

ಇದುವರೆಗೂ ಅವರು ಪುರಾಣಪುಣ್ಯ ಕತೆಗಳಲ್ಲಿ ಕೇಳಿದ್ದುದು ತಮ್ಮ ಒಬ್ಬನೇ ಕೀರ್ತಿವಂತ ಮಹಾರಾಜ ದಾವಿದ ಅರಸನ ಬಗ್ಗೆ ಮಾತ್ರ. ಆದರ ಇವತ್ತು ಅವರಿಗೆ ಯೇಸುವೇ ಒಬ್ಬ ಮಹಾ ರಾಜಾಧಿರಾಜನಂತೆ ಕಂಡುಬಂದ. ದೀನದಲಿತರನ್ನು ಮೇಲೆತ್ತುವ, ಅವರನ್ನು ಪ್ರೀತಿಮಮತೆಯಿಂದ ಕಾಣುವ, ಧರ್ಮದ ಪಿತ್ತ ನೆತ್ತಿಗೇರಿಸಿಕೊಂಡವರನ್ನು ಖಂಡಿಸುವ ಅವನೇ ನಮ್ಮ ಅರಸನಾದರೆ ಚೆಂದ ಎಂದು ಅವರು ಭಾವಿಸಿದರು. ಅದಕ್ಕೇ ಅವನನ್ನು ‘ದಾವಿದ ಕುವರ’ ಎಂದು ಕರೆದರು. ದಾವೀದ ವಂಶದಲ್ಲಿ ಹುಟ್ಟಿಬಂದ ‘ಯೆಹೂದ್ಯರ ಸಿಂಹ’ ಎಂದು ಅವನನ್ನು ಬಣ್ಣಿಸಿ ‘ಹೋಸಾನ್ನ ಹೋಸಾನ್ನ’ (ಜಯವಾಗಲಿ ಜಯವಾಗಲಿ) ಎಂದು ಕೈಯಲ್ಲಿ ಖರ್ಜೂರದ ಗರಿಗಳನ್ನು ಹಿಡಿದು ಕೂಗಿದರು, ಕುಣಿದುಕುಪ್ಪಳಿಸಿದರು.
ಯೆಹೂದ್ಯರ ಕಠಿಣ ಕಟ್ಟಳೆಗಳಾದರೂ ಎಂಥವು? ಪುರಾತನ ಈಜಿಪ್ತ್ ನಾಡಿನಲ್ಲಿ ಕ್ರಿಸ್ತಪೂರ್ವ ಹದಿನಾಲ್ಕನೇ ಶತಮಾನದಲ್ಲಿ ಈ ಯೆಹೂದ್ಯರೆಲ್ಲ ಗುಲಾಮಗಿರಿ ಮಾಡುತ್ತಿದ್ದರು. ದೇವರಿಚ್ಛೆಯೋ ಎಂಬಂತೆ ಯೆಹೂದ್ಯನಾಗಿದ್ದರೂ ರಾಜಕುವರಿಯ ದೆಸೆಯಿಂದ ಈಜಿಪ್ತಿನ ಅರಮನೆಯಲ್ಲಿ ಎಲ್ಲ ವಿದ್ಯೆಗಳಲ್ಲಿ ಶಿಕ್ಷಣ ಪಡೆದಿದ್ದ ಮೋಸೆಸ್ ಎಂಬ ಯೆಹೂದಿ ಯುವಕನು ತನ್ನ ಜನರನ್ನು ದಾಸ್ಯದಿಂದ ಬಿಡಿಸಿ ಯೂಫ್ರೆಟಿಸ್ ನದಿತೀರಕ್ಕೆ ಕರೆತಂದು ಮೊದಲ ಧರ್ಮಶಾಸನವನ್ನು ಪ್ರಕಟಿಸಿದ್ದ. ದೇವರೇ ಬರೆದ ಆ ಶಾಸನದಲ್ಲಿ, ‘ದೇವರೊಬ್ಬನೇ ನಿನ್ನ ಸ್ವಾಮಿ, ದೇವರ ಮಾತನ್ನು ಮೀರಬೇಡ, ದೇವರ ಹೆಸರಲ್ಲಿ ಕೆಟ್ಟದು