

ಸನಾತನ ಭಾರತೀಯ ಸಂಸ್ಕೃತಿಯು ಲಕ್ಷಾಂತರ ವರ್ಷಗಳ ಹಿಂದೆಯೇ ಸ್ವಚ್ಛತೆಗೆ ಬಹಳ ಆದ್ಯತೆ ನೀಡಿತ್ತು. ಸ್ವಚ್ಛತೆ ಕೇವಲ ಅಲಂಕಾರಿಕಕ್ಕಾಗಿಯೇ ಮಾಡಿಕೊಂಡದ್ದೇನಲ್ಲ. ಇದು ವೈಜ್ಞಾನಿಕವಾಗಿ, ಆರೋಗ್ಯಪೂರ್ಣ ಜೀವನಕ್ಕಾಗಿ ಅಳವಡಿಸಿಕೊಂಡದ್ದಾಗಿತ್ತು. ಇದು ಕೇವಲ ಒಂದು ಸಮುದಾಯಕ್ಕೇ ಸೀಮಿತವಾಗಿ ಇರಲಿಲ್ಲ. ಹೀಗಿದ್ದರೂ ಕೆಲ ಸಮುದಾಯ ಸಂಪ್ರದಾಯಗಳ ಜನರಿಗೆ ಕೆಲ ಸಡಿಲಿಕೆ (Relaxation) ಕೂಡ ಇತ್ತು. ಬ್ರಾಹ್ಮಣ ಸಮುದಾಯದಲ್ಲಿ ವೈದಿಕ ಕ್ರಿಯೆಗಳಿಗೆ, ಅದನ್ನು ಮಾಡುವವರಿಗೆ ಬಹಳ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಅದು ಈಗಲೂ ಹಾಗೆಯೇ ಇದೆ. ದೇವಾತಾರಾಧನೆಯಲ್ಲಿ ಮಠ ಸಂಪ್ರದಾಯದಲ್ಲಿ ಒಂದು ಕ್ರಮ, ದೇವಸ್ಥಾನ ಸಂಪ್ರದಾಯದಲ್ಲಿ ಇನ್ನೊಂದು ಮಡಿವಂತಿಕೆಯ ವಾಡಿಕೆ ಇದೆ. ಆದರೆ ತತ್ತ್ವ ಒಂದೇ ಆಗಿರುತ್ತದೆ. ಆಚರಣೆಗಳಲ್ಲಿ ವ್ಯತ್ಯಾಸ ಇದೆ. ಇದಕ್ಕೆ ದೇಶಕಾಲ ಪಾತ್ರಗಳ ವಿಮರ್ಶೆಗಳಿವೆ. ದೇಶ ಎಂದರೆ ಬೇರೆ ಬೇರೆ ಕ್ಷೇತ್ರಗಳಿಗೆ ಬೇರೆ ಬೇರೆ ಆಚರಣಾ ನಿಯಮಗಳಿವೆ. ಅಂದರೆ ಶೀತಪ್ರದೇಶ, ಉಷ್ಣಪ್ರದೇಶ ಇತ್ಯಾದಿ ವಿವಿಧ ಕ್ಷೇತ್ರಗಳಿಗನುಸಾರ ಮಡಿವಂತಿಕೆಗಳಲ್ಲಿ ವ್ಯತ್ಯಾಸ ಇದೆ. ಕಾಲ ಎಂದರೆ ಋತುಮಾನಗಳಿಗೆ ಅನುಗುಣವಾಗಿ ವ್ಯತ್ಯಾಸ. ಪಾತ್ರ ಎಂದರೆ ವಿವಿಧ ವ್ರತಾಚರಣೆಗಳಿಗೆ ಅನುಗುಣವಾಗಿ ಇರುವಂಥದ್ದು. ಈ ಎಲ್ಲ ಸ್ವರೂಪಗಳ ಮಡಿವಂತಿಕೆಗಳ ತತ್ತ್ವಗಳ ಮೂಲ ಉದ್ದೇಶವೇ ಆರೋಗ್ಯಪೂರ್ಣ ಜೀವನ.
