

ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಆಟಗಳೂ ಮಕ್ಕಳನ್ನು ವಿಶಾಲ ಚಿಂತನೆಗೆ ಎಡೆ ಮಾಡಿಕೊಡುತ್ತಿದ್ದವು. ಬುದ್ಧಿಯನ್ನು ಚುರುಕುಗೊಳಿಸುತ್ತಿದ್ದವು. ದೇಹಕ್ಕೂ ಒಳ್ಳೆಯ ವ್ಯಾಯಾಮ ದೊರೆಯುತ್ತಿತ್ತು. ಆದರೆ ಈಗ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್ನಲ್ಲಿ ಮುಳುಗುವುದರಿಂದ ಹೊರ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವುದು ಕಡಿಮೆಯಾಗಿದೆ.
ಏಪ್ರಿಲ್ ತಿಂಗಳು ಬಂತೆಂದರೆ ಶಾಲಾ ಮಕ್ಕಳಿಗೆಲ್ಲ ರಜೆಯ ಖುಷಿ. ಅಜ್ಜಿ ಮನೆ, ಮಾವನ ಮನೆಗೆ ತೆರಳುವ ಸಡಗರ ಸಂಭ್ರಮ. ಮಕ್ಕಳೆಲ್ಲ ರಜೆ ಬರುವುದನ್ನೇ ಚಾತಕಪಕ್ಷಿಯಂತೆ ಕಾಯುವ ಕಾಲವಿತ್ತು. ಅಜ್ಜಿ ಮನೆಗೆ ಹೋಗುವುದು ಎಂದರೆ ಮಕ್ಕಳಿಗೆ ಅಷ್ಟೊಂದು ಅಚ್ಚು-ಮೆಚ್ಚಿನ ವಿಷಯ. ಅಜ್ಜ-ಅಜ್ಜಿಯಂದಿರೂ ಅಷ್ಟೇ ಕಾತರದಿಂದ ಮೊಮ್ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಅವರೊಂದಿಗಿನ ಆಟ, ಒಡನಾಟಕ್ಕಾಗಿ ಹಪಹಪಿಸುತ್ತಿದ್ದರು. ಅಜ್ಜಿ-ಅಜ್ಜನ ಪ್ರೀತಿಗೆ ಸರಿಸಾಟಿ ಯಾವುದೂ ಇರುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಆ ಕಾಲದ ಸಂಬಂಧಗಳ ಬಾಂಧವ್ಯವನ್ನು, ಅಜ್ಜಿ ಮನೆಗಳ ಪರಿಸರ, ಅಲ್ಲಿನ ಆಟ-ಪಾಠ ಮುಂತಾದ ಸುಮಧುರ ಕ್ಷಣಗಳನ್ನು ಈಗಿನ ಮಕ್ಕಳು ತುಂಬ ಮಿಸ್ ಮಾಡಿಕೊಳ್ಳುತ್ತಾರೆ.