ಮಾಡಬೇಡ, ತಂದೆ-ತಾಯಿಯರನ್ನು ಗೌರವಿಸು, ಸುಳ್ಳು ಹೇಳಬೇಡ, ಕಳ್ಳತನ ಮಾಡಬೇಡ, ಕೊಲೆ ಮಾಡಬೇಡ, ವ್ಯಭಿಚಾರ ಬೇಡ, ಪರವಸ್ತುಗಳ ಮೇಲೆ ಆಸೆ ಬೇಡ, ಪರಸ್ತ್ರೀಯನ್ನು ನೋಡಬೇಡ’ ಎಂಬಂಥ ಹತ್ತುಕಟ್ಟಳೆಗಳನ್ನು ಆತ ಜನರಿಗೆ ಕೊಟ್ಟು ಸುಧರ್ಮದಲ್ಲಿ ಮುನ್ನಡೆಸಿದ್ದ. ಆದರೆ ಕಾಲಾನುಕಾಲದಲ್ಲಿ ಅದಕ್ಕೆ ನೂರಾರು ಉಪಕಟ್ಟಳೆಗಳು ಸೇರಿದವು. ದೇವನಿಂದನೆ ಮಾಡಿದವನನ್ನು ಚಿತ್ರಹಿಂಸೆ ಮಾಡಿ ಕೊಲ್ಲಬೇಕು, ಹೆಂಡತಿ ಎದುರಾಡಿದರೆ ವಿಚ್ಛೇದನ ಪತ್ರ ಕೊಟ್ಟುಬಿಡಬೇಕು, ಯುದ್ಧದಲ್ಲಿ ಮಡಿದವರ ಮಡದಿಯನ್ನು ಮತ್ತೊಬ್ಬರು ಮದುವೆಯಾಗಿ ಅವಳ ಗೌರವವನ್ನು ಉಳಿಸಬೇಕು, ಮಕ್ಕಳಾಗುವ ಮುನ್ನ ಅಣ್ಣನು ತೀರಿಕೊಂಡರೆ ತಮ್ಮನು ಅವನ ಹೆಂಡತಿಯನ್ನು ಕೂಡಿ ಅಣ್ಣನ ಸಂತಾನವನ್ನು ಮುಂದುವರಿಸಬೇಕು- ಹೀಗೇ ಇನ್ನೂ ಏನೇನೋ ಸೇರಿಕೊಂಡು ಯೇಸುವಿನ ಕಾಲಕ್ಕೆ ಅವು ಸುಮಾರು 612 ಆಗಿದ್ದವು.
ಒಂದೂವರೆ ಸಾವಿರ ವರ್ಷಗಳಲ್ಲಿ ಏನೇನೆಲ್ಲ ಆಗಿದೆಯಲ್ಲ ಎಂದು ಯೇಸು ಚಿಂತಿಸಿದ. ‘ನಾವೆಲ್ಲ ದೇವರ ಮಕ್ಕಳು, ದೇವರೇ ನಮಗೆ ಎಲ್ಲ, ದೇವರ ಮುಂದೆ ನಾವೆಲ್ಲ ಒಂದೇ, ನಮ್ಮಲ್ಲಿ ಮೇಲುಕೀಳು ಇಲ್ಲ, ಸಿರಿತನ ಬಡತನ ಎಂಬುದಿಲ್ಲ, ಹಂಚಿಕೊಂಡು ಬಾಳೋಣ, ಕೂಡಿ ಬಾಳೋಣ’ ಎಂಬುದು ಅವನ ಶುಭಸಂದೇಶವಾಗಿತ್ತು. ಅವನು ದೇವರನ್ನು ಅಪಾರವಾಗಿ ಪ್ರೀತಿಸಿದ, ಇತರರನ್ನೂ ಪ್ರೀತಿಯ ಕಂಗಳಿಂದಲೇ ಕಂಡ, ಅದಕ್ಕಾಗಿಯೇ ಅವನು ಎಲ್ಲರಿಗೂ ಇಷ್ಟವಾದ, ಪುರೋಹಿತಶಾಹಿಯನ್ನು ಬಿಟ್ಟು. ಏಕೆಂದರೆ, ಆತ ಯಾವಾಗಲೂ ತಾನು ದೇವರ ಮಗ ಎನ್ನುತ್ತಿದ್ದ, ಆ ಒಂದು ಪದ ಅವರಿಗೆ ತುಂಬ ಇರಿಸುಮುರಿಸು ಉಂಟುಮಾಡುತ್ತಿತ್ತು. ಆ ಪದವನ್ನು ಅವರು ತಮ್ಮ ಧರ್ಮಶಾಸ್ತ್ರಗಳ ಮೂಸೆಯಲ್ಲಿಟ್ಟು ತಿಕ್ಕಿ ತೀಡಿ ವ್ಯಾಖ್ಯಾನಿಸಿದರು. ಕೊನೆಗೆ ಅದು ದೇವದೂಷಣೆಯೆಂದೇ ಬಗೆದರು. ಅವರ ಕಪಟತನವನ್ನು ಯೇಸು ಸಾರ್ವಜನಿಕವಾಗಿ ಖಂಡಿಸಿದ್ದನಲ್ಲವೇ, ಜನರೆದುರೇ ತಮ್ಮನ್ನು ಹೀನಾಮಾನವಾಗಿ ಅಪಮಾನಿಸುತ್ತಿದ್ದನಲ್ಲವೇ, ಇರಲಿ ಕಾಲ ಬಂದೇ ಬರುವುದು, ಅವನ ಮಾತುಗಳಲ್ಲೇ ಅವನನ್ನು ಸಿಲುಕಿಸಬೇಕು ಎಂದು ಅವರು ಕಾಯುತ್ತ ಇದ್ದರು. ‘ದೇವರಮಗ’ ಎಂಬ ಮಾತೊಂದೇ ಸಾಕಿತ್ತು ಅವನನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಲು.
ಜೆರುಸಲೇಮಿಗೆ ಆತ ಬಂದಿದ್ದಾನೆನ್ನುವ ಸುದ್ದಿ ತಿಳಿದದ್ದೇ ತಡ, ಅವರು ಕ್ಷಿಪ್ರವಾಗಿ ಕಾರ್ಯೋನ್ಮುಖರಾದರು. ಆದರೆ ಜನರೆಲ್ಲ ಅವನ ಹಿಂದೆಹಿಂದೆಯೇ ಇದ್ದಾರೆ. ಹೇಗಾದರೂ ಮಾಡಿ ಅವನನ್ನು ರಾತ್ರಿಹೊತ್ತಿನಲ್ಲಿ ಹಿಡಿದು ಬೆಳಗ್ಗೆ ಹೊತ್ತಿಗೆ ವಿಚಾರಣೆ ನಡೆಸಿ ಮರಣದಂಡನೆಗೆ ಗುರಿ ಮಾಡಿಬಿಡಬೇಕು ಎಂದು ಹೊಂಚಿದರು. ಅವರಿಗೆ ಆಗ ಹೊಳೆದದ್ದು ‘ಜೂದಾ’ ಎಂಬ ಯೇಸುವಿನ ಶಿಷ್ಯ. ಜೂದಾನನ್ನು ಪುಸಲಾಯಿಸಿದ ಅವರು, ‘ಈ ರಾತ್ರಿ ಯೇಸು ಎಲ್ಲಿ ಸಿಗ್ತಾನೆ ಹೇಳು, ನಾವು ಬಂದಾಗ ನೀನು ಸನ್ನೆ ಮಾಡಿ ಅವನನ್ನು ತೋರಿಸು, ನಾವು ಅವನೊಂದಿಗೆ ಏನೋ ಮಾತನಾಡಬೇಕು’ ಎಂದು ಬೆಣ್ಣೆಮಾತುಗಳನ್ನು ಹೇಳಿ ಅವನ ಕೈಗೆ ಬೆಳ್ಳಿರೂಪಾಯಿಗಳನ್ನು ತುರುಕಿದರು.
