಭಾವಿಸಿದವರು. ನನ್ನ ಸಾಹಿತ್ಯ ಕೃಷಿಗೆ ಕಾರಣಿಭೂತರಾದವರು. ಅವರೊಬ್ಬ ಮಾದರಿ ಗುರು. ಹಳೆಗನ್ನಡ, ಹೊಸಗನ್ನಡವನ್ನು ವಾಚನ ಮಾಡುತ್ತಿದ್ದ ಹಾಗೂ ವಿಮರ್ಶೆ ಮಾಡುತ್ತಿದ್ದ ರೀತಿ ಅನನ್ಯ. ಅವರ ಪಾಠದ ಶೈಲಿಯೇ ಆಕರ್ಷಕ. ಒಬ್ಬ ಶಿಕ್ಷಕ ಹೇಗಿರಬೇಕು, ಅವರ ನಡವಳಿಕೆ ಹೇಗಿರಬೇಕು ಎಂಬುದನ್ನು ಪ್ರಭಾವಿಸಿದ್ದು ಶಿವರುದ್ರಪ್ಪ. ಅವರೊಂದಿಗೆ ಒಡನಾಟ ನನ್ನ ಪುಣ್ಯವೂ ಹೌದು.
ನನ್ನ ಬಾಲ್ಯ ಕಳೆದಿದ್ದು ಶಿವಮೊಗ್ಗದ ವಾಸವಿ ವಿದ್ಯಾಲಯದಲ್ಲಿ. ಗಾಯತ್ರಿ ಟೀಚರ್ ಮತ್ತು ವಸುಂಧರಾ ಟೀಚರ್ ನನ್ನ ನೆಚ್ಚಿನ ಶಿಕ್ಷಕಿಯರು. ಅದರಲ್ಲಿ ನನ್ನನ್ನು ಮೊದಲು ವೇದಿಕೆ ಮೇಲೆ ಹತ್ತಿಸಿದ್ದು ವಸುಂಧರಾ ಟೀಚರ್. ಕೋಲಾಟ, ನಾಟಕ ಸೇರಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದರು. ಅದ್ಯಾವ ಮಟ್ಟಿಗೆ ಅಂದರೆ, ಒಂದಿನ ವೇದಿಕೆ ಮೇಲೆ ಕೋಲಾಟ ಕಾರ್ಯಕ್ರಮ ನಡೆಯುತ್ತಿತ್ತು. ಅದರಲ್ಲಿ ನನ್ನದು ಶ್ರೀಕೃಷ್ಣನ ಪಾತ್ರ. ವೇದಿಕೆ ಮೇಲೆ ಬರುತ್ತಿದ್ದಂತೆ ಡಾನ್ಸ್ ಮರೆತು ಹೋಯಿತು. ಇತ್ತ ವೇದಿಕೆ ಪಕ್ಕದಲ್ಲಿ ನಿಂತಿದ್ದ ವಸುಂಧರಾ ಟೀಚರ್ ತಾವೇ ಡಾನ್ಸ್ ಮಾಡುತ್ತ ನನಗೆ ಹೇಳಿಕೊಡುತ್ತಿದ್ದರು. ಅದನ್ನು ನೋಡಿ ನಾನು ಮಾಡಿದ್ದೆ. ‘ಆಟೋಗ್ರಾಫ್’ ಸಿನಿಮಾ ಮಾಡಿದಾಗ, ಫೋನ್ ಮಾಡಿ ನೋಡುವಂತೆ ಹೇಳಿದ್ದೆ. ಖುಷಿಯಿಂದ ಸರಿ ಎಂದಿದ್ದರು. ಆದರೆ, ಸಿನಿಮಾ ಬಿಡುಗಡೆ ಆಗುವ ಎರಡು ದಿನ ಮುನ್ನ ಅವರು ತೀರಿಕೊಂಡರು. ಈಗಲೂ ಅವರು ಸಿನಿಮಾ ನೋಡಿಲ್ಲ ಎಂಬ ಕೊರಗಿದೆ.
