

ಕರೊನಾ ಬಂದ ಮೇಲೆ ಎಲ್ಲರಿಗೂ ಮೊದಲ ಆದ್ಯತೆ ಆರೋಗ್ಯವೇ ಆಗಿದೆ. ಆರೋಗ್ಯವಾಗಿದ್ದರೆ ಎಲ್ಲ ಕಾಯಿಲೆಯಿಂದ ದೂರ ಇರಬಹುದು ಎನ್ನುವ ಮಾತು ಈಗ ಹೆಚ್ಚೇ ಅನ್ವಯವಾಗುತ್ತದೆ. ಮನೆ, ಕಚೇರಿ ಎನ್ನುವ ಮಹಿಳೆ ಎರಡನ್ನೂ ನಿಭಾಯಿಸುವ ಮಧ್ಯೆ ತನ್ನ ಆರೋಗ್ಯ ನಿರ್ಲಕ್ಷಿಸುತ್ತಿದ್ದಾಳೆ. ಆರೋಗ್ಯವಾಗಿ ದೀರ್ಘ ಕಾಲದ ಜೀವನ ನಡೆಸಲು ಉತ್ತಮ ಆಹಾರ ಪದ್ಧತಿ ಯೊಂದಿಗೆ ಒಂದಷ್ಟು ದೈಹಿಕ ಕಸರತ್ತುಗಳನ್ನು ಮೈಗೂಡಿಸಿಕೊಂಡರೆ ರೋಗಗಳಿಂದ ದೂರ ವಿರುವ ಜತೆಗೆ ದೇಹವೂ ಫಿಟ್ ಆಗಿರುತ್ತದೆ.
ಚರ್ಮದ ಆರೋಗ್ಯಕ್ಕೆ ಸಹಕಾರಿ: ಮನೆಯಲ್ಲೇ ಯೋಗ ಅಥವಾ ವ್ಯಾಯಾಮ ಮಾಡುವುದರಿಂದ ಕ್ರಮೇಣ ಚರ್ಮ ಹೊಳಪು ಪಡೆಯುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗಿ ಹೊಳೆಯುವ ಚರ್ಮ ನಮ್ಮದಾಗುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಯಾವುದೇ ಚರ್ಮ ರೋಗ ಕಾಣಿಸಿಕೊಳ್ಳುವುದಿಲ್ಲ. ವ್ಯಾಯಾಮ ಮಾಡುವುದಷ್ಟೇ ಅಲ್ಲ, ಆದಷ್ಟು ಸತ್ವಯುತ ಆಹಾರ ಸೇವಿಸಬೇಕು.
ಮಹಡಿ ಹತ್ತಿ ಇಳಿಯಿರಿ: ಮನೆಯಲ್ಲಿ ಜಾಗವಿಲ್ಲ. ತುಂಬಾ ಚಿಕ್ಕ ಸ್ಪೇಸ್, ವ್ಯಾಯಾಮಕ್ಕೆ ಜಾಗವಿಲ್ಲ ಅನ್ನುವವರು ಕನಿಷ್ಠ ಅರ್ಧ ಗಂಟೆ ಮನೆಯ ಮೆಟ್ಟಿಲು ಹತ್ತಿ, ಇಳಿದು ಮಾಡಬಹುದು. ಇದರಿಂದ ಇಡೀ ದೇಹದ ಸ್ನಾಯುಗಳಿಗೆ ಕೆಲಸ ಕೊಟ್ಟಂತಾಗುತ್ತದೆ. ಅಧಿಕ ತೂಕವಿದ್ದರೆ ಕಳೆದುಕೊಳ್ಳಲು ಇದೊಂದು ಉತ್ತಮ ಮಾರ್ಗ. ಅದಿಲ್ಲದಿದ್ದರೆ ಮನೆಯಲ್ಲೇ ನೂರರಿಂದ ನೂರೈವತ್ತು ಬಾರಿ ಸ್ಕಿಪ್ಪಿಂಗ್ ಮಾಡಬಹುದು. ದೈಹಿಕ ಚಟುವಟಿಕೆ ಮಾಡಲು ಆಗದಿದ್ದವರು ಸೋಮಾರಿಯಾಗಿ ಕೂರದೆ ಮನೆಯ ಕೆಲಸಗಳಲ್ಲಿ ತೊಡಗಿದರೂ ಚಟುವಟಿಕೆಯಿಂದ ಇರಬಹುದು.
