ಭಕ್ತರ ಪೊರೆಯುವ ಗುಡ್ಡಾಪುರ ದಾನಮ್ಮ...

asdasdasdd
Published on
ಕಲ್ಯಾಣ ಕ್ರಾಂತಿಯ ನಂತರ ಶರಣರ ವಚನಗಳನ್ನು ಕಾಪಾಡುವ, ಪ್ರಸಾರ ಮಾಡುವ ಕಾರ್ಯವನ್ನು ಮಾಡಿದವಳು ಗುಡ್ಡಾಪುರ ದಾನಮ್ಮ. ಜೀವನದುದ್ದಕ್ಕೂ ಲೋಕಸಂಚಾರ ಮಾಡಿ, ದೀನರ ಸೇವೆ ಮಾಡಿದ ದಾನಮ್ಮನಿಗೆ ಈಗಲೂ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಛಟ್ಟಿ ಅಮಾವಾಸ್ಯೆಯಂದು ಗುಡ್ಡಾಪುರ ದಾನಮ್ಮನ ಜಾತ್ರೆ ನಡೆಯುತ್ತದೆ.

|ಶಾರದಾ ಕೌದಿ

ಸುಮಾರು 900 ವರ್ಷಗಳಿಂದ ನಿತ್ಯವೂ ತ್ರಿಕಾಲ ಪೂಜೆಗೊಳ್ಳುತ್ತಿರುವ ಶರಣೆ- ಗುಡ್ಡಾಪುರ ದಾನಮ್ಮ. ಬೆಳಗ್ಗೆ ಬಾಲಕಿಯಂತೆ, ಮಧ್ಯಾಹ್ನ ಯುವತಿಯಾಗಿ, ಸಂಜೆಯಲ್ಲಿ ವೃದ್ಧೆಯಂತೆ ಅಲಂಕರಿಸಿದ ದೇವಿಯನ್ನು ನೋಡುವುದೇ ಒಂದು ಭಾಗ್ಯ. ವಿಜಯಪುರದಿಂದ 30 ಕಿ.ಮೀ. ದೂರದ ಜತ್ತ ತಾಲೂಕಿನ ಗುಡ್ಡಾಪುರದ ಗುಡ್ಡದ ಮೇಲೆ ವಿಸ್ತಾರವಾದ ದಾನಮ್ಮ ದೇವಿ ದೇವಾಲಯವಿದೆ. ಮೂಲ ದೇವಸ್ಥಾನ ಚಾಲುಕ್ಯರ ಕಾಲದ ಸೋಮೇಶ್ವರನದ್ದು. ಜೀಣೋದ್ಧಾರಗೊಂಡ ಈ ದೇವಾಲಯದ ಬಾಗಿಲ ಚೌಕಟ್ಟಿನ ಮೇಲೆ ಮೂವರು ಮಹಿಳೆಯರ ಚಿತ್ರಗಳಿವೆ. ಮಧ್ಯದಲ್ಲಿ ಇರುವವಳೇ ದಾನಮ್ಮ. ಭವ್ಯವಾದ ಮಹಾದ್ವಾರ ಮತ್ತು ಗೋಪುರ. ಗರ್ಭಗುಡಿಯಲ್ಲಿ ಲಿಂಗಪೂಜೆಗೆ ಕುಳಿತ ಹಾಗೆ ಎಡಗೈಯಲ್ಲಿ ಇಷ್ಟಲಿಂಗ, ಬಲಗೈಯಲ್ಲಿ ಜಪಮಾಲೆ ಹಿಡಿದಿರುವ ದಾನಮ್ಮನ ಮೂರ್ತಿ. ಲಿಂಗಪೂಜೆ ಮಾಡುತ್ತಿರುವಾಗಲೇ ದಾನಮ್ಮ ಕಲ್ಲಾದಳು ಎಂಬ ನಂಬಿಕೆ ಭಕ್ತರಲ್ಲಿದೆ. ದಾನಮ್ಮ ಜನಿಸಿದ್ದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಉಮರಾಣಿಯಲ್ಲಿ. ತಂದೆ ಅನಂತರಾಯ, ತಾಯಿ ಶಿರಸಮ್ಮ. ದಾನಮ್ಮನ ಮೂಲ ಹೆಸರು ಲಿಂಗಮ್ಮ. ತಂದೆ ಪತ್ತಾರ ಕಾಯಕ ಮಾಡುತ್ತಿರುತ್ತಾರೆ.