ನಮ್ಮ ಊರು ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರ. ತಂದೆ-ತಾಯಿ ಲಕ್ಷ್ಮೀಪುರಲ್ಲಿದ್ದರೂ ಆ ಲಕ್ಷ್ಮಿಯ ಕೃಪೆ ನಮ್ಮ ಮನೆತನದ ಮೇಲೆ ಇರಲಿಲ್ಲ. ಆದರೆ, ಸರಸ್ವತಿಯ ಕೃಪೆಯಿಂದ ತಂದೆ ತುಂಬ ಸೊಗಸಾಗಿ ಕರ್ನಾಟಕಿ ಧಾಟಿಯಲ್ಲಿ ಹಾಡುತ್ತಿದ್ದರು. ಪುಟ್ಟ ಹುಡುಗನಾಗಿದ್ದ ನಾನು ತಂದೆಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಹಾಗೆಯೇ ಅವರು ಹೋಗುವ ಕಾರ್ಯಕ್ರಮಗಳಿಗೂ ಆಗಾಗ ಹೋಗುತ್ತಿದ್ದೆ. ಬಾಲ್ಯದಲ್ಲಿ ನಾಚಿಕೆ ಸ್ವಭಾವದವನಾದ ನಾನು ಯಾರೂ ಇಲ್ಲದ ವೇಳೆ ಅಪ್ಪ ಹಾಡಿದಂತೆ ಹಾಡುತ್ತಿದ್ದೆ. ಪ್ರಸಿದ್ಧ ತೊಗಲುಗೊಂಬೆ ಕಲಾವಿದರಾಗಿದ್ದ ಮಾವ ಹಾಡು ಕೇಳಿಸಿಕೊಂಡು ನನ್ನ ಭವಿಷ್ಯ ಹಾಡುಗಾರಿಕೆಯಲ್ಲಿಯೇ ಇರಬಹುದೆಂದು ನಿರ್ಧರಿಸಿದರು.
ಹುಟ್ಟಿನಿಂದಲೇ ಬಡತನ ಬೆನ್ನಿಗೆ ಕಟ್ಟಿಕೊಂಡು ಬಂದ ಕುಟುಂಬದ ಯಜಮಾನನಾದ ತಂದೆಗೆ ಏನು ಮಾಡುವುದು ಎಂದು ತಿಳಿಯಲಿಲ್ಲ. ಆಗ ನಮ್ಮ ಮಾವ, ‘ಗದುಗಿನಲ್ಲಿ ಬಡ, ಅನಾಥ, ಅಂಧಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವ ಶಾಲೆ ಇದೆ. ಅದನ್ನು ಪೂಜ್ಯ ಪಂ.ಪುಟ್ಟರಾಜ ಕವಿ ಗವಾಯಿಗಳು ನಡೆಸುತ್ತಾರೆ. ನಿನ್ನ ಮಗನನ್ನು ಅಲ್ಲಿಗೆ ಸೇರಿಸುವೆ’ ಎಂದು ತಂದೆಗೆ ತಿಳಿಸಿ ನನ್ನನ್ನು ಗದುಗಿನ ಆಶ್ರಮಕ್ಕೆ ಕರೆದುಕೊಂಡು ಹೋದರು. ಪೂಜ್ಯರು ನನ್ನ ಬಗ್ಗೆ ಕೇಳಿ ತಿಳಿದುಕೊಂಡು ‘ಸ್ವಲ್ಪ ಹಾಡು... ನೋಡೋಣ’ ಎಂದರು. ಆ ಮಹಾನುಭಾವರ ಎದುರು ಹಾಡುವಾಗ ಮೈಯೆಲ್ಲ ಬೆವೆತುಹೋದೆ. ಕೇಳಿದ ಗುರುಗಳು ‘ಛಲೋ ಹಾಡತಾನ ಖರೇ... ಆದರ ಸ್ವಲ್ಪ ಚಂಚಲ ಅದಾನ’ ಎಂದು ಮಾವನಿಗೆ ಹೇಳಿದರು. ಮಾವನ ಒತ್ತಾಯಕ್ಕೆ ಆಶ್ರಮದಲ್ಲಿ ಉಳಿದೆ.