ಬಾಲ್ಯದಲ್ಲಿ ಅಜ್ಜ-ಅಜ್ಜಿ ಹೇಳುವ ಕಥೆಯನ್ನು ಕೇಳುವುದೇ ಒಂದು ಕೌತುಕದ ಸಂಗತಿಯಾಗಿತ್ತು. ಅಜ್ಜಿ ವೀಳ್ಯದೆಲೆ ಮೆಲ್ಲುತ್ತ ಸುತ್ತಲೂ ಹತ್ತಾರು ಮೊಮ್ಮಕ್ಕಳನ್ನು ಕುಳ್ಳಿರಿಸಿಕೊಂಡು ಕಥೆ ಹೇಳಲು ಪ್ರಾರಂಭಿಸಿದರೆ ಮಕ್ಕಳು ಮಂತ್ರಮುಗ್ಧರಾಗುತ್ತಿದ್ದರು. ಅಜ್ಜಿಯಂದಿರ ಬಳಿಯೂ ಅಷ್ಟೇ ಪುಂಖಾನುಪುಂಖವಾಗಿ ಕಥೆಗಳು ಇರುತ್ತಿದ್ದವು. ರಾಮಾಯಣ, ಮಹಾಭಾರತ ಮಾತ್ರವಲ್ಲದೆ ರಾಜ-ರಾಣಿಯರ ಕಥೆ, ಪಂಚತಂತ್ರ ಕಥೆ ಹೀಗೆ ನೂರಾರು ಕಥೆಗಳನ್ನು ನಿರರ್ಗಳವಾಗಿ ಹೇಳುತ್ತಿದ್ದರು. ಅಜ್ಜಿ ಕಥೆಗಳೆಂದರೆ ಅದರ ಸ್ವಾರಸ್ಯವೇ ಬೇರೆ ವರ್ಣಿಸಳಸದಳ. ಆ ಕಾಲದಲ್ಲಿ ಅಷ್ಟೇನೂ ವಿದ್ಯಾಭ್ಯಾಸ ಹೊಂದಿರದ ಅಜ್ಜ-ಅಜ್ಜಿಯಂದಿರಲ್ಲಿದ್ದ ಕಥೆ ಹೇಳುವ ಚಾಕಚಕ್ಯತೆ, ಚತುರತೆಯನ್ನು ಮೆಚ್ಚಲೇಬೇಕು. ಕಥೆಗಳನ್ನು ಹೇಳುತ್ತ ಅದರಲ್ಲಿನ ಪಾತ್ರಗಳನ್ನು ವರ್ಣಿಸುವ ರೀತಿ ಮನೋಜ್ಞವಾಗಿತ್ತು. ಕಥೆಗಳು ಮನರಂಜನೆಯ ಜೊತೆಗೆ ನೀತಿ ಹಾಗೂ ಜೀವನಮೌಲ್ಯವನ್ನು ಪ್ರೇರೇಪಿಸುತ್ತಿದ್ದವು. ಈಗ ಅಜ್ಜಿ ಕಥೆಯ ಪರಿಪಾಠ ಮರೀಚಿಕೆಯಾಗುತ್ತಿದೆ.
ಅಜ್ಜಿಯ ಮಡಿಲಲ್ಲಿ ಮಲಗಿಕೊಂಡು ಕಥೆಯನ್ನು ಆಲಿಸುವುದು ಎಂದರೆ ಎಲ್ಲ ಮಕ್ಕಳಿಗೂ ಪಂಚಪ್ರಾಣವಾಗಿತ್ತು. ಅದಕ್ಕಾಗಿ ಮಕ್ಕಳ ನಡುವೆ ನಾ ಮುಂದು, ತಾ ಮುಂದು ಕಸರತ್ತುಗಳು ನಡೆಯುತ್ತಿತ್ತು. ಕಡೆಗೆ ಅಜ್ಜಿ ಉಪಾಯ ಮಾಡಿ ಪ್ರತಿಯೊಬ್ಬರನ್ನೂ ಒಂದೊಂದು ದಿನ ತನ್ನ ಮಡಿಲಲ್ಲಿ ಮಲಗಿಸುವ ನಿರ್ಣಯಕ್ಕೆ ಬಂದು ಎಲ್ಲರನ್ನೂ ಸಮಾಧಾನ ಪಡಿಸುತ್ತಿದ್ದಳು.
