

ಹೊಸಗನ್ನಡ ಸಾಹಿತ್ಯದಲ್ಲಿ ಇಪ್ಪತ್ತನೆಯ ಶತಮಾನವು ವೈಭವದ ಕಾಲಘಟ್ಟವಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯ ಚಳವಳಿಗಳಿಂದಾಗಿ ಅದು ಶ್ರೀಮಂತವಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲ ಸಾಹಿತ್ಯ ಪರಂಪರೆಯನ್ನು ನಿರ್ವಿುಸಿದ ನಿರಂಜನ ಅವರು ಶತಮಾನದ ಮಹಾಲೇಖಕರಾಗಿದ್ದರು.
1924ರ ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಳಕುಂದದಲ್ಲಿ ಜನಿಸಿದ ಶಿವರಾಯರು ‘ನಿರಂಜನ’ರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಖ್ಯಾತರಾದರು. ಹುಟ್ಟು ಪ್ರತಿಭಾವಂತರಾದ ಅವರು ಗಾಂಧಿ ದರ್ಶನದಿಂದ ಪ್ರಭಾವಿತರಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಕಾರ್ಲ್ ಮಾರ್ಕ್ಸ್, ಲೆನಿನ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದಿ ಸಿದ್ಧಾಂತಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡರು. ಅ.ನ.ಕೃ., ನಿರಂಜನ, ಕಟ್ಟೀಮನಿ ಮೊದಲಾದವರು ನವೋದಯ ಸಾಹಿತ್ಯಕ್ಕೆ ಪ್ರತಿಕ್ರಿಯಾತ್ಮಕವಾಗಿ ಪ್ರಗತಿಶೀಲ ಸಾಹಿತ್ಯವನ್ನು ಹುಟ್ಟು ಹಾಕಿ ನಾಡಿನಾದ್ಯಂತ ಸಂಚರಿಸಿ ಸಂಚಲನವನ್ನುಂಟು ಮಾಡಿದರು.
ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಅಧಿವೇಶನಗಳು ನಡೆಯತೊಡಗಿದವು. ಹಿಂದಿಯ ಪ್ರೇಮ್ಂದ್, ಇಂಗ್ಲಿಷಿನ ಮುಲ್ಕ್ರಾಜ್ ಆನಂದ್ರಂಥ ಲೇಖಕರು ಸಮಾಜದ ಶೋಷಿತ ವರ್ಗದ ಜನರ ಧ್ವನಿಯಾಗಿ ಸಾಹಿತ್ಯ ರಚಿಸಿದರು. ಶಿವರಾಮ ಕಾರಂತರಂತೆ ಬರಹಗಾರರಾಗಿಯೇ ಬದುಕಿದ ನಿರಂಜನರು ಅರ್ಧ ಶತಮಾನ ಕಾಲ ಸಾಹಿತ್ಯ ರಚನೆಯಲ್ಲಿ ಕ್ರಿಯಾಶೀಲರಾಗಿದ್ದರು. ಅವರ ಸಾಹಿತ್ಯದಲ್ಲಿ ವೈವಿಧ್ಯಮಯವಾದ ಕೃತಿ ಪ್ರಪಂಚವಿದೆ. 25 ಕಾದಂಬರಿಗಳು, 6 ಕಥಾಸಂಕಲನಗಳು, ಮಕ್ಕಳ ವಿಶ್ವಕೋಶ, ವಿಶ್ವ ಕಥಾಕೋಶ, ಸಾವಿರಾರು ಪತ್ರಿಕಾ ಅಂಕಣಗಳು ಮತ್ತು ಲೇಖನಗಳ ದೊಡ್ಡ ಭಂಡಾರವೇ ಇದೆ.
ಇವುಗಳನ್ನೆಲ್ಲ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ನಿರಂಜನರು ಬಹುಭಾಷಾ ವಿದ್ವಾಂಸರಾಗಿದ್ದರು. ಅವರು ಶ್ರೇಷ್ಠ ಭಾಷಾಂತರಕಾರರೂ ಆಗಿದ್ದರು. ಪ್ರಗತಿಶೀಲ ಸಾಹಿತ್ಯವು ಮುಖ್ಯವಾಗಿ ಕಥೆ, ಕಾದಂಬರಿಗಳ ಮೂಲಕವೇ ಪ್ರಕಟವಾಗಿರುವುದು. ನಿರಂಜನರ ಸಾಹಿತ್ಯವೂ ಅದರಿಂದ ಬೇರೆಯಾಗಿಲ್ಲ. ನಿರಂಜನರ ಮೊದಲ ಕಾದಂಬರಿ ‘ವಿಮೋಚನೆ’ 1953ರಲ್ಲಿ ಪ್ರಕಟವಾಯಿತು. ಅದು ವರ್ಗ ಸಂಘರ್ಷವನ್ನು ಸಮರ್ಥವಾಗಿ ವಿಶ್ಲೇಷಿಸುತ್ತದೆ. ಚಂದ್ರಶೇಖರನ ಆತ್ಮ ವೃತ್ತಾಂತವಾದ ‘ವಿಮೋಚನೆ’, ಮಾರ್ಕ್ಸಿಸ್ಟ್ ವಿಚಾರಧಾರೆಯನ್ನು ಅನಾವರಣಗೊಳಿಸಿದೆ. ನಿರಂಜನರ ‘ಮೃತ್ಯುಂಜಯ’ ಕನ್ನಡದ ಮಹತ್ವದ ಕಾದಂಬರಿಯಾಗಿದೆ. ‘ಚಿರಸ್ಮರಣೀಯರು’ ಕಾದಂಬರಿ ಕೈಯೂರು ರೈತರ ವೀರ ಹೋರಾಟದ ಕಥನವಾಗಿದೆ.