ನನ್ನ ಸಂಗೀತ ಸಾಧನೆ ದಿನಗಳಲ್ಲಿ ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ತಮ್ಮ ಅಂತಃಕರಣದಲ್ಲಿಟ್ಟುಕೊಂಡ ಪುಟ್ಟರಾಜ ಗವಾಯಿಗಳು 12 ವರ್ಷ ನನ್ನ ಹೊಟ್ಟೆ-ನೆತ್ತಿಯನ್ನು ನೋಡಿಕೊಂಡು ಬಾಳಿನ ದಾರಿ, ದಿಕ್ಕು, ದೇವರಾದರು. ದಯಾಘನನಾದ ಪರಮಾತ್ಮ ಭೂಮಿಯ ಮೇಲಿರುವುದಾದರೆ ಅದು ಗುರುಗಳ ರೂಪದಲ್ಲಿ ಎಂದು ಅಚಲವಾಗಿ ಇಂದಿಗೂ ನಂಬಿದ್ದೇನೆ. ಏನಾದರೂ ಸಾಧಿಸಿದ್ದರೆ ಅದೆಲ್ಲವೂ ಗುರುಕೃಪೆ, ಗುರುಕಾರುಣ್ಯ. ಪ್ರಾತಃಸ್ಮರಣೀಯ ಪಂ. ಪಂಚಾಕ್ಷರಿ ಗವಾಯಿಗಳು. ಅವರು ಅವರ ಗುರುಗಳಾದ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಅಂತಃಕರಣವನ್ನು ಉಂಡು ಬೆಳೆದವರು. ಅವರ ಸಕಾಲಿಕ ಸಹಾಯ, ಮಾರ್ಗದರ್ಶನ, ಆದೇಶದಂತೆ ಸಂಪೂರ್ಣವಾಗಿ ಸಂಗೀತಕ್ಕೆ ಸಮರ್ಪಿಸಿಕೊಂಡು ಅಂಧ, ಅನಾಥ ಮಕ್ಕಳಿಗೆ ಅವರು ತಂದೆಯಾಗಿ ಸ್ವತಃ ಹೆತ್ತವರು, ಬಂಧುಗಳಿಂದ ದೂರವಾದ ಮಕ್ಕಳನ್ನು ಎದೆಗೆ ಅವುಚಿಕೊಂಡು ದೇಶದಲ್ಲೇ ಪ್ರಥಮ ಸಂಚಾರಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಊರೂರು ಅಲೆದು ದಣಿದು ಕೊನೆಗೆ ಮಹಾದಾನಿ ಬಸರಿಗಿಡದ ವೀರಪ್ಪನವರ ಉದಾರ ಸಹಾಯ-ಸಹಕಾರದಿಂದ ಗದುಗಿನಲ್ಲಿ ನೆಲೆ ನಿಂತರು. ಆದರೂ ಆ ಸಂಗೀತ ಶಾಲೆಗೆ ಕಷ್ಟ ತಪ್ಪಲಿಲ್ಲ.