ಊಟದ ವಿಚಾರದಲ್ಲಿ: ಹಸ್ತ ಮುಖ ಪಾದ ಪ್ರಕ್ಷಾಳನ( ಕೈ, ಕಾಲು, ಮುಖ ತೊಳೆದುಕೊಳ್ಳೋದು) ಮೊದಲ ಕೆಲಸ. ನಂತರ ಊಟದ ತಟ್ಟೆ ಅಥವಾ ಎಲೆಯ ಮುಂದೆ ಕುಳಿತು ಪರಿಶಿಂಚನಾದಿ ಕಾರ್ಯ. ಹಸ್ತೋದಕ ಸೇವಿಸಿದ ನಂತರ ಚಿತ್ರಗುಪ್ತಾದಿ ಪಂಚ ಬಾಹ್ಯ ಗಣಗಳಿಗೆ ಎಲೆಯ ಹೊರಭಾಗದಲ್ಲಿ ಸಂಕ್ಷಿಪ್ತ ಮಂಡಲ (ನೀರಿನಲ್ಲಿ) ರಚಿಸಿ ಸಮರ್ಪಣೆ. ತದನಂತರ ಪ್ರಾಣಾಪಾನವ್ಯಾನ ಉದಾನ ಸಮಾನಾದಿ ಪಂಚ ಪ್ರಾಣಾಹುತಿ ತೆಗೆದುಕೊಳ್ಳುವ ಕ್ರಮ. ಹೆಚ್ಚಾಗಿ ಮೌನದಲ್ಲೇ ಭೋಜನಯಜ್ಞ ಮಾಡುವ ಪದ್ಧತಿ. ಜತೆಗೆ ಸುಶ್ರಾವ್ಯ ಸಂಗೀತ ಶ್ಲೋಕ ಪಠಣ, ಶ್ರವಣವೂ (ಚೂರ್ಣಿಕ) ನಡೆಯುತ್ತದೆ.
ಊಟದ ಸಮಾಪ್ತಿಯಲ್ಲಿ ಮತ್ತೊಮ್ಮೆ ಅಮೃತಪಿದಾನಮಸಿ ಜಲ ಪ್ರಾಶನ ಮಾಡಿ ಊಟದಿಂದ ಏಳುವಂತಹ ಕ್ರಮ. ಕೊನೆಗೆ ಅನ್ನ ನೀಡಿದ ಯಜಮಾನನಿಗೆ ಕೃತಜ್ಞತಾಪೂರ್ವಕ ಆಶೀರ್ವಚನವೂ ನಡೆಯುತ್ತದೆ. ಊಟ ಮುಗಿಸಿ ಮತ್ತೊಮ್ಮೆ ಮುಖ, ಕೈ, ಕಾಲು ಪ್ರಕ್ಷಾಳನ, ಆಚಮನಾದಿಗಳ ಪದ್ಧತಿಯು ಸಂಪ್ರದಾಯವಾಗಿತ್ತು. ಈಗಲೂ ಕೆಲವು ಜ್ಞಾನಿಗಳು ಇದನ್ನು ಪಾಲನೆ ಮಾಡುತ್ತಾರೆ.