ಗುರುಕಾರುಣ್ಯದಿಂದ ಜನಿಸಿದ ಲಿಂಗಮ್ಮ ಚಿಕ್ಕಂದಿನಲ್ಲೇ ವೀರಯ್ಯನವರಿಂದ ಲಿಂಗದೀಕ್ಷೆ ಪಡೆದು ಸಿಧ್ದರಾಮರಿಂದ ಯೋಗ ಅಭ್ಯಾಸ ಮಾಡುತ್ತಾಳೆ. ದೃಷ್ಟಿಯೋಗ, ಹಠಯೋಗ ಕಲಿಯುತ್ತಾಳೆ. ಅಲ್ಲಿಂದ ಕಲ್ಯಾಣಕ್ಕೆ ಬರುತ್ತಾಳೆ. ದೀನರ ಸೇವೆ, ದಾಸೋಹ ಮುಂತಾದ ಕಾಯಕಗಳಿಂದಾಗಿ ಬಸವಣ್ಣನವರಿಂದ ದಾನ ದಾಸೋಹಿ ಎಂಬ ಅಭಿದಾನ ಪಡೆಯುತ್ತಾಳೆ. ನಂತರ ಸೋಮನಾಥ ಎಂಬ ಶಿವಭಕ್ತನೊಂದಿಗೆ ದಾನಮ್ಮನ ವಿವಾಹವಾಗುತ್ತದೆ. ಕಲ್ಯಾಣ ಕ್ರಾಂತಿ ನಂತರ ಅವರಿಬ್ಬರೂ ಶರಣ ಶರಣೆಯರ ವಚನಗಳನ್ನು ರಕ್ಷಿಸುವ ಮತ್ತು ಪಸರಿಸುವ ದೀಕ್ಷೆ ತೊಡುತ್ತಾರೆ. ಕೈಯಲ್ಲಿ ಖಡ್ಗ ಹಿಡಿದು ಶರಣರ ವಚನಗಳನ್ನು ರಕ್ಷಿಸಿದ ವೀರ ಗಣಾಚಾರಿ ದಾನಮ್ಮ. ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಹೀಗೆ ಅನೇಕ ಕಡೆ ಸಂಚಾರ ಹೊರಟು ಶರಣಧರ್ಮದ ಪ್ರಚಾರ ಕೈಗೊಳ್ಳುತ್ತಾರೆ.