ಪಂ. ಪುಟ್ಟರಾಜ ಗವಾಯಿಗಳು ನಾಟಕಗಳನ್ನು ಬರೆದು ಶಾಲೆಯ ವಿದ್ಯಾರ್ಥಿಗಳಿಂದಲೇ ಆಡಿಸುವ ಒಪ್ಪಿಗೆಯನ್ನು ಗುರುಗಳಿಂದ ಪಡೆದು ಆ ಶಾಲೆಯನ್ನು ಸಬಲಗೊಳಿಸಿದರು. ಆ ಶಾಲೆ ‘ವೀರೇಶ್ವರ ಪುಣ್ಯಾಶ್ರಮ’ವಾಗಿ ಪ್ರಸಿದ್ಧವಾಗಿದೆ. ಆಶ್ರಮದಲ್ಲಿ ನನ್ನಂಥ ಸಾವಿರಾರು ವಿದ್ಯಾರ್ಥಿಗಳು ಪೂಜ್ಯರಿಂದ ಸಂಗೀತ ವಿದ್ಯೆ ಕಲಿತು ಬಾಳನ್ನು ರೂಪಿಸಿಕೊಂಡಿದ್ದಾರೆ. ಆ ಗುರುಗಳ ಸ್ಮರಣೆ ಮಾಡದೆ ನಾನು ಸೂರ್ಯನ ಬೆಳಕನ್ನೂ ಕಾಣಲಾರೆ.
| ಬಿ.ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಕೊಬ್ಬರಿ ಸೀಮೆಯಾದ ತಿಪಟೂರಿನಲ್ಲಿ ವ್ಯಾಪಾರಸ್ಥರ ಕುಟುಂಬ ನಮ್ಮದು. ಅಜ್ಜ, ತಂದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಯಾರ ಜಾತಿಯನ್ನೂ ನೋಡುತ್ತಿರಲಿಲ್ಲ. ಮನೆಯಲ್ಲಿ ದೇವರಮನೆಯೊಂದನ್ನು ಬಿಟ್ಟು ಯಾರು ಎಲ್ಲಿ ಬೇಕಾದರೂ ಓಡಾಡಬಹುದಿತ್ತು. ಮೇಲು-ಕೀಳು ಇಲ್ಲದೇ ಸಮಾನತೆಯ ಭಾವವನ್ನು ನನ್ನಲ್ಲಿ ಬಿತ್ತಿದ ಅಜ್ಜ ಹಾಗೂ ತಂದೆ ಬಿ.ಎಸ್. ಚಂದ್ರಶೇಖರಯ್ಯ ಅವರೇ ನನ್ನ ಬಾಳಿಗೆ ನಿಜವಾದ ಗುರುಗಳು. ಮನೆಯ ವಾತಾವರಣವೇ ನನಗೆ ಗುರುವಾಗಿತ್ತು. ಬಿಇ ಶಿಕ್ಷಣದ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಪೂರ್ಣಾವಧಿ ಕಾರ್ಯಕರ್ತನಾಗಿದ್ದಾಗ ಪ್ರೊ. ಕೃಷ್ಣ ಭಟ್, ದತ್ತಾತ್ರೇಯ ಹೊಸಬಾಳೆ ಮೊದಲಾದವರು ಸಮಾಜಕ್ಕೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟರು. ಆದ್ದರಿಂದ ಅವರನ್ನು ಸಹ ನಾನು ಗುರುಗಳಾಗಿಯೇ ನೋಡುತ್ತೇನೆ. ಸಂಘ ಪರಿವಾರದ ಕಾರ್ಯಕರ್ತನಾಗಿದ್ದಾಗ ಅಲ್ಲಿಯೂ ಅನೇಕರು ಬದುಕಿನ ನಾನಾ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಬಿಜೆಪಿಗೆ ಬಂದ ನಂತರ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಅನಂತಕುಮಾರ್ ಅವರಿಂದಲೂ ರಾಜಕೀಯದ ಪಾಠ ಕಲಿತಿದ್ದೇನೆ. ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳನ್ನು ನೋಡಿಯೂ ಕಲಿತಿದ್ದೇನೆ. ಆದ್ದರಿಂದ ಬದುಕಿನಲ್ಲಿ ಎಲ್ಲರನ್ನೂ ಗುರುವಾಗಿ ಕಾಣಲು ಇಚ್ಛಿಸುತ್ತೇನೆ. ಓದಿ ಕಲಿತಿದ್ದಕ್ಕಿಂತ ನೋಡಿ ಕಲಿತಿದ್ದೇ ಹೆಚ್ಚು. ಪ್ರತಿಯೊಬ್ಬರಿಂದಲೂ ಕಲಿತಿರುವ, ಕಲಿಯುತ್ತಿರುವ ನಾನು ಸದಾ ವಿದ್ಯಾರ್ಥಿಯಾಗಿರುವುದಕ್ಕೆ ಇಷ್ಟಪಡುತ್ತೇನೆ.
ಜೀವನದಲ್ಲಿ ಒಬ್ಬರೇ ಗುರು ಎನ್ನುವುದಕ್ಕಿಂತಲೂ, ನನಗೆ ವಿವಿಧ ಹಂತದಲ್ಲಿ ಗುರುಗಳು ಸಿಕ್ಕಿದ್ದಾರೆ. ಭರತನಾಟ್ಯದಲ್ಲಿ ಪ್ರಾಥಮಿಕ ಭದ್ರಬುನಾದಿ ರೂಪಿಸಿದ ಗುರುಗಳು ತುಮಕೂರು ರಾಮಣ್ಣ. ಬೆಳಗ್ಗೆ 4.30ಕ್ಕೆ ತುಮಕೂರಿನಿಂದ ಹೊರಟು ನೃತ್ಯ ಕಲಿಸಲು 6 ಗಂಟೆ ವೇಳೆಗೆ ನಮ್ಮ ಮನೆಗೆ ಬಂದಿರುತ್ತಿದ್ದರು. ಕಲಿಸಲು ಇದ್ದ ಆಸಕ್ತಿ, ಅವರಲ್ಲಿದ್ದ ವಿದ್ಯೆ ಎಲ್ಲವನ್ನೂ ಕೊಟ್ಟಿದ್ದಾರೆ. ಅದೆಲ್ಲದರ ಜತೆಗೆ ಅವರ ಜೀವನವೇ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಕುಚಿಪುಡಿ ಕಲಿಯಲು ಮುಂದಾದಾಗ, ‘ನೀನು ಕುಚಿಪುಡಿ ಕಲಿಯಲು ಸಾಧ್ಯವೇ ಇಲ್ಲ’ ಎಂದು ಕೆಲವರು ಹೇಳಿದ ಮಾತು ನನಗೆ ಆಘಾತ ಮೂಡಿಸಿತು. ನೃತ್ಯದಿಂದಲೇ ವಿಮುಖವಾಗಿಬಿಡಬೇಕು ಎಂಬ ಹಂತ ತಲುಪಿದ್ದೆ. ಈ ಸಂದರ್ಭದಲ್ಲಿ ನನ್ನ ಕುಚಿಪುಡಿ ನೃತ್ಯಗುರುಗಳಾದ ಸಿ.ಆರ್. ಆಚಾರ್ಯ, ‘ನಿನ್ನಲ್ಲಿ ನೃತ್ಯಗಾರ್ತಿಯಾಗುವ ಎಲ್ಲ ಗುಣಗಳೂ ಇವೆ, ನಿನ್ನಿಂದ ಸಾಧ್ಯವಿದೆ’ ಎಂದರು. ಅವರು ಹೇಳಿದ ಅದೊಂದು ಮಾತು ನನ್ನ ಆಲೋಚನೆಯನ್ನೇ ಬದಲಾಯಿಸಿತು. ಮತ್ತೆ ಕೆಲವು ವರ್ಷದಲ್ಲಿ, ನನ್ನ ವಿವಾಹದ ನಂತರ, ಗುರುಗಳಾದ ಕೋರಡ ನರಸಿಂಹಾಚಾರ್ ಸಿಕ್ಕರು. ನೃತ್ಯದಲ್ಲಿ ರಾಮಣ್ಣ ನನ್ನನ್ನು ತಿದ್ದಿ, ತೀಡಿ ಒಂದು ರೂಪ ಕೊಟ್ಟಿದ್ದರು. ಅದರಿಂದಾಗಿಯೇ, ಮುಂದಿನ ಗುರುಗಳಿಗೆ ನನ್ನನ್ನು ರೂಪಿಸಲು ಸಹಾಯವಾಯಿತು. ಗುರು-ಶಿಷ್ಯ ನಡುವಿನ ಸಂಬಂಧ ಬೆಳೆಯಲು ಇಬ್ಬರೂ ಸಾಕಷ್ಟು ಸಮಯ ಕೊಡಬೇಕಾಗುತ್ತದೆ. ಅವರ ಸಿಟ್ಟು, ಕೋಪ, ತಿದ್ದುವಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ‘ನೀನಲ್ಲದಿದ್ದರೆ ಮತ್ತೊಬ್ಬನಲ್ಲಿ ಕಲಿಯುತ್ತೇನೆ’ ಎನ್ನುವಂಥ ಮನೋಭಾವವಿದ್ದರೆ ಉತ್ತಮ ಗುರು ಸಿಗಲಾರ.