ಅಜ್ಜಿಯ ಕೆಲವು ಕಥೆಗಳಲ್ಲಿ ಯಾರು ಹೀರೋ ಎಂದು ಕೇಳಿದರೆ ಅಜ್ಜನೇ ಹೀರೋ. ಅಜ್ಜನ ಸಾಹಸ, ಅವರ ದಿನದ ಚಟುವಟಿಕೆಗಳೇ ಕಥೆ ರೂಪ ಪಡೆದು ಮಕ್ಕಳಿಗೆ ಮನರಂಜನೆಯಾಗುತ್ತಿತ್ತು. ಅದೊಂದು ಮಳೆಗಾಲದ ಸಂದರ್ಭ. ನಮ್ಮ ಹಟ್ಟಿಯಿಂದ ದನಗಳನ್ನೆಲ್ಲ ಮೇಯಲು ಕಾಡಿಗೆ ಬಿಟ್ಟಿದ್ದೆವು. ಸಂಜೆಯಾದಾಗ ಎಲ್ಲ ದನಗಳು ಬಂದರೂ ಗಂಗೆ ದನ ಬರಲೇ ಇಲ್ಲ. ಹಾಗೆ ತಪ್ಪಿಸಿಕೊಂಡು ಹೋದ ದನವನ್ನು ಹುಡುಕಿಕೊಂಡು ಬರಲು ಅಜ್ಜ ಟಾರ್ಚ್ ಹಿಡಿದುಕೊಂಡು ಹೋಗಿದ್ದರು. ಗಂಗೇ ಗಂಗೇ ಎಂದು ಕರೆಯುತ್ತ ಹೋದವರಿಗೆ ದೂರದಲ್ಲಿ ಹುಲಿಯ ಗರ್ಜನೆ ಕೇಳಿತ್ತು. ಸೀದಾ ಮನೆಗೆ ಬಂದವರೇ ಕೋವಿ ಹಿಡಿದುಕೊಂಡು ದನವನ್ನು ಹುಡುಕಲು ಒಂದಷ್ಟು ಜನರನ್ನು ಸೇರಿಸಿಕೊಂಡು ಹೋದರು. ಗುಡ್ಡದ ತುದಿಯಲ್ಲಿ ಗಂಗೆ ದನ ಪಿರಿಪಿರಿ ಮಳೆಯಲ್ಲಿ ಗಾಬರಿಯಿಂದ ನಿಂತಿದ್ದಳು.
ಅವಳ ಮುಂದೆಯೇ ಬಂಡೆಗಲ್ಲಿನ ಮೇಲೆ ದೊಡ್ಡ ಗಾತ್ರದ ಹುಲಿಯೊಂದು ದನದ ಮೇಲೆರಗಲು ಸಿದ್ಧವಾಗುತ್ತಿತ್ತು. ಆಗಲೇ ಬಂದೂಕಿನಿಂದ ಅಜ್ಜ ಹುಲಿಯತ್ತ ಗುರಿಯಿರಿಸಿ ಗುಂಡು ಹಾರಿಸಿಯೇ ಬಿಟ್ಟಿದ್ದರು. ದೊಡ್ಡದಾದ ಶಬ್ದವೊಂದು ಕೇಳಿ ಬಂದಿತ್ತಷ್ಟೇ. ಹುಲಿಗೆ ಗುಂಡು ತಾಕಿತೋ ಇಲ್ಲವೊ ಹುಲಿ ನಾಪತ್ತೆಯಾಗಿತ್ತು. ಗಂಗೆ ಅಜ್ಜನ ಬಳಿ ಓಡೋಡಿ ಬಂದಿತ್ತು. ಈ ಘಟನೆಯನ್ನು ಕಣ್ಣಾರೆ ಕಂಡ ಜೊತೆಗಿದ್ದವರು ಹುಲಿಯನ್ನು ಓಡಿಸಿ ದನ ಕಾಪಾಡಿದ ವೀರ ಎಂದು ಊರಲ್ಲಿ ಸುದ್ದಿ ಹಬ್ಬಿಸಿದ್ದರು. ಅಂದಿನಿಂದ ಅಜ್ಜನಿಗೆ ಊರಿನಲ್ಲಿ ಮಾತ್ರವಲ್ಲದೆ ಪರ ಊರಿನಲ್ಲಿಯೂ ಎಲ್ಲಿಲ್ಲದ ಮರ್ಯಾದೆ ದೊರೆಯುತ್ತಿತ್ತು. ಇಂದಿಗೂ ಆ ಘಟನೆಯನ್ನು ಆಗಾಗ ಜನ ನೆನಪಿಸಿಕೊಳ್ಳುತ್ತಾರೆ. ಇಂತಹ ಕಥೆಗಳು ಮಕ್ಕಳಿಗೆ ಅಜ್ಜನ ಬಗ್ಗೆ ಅಭಿಮಾನ ಮೂಡಿಸುತ್ತಿತ್ತು.