ಊಟದ ನಂತರ ಉಂಡ ಎಲೆಯು ಎಂಜಲಾಗುತ್ತದೆ. ಇದನ್ನು ತೆಗೆದು, ಉಂಡ ನೆಲವನ್ನು ಗೋಮಯದಿಂದ ಸಾರಿಸಿ ಶುದ್ಧ ಮಾಡುವ ಪದ್ಧತಿ ಈಗಲೂ ಇದೆ. ಹೀಗೆಯೇ ಭೋಜನಕ್ಕೊಂದು ಆರೋಗ್ಯಪೂರ್ಣ ಪದ್ಧತಿ ಬೆಳೆದು ಬಂತು. ಸುಶ್ರಾವ್ಯ ಸಂಗೀತ ಕೇಳುತ್ತ ಉಂಡಾಗ ಅನ್ನಾಭಿಮಾನಿ ದೇವತೆಗಳು ಸಂತೃಪ್ತರಾಗುತ್ತಾರೆ. ಅಂದರೆ ಉಂಡವರ ಆಹಾರಗಳು ಮನಸ್ಸಿಗೆ ಪಥ್ಯವಾಗಿ ದೇಹಕ್ಕೂ ಪಥ್ಯವಾಗುತ್ತದೆ. ಸಾಮಾನ್ಯವಾಗಿ ಊಟ ಮಾಡಲು ಪದ್ಮಾಸನ ಹಾಕಿಯೇ ಕುಳಿತುಕೊಳ್ಳಬೇಕು ಎಂಬ ನಿಯಮವಿದೆ. ಊಟ ಮಾಡುವಾಗ ಅನವಶ್ಯಕ ಮಾತನಾಡಬಾರದು ಎಂಬ ನಿಯಮವೂ ಇದೆ. ಕೆಲವರಷ್ಟೇ ಇದನ್ನು ಪಾಲಿಸುತ್ತಾರೆ.
ಊಟದ ಎಲೆಗೆ ಬಡಿಸುವಾಗ ಇಂತಹ ಪದಾರ್ಥ ಇಂತಲ್ಲಿಯೇ ಹಾಕಬೇಕೆಂಬ ನಿಯಮವಿದೆ. ಅನ್ನಶುದ್ಧಿ ಅಂದರೆ ಮೊದಲು ಎಲೆಗೆ ಆಕಳ ತುಪ್ಪವನ್ನು ಒಂದೊಂದು ಬಿಂದು ಹಾಕುತ್ತ ಬರಬೇಕು. ನಂತರ ಎಡಭಾಗದ ಎದುರು ಮೂಲೆಯಿಂದ ಉಪು್ಪ, ಉಪ್ಪಿನಕಾಯಿ, ಕೋಸಂಬರಿಗಳು, ಪಲ್ಯಗಳನ್ನು ಸ್ವಲ್ಪ ಸ್ವಲ್ಪ ಹಾಕಬೇಕು. ಎಡಭಾಗದ ತುದಿಯಲ್ಲಿ ಚಿತ್ರಾನ್ನ, ಸಂಡಿಗೆ, ಹಪ್ಪಳ ಹಾಕುತ್ತಾರೆ. ಬಲಭಾಗದ ತಳದ ಮೂಲೆಗೆ ಸ್ವಲ್ಪ ಕ್ಷೀರ ಪಾಯಸ ಅಥವಾ ಇನ್ಯಾವುದೇ ಪಾಯಸ. ಅದರ ಪಕ್ಕದಲ್ಲಿ ತಂಬುಳಿ. ಮಧ್ಯದಲ್ಲಿ ಅನ್ನ. ಅನ್ನ ಕೆಳಭಾಗಕ್ಕೆ ದಾಲ್ ತೋವೆ ಇತ್ಯಾದಿ ಮೊದಲ ಹಂತದ ಬಡಿಸುವಿಕೆಯು ಶಾಸ್ತ್ರೋಕ್ತ ಸಂಪ್ರದಾಯ.
