

ನಮ್ಮೆಲ್ಲರನ್ನು ಹೊತ್ತು ಪೋಷಿಸುತ್ತಿರುವ ಈ ಧರೆಯಲ್ಲಿ ಜನಸಂಖ್ಯೆ ಬೆಳೆಯುತ್ತ, ಅದರಲ್ಲಿನ ಸಂಪನ್ಮೂಲಗಳ ಪ್ರಮಾಣವು ಕುಗ್ಗುತ್ತಿರುವಂತೆ ಇಂದು ಬಹು ಚರ್ಚೆಯಾಗುತ್ತಿರುವ ಪ್ರಶ್ನೆಯೆಂದರೆ ‘ನಮ್ಮ ಭೂಮಿ ಹಾಗೂ ಅದರ ಮೇಲಿನ ಮಾನವ ಜನಾಂಗಕ್ಕೆ ಕೊನೆಗಾಲ ಬರುತ್ತಿದೆಯೇ? ಇನ್ನೆಷ್ಟು ಕಾಲ ನಾವು ಉಳಿಯಬಹುದು?’ ಇಂತಹ ಸಮಸ್ಯೆಗೆ ಸನಾತನ ಧರ್ಮದಲ್ಲಿ ಪರಿಹಾರ ಸೂತ್ರವಿದೆಯೇ? ಸುಸ್ಥಿರ ಅಭಿವೃದ್ಧಿಯ ಪ್ರಶ್ನೆ ಬಂದಾಗ ನಮಗೆ ಸಾಮಾನ್ಯವಾಗಿ ಕೇಳಿಬರುವ ಮೂರು ಮಾತುಗಳೆಂದರೆ, Reduce, Reuse ಹಾಗೂ Recycle. Reduce ಎಂದರೆ, ನಮ್ಮ ಅಗತ್ಯ ವಸ್ತುಗಳ ಬಳಕೆಯನ್ನು ಕಡಿಮೆ ಮಾಡೋಣ. Reuse ಎಂದರೆ, ಈ ವಸ್ತುಗಳನ್ನು ಪುನಃ ಬಳಕೆ ಮಾಡೋಣ. Recycle ಎಂದರೆ, ಇವುಗಳನ್ನು ಮತ್ತೆ ಮತ್ತೆ ಬಳಸುವಂತೆ ಪರಿವರ್ತಿಸೋಣ. ಈ ಮೂರು ಮಾತುಗಳಲ್ಲದೆ, ಸನಾತನ ಧರ್ಮ ಪರಿಣಾಮಕಾರೀ ಪರಿಹಾರವಾದ ಒಂದು ನಾಲ್ಕನೆಯ ಮಾತನ್ನು ಸಾರುತ್ತದೆ- "Refuse' ಎಂದರೆ ಅನಗತ್ಯವಾದ ವಸ್ತುಗಳ ಬಳಕೆಯನ್ನು ನಿರಾಕರಿಸು! ಇಂದಿನ ಜಗತ್ತನ್ನು ‘ಬಳಸು ಮತ್ತು ಬಿಸಾಡು’ ಸಂಸ್ಕೃತಿ (Use and throw culture) ಆವರಿಸಿದೆ; ಇದರ ಮೂಲವೆಂದರೆ ಲಂಗು-ಲಗಾಮಿಲ್ಲದ ಮತಿಹೀನವಾದ ದುಂದುವೆಚ್ಚ ಹಾಗೂ ಅಗತ್ಯ-ಅನಗತ್ಯ ವಸ್ತುಗಳ ಕೊನೆಯಿಲ್ಲದ ಉಪಭೋಗ. ಇಂತಹ ಪರಿಸ್ಥಿತಿಯಲ್ಲಿ ಮಾನವನು ತಾನೂ ಬದುಕಿ, ಇತರರೂ ಬದುಕುವುದಕ್ಕೆ ಸಹಾಯ ಮಾಡುವ (Live and let live) ಒಂದು ಮಾರ್ಗವನ್ನು ಸನಾತನಧರ್ಮ ತೋರುತ್ತದೆ.