ನನಗೆ ಬಹಳಷ್ಟು ಮೆಚ್ಚಿನ ಗುರುಗಳಿದ್ದಾರೆ. ಸಂಗೀತದಲ್ಲಿ ಚಿಂತಲಪಲ್ಲಿ ಶ್ರೀನಿವಾಸ್ ಮೆಚ್ಚಿನ ಗುರುಗಳಾದರೆ, ಸ್ಕೂಲಿನಲ್ಲಿ ಗಿರಿಜಾ ಮಿಸ್ ಅಂತಿದ್ದರು. ಅವರು ಹಾವಭಾವ ಬಳಸಿ ಪಾಠ ಮಾಡುತ್ತಿದ್ದರು. ನಾಲ್ಕನೇ ಕ್ಲಾಸ್ನಲ್ಲಿ ನಮ್ಮ ಕ್ಲಾಸ್ಟೀಚರ್ ಆಗಿದ್ದರು. ಪಿಟಿ ಮಾಸ್ಟರ್ ಆದ ಮುನಿರಾಜು ಸಹ ನಗಿಸಿ ಪಾಠ ಮಾಡುತ್ತಿದ್ದರು. ಅವರನ್ನೆಲ್ಲ ಯಾವತ್ತೂ ಮರೆಯುವುದಕ್ಕೆ ಸಾಧ್ಯವಿಲ್ಲ. ನನ್ನ ಪ್ರಕಾರ, ಎಲ್ಲರಿಗಿಂತ ದೊಡ್ಡ ಗುರುವೆಂದರೆ ಅದು ಜೀವನ ಮತ್ತು ಅನುಭವ. ನಾವು ಎಲ್ಲಿಯವರೆಗೂ ತಿದ್ದಿಕೊಳ್ಳುವುದಕ್ಕೆ ತಯಾರಿರುತ್ತೀವೋ, ಅಲ್ಲಿಯವರೆಗೂ ಜೀವನ ಕಲಿಸುತ್ತಲೇ ಇರುತ್ತದೆ. ಹಾಗಾಗಿ, ಜೀವನಕ್ಕಿಂತ ದೊಡ್ಡ ಗುರು ಬೇರೆ ಇಲ್ಲ. ಏಕೆಂದರೆ, ಯಾವ ವಯಸ್ಸಿನಲ್ಲಿ ಬೇಕಾದರೂ ನಾವು ಕಲಿಯುತ್ತ ಹೋಗಬಹುದು. ಜತೆಗೆ, ‘ಕನ್ನಡತಿ’ ಧಾರಾವಾಹಿಯಲ್ಲೂ ಬೇರೆಯವರಿಗೆ ಹೇಳಿಕೊಡುತ್ತ, ನಾನು ಸಹ ಸಾಕಷ್ಟು ಕಲಿಯುತ್ತಿದ್ದೇನೆ. ಪ್ರತಿದಿನ ಒಂದು ಹೊಸ ಕಲಿಕೆ, ಹೊಸ ಅನುಭವ ಇದ್ದೇ ಇರುತ್ತದೆ.
