

| ಶ್ರೀಕಾಂತ್ ಶೇಷಾದ್ರಿ
ಹೈದರಾಬಾದ್ನ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್ನಲ್ಲಿರುವ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ 216 ಅಡಿ ಎತ್ತರದ "ಸಮಾನತೆ ಪ್ರತಿಮೆ' ಪ್ರತಿಷ್ಠಾಪನೆಯಾಗಿದೆ. ಇದು ಕೇವಲ ಕಲ್ಲಿನ ಕೆತ್ತನೆ ಎಂದು ಸೀಮಿತಗೊಳಿಸುವಂತಿಲ್ಲ. ಅದು ಪೂಜ್ಯತೆಯ ಪ್ರತಿರೂಪವಾಗಿ ಕಾಣಿಸುತ್ತದೆ. ಧ್ಯಾನ, ಆಧ್ಯಾತ್ಮದ ಪ್ರೇರಕ ಶಕ್ತಿಯೂ ಹೌದು. ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಈ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಬೃಹತ್ ಪ್ರತಿಮೆಯ ಮಾಹಿತಿ ಕೆದಕುತ್ತಾ ಹೋದರೆ ಸ್ವಾರಸ್ಯ, ವೈಶಿಷ್ಟ$್ಯ ನೂರಾರು.
ಇದರ ನಿರ್ಮಾಣಕ್ಕೆ 1800 ಟನ್ಗಿಂತ ಹೆಚ್ಚು ಪಂಚ ಲೋಹ ಬಳಸಲಾಗಿದೆ. ನೆಲದಿಂದ ತುದಿಯವರೆಗೆ ಒಟ್ಟು 216 ಅಡಿ ಎತ್ತರದ ಕುಳಿತಿರುವ ಭಂಗಿಯ ಪ್ರತಿಮೆ ಇದು. ಸುತ್ತಲೂ 108 ದೇವಾಲಯಗಳಿವೆ. ಬದರೀನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮುಂತಾದ ದೇವಾಲಯಗಳ ಮಾದರಿಗಳಿವೆ. ಪ್ರವೇಶದ್ವಾರದ ವಿನ್ಯಾಸವನ್ನು ವಿಶಿಷ್ಟವಾದ ಕಾಗಡಿಯಾ ಶೈಲಿಯಲ್ಲಿ ಮಾಡಲಾಗಿದೆ. ಮುಖ್ಯದ್ವಾರದಲ್ಲಿ ಹನುಮಾನ್ ಮತ್ತು ಗರುಡನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಎದುರು ಭಾಗದಲ್ಲಿ ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿ ನಿರ್ಮಿಸಲಾಗಿದೆ. ಇದರಿಂದ ಈ ಪ್ರದೇಶದ ಅಂದ ಹೆಚ್ಚಿದೆ. ಒಟ್ಟು 45 ಎಕರೆ ಪ್ರದೇಶದಲ್ಲಿ ಸಂಕೀರ್ಣ ನಿರ್ಮಿಸಲಾಗಿದ್ದು, ನಾಲ್ಕು ಬೃಹತ್ ಪ್ರವೇಶ ದ್ವಾರಗಳಿವೆ. 3000 ವಾಹನಗಳ ಪಾರ್ಕಿಂಗ್ ಸ್ಥಳವಿದೆ. ಆನ್ಲೈನ್ ಡಿಜಿಟಲ್ ಲೈಬ್ರರಿ, ಓಮ್ನಿಮ್ಯಾಕ್ಸ್ ಥಿಯೇಟರ್ ಸಹ ಇವೆ. ಸಂದರ್ಶಕರ ಅನುಕೂಲಕ್ಕಾಗಿ ಪ್ರವೇಶದ ಟಿಕೆಟ್ ಕೌಂಟರ್ ಬಳಿಯೇ ಲಗೇಜ್, ಚೆಕ್&ಇನ್ ಕೌಂಟರ್ ಸ್ಥಾಪಿಸಲಾಗಿದೆ.
54 ಅಡಿಯ ಚಿನ್ನದ ಮೂರ್ತಿ: ಬೃಹತ್ ಪ್ರತಿಮೆಯ ಕೆಳಭಾಗದಲ್ಲಿ ಮಂದಿರವಿದ್ದು, ಅಲ್ಲಿ ಶ್ರೀ ರಾಮಾನುಜಾಚಾರ್ಯರ 54 ಅಡಿ ಎತ್ತರದ 120 ಕೆಜಿ ಚಿನ್ನದಿಂದ ಮಾಡಿರುವ ಪ್ರತಿಮೆ ಇಡಲಾಗಿದೆ. ಇದರ ಅಲಂಕಾರಕ್ಕೆ ಆರು ಕೆ.ಜಿ. ಬಂಗಾರದ ಆಭರಣ ಮಾಡಿಸಿದ್ದು, ಈ ಪ್ರದೇಶದಲ್ಲಿ ಬುಲೆಟ್ ಪ್ರ್ೂ ಭದ್ರತೆ ನೀಡಿ ಕಾಪಾಡಲಾಗುತ್ತಿದೆ.
ಲೇಸರ್ ಪ್ರದರ್ಶನ: ಶ್ರೀರಾಮಾನುಜಾಚಾರ್ಯರ ಜೀವನ, ಬೋಧನೆಯನ್ನು ಅರ್ಥ ಮಾಡಿಸಲು ತ್ರಿಡಿ ಪ್ರದರ್ಶನವಿದೆ. ಬೃಹತ್ ಮೂರ್ತಿಯನ್ನೂ ಒಳಗೊಂಡಂತೆ ವಿಶಾಲ ಪರದೆಯಲ್ಲಿ ಅದು ಪ್ರಸ್ತುತಗೊಳ್ಳುತ್ತದೆ. ಕಥೆ, ಕಾವ್ಯ ಸಮ್ಮಿಳಿತಗೊಂಡ ಲೇಸರ್ ಬೆಳಕಿನ ಪ್ರದರ್ಶನ, ವೀಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.