ಬೃಹದಾರಣ್ಯಕೋಪನಿಷತ್ತಿನಲ್ಲಿ ಒಂದು ಸಣ್ಣ ಕಥೆಯಿದೆ. ಒಮ್ಮೆ ದೇವತೆಗಳು, ಮಾನವರು ಹಾಗೂ ದಾನವರು ಪ್ರಜಾಪತಿ ಬ್ರಹ್ಮನ ಬಳಿಗೆ ಬಂದು ತಮಗೆ ಉತ್ತಮ ಜೀವನಮಾರ್ಗ ಬೋಧಿಸಬೇಕೆಂದು ಪ್ರಾರ್ಥಿಸಿದರು. ಅವರೆಲ್ಲರಿಗೂ ಬ್ರಹ್ಮ ಉಪದೇಶಿಸಿದುದು ಒಂದೇ ಒಂದು ಅಕ್ಷರ! ಅದುವೇ ‘ದ’. ಈ ಒಂದೇ ಅಕ್ಷರವನ್ನು ಈ ಮೂವರು ಬೇರೆ-ಬೇರೆಯಾಗಿ ಅರ್ಥ ಮಾಡಿಕೊಂಡರು. ದೇವತೆಗಳು ಬಹು ಶಕ್ತಿಶಾಲಿಗಳು; ತಮ್ಮ ಶಕ್ತಿಯ ಪ್ರಯೋಗವನ್ನು ಇತಿ-ಮಿತಿಯಿಲ್ಲದೆ ಮಾಡಿದರೆ ಅದರಿಂದ ಇತರರಿಗೆ ಹಾನಿಯಾಗಬಹುದು. ಆದ್ದರಿಂದ ಅವರು ‘ದ’ ಎಂದರೆ ‘ದಮ’ವೆಂದು ಅರ್ಥಮಾಡಿಕೊಂಡರು. ದಮವೆಂದರೆ ಆತ್ಮಸಂಯಮ- ತಮ್ಮ ಶಕ್ತಿಯನ್ನು ಸೀಮಿತವಾಗಿ ಬಳಸುವುದು.
ಮಾನವರು ‘ದ’ ಎಂದರೆ ‘ದಾನ’ವೆಂದು ತಿಳಿದರು. ಏಕೆಂದರೆ ಬಹುಸಂಖ್ಯಾತ ಮಾನವರಲ್ಲಿ ಲೋಭವು ಅತೀ ಸಾಮಾನ್ಯ. ದಾನಪರ ಗುಣ ಲೋಭವನ್ನು ಅಂಕೆಯಲ್ಲಿಡುತ್ತದೆ. ದಾನವರಲ್ಲಿ ಕ್ರೌರ್ಯ ತುಂಬಿತುಳುಕುತ್ತಿರುತ್ತದೆ. ಆದ್ದರಿಂದ ಅವರು ‘ದಯೆ’ಯೆಂದು ಅರ್ಥಮಾಡಿಕೊಂಡರು. ಏಕೆಂದರೆ ದಯೆ ಕ್ರೌರ್ಯವನ್ನು ಸ್ವಲ್ಪಮಟ್ಟಿಗಾದರೂ ನಿಗ್ರಹಿಸುತ್ತದೆ. ಹೀಗೆ ಈ ಮೂರು ಗುಂಪುಗಳಿಗೆ ಸೇರಿದ ವ್ಯಕ್ತಿಗಳಿಗೆ ಮೂರು ಮುಖ್ಯ ಪಾಠಗಳೆಂದರೆ ದಮ, ದಾನ ಹಾಗೂ ದಯೆ.