ರಂಗಭೂಮಿಯ ಗಾರುಡಿಗ ಬಿ.ವಿ. ಕಾರಂತರೇ ನನ್ನ ಮೇಲೆ ಪ್ರಭಾವ ಬೀರಿದ ಮೇಸ್ಟ್ರು. 1972-73ರಲ್ಲಿ ಬೆಂಗಳೂರಿನಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಇದ್ದೆವು. ನನ್ನ ಹಾಡಿನ ದೊಡ್ಡ ಅಭಿಮಾನಿ ಮೇಸ್ಟ್ರು. ಮ್ಯೂಸಿಕ್ ನಮ್ಮನ್ನು ಇನ್ನಷ್ಟು ಆತ್ಮೀಯರನ್ನಾಗಿಸಿತು. ಅವರ ಮಾನವೀಯತೆಯ ಅನುಸಂಧಾನ ನಮ್ಮನ್ನು ಹತ್ತಿರ ಸೇರಿಸಿತು. ಅವರು ನನ್ನನ್ನು ಎನ್ಎಸ್ಡಿಗೆ ಸೇರಿಸಿಕೊಂಡರು. ರಂಗಭೂಮಿಯಲ್ಲಿ ಸೋಲು-ಗೆಲುವು, ಲಾಭ-ನಷ್ಟ ಎಲ್ಲವೂ ಸಮಾನ ಎಂಬ ಕಾರಂತರ ಮಾತು ನನ್ನ ಮೇಲೆ ಪ್ರಭಾವ ಬೀರಿದೆ. ಮೈಸೂರಿನ ರೀಜನಲ್ ಶಾಲೆಗೆ ನಾಟಕದ ಶಿಕ್ಷಕರು ಬೇಕೆಂದಾಗ ಕಾರಂತರು ನನ್ನ ಹೆಸರು ಶಿಫಾರಸು ಮಾಡಿದರು. ಆದರೆ ನಾನು ಶಿಕ್ಷಕ ಅಲ್ಲ ರಂಗಭೂಮಿಯಲ್ಲಿ ಚಟುವಟಿಕೆ ಮಾಡಿಕೊಂಡಿದ್ದವನು ಎಂಬ ಕಾರಣಕ್ಕೆ ಹಿಂಜರಿದಿದ್ದೆ. ಆಗ ಕಾರಂತರು ಹೇಳಿದ ಮಾತು, ‘ದೆಹಲಿಯ ಪಟೇಲ್ ಶಾಲೆಯಲ್ಲಿ ನಾನು ಹಿಂದಿ ಶಿಕ್ಷಕನಾಗಿ ಮಕ್ಕಳಿಗೆ ನಾಟಕ ಕಲಿಸಿದೆ. ನಾನು ಅವರಿಂದ ಕಲಿತೆ. ರಂಗಭೂಮಿಯಲ್ಲಿ ಕಲಿಯಬೇಕು, ಕಲಿಸಬೇಕು. ನಾವು ಮಕ್ಕಳತನ ಬಿಟ್ಟು ಹೋಗಬಾರದು. ಮಕ್ಕಳಿಂದ ಕಲಿಯದಿದ್ದರೆ ಶಿಕ್ಷಕನಾಗಲು ಸಾಧ್ಯವಿಲ್ಲ’ ಎಂದು. ಆದರೂ ಹಿಂಜರಿಯುತ್ತ ಮೂರು ತಿಂಗಳು ಮಾತ್ರ ಇರುತ್ತೇನೆ ಎಂದು ಒಪ್ಪಿದೆ. ಆದರೆ ಮುಂದೆ ನಾಟಕದ ಶಿಕ್ಷಕನಾಗಿಯೇ ಮುಂದುವರಿದೆ. ಕಾರಂತರು ಮೈಸೂರು ರಂಗಾಯಣದ ನಿರ್ದೇಶಕರಾಗಿ ಬಂದ ನಂತರ ಅವರೊಂದಿಗೆ ಆ ಸಂಸ್ಥೆಯನ್ನು ಕಟ್ಟುವಲ್ಲಿ ಭಾಗಿಯಾದೆ. ರಂಗಭೂಮಿಗೆ ಮೇಸ್ಟ್ರು ಆದ ಕಾರಂತರು ಸಾಕಷ್ಟು ಕಲಿಸಿದ್ದಾರೆ. ಅವರೊಂದಿಗೆ ಕಳೆದ ಒಂದೊಂದು ಗಳಿಗೆಯೂ ಒಂದೊಂದು ಪಾಠ ಕಲಿಸಿದೆ.
ಮುಂದೆ ಗುರಿ, ಹಿಂದೆ ಗುರು ಎನ್ನುವ ಮಾತು ಅಕ್ಷರಶಃ ನನ್ನ ಪಾಲಿಗೆ ಹೇಳಿ ಮಾಡಿಸಿದಂತಿದೆ. ಅಂಥ ಗುರುವಿನಿಂದಲೇ ಇಂದು ನಾನು ಒಲಿಂಪಿಕ್ಸ್ನಲ್ಲಿ ಸ್ವರ್ಣ ಪದಕ ಗೆಲ್ಲುವ ಹಂತಕ್ಕೆ ಬೆಳೆದೆ. ಅವರೇ ನನ್ನ ಮೊದಲ ಗುರು ಜೈವೀರ್ ಚೌಧರಿ, ಅವರು ಗುರು ಅಷ್ಟೇ ಅಲ್ಲ, ನನ್ನ ಪಾಲಿಗೆ ಅಣ್ಣ ಕೂಡ. ನನ್ನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಮನ್ನಣೆ ಸಿಗುವಂತೆ ಮಾಡಿದರು. ಕೇವಲ ಅಭ್ಯಾಸಕ್ಕಾಗಿ ಜಾವೆಲಿನ್ ಎಸೆಯುತ್ತಿದ್ದಾಗ ನನ್ನನ್ನು ಗಮನಿಸಿದ ಚೌಧರಿ, ನನ್ನ ಬದುಕನ್ನೇ ಬದಲಿಸಿದರು. ಸ್ಪರ್ಧಾತ್ಮಕವಾಗಿ ಜಾವೆಲಿನ್ ಆಯ್ದುಕೊಳ್ಳುವಂತೆ ಪ್ರೇರಣೆ ನೀಡಿದರು. ಜಾವೆಲಿನ್ ಎಸೆದ ಮೊದಲ ದಿನವೇ ನನ್ನಲ್ಲಿ ಕನಸು ಬಿತ್ತಲು ಕಾರಣರಾದರು. ಕೇವಲ ಶಿಕ್ಷಕರ ದಿನದಂದು ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಪ್ರತಿದಿನವೂ ಅವರೊಂದಿಗೆ ಮಾತನಾಡುತ್ತೇನೆ. ವೃತ್ತಿ ಹಾಗೂ ವೈಯಕ್ತಿಕ ಜೀವನದ ಮಾರ್ಗದರ್ಶಕ ಅವರು. ಅಂಥ ಗುರುವನ್ನು ಪಡೆದಿದ್ದು ಪೂರ್ವಜನ್ಮದ ಪುಣ್ಯ. ಎಷ್ಟೇ ಎತ್ತರಕ್ಕೆ ಬೆಳೆದರೂ ಅವರ ಪಾಲಿಗೆ ಎಂದಿಗೂ ಶಿಷ್ಯನೇ. ನಾನು ಎತ್ತರಕ್ಕೆ ಏರಿದಷ್ಟು ಸಂಭ್ರಮ ಪಡುವವರು ಅವರೇ. ಶಿಕ್ಷಕರ ದಿನದ ಇಂಥ ಶುಭಸಂದರ್ಭದಲ್ಲಿ ನನ್ನ ಎಲ್ಲ ಗುರುಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನೊಬ್ಬ ಉತ್ತಮ ಅಥ್ಲೀಟ್ ಆಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ.