

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ ಗೊಳಿಸಿ ಡಿ. 31ರವರೆಗೂ ಅನ್ವಯವಾಗುವಂತೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ನ.1ರಂದು ರಾಜ್ಯೋತ್ಸವ ಸಮಾರಂಭಗಳಲ್ಲಿ ಹಾಗೂ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಜರ್ಗಳ ಬಳಕೆ ಕಡ್ಡಾಯಗೊಳಿಸಿ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಗರಿಷ್ಠ 500 ಜನರು ಸೇರಲು ಮಾತ್ರ ಅನುಮತಿ ನೀಡಿದೆ.
ರಾಜ್ಯಾದ್ಯಂತ ಆಚರಣೆಯಾಗಲಿರುವ ರಾಜ್ಯೋತ್ಸವವನ್ನು ಗೌರವಪೂರ್ವಕವಾಗಿ, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಸರಳವಾಗಿ ಆಚರಿಸುವಂತೆ ಸೂಚಿಸಿದೆ. ರಾಜ್ಯೋತ್ಸವ ಆಚರಿಸುವ ಸಂ&ಸಂಸ್ಥೆಗಳು, ಪೊಲೀಸ್, ಮಹಾನಗರ ಪಾಲಿಕೆ, ಸ್ಥಳಿಯ ಸಂಸ್ಥೆ, ವಿದ್ಯುತ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆ ಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಹಾಗೆಯೇ ಸಾಂಸತಿಕ ಮನರಂಜನಾ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಕನಿಷ್ಠ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ರಾಜ್ಯೋತ್ಸವದಲ್ಲಿ ಭಾಗವಹಿಸದಂತೆ ಸೂಚಿಸಲಾಗಿದೆ.
ಹಸಿರು ಪಟಾಕಿ ಮಾರಾಟ ಅವಕಾಶ: ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಹಾಗೂ ಸಿಡಿಸುವುದನ್ನು ನಿಷೇಧಿಸಿದೆ. ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರಕಾರ ಸೂಚಿಸಿದೆ.
ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ನ.1 ರಿಂದ ನ.10ರವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಬಹುದಾಗಿದ್ದು, ಮಳಿಗೆ ನಿರ್ಮಾಣಕ್ಕೆ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ ಅಂತರವಿರಬೇಕು. ಮಾರಾಟ ಮಳಿಗೆಗಳಿಗೆ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಜ್ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದು ಕಡ್ಡಾಯಗೊಳಿಸಿದೆ.