ವಾರಕ್ಕೆರಡು ದಿನ ಇರಲಿ: ಮನೆ, ಮಕ್ಕಳು, ಕೆಲಸ, ಕಾರ್ಯ ಅಂದುಕೊಂಡೇ ಕಳೆಯುವ ಬಹುತೇಕ ಮಹಿಳೆಯರು ಸ್ವಂತ ಕಾಳಜಿ ಮರೆಯುತ್ತಾರೆ. ಮಾಡಿದ್ದನ್ನು ತಿಂದು ಮಲಗಿದರೆ ಸಾಕಪ್ಪಾ ಅನ್ನುವ ಮನಸ್ಥಿತಿಗೆ ಬಂದು ತಲುಪಿರುತ್ತಾರೆ. ಆದರೆ ಇದರಿಂದ ಹೊರಬರಬೇಕು. ಪ್ರತಿನಿತ್ಯ ಅಲ್ಲದಿದ್ದರೂ ಕನಿಷ್ಠ ವಾರಕ್ಕೆರಡು ಬಾರಿಯಾದರೂ ದಿನದ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ಮನಸ್ಸು ಉಲ್ಲಸಿತವಾಗುವುದರೊಂದಿಗೆ ಆರೋಗ್ಯವೂ ಉತ್ತಮವಾಗಿರುತ್ತದೆ.
ಸಮಯ ಇಲ್ಲ ಅನ್ನುವವರು ಅಡುಗೆಯಲ್ಲಿ ತೊಡಗಿಸಿಕೊಳ್ಳುವುದು, ಆಗಾಗ ಬೀರು ತೆಗೆದು ಬಟ್ಟೆಗಳನ್ನು ಪುನಃ ಮಡಚಿ ಇಡುವುದನ್ನು ಮಾಡಬಹುದು. ಇದು ಕೈಬೆರಳುಗಳ ಮಧ್ಯೆ ಇರುವ ಸ್ನಾಯುಗಳಿಗೆ ವ್ಯಾಯಾಮ ನೀಡಿದಂತೆ ಆಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವಿಸಬೇಕು. ತ್ವಚೆ ಚೆನ್ನಾಗಿರಲು ಮಲಗುವ ಮುನ್ನ ಅಥವಾ ಸ್ನಾನಕ್ಕೆ ಹೋಗುವ ಎರಡು ಗಂಟೆ ಮೊದಲು ಎಳ್ಳೆಣ್ಣೆಯನ್ನು ಮುಖಕ್ಕೆ ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. | ಡಾ. ಹೆಚ್.ಎಸ್.ಪ್ರೇಮಾ ಆಹಾರ ವಿಶೇಷ ತಜ್ಞರು
ಅಡುಗೆ ಮಾಡುವುದೂ ಒಂದು ವ್ಯಾಯಾಮ: ಕೆಲವರು ಅನ್ನುತ್ತಾರೆ, ಅಡುಗೆ ಮಾಡಿ, ಮನೆ ಕ್ಲೀನ್ ಮಾಡಿ ಮುಗಿಸೋದ್ರೊಳಗೆ ಸಮಯ ಮುಗಿದಿರುತ್ತೆ. ಇನ್ನು ವ್ಯಾಯಾಮ ಮಾಡುವುದಕ್ಕೆ ಸಮಯವೆಲ್ಲಿದೆ ಅಂತ. ಆದ್ರೆ ಅಡುಗೆ ಮಾಡುವುದು ಸಹ ಒಂದು ವ್ಯಾಯಾಮವೇ ಅನ್ನುತ್ತಾರೆ ಆಹಾರ ತಜ್ಞೆ ಡಾ. ಪ್ರೇಮಾ. ತರಕಾರಿ ಕತ್ತರಿಸುವುದು, ರುಬ್ಬುವುದರಿಂದ ಕೈಗಳ ಸ್ನಾಯುಗಳಿಗೆ ಕೆಲಸ ಕೊಟ್ಟಂತಾಗುತ್ತದೆ. ಇದು ಸಹ ಒಂದು ವ್ಯಾಯಾಮ ಎಂದೇ ಪರಿಗಣಿಸಬಹುದು ಎನ್ನುತ್ತಾರೆ.