ನಂತರ ಊಟ ಮಾಡುವಲ್ಲೂ ‘ಇದು ಆದ ಮೇಲೆ ಇದು’ ಎಂಬ ಕ್ರಮ ಇದೆ. ಇದೊಂದು ರೀತಿಯ ಆಹಾರ ಸೇವಿಸುವ ಸಂಯೋಜನಾ ಕ್ರಮ. ಅಂದರೆ ಒಂದು ರೀತಿಯ Medicated food system. ಮೊದಲಿಗೆ ಸಾರಿನಲ್ಲಿ ಊಟ. ನಂತರ ಮೆಣಸಿನಕಾಯಿ ಅಂದರೆ ಕಾಯಿರಸ, ಇದಾದ ಮೇಲೆ ಹುಳಿ (ಸಾಂಬಾರ್), ತದನಂತರ ಮಜ್ಜಿಗೆಹುಳಿ ಬಡಿಸುತ್ತಾರೆ. ಮಜ್ಜಿಗೆಹುಳಿ ಮೊದಲನೆಯ ಸುತ್ತು ಆದ ಬಳಿಕ ಸಿಹಿತಿಂಡಿ, ಪಾಯಸ ಬಡಿಸುವ ಪದ್ಧತಿ. ನಂತರ ಮತ್ತೊಮ್ಮೆ ಮಜ್ಜಿಗೆಹುಳಿ ವಿಚಾರಣೆ. ಕೊನೆಗೆ ಮೊಸರು, ಮಜ್ಜಿಗೆ ಊಟ. ಇದೊಂದು ರೀತಿಯ ಷಡ್ರಸ ಮೃಷ್ಟಾನ್ನ ಭೋಜನ. ಈ ಎಲ್ಲ ನೈವೇದ್ಯಗಳನ್ನೂ ಮೊದಲು ಗೋಗ್ರಾಸ ನೀಡುವ ಮೂಲಕವೇ ಪ್ರಾರಂಭ. ಅಂದರೆ ದೇವರಿಗೆ ಸಮರ್ಪಣೆ ಮಾಡಿದ ದೇವಾನ್ನವನ್ನು ಗೋಗ್ರಾಸ ನೀಡಿ ನಂತರ ಭೋಜನ ಮಾಡಬೇಕು ಎಂಬ ನಿಯಮ. ಈ ನಿಯಮ ಪಾಲನೆ ಇಲ್ಲದ ಊಟ ಪ್ರೇತಾನ್ನ, ಅಸುರೀ ಭೋಜನ ಆಗುತ್ತದೆ ಎಂಬುದು ಪ್ರಾಜ್ಞರ ನಿರ್ಣಯ ಆಗಿದೆ.
ಊಟ ಮುಗಿಸಿದಂತೆ ಒಬ್ಬೊಬ್ಬರಾಗಿ ಏಳುವ ಸಂಪ್ರದಾಯ ಇಲ್ಲ. ಎಲ್ಲರೂ ಒಟ್ಟಿಗೇ ಕುಳಿತು ‘ಅಮೃತೋಪಸ್ತರಣಮಸಿ’ ಎಂದು ಜಲಾಪೋಷಣ ಮಾಡಿ ಪ್ರಾಣಾಹುತಿ ತೆಗೆದುಕೊಂಡು ಶುರುಮಾಡಿದ ಭೋಜನವು ಅಂತ್ಯದಲ್ಲೂ ಒಟ್ಟಿಗೇ ‘ಅಮೃತಪಿದಾನಮಸಿ’ ಎಂದು ಜಲ ಆಪೋಷಣೆ ಮಾಡಿ ಭೋಜನಾಂತ್ಯಗೊಳಿಸುವ ಒಂದು ಉತ್ಕೃಷ್ಠ ಸಂಪ್ರದಾಯ ಇದು. ಇದಕ್ಕೆ ಮೊದಲು ಎಲ್ಲರೊಡನೆ ‘ಸಾವಕಾಶ’ ಹೇಳುತ್ತ ಬಂದ ಯಜಮಾನನಿಗೆ ಎಲ್ಲರ ಪರವಾಗಿ ಒಂದು ಕೃತಜ್ಞತಾ ಪೂರ್ವಕವಾದ ಬ್ರಾಹ್ಮಣಾಶೀರ್ವಾದ ಮಾಡುತ್ತಾರೆ. ಕೊನೆಗೆ ದೇವರ ನಾಮವಾದ ‘ಹರಿ ಪ್ರಿಯಂತಾಂ’ ಎಂದು ಹೇಳಿ, ಗೋವಿಂದ ನಾಮಸ್ಮರಣೆ ಮಾಡಿ ಏಳುವ ಒಂದು ಸುಂದರ ಸಂಪ್ರದಾಯವೇ ಈ ಸನಾತನ ಭಾರತದ ಭೋಜನ ವಿಶೇಷ. ಇದನ್ನೇ ‘ಬ್ರಾಹ್ಮಣ ಭೋಜನ ಪ್ರಿಯಃ’ ಎಂದರು. ಅಂದರೆ ಭೋಜನ ಯಜ್ಞನೀತಿಯೇ ಬ್ರಾಹ್ಮಣವಾಗುತ್ತದೆ. ಆ ನೀತಿಯ ಭೋಜನವೇ ಪ್ರಿಯಃ ಆಗುತ್ತದೆ. ಅಸುರೀ ಭೋಜನವು ಹರಿಗೆ ಪ್ರಿಯವಲ್ಲ ಎಂದರ್ಥ. ಹರಿಃ ಎಂದರೆ ಪಾಲನಾ ಕತೃ. ಮಹಾವಿಷ್ಣು. ಇವನೊಳಗೆ ಸಕಲ ಗ್ರಹರ ತತ್ತ್ವಗಳೂ ಇವೆ. ಆ ತತ್ತ್ವಕ್ಕೆ ಅನುಗುಣವಾದ ಖಾದ್ಯ, ನೈವೇದ್ಯ ಸೇವನೆಯು ಆರೋಗ್ಯಪೂರ್ಣವೂ ಆಗಿರುತ್ತದೆ. ಇದರಿಂದ ‘ಶರೀರ ಮಾಧ್ಯಂ ಖಲು ಧರ್ಮಸಾಧನಂ’ ಆಗುತ್ತದೆ. ಉತ್ತಮ ನೀತಿಯುಳ್ಳ ಆಹಾರ ಸೇವನೆಯಿಂದ ದೇಹಪುಷ್ಟಿ. ಆ ಪುಷ್ಟಿಗೊಂಡ ದೇಹದಿಂದ ಧರ್ಮಸಾಧನೆ ಮಾಡಬಹುದು ಎಂಬ ಉದ್ದೇಶ. ಚಪಲಕ್ಕಾಗಿ ಉಣ್ಣುವುದಲ್ಲ. ಧರ್ಮರಕ್ಷಣೆಗಾಗಿ ದೇಹದಂಡಿಸಲು ದೇಹಾರೋಗ್ಯ ಬೇಕು. ಆ ಉದ್ದೇಶದಿಂದ ದೇಹಪುಷ್ಟಿಗಾಗಿ ಉಣ್ಣುವುದಾಗಿದೆ. ಆಗ ಆ ಊಟಕ್ಕೊಂದು ನಿಯಮವನ್ನು ಅಳವಡಿಸಿಕೊಂಡರು. ಇಂತಹ ನಿಯಮಬದ್ಧವಾದ ಊಟ ಇದ್ದರೆ ಈಗ ಬಾಧಿಸುವ ಕರೊನಾದಂತಹ ಯಾವುದೇ ರೋಗಗಳು ಪ್ರವೇಶಿಸಲು ಸಾಧ್ಯವೂ ಆಗದು. ಒಟ್ಟಿನಲ್ಲಿ ಧಾರಣಾ ಶಕ್ತಿ (Immunity power) ಹೆಚ್ಚಾಗಿ ರೋಗನಿರೋಧಕ ಶಕ್ತಿ ಬರುತ್ತದೆ ಎಂಬುದೇ ಮೂಲತತ್ತ್ವ.
(ಲೇಖಕರು ಜ್ಯೋತಿರ್ವಿಜ್ಞಾನ ವಿದ್ವಾಂಸರು)