ಉಪನಿಷತ್ತಿನ ಈ ಸಾಂಕೇತಿಕ ಕಥೆಯಲ್ಲಿ ಎಲ್ಲರಿಗೂ ಬೇಕಾದ ಮುಖ್ಯ ಪಾಠವಿದೆ. ಪ್ರತಿಯೊಬ್ಬ ಮಾನವನಲ್ಲಿಯೂ ದೈವೀ ಸ್ವಭಾವಕ್ಕೆ ಮೂಲವಾದ ಸಾತ್ವಿಕ ಗುಣ, ಮಾನವ ಸಹಜವಾದ ರಾಜಸಿಕ ಗುಣ ಹಾಗೂ ದಾನವ ಸಹಜವಾದ ತಾಮಸಿಕ ಗುಣಗಳು ಇರುತ್ತವೆ. ಸಾತ್ವಿಕ ಗುಣದ ಪ್ರಭಾವವೆಂದರೆ ನಿಸ್ವಾರ್ಥ, ನಿರ್ಲಿಪ್ತ ಹಾಗೂ ಪ್ರಶಾಂತತೆ; ರಾಜಸಿಕ ಗುಣವು ಸ್ವಾರ್ಥಪರ ಕರ್ಮಗಳ ಮೂಲ; ತಾಮಸಿಕ ಗುಣವೆಂದರೆ ಜಡತೆ ಹಾಗೂ ಬದುಕುಳಿಯುವ ಪ್ರವೃತ್ತಿ (Survival Instincts). ಹೀಗೆ ಮಾನವನ ಅಂತರಂಗದಲ್ಲಿ ಈ ಮೂವರೂ ಸೇರಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಾನವನೂ ದಮ, ದಾನ ಹಾಗೂ ದಯೆಗಳೆಂಬ ಮೂರು ಮೌಲ್ಯಗಳನ್ನು ಆಚರಿಸಬೇಕು. ಜಗತ್ತಿನ ಎಲ್ಲ ಸಂಪನ್ಮೂಲಗಳನ್ನು ಕೆಲವರೇ ನಿಯಂತ್ರಿಸುತ್ತಿರುವ ಇಂದಿನ ಜಗತ್ತಿನಲ್ಲಿ ಸಹಜವಾಗಿ ‘ಉಳ್ಳವರು’ ಹಾಗೂ ‘ಇಲ್ಲದವರು’ ಎಂಬ ಆಧಾರದಲ್ಲಿ ಮಾನವರ ವರ್ಗೀಕರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮೂರು ಮೌಲ್ಯಗಳು ಮಹತ್ತರ ಪ್ರಾಧಾನ್ಯ ಪಡೆಯುತ್ತವೆ. ಆದರೆ ಈ ಮೌಲ್ಯಗಳು ಇಂದು ಜನಪ್ರಿಯ ಚರ್ಚೆಗೆ ಗ್ರಾಸವಾದ ಸುಸ್ಥಿರ ಅಭಿವೃದ್ಧಿಗೆ ಹೇಗೆ ಪ್ರಸ್ತುತವಾಗಬಲ್ಲವು?
ಈ ಮೌಲ್ಯಗಳ ಪೈಕಿ ಮೊದಲನೆಯದಾದ ದಮ ಅಥವಾ ಆತ್ಮಸಂಯಮವನ್ನು ತೆಗೆದುಕೊಳ್ಳೋಣ. ಶ್ರೀಮಂತ ಹಾಗೂ ಶಕ್ತಿಶಾಲಿ ವ್ಯಕ್ತಿಗಳಾಗಲೀ, ರಾಷ್ಟ್ರಗಳಾಗಲೀ ಸಂಪನ್ಮೂಲಗಳ ಹಾಗೂ ಅಗತ್ಯ ವಸ್ತುಗಳ ಬಳಕೆಯಲ್ಲಿ ಆತ್ಮಸಂಯಮ ಕಂಡುಕೊಂಡಾಗ ಅದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಶ್ರೀಮಂತ ಪ್ರಬಲ ರಾಷ್ಟ್ರಗಳು ದಮವನ್ನು ಆಚರಿಸಿದಾಗ ಸಹಜವಾಗಿ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಸಮತೋಲನವುಂಟಾಗುತ್ತದೆಯಲ್ಲವೇ? ಇದರಿಂದ ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುವ ‘ನಮ್ಮ ಅಗತ್ಯ ವಸ್ತುಗಳ ಬಳಕೆಯನ್ನು ಕಡಿಮೆ ಮಾಡೋಣ’ (Reduce) ಎಂಬ ತತ್ತ್ವದ ಪಾಲನೆಯಾಗುತ್ತದೆ.
