

| ಆರ್.ತುಳಸಿಕುಮಾರ್ ಬೆಂಗಳೂರು
ಮನುಷ್ಯನ ಬೇಕು, ಬೇಡಗಳನ್ನು ಪೂರೈಸುವ ಸಾಮರ್ಥ್ಯ ಭೂಮಿಗೆ ಇದೆಯಾದರೂ, ಆತನ ದುರಾಸೆಯನಲ್ಲ ಎಂಬ ಚಿಂತಕರ ಮಾತು ಅಭಿವೃದ್ಧಿ ಹೊಳೆಯಲ್ಲಿ ಕೊಚ್ಚಿಹೋಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲೇಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಗಳಲ್ಲಿ ಆಗಿರುವ ದುರ್ಘಟನೆಗಳು ಭಾರತಕ್ಕೆ ಎಚ್ಚರಿಕೆ ನೀಡಿವೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸರದ ಹಾನಿ ಪ್ರಮಾಣ ತುಸು ಕಡಿಮೆಯೇ. ಆದರೆ, ಅಗಾಧ ಜನಸಂಖ್ಯೆ ಹಾಗೂ ಅಭಿವೃದ್ಧಿ ನಾಗಾಲೋಟದ ಭರದಲ್ಲಿ ಭವಿಷ್ಯದ ಭಾರತ ಕೂಡ ಮಾಲಿನ್ಯಕ್ಕೆ ಒಳಗಾಗಿ ವಿವಿಧ ಸಮಸ್ಯೆಗಳಲ್ಲಿ ಸಿಲುಕುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಅಂತಹ ಸ್ಥಿತಿ ಬಾರದಿರಲು ಎಲ್ಲ ಕ್ಷೇತ್ರಗಳಲ್ಲೂ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಆರ್ಥಿಕತೆಗೆ ಹಸಿರು ಸ್ವರೂಪ ನೀಡುವ ಉಪಕ್ರಮದಿಂದ ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂಬುದು ತಜ್ಞರ ಸಲಹೆ.
ಇಂಗಾಲದ ಸೈನೆಡ್ ತೂಗುಗತ್ತಿ!: ಪ್ರಸ್ತುತ ಭಾರತ ಜನಭರಿತ ದೇಶವಾಗಿ ಮಾರ್ಪಟ್ಟಿದೆ. ಇಷ್ಟೊಂದು ಬೃಹತ್ ಮಟ್ಟದ ಜನರಿಗೆ ನೀರು, ಆಹಾರ, ವಸತಿ, ಮೂಲಸೌಕರ್ಯ ಹಾಗೂ ಇತರ ಸವಲತ್ತು ಒದಗಿಸುವುದು ದೊಡ್ಡ ಸವಾಲಾಗಿದೆ. ಇತ್ತೀಚಿಗೆ ನಗರೀಕರಣದಿಂದ ಹೊಸ ಹೊಸ ಸಮಸ್ಯೆ ಉದ್ಭವಿಸುತ್ತಿವೆ. ಔದ್ಯಮಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಹಳ್ಳಿಯಿಂದ ನಗರದತ್ತ ವಲಸೆ, ನಿರುದ್ಯೋಗ ಸಮಸ್ಯೆ ಎದುರಾಗಿದೆ. ಇವುಗಳ ನೇರ ಪರಿಣಾಮ ಜನರ ಜೀವನದ ಮೇಲೆಯೇ ಆಗಿದೆ. ನವದೆಹಲಿಯಲ್ಲಿ ಚಳಿಗಾಲದ ವೇಳೆ ಮಾಲಿನ್ಯ ಹೆಚ್ಚಾಗಿ ಪ್ರಾಣವಾಯು ಕುಸಿತದಿಂದಾಗಿ ಶಾಲೆಗಳಿಗೆ ರಜೆ ನೀಡಿ ಮಕ್ಕಳನ್ನು ಮನೆಯಲ್ಲೇ ಜೋಪಾನ ಮಾಡುವಂತಹ ಸ್ಥಿತಿ ನಿರ್ವಣವಾಗಿರುವುದು ಇದಕ್ಕೊಂದು ತಾಜಾ ಉದಾಹರಣೆ. ಇಂತಹ ಹಲವು ಆಪಾಯಗಳು ಕ್ರಮೇಣ ಬೃಹದಾಕಾರವಾಗುವ ಸಾಧ್ಯತೆ ಇದೆ. ಅದರಲ್ಲೂ ಇಂಗಾಲದ ಮಟ್ಟ ಅಪಾಯದ ಎಚ್ಚರಿಕೆ ನೀಡಿದೆ. ಇದು ಸೈನೆಡ್ ರೀತಿ ಒಂದೇ ಬಾರಿ ಮನುಕುಲಕ್ಕೆ ಅಪಾಯ ತಂದೊಡ್ಡುವ ಭೀತಿ ಎದುರಾಗಿದೆ. ಈ ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಲು ಸುಸ್ಥಿರ ಅಭಿವೃದ್ಧಿಗೆ ಮಣೆ ಹಾಕಬೇಕಿದೆ.