ಅಜ್ಜಿ ದಿನವೂ ಕಥೆ ಹೇಳುತ್ತಾಳೆ, ಬಗೆ ಬಗೆಯ ಕರಿದ ತಿಂಡಿಯನ್ನು ನೀಡುತ್ತಾಳೆ ಎನ್ನುವ ಕಾರಣಕ್ಕಾಗಿಯೇ ಅನೇಕ ಮಕ್ಕಳು ಬೇಸಿಗೆ ರಜಾ ತಿಂಗಳನ್ನು ಕಳೆಯಲು ಅಜ್ಜಿ ಮನೆಗೆ ದಾಂಗುಡಿ ಇಡುತ್ತಿದ್ದರು. ಅಜ್ಜಿ ಮನೆಗೆ ಹೋಗಲು ಅಪ್ಪ-ಅಮ್ಮನಲ್ಲಿ ಹಠ ಹಿಡಿಯುತ್ತಿದ್ದರು, ಪುಸಲಾಯಿಸುತ್ತಿದ್ದರು. ಬಹುಶಃ ತಂದೆ-ತಾಯಿಯನ್ನು ಬಿಟ್ಟು ಮಕ್ಕಳಿಗೆ ಅತಿ ಹೆಚ್ಚು ದಿನ ಕಳೆಯಲು ಸಾಧ್ಯವಿರುವುದು ಎಂದರೆ ಅಜ್ಜಿ ಮನೆಯಲ್ಲಿ ಮಾತ್ರ. ಅಷ್ಟೊಂದು ಆರೈಕೆ, ಕಾಳಜಿ ಮಕ್ಕಳಿಗೆ ದೊರೆಯುತ್ತಿತ್ತು.
ನಾವು ಕಂಡು, ಅನುಭವಿಸಿದ ಬಾಲ್ಯದ ಆ ನೆನಪುಗಳೇ ಸವಿ. ಆದರೆ ವಾಸ್ತವ ಸ್ಥಿತಿ ಬಹಳಷ್ಟು ಭಿನ್ನವಾಗಿದೆ. ಈಗಿನ ಮಕ್ಕಳಿಗೆ ರಜೆ ಸಿಕ್ಕಿತೆಂದರೆ ಟ್ಯೂಶನ್ ಕ್ಲಾಸ್, ಕೋಚಿಂಗ್ ಸೆಂಟರ್ ಇಲ್ಲವೇ ಸಮ್ಮರ್ ಕ್ಯಾಂಪ್ಗಳಲ್ಲಿ ತಮ್ಮ ರಜೆಯನ್ನು ಕಳೆಯುವುದು ಜಾಸ್ತಿಯಾಗಿದೆ. ಇಲ್ಲವೇ ಮೊಬೈಲ್, ಕಂಪ್ಯೂಟರ್ ಗೇಮ್ಳಲ್ಲಿ ಮುಳುಗಿರುತ್ತಾರೆ. ಅಜ್ಜಿ-ಅಜ್ಜನ ಮನೆ, ಮಾವನ ಮನೆಗೆ ಹೋಗುವುದಿರಲಿ ಪಟ್ಟಣಗಳಲ್ಲಿ ಅಕ್ಕ-ಪಕ್ಕದ ಮನೆಗೂ ಹೋಗುವುದು ಬಹಳ ಕಡಿಮೆಯಾಗಿದೆ. ಕೆಲವು ಅಜ್ಜಿಮನೆಗಳಲ್ಲಿ ಅಜ್ಜ-ಅಜ್ಜಿಯರೇ ಕಾಣಸಿಗುತ್ತಿಲ್ಲ. ಅಜ್ಜಿ ಮನೆಗಳ ಜೊತೆಗೆ ಅಜ್ಜಿ ಕಥೆ ಎನ್ನುವುದು ಮಾಯವಾಗುತ್ತಿದೆ. ಈಗಿನ ಮಕ್ಕಳಿಗೂ ಆ ಅಜ್ಜಿ ಮನೆಯ ಸೊಗಡು, ಕಥೆಗಳು ಬೋರಾಗತೊಡಗುತ್ತವೆ. ಅಜ್ಜಿಯ ಮಮತೆ, ಮನೆಯ ಮಣ್ಣಿನ ನಂಟು ನಿಧಾನವಾಗಿ ಕಳಚುತ್ತಿದೆ. ಇದಕ್ಕೆಲ್ಲ ಕಾರಣವಾಗುತ್ತಿರುವುದು ಈಗಿನ ಆಧುನಿಕ ಜೀವನ ವಿಧಾನ.