ಎರಡನೆಯ ಮೌಲ್ಯ ‘ದಾನ’. ದಾನವು ಸಾಮಾಜಿಕ ಸಮಾನತೆಗೆ ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ನಾವು ಉಪಯೋಗಿಸುವ ಕೆಲವು ವಸ್ತುಗಳು ಕಾಲ ಕಳೆದಂತೆ ನಮಗೆ ನಿರುಪಯೋಗವಾಗುತ್ತವೆ. ಆದರೆ ಅವುಗಳ ಮೇಲಿನ ವ್ಯಾಮೋಹದಿಂದ ಸುಮ್ಮನೆ ಶೇಖರಣೆ ಮಾಡಿ ಇಟ್ಟುಕೊಂಡಿರುತ್ತೇವೆ. ಅದರ ಬದಲು ಇಂಥ ವಸ್ತುಗಳು ಸುಸ್ಥಿತಿಯಲ್ಲಿ ಇರುವಾಗಲೇ ಅಗತ್ಯವಿರುವ ಜನರಿಗೆ ದಾನ ಮಾಡುವುದರಿಂದ ಸಂಪನ್ಮೂಲಗಳ ಪರಿಪೂರ್ಣ ಸದುಪಯೋಗವಾಗುತ್ತದೆ. ಇದುವೇ ‘ಈ ವಸ್ತುಗಳನ್ನು ಪುನಃ ಪುನಃ ಬಳಕೆ ಮಾಡೋಣ’ (Reuse) ಎಂಬ ತತ್ತ್ವದ ಅನುಷ್ಠಾನ.
ಮೂರನೇ ಮೌಲ್ಯ ‘ದಯೆ’. ‘ಇವುಗಳನ್ನು ಪುನಃ ಪುನಃ ಬಳಸುವಂತೆ ಪರಿವರ್ತಿಸೋಣ’ (Recycle)-ಎಂಬ ತತ್ತ್ವದ ಆಚರಣೆಗೆ ಸಹಾಯಕ. ದಯೆಯ ಆಧಾರದಲ್ಲಿ ಸಕಲ ಜೀವರಾಶಿಗಳ ರಕ್ಷಣೆಯಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳು ಮಾನವರಿಗೆ ಮಾತ್ರ ಸೇರಿದ ಸ್ವತ್ತುಗಳಲ್ಲ; ಭೂಮಿಯ ಮೇಲಿರುವ ಇತರ ಜೀವರಾಶಿಗಳಿಗೂ ಇವುಗಳ ಮೇಲೆ ಅಧಿಕಾರವಿದೆ. ನಿತ್ಯೋಪಯೋಗಿ ವಸ್ತುಗಳ ಉತ್ಪಾದನೆಗಾಗಿ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಗಾಳಿ, ಭೂಮಿಯಲ್ಲಿ ಹುದುಗಿರುವ ಅನೇಕ ವಸ್ತುಗಳನ್ನು ವ್ಯಯ ಮಾಡುತ್ತೇವೆ. ನದಿ ಅಥವಾ ಕೆರೆ-ಬಾವಿಗಳಾಗಿರಬಹದು, ಅವುಗಳ ನೀರಿನಲ್ಲಿ ಜಲಚರಗಳಿರುತ್ತವೆ. ಅದೇ ರೀತಿಯಲ್ಲಿ ಗಾಳಿ ನಮ್ಮ ಉಸಿರಾಟಕ್ಕೆ ಮಾತ್ರವಲ್ಲದೆ ಇತರ ಪಶು-ಪಕ್ಷಿಗಳ ಉಸಿರಾಟಕ್ಕೂ ಅಗತ್ಯ. ಇಂತಹ ಸಂಪನ್ಮೂಲಗಳನ್ನು ನಮ್ಮ ಉಪಭೋಗಕ್ಕಾಗಿ ದುರುಪಯೋಗ ಮಾಡಿದಾಗ ಅವು ಕ್ಷೀಣಿಸುತ್ತವೆ ಅಲ್ಲದೆ, ಪರಿಸರ ಕಲುಷಿತವಾಗುತ್ತದೆ. ಇದರಿಂದಾಗಿ ಇತರ ಜೀವರಾಶಿಗಳ ಜೀವನವೂ ದುರ್ಭರವಾಗುತ್ತದೆ. ನಮ್ಮ ಉಪಯೋಗಕ್ಕಾಗಿ ಮತಿಹೀನ ರೀತಿಯಲ್ಲಿ ಅರಣ್ಯಗಳನ್ನು ನಾಶಮಾಡುವುದು, ನದಿಗಳ ಗತಿಯನ್ನು ಬದಲಾಯಿಸುವುದು ಅಥವಾ ಕಾರ್ಖಾನೆಗಳ ತ್ಯಾಜ್ಯ ಜಲಮೂಲಗಳಿಗೆ ಬಿಡುವುದು ಅಥವಾ ಹಾನಿಕರವಾದ ಅನಿಲಗಳನ್ನು ವಾತಾವರಣಕ್ಕೆ ಬಿಡುವುದು- ಇಂತಹ ಕ್ರಿಯೆಗಳಿಂದ ಮಾನವರಿಗೆ ಹಾನಿಯಾಗುವುದಲ್ಲದೆ, ಎಷ್ಟೋ ಜೀವರಾಶಿಗಳ ವಿನಾಶವಾಗುತ್ತದೆ. ಇಂತಹ ಕ್ರೌರ್ಯವನ್ನು ಅಂತ್ಯಗೊಳಿಸಲು ಮಾನವನು ತನ್ನ ಎಲ್ಲ ಸಹಜೀವಿಗಳ ಬಗ್ಗೆ ದಯೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭೂಮಿಯ ಸೀಮಿತ ಸಂಪನ್ಮೂಲಗಳನ್ನು ಸ್ವಾರ್ಥ-ಲೋಭಗಳಿಗಾಗಿ ಕೊಳ್ಳೆಹೊಡೆಯುವುದನ್ನು ನಿಲ್ಲಿಸುತ್ತೇವೆ. ಇಂತಹ ಸಂಪನ್ಮೂಲಗಳ ಮಿತವ್ಯಯ ಮತ್ತು ನಾವು ಉಪಯೋಗಿಸಿದ ವಸ್ತುಗಳನ್ನು ಪುನಃ ಪುನಃ ಬಳಸುವುದಕ್ಕೆ ಪರಿವರ್ತಿಸುವುದು ಹಾಗೂ ತ್ಯಾಜ್ಯವಸ್ತುಗಳನ್ನು ಸರಿಯಾದ ರೀತಿಯಲ್ಲಿ ಜವಾಬ್ದಾರಿಯಿಂದ ವಿಲೇವಾರಿ ಮಾಡುವುದು- ಇವುಗಳಿಂದ ನಾವು ಸಹಜೀವಿಗಳಿಗೆ ಆಗುವ ತೊಂದರೆಯನ್ನು ನಿವಾರಿಸಬಹುದು.
ಭಾರತೀಯರು ಪ್ರಾಚೀನಕಾಲದಿಂದಲೂ ಈ ಮೂರು ಮೌಲ್ಯಗಳನ್ನು ಸ್ವಯಂಪ್ರೇರಿತವಾಗಿ ಪಾಲಿಸುತ್ತಿದ್ದರು. ಧನಿಕರಾಗಲೀ, ದರಿದ್ರರಾಗಲೀ ನೈಸರ್ಗಿಕ ಸಂಪನ್ಮೂಲಗಳನ್ನು ದುರ್ವ್ಯಯ ಮಾಡುತ್ತಿರಲಿಲ್ಲ. ಈಗ ನಡೆಯುತ್ತಿರುವಂತೆ ಸಾಲ ಮಾಡಿಯಾದರೂ ಅನಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಹವ್ಯಾಸವಂತೂ ದೂರದ ಮಾತಾಗಿತ್ತು. ಉಪಯೋಗಿಸಿದ ವಸ್ತುಗಳನ್ನು ಪುನಃ ಪುನಃ ಬಳಸುತ್ತಿದ್ದರು. ಬೆಳೆಯುತ್ತಿರುವ ಹಿರಿಯ ಮಕ್ಕಳ ಉಡುಪುಗಳನ್ನು ಕಿರಿಯ ಮಕ್ಕಳಿಗೆ ಉಪಯೋಗಿಸುತ್ತಿದ್ದರು. ಎಲ್ಲರೂ ತಮ್ಮ ಕೈಲಾದಷ್ಟು ದಾನ ಮಾಡಿ ದುರ್ಬಲರಿಗೆ ಸಹಾಯ ಮಾಡುತ್ತಿದ್ದರು. ಪ್ರತಿ ಮನೆಯಲ್ಲಿ ಅಡುಗೆ ಮಾಡುವಾಗ ತಮಗೆ ಮಾತ್ರವಲ್ಲದೆ ಹಸಿದು ಬರುವ ಇತರ ಕೆಲವರಿಗಾದರೂ ಆಹಾರ ಸಿದ್ಧಪಡಿಸುತ್ತಿದ್ದರು. ಭಾರತೀಯ ಸಂಪ್ರದಾಯದಲ್ಲಿ ಭಕ್ತಿ-ಕೃತಜ್ಞತೆಗಳಿಂದ ಭೂಮಿ, ನದಿ, ಸರೋವರ, ಪರ್ವತ, ವೃಕ್ಷ ಹಾಗೂ ಪ್ರಾಣಿಗಳನ್ನೂ ಪೂಜಿಸುವ ಸಂಪ್ರದಾಯವಿತ್ತು. ಇವುಗಳೆಲ್ಲದರಲ್ಲಿಯೂ ದೇವರನ್ನು ನೋಡುತ್ತಿದ್ದರು. ಇದರಿಂದಾಗಿ ಪರಿಸರವನ್ನು ತ್ಯಾಜ್ಯವಸ್ತುಗಳಿಂದ ಬೇಜವಾಬ್ದಾರಿಯಾಗಿ ಕಲುಷಿತಗೊಳಿಸುತ್ತಿರಲಿಲ್ಲ. ಹೆಚ್ಚಿನ ಪ್ರಾಚೀನ ಭಾರತೀಯ ಸಮುದಾಯಗಳಲ್ಲಿ ನೈಸರ್ಗಿಕವಾಗಿ ಹಾಗೂ ಸಾವಯವವಾಗಿ ಉತ್ಪಾದಿಸಿದ ವಸ್ತುಗಳನ್ನು ಬಳಸುತ್ತಿದ್ದರು. ಆಹಾರ ವಸ್ತುಗಳಿಂದ ಹಿಡಿದು ತಾವು ವಾಸಿಸುವ ಗೃಹಗಳ ನಿರ್ವಣದವರೆಗೆ ಇದು ಅನ್ವಯವಾಗುತ್ತಿತ್ತು. ಇಂತಹ ವಸ್ತುಗಳು ಸುಲಭವಾಗಿ ಜೈವಿಕ ವಿಘಟಿತವಾಗುತ್ತಿದ್ದುದರಿಂದ (Bio-degrading) ಅವುಗಳಿಂದ ಪರಿಸರಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ. ಈ ರೀತಿಯಲ್ಲಿ ದಮ, ದಾನ, ದಯೆಗಳ ಆಚರಣೆ ಸಾಮಾಜಿಕ ಜೀವನದಲ್ಲಿ ವ್ಯಕ್ತವಾಗುತ್ತಿದ್ದವು.