ಯೋಜನೆಗಳಿಗೆ ಹಸಿರು ಹೊದಿಕೆ: ಭಾರತ ಡಿಜಿಟಲ್ ಯುಗಕ್ಕೆ ಕಾಲಿಡುತ್ತಿದ್ದಂತೆ ಅಭಿವೃದ್ಧಿ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದೆ. ಈ ಬದಲಾವಣೆಯ ಕಾಲಘಟ್ಟದಲ್ಲಿ ಬೃಹತ್ ಸಂಖ್ಯೆಯ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ ಹಲವು ಲಕ್ಷ ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಗಳು ಘೋಷಣೆಯಾಗಿವೆ. ಇವುಗಳು ಒಂದೇ ಬಾರಿ ಅನುಷ್ಠಾನ ಆದಲ್ಲಿ ಪರಿಸರದ ಮೇಲೆ ಪರಿಣಾಮ ಬೀರುವುದು ಶತಃಸಿದ್ಧ. ಹೀಗಾಗಿಯೇ ಈ ಎಲ್ಲ ಯೋಜನೆಗಳನ್ನು ಹಸಿರು ಯೋಜನೆಗಳಾಗಿ ಪರಿವರ್ತಿಸಿ ಜಾರಿಗೊಳಿಸುವ ತೀರ್ಮಾನ ಪರಿಸರಸ್ನೇಹಿ ನೀತಿ ಅನುಸರಿಸುವ ಮೊದಲ ಮೆಟ್ಟಿಲಾಗಿದೆ. ಗ್ರೀನ್ಫೀಲ್ಡ್ ವಿಮಾನನಿಲ್ದಾಣ, ಹಸಿರು ಹೆದ್ದಾರಿ, ಹಸಿರು ಕಟ್ಟಡಗಳ ಸಹಿತ ಎಲ್ಲ ಯೋಜನೆಗಳಿಗೂ ಗ್ರೀನ್ ಟಚ್ ನೀಡಲಾಗುತ್ತಿದೆ. ಅದರಲ್ಲೂ ವಸತಿ ಯೋಜನೆಗಳಲ್ಲಿ ಸೌರ ವಿದ್ಯುತ್, ಪವನ ವಿದ್ಯುತ್, ಮಳೆಕೊಯ್ಲು, ಟ್ರೀ ಪಾರ್ಕ್ ಒಳಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸಿರು ಬಾಂಡ್ ಮೂಲಕ ಆರ್ಥಿಕ ಸಂಪನ್ಮೂಲ ಕ್ರೊಡೀಕರಣಕ್ಕೆ ಒತ್ತು ನೀಡಿರುವುದು ಖಾಸಗಿ ವಲಯವೂ ಹಸಿರು ಆರ್ಥಿಕತೆಯತ್ತ ದೃಷ್ಟಿ ಹರಿಸಲು ಸಾಧ್ಯವಾಗಿದೆ.
