ವಿದ್ಯೆಯ ಸದುಪಯೋಗ: ಮನೋಲ್ಲಾಸ

Manollasa
Published on
| ರಶ್ಮಿ ಹೆಗಡೆ ಮುಂಬೈ

ವ್ಯಾಪಾರಿಯೋರ್ವ ಕಾಡಿನಿಂದ ಪಶು-ಪಕ್ಷಿಗಳನ್ನು ಹಿಡಿದು ತಂದು, ಊರಿನ ಸಂತೆಯಲ್ಲಿ ಮಾರಿ, ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಒಮ್ಮೆ ಆತನಿಗೆ ತನ್ನ ಗುರುವಿಗೆ ತಿಳಿದಿದ್ದ ವಿಶೇಷ ವಿದ್ಯೆಯ ನೆನಪಾಯಿತು. ಅವರಿಗೆ ಪ್ರಾಣಿ-ಪಕ್ಷಿಗಳ ಭಾಷೆ ತಿಳಿದಿದೆ; ಅದನ್ನು ತಾನೂ ಕಲಿತರೆ ವ್ಯಾಪಾರದಲ್ಲಿ ಸಹಾಯವಾಗಬಲ್ಲದು ಎಂಬ ಆಸೆಯಿಂದ ಗುರುವಿದ್ದಲ್ಲಿಗೆ ನಡೆದ. ತನ್ನ ವ್ಯಾಪಾರಿಬುದ್ಧಿ ಉಪಯೋಗಿಸಿ, ಮಾತಿನಿಂದ ಮೋಡಿ ಮಾಡಿ, ವಿದ್ಯೆ ಕಲಿಸಿಕೊಡುವಂತೆ ಬೇಡಿಕೊಂಡ.

‘ನಾನೀಗ ಹೇಳಿಕೊಡುವ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಉಪಯೋಗಿಸ ಬೇಕೇ ಹೊರತು ನಿನ್ನ ಸ್ವಾರ್ಥಕ್ಕಾಗಿ ಉಪಯೋಗಿಸುವಂತಿಲ್ಲ’ ಎಂದು ಎಚ್ಚರಿಕೆ ನೀಡಿ, ಅಪರೂಪದ ವಿದ್ಯೆಯನ್ನು ಗುರುಗಳು ಆತನಿಗೆ ಧಾರೆಯೆರೆದರು. ವ್ಯಾಪಾರಿ ಪಶು-ಪಕ್ಷಿಗಳ ಭಾಷೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲವನಾದ. ವ್ಯಾಪಾರದಲ್ಲಿ ಎತ್ತರಕ್ಕೆ ಬೆಳೆದು, ಶ್ರೀಮಂತನಾದ. ಕ್ರಮೇಣ ಆತನಲ್ಲಿ ದುರಾಸೆ ಮನೆಮಾಡತೊಡಗಿತು. ಗುರುಗಳ ಮಾತಿಗೆ ವಿರುದ್ಧವಾಗಿ, ಸ್ವಾರ್ಥಕ್ಕಾಗಿ ವಿದ್ಯೆಯನ್ನು ಬಳಸಿಕೊಳ್ಳತೊಡಗಿದ.

‘ನಮ್ಮ ಸಾಹುಕಾರನ ಎರಡು ಬಿಳಿ, ಮುದಿ ಕುದುರೆಗಳು ಸದ್ಯದಲ್ಲೇ ಮರಣ ಹೊಂದುತ್ತವೆ’ ಎಂದು ಗಿಳಿಮರಿಗಳು ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡ. ಅವು ಸಾಯುವುದಕ್ಕಿಂತ ಮೊದಲು ಮಾರಿದರೆ ದುಡ್ಡು ಸಿಗುವುದೆಂಬ ಆಸೆಗೆ ತಕ್ಷಣವೇ ಆ ಎರಡೂ ಬಿಳಿ ಕುದುರೆಗಳನ್ನು ಪೇಟೆಯಲ್ಲಿ ಒಳ್ಳೆಯ ಬೆಲೆಗೆ ಮಾರಿದ. ಒಮ್ಮೆ ಎಲ್ಲ ಪ್ರಾಣಿಗಳೂ ‘ಅಯ್ಯೋ, ನಮ್ಮ ಯಜಮಾನ ಇನ್ನು ಕೆಲವೇ ದಿನಗಳಲ್ಲಿ ಮರಣ ಹೊಂದುತ್ತಾನೆ’ ಎಂದು ಬೇಸರದಿಂದ ಮಾತನಾಡಿಕೊಂಡವು. ಇದನ್ನು ಕೇಳಿಸಿಕೊಂಡ ವ್ಯಾಪಾರಿಗೆ ಜಂಘಾಬಲವೇ ಕುಸಿದಂತಾಯಿತು. ಆಗ ಮತ್ತೆ ಗುರುಗಳು ನೆನಪಾದರು. ‘ಗುರುಗಳೇ, ನನ್ನ ಮರಣ ಸಮೀಪಿಸುತ್ತಿದೆಯೆಂದು ಪಶು-ಪಕ್ಷಿಗಳೆಲ್ಲ ಮಾತನಾಡಿಕೊಳ್ಳುತ್ತಿದ್ದವು. ಇಷ್ಟೊಂದು ಆಸ್ತಿ, ಅಂತಸ್ತುಗಳನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಏನಾದರೂ ಉಪಾಯ ಹೇಳಿ. ಸಾವನ್ನು ಮುಂದೂಡುವ ವಿದ್ಯೆಯಿದ್ದರೆ ಹೇಳಿಕೊಡಿ’ ಎಂದು ಬೇಡಿಕೊಂಡ.