ಈ ಮೇಲಿನ ಮೂರು ಮೌಲ್ಯಗಳ ಜೊತೆಗೆ ಸನಾತನ ಧರ್ಮದ ಗ್ರಂಥಗಳು ಸುಸ್ಥಿರ ಸಮಾಜದ ಸ್ಥಾಪನೆಗೆ ಅಗತ್ಯವಾದ ನಾಲ್ಕನೆಯ ಮೌಲ್ಯ ಬೋಧಿಸುತ್ತದೆ. ಅದುವೇ ‘ತ್ಯಾಗ’- ಇತರರನ್ನು ಗಮನದಲ್ಲಿಟ್ಟುಕೊಂಡು ನಿನಗೆ ಅನಗತ್ಯವಾದುದೆಲ್ಲವನ್ನೂ ನಿರಾಕರಿಸು-Refuse. ಯಜುರ್ವೆದದಲ್ಲಿ ಬರುವ ಈಶಾವಾಸ್ಯೋಪನಿಷತ್ತಿನ ಪ್ರಥಮ ಶ್ಲೋಕ ಹೀಗಿದೆ:
ಈಶಾವಾಸ್ಯಮಿದಂ ಸರ್ವ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
‘ಈ ಚರಾಚರ ಜಗತ್ತೆಲ್ಲವೂ ಈಶ್ವರನಿಂದ ತುಂಬಿದೆ. ಆದ್ದರಿಂದ ನೀನು ಈ ಜಗತ್ತಿನ ವಸ್ತುವಿಷಯಗಳನ್ನು ತ್ಯಾಗಬುದ್ಧಿಯಿಂದ ಅನುಭವಿಸು. ಎಂದೂ ಇತರರಿಗೆ ಸೇರಿದುದನ್ನು ಆಶಿಸಬೇಡ’.
ಈ ಸರಳ ವಾಕ್ಯಗಳಲ್ಲಿ ಸನಾತನ ಧರ್ಮ ಮಾನವ ಜನಾಂಗಕ್ಕೆ ಅಗತ್ಯವಾದ ಪಾಠ ಕಲಿಸುತ್ತದೆ. ‘ಈ ವಿಶ್ವವೆಲ್ಲವೂ ಈಶ್ವರನ ಪ್ರತಿರೂಪವೇ ಆಗಿರುವುದರಿಂದ ಎಲ್ಲವನ್ನೂ ಹಾಗೂ ಎಲ್ಲರನ್ನೂ ಪೂಜ್ಯಭಾವದಿಂದ ನೋಡು. ನಿನಗಿಂತ ಇತರರ ಅವಶ್ಯಕತೆಗಳಿಗೆ ಮೊದಲ ಪ್ರಾಶಸ ್ಱ ನೀಡು. ಇತರರಿಗಾಗಿ ತ್ಯಾಗ ಮಾಡಿ ನಿನಗೆ ಅವಶ್ಯಕವಾದುದನ್ನು ಮಾತ್ರ ನೀನು ಉಪಭೋಗಿಸು. ಇತರರ ಅವಶ್ಯಕತೆಗಳನ್ನು ನೀನು ಅತಿಕ್ರಮಿಸಬೇಡ’. ಇದುವೇ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ನಿಸ್ವಾರ್ಥ ನಿರಾಮಯ ಸುಖೀ ಜೀವನದ ಮೂಲಸೂತ್ರ.