ರಾಜ್ಯಕ್ಕೆ ಮೂರನೇ ಸ್ಥಾನ: ದೇಶದಲ್ಲಿ ಪ್ರಗತಿಪರ ರಾಜ್ಯವೆಂದು ಹೆಸರು ಪಡೆದಿರುವ ಕರ್ನಾಟಕ ಹಸಿರು ಆರ್ಥಿಕತೆ ವಿಚಾರವಾಗಿ ಸಕಾರಾತ್ಮಕ ನೀತಿ ನಿರ್ಧಾರಗಳನ್ನು ಕೈಗೊಂಡಿದೆ. ಮುಖ್ಯವಾಗಿ ತಂತ್ರಜ್ಞಾನ ಆಧಾರಿತ ಸೂಕ್ಷ್ಮ ನೀರಾವರಿ, ನವೀಕರಿಸಬಹುದಾದ ಇಂಧನ, ಇ-ವಾಹನಗಳ ಬಳಕೆ, ಅರಣ್ಯಾಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಹಸಿರು ಕಟ್ಟಡಗಳ ನಿರ್ವಣದಲ್ಲಿ ಪರಿಸರಸ್ನೇಹಿ ಹೆಜ್ಜೆಗಳನ್ನು ಇಡುತ್ತಿದೆ. ಜತೆಗೆ ವಿವಿಧ ಬಾಬ್ತಿನಿಂದ ಹಸಿರು ಬಾಂಡ್ಗಳ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಿದೆ. ಈ ಪ್ರಗತಿಪರ ನಿಲುವಿನಿಂದಾಗಿ ಕರ್ನಾಟಕವು ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಬೆಳವಣಿಗೆ (ಎಸ್ಡಿಜಿ) ಸೂಚ್ಯಂಕ 2020-21ರ ಸರ್ವೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
15 ಟ್ರಿಲಿಯನ್ ಮೊತ್ತ ಉಳಿತಾಯ: ಭಾರತದಲ್ಲಿ 2030ರ ಅವಧಿಯೊಳಗೆ ಪರಿಸರದ ಮೇಲಾಗುತ್ತಿರುವ ವಿವಿಧ ರೀತಿಯ ಮಾಲಿನ್ಯದಿಂದ 1 ಟ್ರಿಲಿಯನ್ ಡಾಲರ್ ಹಣ ಉಳಿಸಬಹುದಾಗಿದೆ. ಅಲ್ಲದೆ, 2070ರ ವೇಳೆಗೆ ಶೂನ್ಯ ಇಂಗಾಲ ಉತ್ಪಾದನೆಯಲ್ಲಿ ಯಶಸ್ವಿ ಕಂಡಲ್ಲಿ 15 ಟ್ರಿಲಿಯನ್ ಡಾಲರ್ ಉಳಿತಾಯ ಮಾಡಲು ಸಾಧ್ಯವಿದೆ. ತಪ್ಪಿದ್ದಲ್ಲಿ ಅಷ್ಟರ ಮಟ್ಟಿಗೆ ಆರ್ಥಿಕತೆಗೆ ಹೊಡೆತ ಬೀಳುವ ಅಪಾಯವೂ ಇದೆ ಎಂಬುದಾಗಿ 2022ರ ವಿಶ್ವ ಅರ್ಥಿಕ ವೇದಿಕೆ ಅಂದಾಜಿಸಿದೆ.