‘ನಾನು ಕಲಿಸಿದ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಉಪಯೋಗಿಸಬೇಕೇ ಹೊರತು ನಿನ್ನ ಸ್ವಾರ್ಥಕ್ಕಲ್ಲವೆಂದು ಮೊದಲೇ ತಿಳಿಸಿದ್ದೆ. ನನ್ನ ಷರತ್ತಿಗೆ ವಿರುದ್ಧವಾಗಿ ನಡೆದು, ನಿನ್ನ ಅತಿ ಆಸೆಗೆ ನೀನೇ ಬಲಿಯಾದೆ. ಇದಕ್ಕೆ ಯಾವ ಪರಿಹಾರವೂ ಇಲ್ಲ. ಬಂದಿದ್ದನ್ನು ಎದುರಿಸಲೇ ಬೇಕು’ ಎಂಬ ಗುರುಗಳ ಮಾತಿಗೆ ಕುಸಿದು ಬಿದ್ದಿದ್ದ ಆ ವ್ಯಾಪಾರಿ. ಸ್ವಾರ್ಥ, ದುರಾಸೆಗೆ ತಾನೇ ಬಲಿಯಾದ.

ಕಲಿತ ವಿದ್ಯೆ ಒಳ್ಳೆಯ ಕಾರ್ಯಕ್ಕೆ, ಲೋಕೋಪಕಾರಕ್ಕೆ ಉಪಯೋಗವಾಗಬೇಕೆ ಹೊರತು ಸ್ವಾರ್ಥಕ್ಕಲ್ಲ. ನೈಸರ್ಗಿಕವಾದ, ಪ್ರಕೃತಿ ಸಹಜ ಜೀವನವು ಅಸಹಜವಾದಾಗ ಬದುಕು ದುಸ್ತರವಾಗುತ್ತದೆ. ಹುಟ್ಟು, ಸಾವು ಅನಿವಾರ್ಯ ಎನ್ನುವುದು ಸತ್ಯ. ಹುಟ್ಟನ್ನು ಹೇಗೆ ಸಂಭ್ರಮಿಸುತ್ತೇವೋ, ಸಾವನ್ನೂ ಸಂತೋಷದಿಂದಲೇ ಅಪ್ಪಿಕೊಳ್ಳುವ ಮನಃಸ್ಥಿತಿ ಕಷ್ಟಗಳನ್ನೆಲ್ಲ ಧೈರ್ಯದಿಂದ ಎದುರಿಸಲು ಅಣಿಮಾಡಿಕೊಡುತ್ತದೆ. ಪ್ರಕೃತಿ ಪ್ರತಿಯೊಂದು ಜೀವಿಗೂ ಒಂದೊಂದು ಶಕ್ತಿರೂಪಿ ವರ ನೀಡಿದೆ. ಅದನ್ನು ಸಮಯೋಚಿತವಾಗಿ, ಲೋಕೋದ್ಧಾರಕ್ಕಾಗಿ ಉಪಯೋಗಿಸಿದರೊಳಿತು. ನಮ್ಮ ಸ್ವಾರ್ಥದ ದುಷ್ಪರಿಣಾಮ ಅನ್ಯರ ಮೇಲಾಗದಂತೆ ನೋಡಿಕೊಂಡರೆ ಜಗತ್ತೇ ಸುಂದರ. ಕಲಿತ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಮೀಸಲಿಡೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net