ಇಂದಿನ ಮಕ್ಕಳು ಮೊಬೈಲ್, ಟಿ.ವಿ, ಕಂಪ್ಯೂಟರ್ ಬಳಸಿ ಅಂತರ್ಜಾಲ ಮೂಲಕ ತಮಗೇನು ಬೇಕು ಅದನ್ನು ನೋಡುತ್ತಾರೆ. ಮೊಬೈಲ್, ಆನ್ಲೈನ್ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಅವರಿಗೆ ಅಜ್ಜಿಯ ಕಥೆಗಳು, ಅಜ್ಜನ ಸಾಹಸಗಳನ್ನು ಕೇಳುವ ವ್ಯವಧಾನವಿಲ್ಲವಾಗಿದೆ. ಮಕ್ಕಳಿಗೆ ಅಜ್ಜಿ ಮನೆಯ ಆಟ, ಪ್ರೀತಿ ಬೇಡ. ಅಲ್ಲಿನ ವಾತಾವರಣ ಬೇಡ. ನಾಲ್ಕು ಗೋಡೆಯ ಮಧ್ಯೆ ಕಂಪ್ಯೂಟರ್ನಲ್ಲೋ, ಮೊಬೈಲ್ನಲ್ಲೋ ಆನ್ಲೈನ್ ಆಟಗಳನ್ನು ಆಡುವುದರಲ್ಲೇ ಸಂಭ್ರಮ, ಸಂತೋಷ ಕಾಣುತ್ತಿದ್ದಾರೆ. ಆದರೆ ಇದು ನೈಜ ಸಂತೋಷವಲ್ಲ ಎಂದು ಮನವರಿಕೆ ಮಾಡುವ ಅಗತ್ಯವಿದೆ.
ಫೇಸ್ಬುಕ್, ಎಕ್ಸ್, ವಾಟ್ಸ್ಆಪ್, ಯುಟ್ಯೂಬ್ ಹೀಗೆ ವಿವಿಧ ಸಾಮಾಜಿಕ ಜಾಲತಾಣ, ಆನ್ಲೈನ್ ಗೇಮ್ಳಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆ ವ್ಯಸನವಾಗಿ ಪರಿಣಮಿಸುತ್ತಿದೆ. ಮಕ್ಕಳಲ್ಲಿ ಮೊಬೈಲ್ ಕೈಯಲ್ಲಿದ್ದರೆ ಯಾರೂ ಬೇಡ. ಊಟ, ತಿಂಡಿ, ನಿದ್ರೆಯೂ ಬೇಡ ಹಾಗಾಗಿದೆ ಪರಿಸ್ಥಿತಿ ಎನ್ನುತ್ತಾರೆ ಕೆಲವು ಪಾಲಕರು. ಹಿಂದೆಲ್ಲ ರಜೆ ಎಂದರೆ ಮಕ್ಕಳೆಲ್ಲ ಒಟ್ಟಾಗಿ ಕುಂಟೆಬಿಲ್ಲೆ, ಮರಕೋತಿ ಆಟ, ಕಣ್ಣಾಮುಚ್ಚಾಲೆ, ಗೋಲಿ ಆಟ, ಲಗೋರಿ, ಕಲ್ಲಾಟ, ಮಣ್ಣಿನಲ್ಲಿ ಮನೆ ಕಟ್ಟುವ ಆಟ, ಹೀಗೇ ಪ್ರಕೃತಿಯ ಒಡನಾಟದಲ್ಲೇ ಆಟಗಳು ಸಾಗುತ್ತಿತ್ತು. ಕ್ರಿಕೆಟ್, ಕಬಡ್ಡಿಗಳ ಹೊರತಾಗಿ ಅನೇಕ ದೇಸೀ ಆಟಗಳನ್ನಾಡುತ್ತಿದ್ದರು.
