

ಒಂದು ಹಳ್ಳಿಯಲ್ಲಿ ರಮೇಶನೆಂಬ ಗೊಂಬೆ ಮಾರಾಟಗಾರನಿದ್ದನು. ಅವನು ತುಂಬಾ ಬಡವನಾಗಿದ್ದ. ಅವನಿಗೆ "ನನ್ನ ಮಗ ತುಂಬಾ ಚೆನ್ನಾಗಿ ಓದಬೇಕು, ಅವನನ್ನು ದೊಡ್ಡ ವ್ಯಕ್ತಿಯಾಗಿ
ಮಾಡಬೇಕು ಮತ್ತು ಈ ಗೊಂಬೆ ಮಾರಾಟದಿಂದ ನಾನು ಕೂಡ ಶ್ರೀಮಂತನಾಗಬೇಕು' ಎಂಬ ಆಸೆ ಇತ್ತು. ಹಾಗೆಯೇ ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಜನ ಗೊಂಬೆ ಖರೀದಿಸಲು ರಮೇಶನ ಅಂಗಡಿಗೆ ಬಂದರು. ನಿರೀೆಗಿಂತ ಹೆಚ್ಚಿನ ಜನ ಬಂದಿದ್ದರಿಂದ ಆತನ ಸಂಪಾದನೆ ಹೆಚ್ಚಾಗುತ್ತದೆ.
ಬಂದ ಹಣದಲ್ಲಿ ರಮೇಶ ಮಗನ ಶಾಲಾ ಶುಲ್ಕ ಕಟ್ಟುತ್ತಾನೆ. ನಂತರ ಅವನ ಬಳಿ ಇನ್ನೂ 50,000 ರೂ. ಹಣ ಉಳಿದಿರುತ್ತದೆ. ಈ ಹಣವನ್ನು ಏನು ಮಾಡುವುದೆಂದು ಅವನು ಬೆಳಿಗ್ಗೆಯಿಂದ ಯೋಚಿಸುತ್ತಾ ಸರಿಯಾಗಿ ಗೊಂಬೆ ತಯಾರಿಸಲು ಹೋಗಲಿಲ್ಲ. ಆಗ ಅವನಿಗೆ ಒಂದು ಉಪಾಯ ಹೊಳೆಯಿತು. ಈ ಹಣದಿಂದ ಒಂದು ಅಂಗಡಿ ತೆರೆದರೆ ಹೇಗೆ ಎಂದು ಅಂಗಡಿಯನ್ನು ಪ್ರಾರಂಭಿಸುತ್ತಾನೆ. ಕೆಲದಿನದಲ್ಲೇ ರಮೇಶ ಶ್ರೀಮಂತನಾಗಿ ಅಂಗಡಿ ಜತೆ ಮಾಲ್ ಒಂದನ್ನೂ ತೆರೆಯುತ್ತಾನೆ. ದಿನ ಕಳೆದಂತೆ ರಮೇಶನಿಗೆ ದುರಾಸೆ ಹೆಚ್ಚುತ್ತಾ ಹೋಗುತ್ತದೆ. ವಿದೇಶದಿಂದ ರೆಡಿಮೇಡ್ ಗೊಂಬೆಗಳಲ್ಲದೇ ಪ್ಲಾಸ್ಟಿಕ್ ವಸ್ತುಗಳನ್ನು ತರಿಸಿ ಮಾರಾಟ ನಡೆಸುತ್ತಾನೆ. ಇದರಿಂದ ವರ್ಷ ಕಳೆದಂತೆ ವ್ಯಾಪಾರದಲ್ಲಿ ನಷ್ಟ ಅನುಭವಿಸಲು ಪ್ರಾರಂಭಿಸುತ್ತಾನೆ. ಸಾಲ ಮಾಡಿಕೊಳ್ಳುತ್ತಾನೆ. ಸಾಲ ತೀರಿಸಲು ಆಗದೆ ಬ್ಯಾಂಕ್ಗೆ ಮೋಸ ಮಾಡಲು ಯತ್ನಿಸಿ ಕಡೆಗೆ ಜೈಲು ಸೇರುತ್ತಾನೆ. ಆಗ ರಮೇಶನ ಮಗ ಯೋಚಿಸುತ್ತಾನೆ. ಅಪ್ಪ ದುರಾಸೆ ಪಡದೆ ವ್ಯಾಪಾರದಲ್ಲಿ ನಿಷ್ಠನಾಗಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಆದ್ದರಿಂದ ತಾನು ದುರಾಸೆ ಪಡಬಾರದು ಎಂದುಕೊಂಡು ಅಪ್ಪನ ವ್ಯಾಪಾರವನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಸಿ ಸುಖವಾಗಿರುತ್ತಾನೆ.
| ಮೋನಿಕಾ ಜಿ 8ನೇ ತರಗತಿ , ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆ, ತುಮಕೂರು