ನಿರಂಜನರ ಕಥೆ, ಕಾದಂಬರಿಗಳಲ್ಲಿ ಪ್ರಗತಿಶೀಲ ಸಾಹಿತ್ಯದ ಸಾಮಾಜಿಕ ಚಿಂತನಧಾರೆ ಆಂತಸ್ಥವಾಗಿದೆ. ಬಂಡವಾಳಶಾಹಿಗಳು ನಡೆಸುವ ಕಾರ್ವಿುಕರ ಶೋಷಣೆ, ವರ್ಣ, ವರ್ಗ ಸಂಘರ್ಷ, ಕೃಷಿ ಕಾರ್ವಿುಕರ ಸಮಸ್ಯೆಗಳು, ದಲಿತರ ಮೇಲೆ ಭೂ ಮಾಲೀಕರು ನಡೆಸುವ ದೌರ್ಜನ್ಯಗಳು, ಅದರ ವಿರುದ್ಧ ನಡೆಸುವ ಪ್ರತಿಭಟನೆ, ಹೋರಾಟಗಳು ನಿರಂಜನರ ಕಾದಂಬರಿಗಳಲ್ಲಿ ಚಿತ್ರಿತವಾಗಿವೆ.
ಕನ್ನಡ ಸಾರಸ್ವತ ಲೋಕಕ್ಕೆ ‘ಜ್ಞಾನಗಂಗೋತ್ರಿ’ಯ ಏಳು ಮಹಾಸಂಪುಟಗಳನ್ನು ಸಿದ್ಧಪಡಿಸಿಕೊಟ್ಟ ಶ್ರೇಯಸ್ಸು ನಿರಂಜನರದಾಗಿದೆ. ‘ಜ್ಞಾನಗಂಗೋತ್ರಿ’ ಮಕ್ಕಳ ವಿಶ್ವಕೋಶವಾಗಿದ್ದು ಇದರಲ್ಲಿ ಮನುಕುಲದ ಕಥೆ, ಜೀವಜಗತ್ತು, ಭೌತಜಗತ್ತು, ಯಂತ್ರಜಗತ್ತು, ಕಲೆ, ಸಾಹಿತ್ಯ, ಕ್ರೀಡೆ, ಮನೋಲ್ಲಾಸ, ಕೊನೆಯದಾಗಿ ಭಾರತದ ಕಥೆ- ಹೀಗೆ ಏಳು ಮಹಾಸಂಪುಟಗಳು ಜ್ಞಾನವಿಜ್ಞಾನ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕ ೃಯ ಜ್ಞಾನಕೋಶವಾಗಿ ಕನ್ನಡ ಮಕ್ಕಳಿಗೆ ಜ್ಞಾನಧಾರೆಯನ್ನು ಸದಾ ನೀಡುತ್ತಿವೆ.
ಶಿವರಾಮ ಕಾರಂತರು ಏಕವ್ಯಕ್ತಿಯಾಗಿ ಬಾಲಪ್ರಪಂಚ, ವಿಜ್ಞಾನ ಪ್ರಪಂಚ ಹೇಗೆ ರಚಿಸಿಕೊಟ್ಟರೊ ಅಂತಹ ಮಕ್ಕಳ ಇನ್ನೊಂದು ವಿಶ್ವಕೋಶದ ಜ್ಞಾನಗಂಗೋತ್ರಿಯನ್ನು ಸಾಂಸ್ಥಿಕ ಕಾರ್ಯವಾಗಿ ಸಾಧಿಸಿದ ಕೀರ್ತಿಗೆ ನಿರಂಜನರು ಭಾಜನರಾಗಿದ್ದಾರೆ.