ದಮ, ದಾನ, ದಯೆ ಹಾಗೂ ತ್ಯಾಗ- ಈ ನಾಲ್ಕು ಮೌಲ್ಯಗಳನ್ನು ಪತಂಜಲಿ ಯೋಗಸೂತ್ರದಲ್ಲಿ ಇನ್ನೊಂದು ರೂಪದಲ್ಲಿ ಕಾಣಬಹುದು. ದೈವೀ ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗದಲ್ಲಿ ಪ್ರಥಮ ಸೋಪಾನಗಳಾದ ಯಮ-ನಿಯಮಗಳಲ್ಲಿ ಈ ಮೌಲ್ಯಗಳನ್ನೇ ಪ್ರತಿಪಾದಿಸಲಾಗಿದೆ. ಯಮ-ನಿಯಮಗಳಲ್ಲಿ ಒಂದಾದ ‘ಸಂತೋಷ’ವೆಂದರೆ, ತನ್ನ ಆಸೆ-ಅವಶ್ಯಕತೆಗಳನ್ನು ಮಿತಿಯಲ್ಲಿಟ್ಟುಕೊಂಡು ಸಂತೃಪ್ತಿಯ ಜೀವನ ನಡೆಸುವುದು; ಅದುವೇ ದಮ. ‘ಅಪರಿಗ್ರಹ’ ಅಥವಾ ‘ಅಸಂಗ್ರಹ’ವೆಂದರೆ, ತನಗೆ ಅನಗತ್ಯವಾದುದನ್ನು ತನ್ನಲ್ಲಿಯೇ ಇಟ್ಟುಕೊಳ್ಳದೇ ಇಲ್ಲದವರಿಗೆ ನೀಡುವುದು; ಇದುವೇ ದಾನ. ಅಹಿಂಸೆಯೆಂದರೆ, ಇತರರನ್ನು ಹಿಂಸಿಸದೆ ಜೀವಿಸುವುದು; ಇದುವೇ ದಯೆ. ಕೊನೆಯದಾಗಿ ‘ಅಸ್ತೇಯ’ವೆಂದರೆ, ಇತರರ ವಸ್ತುಗಳನ್ನು ತಾನು ಕೊಳ್ಳೆಹೊಡೆಯದೇ ಇರುವುದು; ಇದುವೇ ತ್ಯಾಗ.
ಇಂದಿನ ಜಗತ್ತಿನಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಿ, ಸುಸ್ಥಿರ ಸಮಾಜ ಸ್ಥಾಪಿಸಲು ಭೌತಿಕವಾದದ ಪರಿಹಾರಗಳಾದ ಬಂಡವಾಳಶಾಹಿ ಅಥವಾ ಸಮಾಜವಾದಿ ವಿಧಾನಗಳನ್ನು ಮಾತ್ರ ಪರಿಗಣಿಸುತ್ತಿದ್ದೇವೆ. ಬಂಡವಾಳಶಾಹಿ ತತ್ತ್ವವು ಲೋಭದ ಆಧಾರದ ಮೇಲೆ ನಿಂತಿದೆ. ಸಮಾಜವಾದಿ ತತ್ತ್ವವು ದ್ವೇಷದ ಆಧಾರದ ಮೇಲೆ ನಿಂತಿದೆ. ಆದರೆ ಸನಾತನ ಧರ್ಮ ಆಧ್ಯಾತ್ಮಿಕವಾದದ ನೆಲೆಯಲ್ಲಿ ದಮ, ದಾನ, ದಯೆ ಹಾಗೂ ತ್ಯಾಗಗಳ ಮಾರ್ಗವನ್ನು ಬೋಧಿಸುತ್ತದೆ. ಇಲ್ಲಿಯವರೆಗೆ ಭೌತಿಕವಾದದ ಬೆನ್ನು ಹತ್ತಿ ವೈಫಲ್ಯ ಕಂಡಿದ್ದೇವೆ. ಒಮ್ಮೆಯಾದರೂ ಆಧ್ಯಾತ್ಮಿಕವಾದದ ಪರಿಹಾರಗಳ ಆಚರಣೆಗೆ ಪ್ರಯತ್ನಿಸುವುದು ಒಳಿತಲ್ಲವೇ?
(ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)