ಆಮೇಲೆ ನಡೆದಿದ್ದೆಲ್ಲ ಬಲು ಘೊರ. ರಾತ್ರೋರಾತ್ರಿ ಯೇಸುವನ್ನು ಸೆರೆಹಿಡಿಯಲಾಯ್ತು. ಧರ್ವಧಿಕಾರಿಯ ಪೀಠದಲ್ಲಿ, ರಾಜ್ಯಪಾಲನ ನ್ಯಾಯಕಟ್ಟೆಯಲ್ಲಿ, ಸಾಮಂತರಾಜನ ಆಸ್ಥಾನದಲ್ಲಿ ಕಣ್ಣೊರೆಸುವ ವಿಚಾರಣೆಗಳೂ ನಡೆದವು. ಸುಳ್ಳುಸಾಕ್ಷಿಗಳಂತೂ ಮೊದಲೇ ತಯಾರಾಗಿದ್ದವು. ದೋಷಾರೋಪಣಪಟ್ಟಿಯೂ ಮೊದಲೇ ಸಿದ್ಧಗೊಂಡಿತ್ತು. ದಮಾಸ್ಕ ಬಾಗಿಲಿನಿಂದಾಚೆ ಮೂರು ದಾರಿಗಳು ಕೂಡುವೆಡೆಯ ಗೊಲ್ಗೊಥಾ ಎಂಬ ಗುಡ್ಡದ ಮೇಲೆ ಯೇಸುವನ್ನು ಶಿಲುಬೆಗೇರಿಸಿ ಕೊಲ್ಲಲು ರಾಜಭವನದ ಅಂಕಿತ ಬೇಕಿತ್ತಷ್ಟೇ! ಅಂದು ಶುಕ್ರವಾರ. ಮಧ್ಯಾಹ್ನ ಮೂರುಗಂಟೆಯ ಬಿರುಬಿಸಿಲಿನ ಹೊತ್ತು. ಶಿಲುಬೆ ಮರದ ಕೊರಡಿಗೆ ಯೇಸುವಿನ ಸುಕೋಮಲ ದೇಹವನ್ನು ಮೊಳೆ ಹೊಡೆದು ನೇತಾಡಿಸಿದ್ದರು. ಮರಣವೃಕ್ಷದೊಳು ಅಮೃತಫಲದಂತೆ ಯೇಸು ತೂಗಾಡುತ್ತ ಕ್ಷಮಿಸಿವರನೆಲೆ ತಂದೆ ತಾವೇನೆಸಗಿದೆವೆಂದರಿಯರಿವರು ಎಂದು ಕ್ಷಮಾದಾನ ಮಾಡಿ ಅಸುನೀಗಿದ.
ಯೇಸು ಲೋಕದ ಒಳಿತಿಗಾಗಿ ಪ್ರಾಣ ತೆತ್ತ. ಒಳ್ಳೆಯ ಮನಸ್ಸು ಉಳ್ಳವರೆಲ್ಲರೂ ಆತನ ಮರಣಕ್ಕೆ ಮರಗುವರು. ಸಾವಿನ ಹೊಸ್ತಿಲಿನಲ್ಲೂ ಶತ್ರುವಿಗೆ ಕ್ಷಮೆ ಕೋರುವವನು ದೇವರೇ ಹೌದು. ಹಾಗಾಗಿ, ಇದು ಗಾಡ್ ಫ್ರೈಡೆ ಅಂದರೆ ಗುಡ್ಫ್ರೆ ೖಡೆ-ಶುಭ ಶುಕ್ರವಾರ.
ಈ ಲೋಕದ ಬದುಕು ಕಷ್ಟ, ನೋವು, ಅಪಜಯಗಳನ್ನೊಳಗೊಂಡದ್ದು. ಯೇಸುಸ್ವಾಮಿ ಪುನರುತ್ಥಾನರಾಗಿ ಅಮರ ಬದುಕಿನ ಭರವಸೆಯನ್ನು ನೀಡಿದ್ದಾರೆ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ. ‘ಕತ್ತಲು ಕಳೆದು ಬೆಳಕು ಹರಿಯುವ’ ಖಚಿತ ಭರವಸೆಯಿಂದ ಭಗವಂತನೆಡೆಗೆ ತಿರುಗಿದರೆ ನಿತ್ಯಜೀವ ಅವನದಾಗುವುದು ಎಂದು ಸಾರುವ ಈಸ್ಟರ್ ‘ಶುಭ ಶುಕ್ರವಾರ’ ಕಳೆದು ಮೂರನೇ ದಿನವೇ ಆಗಮಿಸುತ್ತದೆ. ಕೆಟ್ಟತನ ಎಂಬ ಕತ್ತಲೆಯನ್ನು ದಾಟಿ ಒಳ್ಳೆಯತನವೆಂಬ ಬೆಳಕಿಗೆ ಬರುವುದೇ ನಿಜವಾದ ಪುನರುತ್ಥಾನ.
(ಲೇಖಕರು ಸಾಹಿತಿ)