ಕನ್ನಡ ಕಥನಸಾಹಿತ್ಯದ ಇತಿಹಾಸದಲ್ಲಿ ನಿರಂಜನರಿಗೆ ಪ್ರಮುಖ ಸ್ಥಾನವಿದೆ. ಅವರ ಸಂಧಿಕಾಲ, ರಕ್ತ ಸರೋವರ, ಅನ್ನಪೂರ್ಣ, ಕೊನೆಯ ಗಿರಾಕಿ, ಕಾತ್ಯಾಯಿನಿ ಸ್ವತಂತ್ರ ಕಥಾ ಸಂಕಲನಗಳಲ್ಲದೆ ವಿಶ್ವದ ಕಥಾ ಸಾಹಿತ್ಯವನ್ನು ಕನ್ನಡಿಗರಿಗೆ ಒದಗಿಸಿಕೊಟ್ಟದ್ದನ್ನು ಕನ್ನಡಿಗರು ಎಂದೂ ಮರೆಯಲಾರರು.
ನಿರಂಜನರು ಅನುವಾದಿಸಿ, ಸಂಪಾದಿಸಿಕೊಟ್ಟ ವಿಶ್ವ ಕಥಾಕೋಶದ 25 ಸಂಪುಟಗಳು ಕನ್ನಡ ಭಾಷೆಯ ಜೀವಸತ್ವವನ್ನು ಪಡೆದುಕೊಂಡ ಪ್ರಪಂಚ ಕಥಾಲೋಕವನ್ನು ನಾವು ಆಸ್ವಾದಿಸುವಂತೆ ಮಾಡಿದ್ದಾರೆ. ತಮ್ಮ ತೀವ್ರವಾದ ಅನಾರೋಗ್ಯದ ಮಧ್ಯದಲ್ಲೂ ವಿಶ್ವ ಕಥಾಕೋಶ ಕನ್ನಡದಲ್ಲಿ ಬರುವಂತೆ ಮಾಡಿದ ನಿರಂಜನರ ಸಾಧನೆ ಅಮೋಘವಾಗಿದೆ.
ಕನ್ನಡ ಪತ್ರಿಕಾ ಪ್ರಪಂಚಕ್ಕೆ ನಿರಂಜನರ ಕೊಡುಗೆ ಅದ್ವಿತೀಯವಾದದ್ದು. ಅವರು ‘ರಾಷ್ಟ್ರಬಂಧು’, ಕಟ್ಟೀಮನಿಯವರ ‘ಉಷಾ’, ‘ತಾಯಿನಾಡು’, ‘ಜನಪ್ರಗತಿ’, ‘ಪ್ರಜಾಮತ’, ‘ಕರ್ಮವೀರ’, ‘ಚಿತ್ರಗುಪ್ತ’ ಮೊದಲಾದ ಪತ್ರಿಕೆಗಳಲ್ಲಿ ಸಂಪಾದಕರಾಗಿ, ಅಂಕಣಕಾರರಾಗಿ, ಸಾವಿರಾರು ಲೇಖನಗಳನ್ನು ಬರೆದು ಕನ್ನಡ ಜನರ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಕಮ್ಯೂನಿಸ್ಟ್ ಪತ್ರಿಕೆ ‘ಜನಶಕ್ತಿ’ಯ ಸಂಪಾದಕರಾಗಿ ಕಾರ್ಲ್ ಮಾರ್ಕ್ಸ್, ಲೆನಿನ್ ಸಮಾಜವಾದಿ ಚಿಂತನೆಗಳನ್ನು ಕುರಿತು ಬರೆದರು.
ನಿರಂಜನರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು ಬಂದಿವೆ. ಅವರೆಂದೂ ಪ್ರಶಸ್ತಿಯ ಹಿಂದೆ ಹೋಗಲಿಲ್ಲ. ಅವರ ಬರವಣಿಗೆಯಲ್ಲಿ ಜನಸಾಮಾನ್ಯರ ನೋವು-ನಲಿವು ತುಂಬಿತ್ತು. ಬೆಂಗಳೂರಿನ ವಠಾರಗಳ ಬಗ್ಗೆ ಅವರು ಬರೆದ ‘ರಂಗಮ್ಮನ ವಠಾರ’ ಆಕರ್ಷಕ ನಿರೂಪಣೆಯಾಗಿದೆ. ನಿರಂಜನರ ಕೃತಿಗಳು ಭಾರತದ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿವೆ.