ಇವೆಲ್ಲ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದ್ದವು. ಮಕ್ಕಳಲ್ಲಿ ಪರಸ್ಪರ ಸಹಾಯ, ಒಗ್ಗಟ್ಟು, ತಂಡದಲ್ಲಿ ಕಾರ್ಯನಿರ್ವಹಣೆ, ನಾಯಕತ್ವ ಇತ್ಯಾದಿ ಗುಣ ಬೆಳೆಯಲು ಸಹಕಾರಿಯಾಗುತ್ತಿತ್ತು. ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಆಟಗಳೂ ಮಕ್ಕಳನ್ನು ವಿಶಾಲ ಚಿಂತನೆಗೆ ಎಡೆ ಮಾಡಿಕೊಡುತ್ತಿದ್ದವು. ಬುದ್ಧಿಯನ್ನು ಚುರುಕುಗೊಳಿಸುತ್ತಿದ್ದವು. ದೇಹಕ್ಕೂ ಒಳ್ಳೆಯ ವ್ಯಾಯಾಮ ದೊರೆಯುತ್ತಿತ್ತು. ಆದರೆ ಈಗ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್ನಲ್ಲಿ ಮುಳುಗುವುದರಿಂದ ಹೊರ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವುದು ಕಡಿಮೆಯಾಗಿದೆ. ಅಜ್ಜ-ಅಜ್ಜಿಯಂದಿರ ಒಡನಾಟ, ಸಂಬಂಧಗಳ ಮಹತ್ವದ ಅರಿವೂ ಇಲ್ಲವಾಗುತ್ತಿದೆ.
ಬಾಂಧವ್ಯಗಳ ಜೊತೆ ಅವರಿಂದ ದೊರೆಯುವ ಮಾರ್ಗದರ್ಶನ, ತಿಳಿವಳಿಕೆಗಳೂ ಮಕ್ಕಳಿಗೆ ದೊರೆಯುತ್ತಿಲ್ಲವಾಗಿದೆ. ಅಜ್ಜಿ ಕಥೆಗಳು ಕಣ್ಮರೆಯಾಗುತ್ತಿರುವುದನ್ನು ಜನಪದ ಸಾಹಿತ್ಯದ ಬಹುಮುಖ್ಯ ಪ್ರಾಕಾರ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎನ್ನಬಹುದು. ಬಹುತೇಕ ಅಜ್ಜಿ ಕಥೆಗಳು ಬಾಯಿಂದ ಬಾಯಿಗೆ ಹರಿದು ಬಂದಿದ್ದು, ಅವೆಲ್ಲ ದಾಖಲಾಗಿದೆ ಎಂದು ಹೇಳಲಾಗದು. ಅಜ್ಜಿಯಂದಿರ ಜೊತೆ ಅಂತಹ ಕಥೆಗಳೂ ನಶಿಸುತ್ತಿದ್ದು, ಇದು ಜನಪದ ಸಾಹಿತ್ಯ ಲೋಕಕ್ಕೂ ಅಪಾರ ನಷ್ಟವೇ ಸರಿ. ಹಿಂದೆಲ್ಲ ಪುರಾಣ ಕಥೆಗಳಲ್ಲದೆ ಪಂಚತಂತ್ರ ಕಥೆಗಳು, ನೀತಿ ಕಥೆಗಳು, ತೇನಾಲಿ ರಾಮ, ಬೀರಬಲ್, ಹೀಗೆ ನಾನಾ ಬಗೆಯ ಕಥೆಗಳು ಅಜ್ಜ-ಅಜ್ಜಿಯಂದಿರ ಬಾಯಿಂದ ಸರಾಗವಾಗಿ ಕೇಳಿ ಬರುತ್ತಿತ್ತು. ಅವೆಲ್ಲವೂ ಇಂದಿನ ದಿನಗಳಲ್ಲಿ ಕ್ಷೀಣಿಸುತ್ತಿವೆ.
ಕೌಟುಂಬಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಗಂಡ, ಹೆಂಡತಿ, ಮಗ ಅಥವಾ ಮಗಳು ಇವರಷ್ಟೇ ಕುಟುಂಬ ಎನ್ನುವಂತಾಗಿದೆ. ಅಜ್ಜ-ಅಜ್ಜಿಯರು ಊರಲ್ಲೋ ಅಥವಾ ವೃದ್ಧಾಶ್ರಮದಲ್ಲೋ ಇರುವ ಪ್ರಮೇಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವಂದಿರೆಲ್ಲ ಅಂಕಲ್, ಆಂಟಿಗಳಾಗಿ ಬದಲಾಗುತ್ತಿದ್ದಾರೆ. ಅವರೊಂದಿಗೆ ಇರುತ್ತಿದ್ದ ಆತ್ಮೀಯ ಭಾವನೆ ಮಾಯವಾಗಿ ನಗು, ಮಾತುಗಳೆಲ್ಲ ಅಷ್ಟಕ್ಕಷ್ಟೇ ಎನಿಸುತ್ತಿವೆ. ಅಜ್ಜಿ ಮೊಮ್ಮಕ್ಕಳ ಬಾಂಧವ್ಯವದ ಅರಿವು ಮೂಡಿಸುವ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆಯಾಗಿರುವ ಹೇಮಾವತಿ ವೀ. ಹೆಗ್ಗಡೆಯವರು ‘ಅಜ್ಜಿ ಕಥೆ ಕೈತುತ್ತಿನ ಜೊತೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಣ್ಣಮಕ್ಕಳೆಲ್ಲ ಅಜ್ಜಿಯ ಸುತ್ತ ಕುಳಿತುಕೊಂಡು ಅಜ್ಜಿ ಹೇಳುವ ಕಥೆಯನ್ನು ಆಲಿಸುವುದು. ನಡು-ನಡುವೆ ಅಜ್ಜಿ ಕೊಡುವ ಕೈ ತುತ್ತನ್ನೋ, ತಿಂಡಿಯನ್ನೋ ಮೆಲ್ಲುವುದು. ಇದರಿಂದ ಅಜ್ಜಿ-ಮೊಮ್ಮಕ್ಕಳ ಬಾಂಧವ್ಯ ವೃದ್ಧಿಯ ಜೊತೆ ಮಕ್ಕಳಿಗೆ ಅಜ್ಜಿಯ ಪ್ರೀತಿ-ವಾತ್ಸಲ್ಯ ದೊರೆಯುತ್ತದೆ. ಈ ಕಾರ್ಯಕ್ರಮವು ಬಹಳಷ್ಟು ಮಕ್ಕಳಿಗೆ ಖುಷಿಯನ್ನು ನೀಡಿದೆ.
ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಲ್ಲದೆ ಅಜ್ಜ-ಅಜ್ಜಿಯರ ಬಂಧು, ಬಳಗ ನೆಂಟರಿಷ್ಟರ ಪ್ರೀತಿಯೂ ದೊರೆಯುವುದು ಅತಿ ಮುಖ್ಯ. ಯಾಂತ್ರಿಕ ಜೀವನದಲ್ಲಿ ಅವೆಲ್ಲವೂ ಇಂದಿನ ಮಕ್ಕಳಿಗೆ ಅನುಭವಕ್ಕೆ ದಕ್ಕುವುದು ಕಷ್ಟವೇ. ಆದರೂ ಮಕ್ಕಳಿಗೆ ಸಂಬಂಧಗಳು, ಅವುಗಳ ಬಾಂಧವ್ಯ, ಪ್ರೀತಿ ಕಾಳಜಿಯ ಅರಿವು ಮೂಡಿಸಬೇಕು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಹಾಗೆ ನಾವೆಲ್ಲ ಜೇನುಗೂಡಿನಂತೆ ಎಲ್ಲರ ಜೊತೆ ಒಂದಾಗಿದ್ದರೆ ಬಾಳಿನುದ್ದಕ್ಕೂ ಸವಿ ಜೇನು ಸವಿಯಬಹುದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)