ಇಷ್ಟಲಿಂಗದೀಕ್ಷೆ ಕೊಡುತ್ತಾ, ವಚನಗಳ ತಾಳೆಗರಿಗಳನ್ನು ಹಂಚುತ್ತಾ, ಶರಣ ತತ್ವದ ಪ್ರಚಾರ ಮಾಡುತ್ತಾ, ನೊಂದವರ ಕಣ್ಣೀರು ಒರೆಸುತ್ತಾ ಲೋಕಸಂಚಾರ ಮಾಡುತ್ತಾರೆ. ಕೊನೆಗೆ ಗುಡ್ಡಾಪುರಕ್ಕೆ ಬಂದು ಸೋಮೇಶ್ವರನ ಸನ್ನಿಧಿಯಲ್ಲಿ ದಾನಮ್ಮ ಐಕ್ಯ ಹೊಂದುತ್ತಾಳೆ. ಸಕಲ ಜೀವಾತ್ಮರಿಗೆ ಲೇಸನೆ ಬಯಸಿ ತನ್ನ ಬದುಕನ್ನು ಜ್ಯೋತಿಯಂತೆ ಬೆಳಗಿಸಿದವಳು ದಾನಮ್ಮ. ಶಿವನ ಅಪ್ಪಣೆಯ ಮೇರೆಗೆ ಗಿರಿಜೆಯು ಗುಡ್ಡಾಪುರದಲ್ಲಿ ಜನ್ಮತಾಳಿದಳು ಎಂಬ ಐತಿಹ್ಯವಿದೆ. ಈಗ ಗುಡ್ಡಾಪುರ ಸಾವಿರಾರು ಭಕ್ತರನ್ನು ಸೆಳೆಯುವ ಧಾರ್ವಿುಕ ಪುಣ್ಯಕ್ಷೇತ್ರ. ಸಾವಿರಾರು ಮನೆತನಗಳ ಕುಲದೇವರಾಗಿರುವ ದಾನಮ್ಮನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲೇ ಬರುತ್ತಾರೆ. ಗುರುವಾರ ಮತ್ತು ಅಮಾವಾಸ್ಯೆ ದೇವಿಯ ದರ್ಶನಕ್ಕಾಗಿ ಇರುವ ವಿಶೇಷ ದಿನಗಳು. ಇನ್ನೂ ವಿಶೇಷ ಎಂದರೆ ದಾನಮ್ಮನಿಗೆ ಹೋಳಿಗೆ ಎಡೆಯೇ ಆಗಬೇಕು. ಗುಡ್ಡಾಪುರದಲ್ಲಿ ನಿತ್ಯವೂ ಬರುವ ಭಕ್ತರಿಗಾಗಿ ದಾಸೋಹ ನಡೆಯುತ್ತದೆ. ಛಟ್ಟಿ ಅಮಾವಾಸ್ಯೆಯಂದು ಗುಡ್ಡಾಪುರ ದಾನಮ್ಮನ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಬರುವ ಭಕ್ತರಿಗೆ ಹೋಳಿಗೆ ಪ್ರಸಾದವಿರುತ್ತದೆ. ದೇವಸ್ಥಾನದ ಟ್ರಸ್ಟ್​ನವರು ಭಕ್ತಾದಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತಾರೆ. ಮದುವೆಯಾಗದ ಹೆಣ್ಣುಮಕ್ಕಳು ಇಲ್ಲಿಗೆ ಬಂದು ಕಂಕಣ ಕಟ್ಟಿಸಿ ಕೊಳ್ಳುವುದು ವಾಡಿಕೆ. ಮಕ್ಕಳಾಗದವರು ದೇವಿಯ ಕೃಪೆಯಿಂದ ಮಕ್ಕಳನ್ನು ಪಡೆಯುತ್ತಾರೆ. ಇಷ್ಟಾರ್ಥ ಈಡೇರಿದ ಬಳಿಕ ಹರಕೆ ತೀರಿಸುವವರು, ದೀಡ ನಮಸ್ಕಾರ ಹಾಕುವವರನ್ನು ಇಲ್ಲಿ ಸದಾ ಕಾಲ ನೋಡಬಹುದು. ಇತ್ತಿತ್ತಲಾಗಿ ಧಾರವಾಡ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ದಾನಮ್ಮನ ದೇವಸ್ಥಾನಗಳು ನಿರ್ಮಾಣವಾಗಿರುವುದು ಜನರ ಭಕ್ತಿಯ ಸಂಕೇತವಾಗಿದೆ.

ಪುರಾಣ-ಶಾಸನಗಳಲ್ಲಿ ಪ್ರಸ್ತಾಪ

ದಾನಮ್ಮನ ಕುರಿತು ಶಾಸನ, ಪುರಾಣ, ಕಾವ್ಯ ರಗಳೆ, ಜನಪದದಲ್ಲಿ, ಐತಿಹಾಸಿಕ ಸ್ಮಾರಕಗಳಲ್ಲಿ ಉಲ್ಲೇಖಗಳಿವೆ. ದಾನಮ್ಮ ಐತಿಹಾಸಿಕ ವ್ಯಕ್ತಿ, ವೀರಗಣಾಚಾರಿ, ದಾನಚಿಂತಾಮಣಿ ಎಂಬುದನ್ನು ಶಿಲಾಶಾಸನಗಳು, ಸ್ಮಾರಕಗಳು ಖಚಿತಪಡಿಸುತ್ತವೆ. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ ಯಲ್ಲಿ ಈಕೆಯ ಚರಿತ್ರೆಯ ವಿವರವಿದೆ. ಲಿಂಗಮ್ಮಳನ್ನು ಹರಿಹರ ತನ್ನ ಕಾವ್ಯದಲ್ಲಿ ವರದಾನಿ ಗುಡ್ಡವ್ವೆ ಎಂದಿದ್ದಾನೆ. ಶಿವತತ್ವ ಚಿಂತಾಮಣಿ ಕಾವ್ಯದಲ್ಲಿ ದಾನಮ್ಮ ಬ್ರಹ್ಮಲಿಂಗೇಶ್ವರ ಸ್ಥಾಪಿಸಿದ ಕುರಿತು ಉಲ್ಲೇಖವಿದೆ. ಭೀಮಕವಿಯ ಬಸವಪುರಾಣದಲ್ಲಿ ಈಕೆಯ ಕುರಿತು ಕಥೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net