ಖ್ಯಾತ ವೈದ್ಯೆ, ಕಥೆಗಾರ್ತಿ ಡಾ. ಅನುಪಮಾ ಅವರನ್ನು ನಿರಂಜನರು 1956ರ ಫೆಬ್ರವರಿ 5ರಂದು ಮದುವೆಯಾಗಿ, ಆಧುನಿಕ ಕನ್ನಡ ಸಾಹಿತ್ಯದ ಸಾಹಿತಿ ದಂಪತಿ ಸಾಲಿಗೆ ಸೇರಿದ್ದಾರೆ. ಡಾ. ಅನುಪಮಾ ನಿರಂಜನ ವೈದ್ಯೆಯಾಗಿ ವೈದ್ಯ ಸಾಹಿತ್ಯವನ್ನೂ, ಕಥೆ, ಕಾದಂಬರಿಗಳನ್ನೂ ಬರೆದು ಆಧುನಿಕ ಮಹಿಳಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ನಿರಂಜನ ದಂಪತಿ ಕೆಲಕಾಲ ಧಾರವಾಡದಲ್ಲಿ ಚೆನ್ನವೀರ ಕಣವಿ, ಶಾಂತಾದೇವಿ ಕಣವಿ ಅವರ ಮನೆಯ ಹತ್ತಿರ ನೆಲೆಸಿ ಸಾಹಿತ್ಯ ಮಂಥನ ನಡೆಸಿದ್ದನ್ನು ಅವರ ಆತ್ಮಚರಿತ್ರೆ ‘ನೆನಪು ಸಿಹಿಕಹಿ’ಯಲ್ಲಿ ಬರೆದಿದ್ದಾರೆ. ನಿರಂಜನ ದಂಪತಿಯ ಬಾಳ ಪಯಣದ ವೃತ್ತಾಂತವನ್ನು ಹೇಳುವ ‘ನೆನಪು ಸಿಹಿಕಹಿ’ ಕನ್ನಡ ಆತ್ಮಕಥನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನಿರಂಜನರ ಇಬ್ಬರು ಪುತ್ರಿಯರು ಸೀಮಂತಿನಿ ಮತ್ತು ತೇಜಸ್ವಿನಿ ಇಂಗ್ಲಿಷ್ನಲ್ಲಿ ಕಾವ್ಯಧಾರೆ ಹರಿಸುವ ಲೇಖಕಿಯರಾಗಿದ್ದಾರೆ. ನಿರಂಜನ ಕುಟುಂಬವೇ ಸಾಹಿತ್ಯ ಸಂವೇದನೆಗೆ ತೆರೆದುಕೊಂಡಿರುವುದು ಕನ್ನಡ ಸಾರಸ್ವತ ಲೋಕದ ವೈಶಿಷ್ಟ್ಯಾಗಿದೆ.
ನಿರಂಜನರ ಸಂಸ್ಮರಣ ಗ್ರಂಥವನ್ನು ಪುತ್ತೂರು ಕರ್ನಾಟಕ ಸಂಘದ ಬೋಳಂತಕೋಡಿ ಈಶ್ವರ ಭಟ್ಟರು ಪ್ರಕಟಿಸಿದರು. ಅಲ್ಲಿಂದಲೇ ಪ್ರತಿ ವರ್ಷ ‘ನಿರಂಜನ ಪ್ರಶಸ್ತಿ’ಯನ್ನು ಕನ್ನಡ ಲೇಖಕರಿಗೆ ಬಹು ವರ್ಷಗಳಿಂದ ಕೊಡಲಾಗುತ್ತಿದೆ. ನಿರಂಜನರ ಕುಟುಂಬ ಕನ್ನಡಿಗರಿಗೆ ಕೊಟ್ಟ ಸಾಹಿತ್ಯಿಕ ಕೊಡುಗೆ ಆಧುನಿಕ ಕನ್ನಡದ ಉತ್ಕರ್ಷಕ್ಕೆ ಕಾರಣವಾಗಿದೆ. ನಿರಂಜನ ದಂಪತಿ ಬದುಕಿನ ಕೊನೆಯ ದಿನಗಳಲ್ಲಿ ನೋವಿನಿಂದ ನರಳಿದರು. ಕನ್ನಡ ಲೋಕ ಎಂದೂ ಮರೆಯಬಾರದ ಕೃತಿ ಸಂಪದ ನೀಡಿದ ನಿರಂಜನರ ಶತಮಾನೋತ್ಸವ ವರ್ಷದಲ್ಲಿ ಅವರ ಕಾದಂಬರಿಗಳು, ಎಲ್ಲಕ್ಕಿಂತ ಮುಖ್ಯವಾಗಿ ‘ಜ್ಞಾನ ಗಂಗೋತ್ರಿ’ ಮಕ್ಕಳ ವಿಶ್ವಕೋಶವನ್ನು ಕರ್ನಾಟಕ ಸರ್ಕಾರ ಮರು ಮುದ್ರಣಗೊಳಿಸಬೇಕು. ಪ್ರಗತಿಶೀಲ ಸಾಹಿತ್ಯದ, ನಿರಂಜನರ ಕೃತಿಗಳ ಚಿಂತನ-ಮಂಥನ, ಸಂಕಥನಗಳು ನಾಡಿನಾದ್ಯಂತ ಜರುಗಬೇಕು.
(ಲೇಖಕರು ಹಿರಿಯ ವಿಮರ್ಶಕರು)