ಎಸ್ಡಿಜಿಯ 17 ಅಂಶಗಳು: ಮನುಜರ ಒಳಿತಿಗಾಗಿ ಹಾಗೂ ಉತ್ತಮ ಜೀವನ ಸಾಧಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ 17 ಅಂಶಗಳ ಜಾಗತಿಕ ಗುರಿಯ ನೀಲಿನಕ್ಷೆಯನ್ನು ಪ್ರಕಟಿಸಿದೆ. 2030ರೊಳಗೆ ಅವುಗಳನ್ನು ಪರಿಪಾಲಿಸಿ ಗುರಿ ತಲುಪುವಲ್ಲಿ ಪ್ರಾಮಾಣಿಕತೆ ಪ್ರದರ್ಶಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಲಾಗಿದೆ. ಅದರನ್ವಯ ಬಡತನ ನಿವಾರಣೆ, ಶೂನ್ಯ ಹಸಿವು, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಚ ನೀರು-ನೈರ್ಮಲ್ಯ, ಕೈಗೆಟಕುವ ದರದ ನವೀಕರಿಸಬಹುದಾದ ಇಂಧನ, ಪ್ರಾಮಾಣಿಕ ಕಾರ್ಯದಿಂದ ಆರ್ಥಿಕ ಪ್ರಗತಿ, ಕೈಗಾರಿಕೆ-ಆವಿಷ್ಕಾರ-ಮೂಲಸೌಕರ್ಯ, ಅಸಮಾನತೆ ನಿವಾರಣೆ, ಸುಸ್ಥಿರ ನಗರ, ಸಮುದಾಯ ನಿರ್ವಣ, ಜವಾಬ್ದಾರಿಯುತ ಬಳಕೆ-ಉತ್ಪಾದನೆ, ಹವಾಮಾನ ಕಾರ್ಯಸೂಚಿ, ಸಾಗರ ಜೀವಿ ಸಂಕುಲ ರಕ್ಷಣೆ, ಭೂಮಿ ಮೇಲಿನ ಜೀವಿ ಸಂಕುಲ ಸಂರಕ್ಷಣೆ, ಶಾಂತಿ-ನ್ಯಾಯ-ಸಂಸ್ಥೆಗಳ ಸಬಲಿಕರಣ, ಗುರಿ ತಲುಪಲು ಸಹಭಾಗಿತ್ವ -ಇವೇ 17 ಅಂಶಗಳಾಗಿವೆ.
ಇಡೀ ವಿಶ್ವದಲ್ಲಿ ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಬೆಳೆವಣಿಗೆ ಕಾಣುತ್ತಿದೆ. ಇದರಿಂದ ಕೆಲಮಟ್ಟಿಗೆ ಲಾಭ ಉಂಟಾಗುವುದಿದ್ದರೂ, ಅಷ್ಟೇ ಪ್ರಮಾಣದಲ್ಲಿ ಸಮಸ್ಯೆ ಉದ್ಭವಿಸುತ್ತಿವೆ. ಅದರಲ್ಲೂ ನಗರದ ಹಸಿರಿನ ಹೊದಿಕೆ ಕ್ಷೀಣಿಸುತ್ತಿದೆ. ಪ್ರಸ್ತುತ ನಗರದಲ್ಲಿ 1.04 ಕೋಟಿ ವಾಹನಗಳಿದ್ದು, ಮುಂದಿನ ದಶಕದಲ್ಲಿ ಮತ್ತಷ್ಟು ಏರಲಿದೆ. ಜತೆಗೆ 2040ರ ವೇಳೆ ಬೆಂಗಳೂರಿನ ಜನಸಂಖ್ಯೆ 2 ಕೋಟಿ ದಾಟುವ ನಿರೀಕ್ಷೆ ಇದೆ. ಈ ಅಗಾಧ ಬೆಳವಣಿಗೆಯಿಂದ ಇನ್ನಷ್ಟು ಹಸಿರು ಮಾಯವಾಗಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯಬಹುದು. ಕುಡಿಯುವ ನೀರಿಗೂ ಅಭಾವ ತಟ್ಟಬಹುದು. ಮಾಲಿನ್ಯ ಪ್ರಮಾಣ ಹೆಚ್ಚಳಗೊಂಡು ಪ್ರಾಣವಾಯು ಕುಸಿತದಿಂದ ಜನರ ವಾಸಯೋಗ್ಯ ನಗರವಾಗಿ ಉಳಿದುಕೊಳ್ಳಲು ಸಾಧ್ಯವಾಗದಿರುವ ಸ್ಥಿತಿ ಉದ್ಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.