ಸಂಪಾದಕೀಯ: ಉತ್ತಮ ಉಪಕ್ರಮ

6-68d587641ebb2
Published on

ಜಾಗತಿಕ ರಾಜಕೀಯ, ಸಾಮರಿಕ ಸಮೀಕರಣಗಳು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿವೆ. ಶತ್ರುರಾಷ್ಟ್ರ ಪಾಕಿಸ್ತಾನ ಸೌದಿ ಅರೇಬಿಯಾದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಕೂಡ ಪಾಕ್​ಗೆ ಹಣಕಾಸು ನೆರವು ನೀಡುತ್ತಿದೆ. ಡ್ರಾ್ಯಗನ್ ರಾಷ್ಟ್ರ ಚೀನಾದ ತಂತ್ರಗಳು ಆಗಾಗ ಬದಲಾಗುತ್ತಲೇ ಇರುತ್ತವೆ.

‘ಭಾರತೀಯ ಸೇನಾ ಪಡೆ ದೀರ್ಘಾವಧಿ ಯುದ್ಧಗಳಿಗೆ ಸನ್ನದ್ಧವಾಗಿ ಇರಬೇಕು’ ಎಂದು ಹೇಳುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಮ್ಮ ಇಡೀ ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಮಹತ್ವದ ಉಪಕ್ರಮಗಳನ್ನು ಕೈಗೊಳ್ಳುತ್ತಿರುವುದು ಮತ್ತು ಅದು ಸ್ವದೇಶಿ ಬಲದಲ್ಲಿ ನಡೆಯುತ್ತಿರುವುದು ಉತ್ತಮ ಸಂಗತಿ. ಪರಮಾಣು ಸಾಮರ್ಥ್ಯದ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಇದೇ ಪ್ರಥಮ ಬಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಲಾಂಚರ್​ನಿಂದ ಉಡಾವಣೆ ಮಾಡಿ ವಿಶ್ವದ ಗಮನ ಸೆಳೆದಿದೆ.

‘ಅಗ್ನಿ ಪ್ರೖೆಮ್ ಎಂಬ ಹೆಸರಿನ ಈ ಕ್ಷಿಪಣಿಯನ್ನು ಭಾರತೀಯ ರೈಲ್ವೆ ಲೋಕೋಮೋಟಿವ್​ನಿಂದ ಎಳೆಯಲಾದ ಉಡಾಹಕದ ಮೇಲಿನಿಂದ ಗುರುವಾರ ಪ್ರಾಯೋಗಿಕ ಉಡಾವಣೆ ಮಾಡಲಾಗಿದೆ. ಇದರೊಂದಿಗೆ ಭಾರತ ಈಗ ನೆಲ, ರಸ್ತೆ, ವಿಮಾನ ಮತ್ತು ಜಲಾಂತರ್ಗಾಮಿ ನೌಕೆ ಮಾತ್ರವಲ್ಲದೆ ವಿಶಾಲವಾದ ರೈಲ್ವೆ ಗ್ರಿಡ್​ನಿಂದಲೂ ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಉಡಾವಣೆ ಮಾಡುವ ಸಾಧನೆ ಮಾಡಿದಂತಾಗಿದೆ. ಅಲ್ಲದೆ ಇದು ಎದುರಾಳಿಯ ಸಮಯಾವಧಿ ಸಂಕುಚಿತಗೊಳಿಸುವ, ಗುರಿ ಸಂಕೀರ್ಣಗೊಳಿಸುವ ಹಾಗೂ ಭಾರತದ ಎರಡನೇ ದಾಳಿ ಸಾಮರ್ಥ್ಯದ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ ಎಂಬುದು ಗಮನಾರ್ಹ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಿಂದ (ಎಚ್​ಎಎಲ್) ಭಾರತೀಯ ವಾಯುಪಡೆಗೆ 97 ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸುವ ಮಹತ್ವದ ಒಪ್ಪಂದವೊಂದಕ್ಕೆ ರಕ್ಷಣಾ ಸಚಿವಾಲಯ ಗುರುವಾರ ಸಹಿ ಹಾಕಿದೆ. ಮಾರ್ಕ್-1ಎ ಜೆಟ್​ಗಳ ಈ ವಹಿವಾಟಿನ ಮೊತ್ತ 62,370 ಕೋಟಿ ರೂಪಾಯಿ ಆಗಿದೆ. ಈ ಒಡಂಬಡಿಕೆಯಡಿ 68 ಫೈಟರ್ ಹಾಗೂ 29 ಅವಳಿ ಆಸನದ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಲಾಗುವುದೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.

105 ಭಾರತೀಯ ಕಂಪನಿಗಳು ಈ ಮಹತ್ವದ ಯೋಜನೆಯಲ್ಲಿ ನೇರವಾಗಿ ಒಳಗೊಳ್ಳಲಿವೆ. ಈ ವಿಮಾನಗಳ ಉತ್ಪಾದನಾ ಚಟುವಟಿಕೆಗಳಿಂದಾಗಿ ಆರು ವರ್ಷ ಕಾಲ ಸುಮಾರು 11,750 ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ, ಭಾರತ-ಯುಎಇ ರಕ್ಷಣಾ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ. ಎಡ್ಜ್ ಘಟಕ ಕಾರಾಕಲ್ ಹಾಗೂ ಮೆಘಾ ಇಂಜಿನಿಯರಿಂಗ್ ಮತ್ತು ಇನ್ಪ್ರಾಸ್ಟ್ರಕ್ಚರ್ ಸಮೂಹ ಗುಂಪಿನ ಐಕಾಮ್ ಟೆಲಿ ಲಿಮಿಟೆಡ್, ಕೇಂದ್ರ ಮೀಸಲು ಪಡೆಗಾಗಿ (ಸಿಆರ್​ಪಿಎಫ್) 200 ಅತ್ಯಾಧುನಿಕ ಸಿಎಸ್​ಆರ್ 338 ಸ್ನೈಪರ್ ರೈಫಲ್ಸ್ಗಳನ್ನು ಪೂರೈಸುವ ಅವಕಾಶ ಪಡೆದುಕೊಂಡಿದೆ. ಈ ಸ್ನೈಪರ್ ರೈಫಲ್ಸ್ಗಳನ್ನು ಹೈದರಾಬಾದ್​ನಲ್ಲಿರುವ ಐಕಾಮ್ ಕಾರಾಕಲ್ ಸಣ್ಣ ಶಸ್ತ್ರಾಸ್ತ್ರ ಘಟಕದಲ್ಲಿ ತಯಾರಿಸಿ, ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಈ ಎಲ್ಲ ಉಪಕ್ರಮಗಳು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಶಕ್ತಿಯನ್ನು ಹೆಚ್ಚಿಸಲಿದ್ದು, ಸೇನೆಯ ವಿಶ್ವಾಸವನ್ನು ವೃದ್ಧಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net