ಸತ್ಕಾರ್ಯ, ಸದ್ವಿಚಾರದಿಂದ ಬಾಳು ಸಾರ್ಥಕ

Column F
Published on
‘ಮಾನವ ಜನ್ಮ ದೊಡ್ಡದು ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ಪುರಂದರದಾಸರು ದಾಸವಾಣಿಯ ಮೂಲಕ ‘ಮಾನವ ಜನ್ಮ ಪಡೆಯುವುದು ಪುಣ್ಯ. ಅಂತಹ ಪುಣ್ಯದ ಜನ್ಮವನ್ನು ಸಾರ್ಥಕಗೊಳಿಸಬೇಕು. ಕಾಮ ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಗೆ ಶರಣಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು’ ಎಂದು ಹೇಳಿದ್ದಾರೆ. ನಾವು ದಿನನಿತ್ಯ ಅನೇಕಾನೇಕ ಜನರನ್ನು ಭೇಟಿಯಾಗುತ್ತಲೇ ಇರುತ್ತೇವೆ. ಅವರಲ್ಲಿ ಸಜ್ಜನರು, ಸಾಧು-ಸಂತರು, ದುರ್ಜನರು, ಸಮಯಸಾಧಕರು ಹೀಗೆ ವಿವಿಧ ಬಗೆಯ ಜನರಿರಬಹುದು. ಒಂದೇ ನೋಟಕ್ಕೆ, ಕಂಡಾಕ್ಷಣ ಇವರು ಹೀಗೆ, ಅವರು ಹಾಗೆ ಎಂದು ಅಳೆಯುವುದು ಸುಲಭವಲ್ಲ. ಒಂದು ವೇಳೆ ಹಾಗೆ ಮಾಡಿದರೂ ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಮಾತನ್ನು ಅನ್ವಯಿಸಿದಾಗ ನಾವು ಹೊಂದಿದ ಭಾವನೆ ತಪ್ಪೆಂದು ಅನುಭವಕ್ಕೆ ಬರಬಹುದು. ಆಗೆಲ್ಲ, ‘ಛೇ ನಾನು ಹಾಗಂದುಕೊಳ್ಳಬಾರದಿತ್ತು, ಓ ನನ್ನ ಊಹೆ ತಪ್ಪಾಗಿ ಹೋಯಿತಲ್ಲ’ ಎಂದೆನಿಸುವುದಿದೆ.

ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ಎಂದು ತಿಳಿಯುವುದು ಕಷ್ಟ. ಆದರೆ ವ್ಯಕ್ತಿ ಸತ್ತಾಗ ಆತನ ವ್ಯಕ್ತಿತ್ವ ಹೇಗೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎನ್ನುತ್ತಾರೆ. ವ್ಯಕ್ತಿ ಮರಣವನ್ನಪ್ಪಿದಾಗ ಅಲ್ಲಿ ಸೇರಿರುವ ಜನರು ‘ಅಯ್ಯೋ ಪಾಪ. ಇಷ್ಟು ಬೇಗ ಸಾಯ್ಬಾರ್ದಿತ್ತು. ಭಾಳ ಒಳ್ಳೆ ಮನುಷ್ಯ, ಒಬ್ಬರಿಗೆ ಕೇಡು ಬಗೆದೋನಲ್ಲ’ ಎಂದೆಲ್ಲ ಆಡಿಕೊಳ್ಳುತ್ತಿದ್ದರೆ ಆತ ನಿಜವಾಗಿಯೂ ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ತಿಳಿಯಬಹುದು. ಅದರ ಬದಲಾಗಿ ‘ಅಬ್ಬಾ ಈಗಲಾದರೂ ಸತ್ತನಲ್ಲ. ಇನ್ನಾದರೂ ನೆಮ್ಮದಿಯಿಂದ ಬದುಕಬಹುದು. ಬದುಕಿರುವಷ್ಟು ದಿನ ಒಬ್ಬರನ್ನೂ ನೆಮ್ಮದಿಯಿಂದ ಇರಲು ಬಿಡಲಿಲ್ಲ’ ಎಂದೆಲ್ಲ ಹೇಳಿದರೆ ಆತ ನಿಜವಾಗಿ ದುಷ್ಟನಾಗಿದ್ದ, ಅಧರ್ವಿುಯಾಗಿದ್ದ, ಜೀವನದಲ್ಲಿ ಒಳ್ಳೆಯದನ್ನು ಮಾಡಲಿಲ್ಲ ಎಂದು ತಿಳಿಯಬಹುದಂತೆ.

‘ರೋತೇ ಹುಯೇ ಆತೇ ಹೈ ಸಬ್, ಹಸತಾ ಹುವಾ ಜೋ ಜಾಯೆಗಾ...’ ಎಂಬ ಹಿಂದಿ ಹಾಡೊಂದಿದೆ. ಈ ಪ್ರಪಂಚಕ್ಕೆ ಬರುವಾಗ ಅಳುತ್ತ ಬರುತ್ತಾರೆ. ಹೀಗೆ ಅಳುತ್ತ ಜಗಕ್ಕೆ ಕಾಲಿರಿಸುವ ನಾವು ಬದುಕಿನ ಪಯಣ ಮುಗಿಸುವ ಹಾದಿಯಲ್ಲಿ ನಗುತ್ತಾ, ಇನ್ನೊಬ್ಬರಲ್ಲಿ ನಗು ಮೂಡಿಸುತ್ತ ಮುನ್ನಡೆಯಬೇಕು. ನಾನು ಅನೇಕರನ್ನು ಕಂಡಿದ್ದೇನೆ. ಅವರಲ್ಲಿ ಮನೆ, ಹೆಂಡತಿ, ಮಕ್ಕಳು, ಆಸ್ತಿ-ಪಾಸ್ತಿ ಇದ್ದರೂ ನಗುವೆಂಬುದನ್ನು ಕಾಣುವುದಿಲ್ಲ. ಒಮ್ಮೆ ಒಬ್ಬರು ಒಬ್ಬಾತನನ್ನು ‘ಯಾಕಪ್ಪಾ ಹಿಂಗೆ ಸಪ್ಪಗಿದ್ದೀಯಾ’ ಎಂದು ವಿಚಾರಿಸಿದಾಗ, ‘ಸ್ವಾಮಿ ಉತ್ತಮವಾಗಿ ನಡಿತಿದ್ದ ಬಿಸಿನೆಸ್ ಲಾಸ್ ಆಗಿದೆ. ಬದುಕೋದು ಕಷ್ಟ ಆಗಿದೆ’ ಎಂದನಂತೆ. ಅದಕ್ಕೆ ‘ನೀನು ಹಗಲು ರಾತ್ರಿ ದುಡಿದು ಏನು ಮಾಡುತ್ತಿ?’ ಎಂದು ಕೇಳಿದರಂತೆ. ಆತ ಸ್ವಲ್ಪ ಒಡವೆ, ಮಕ್ಕಳ ಹೆಸರಿನಲ್ಲಿ ಎಫ್​ಡಿ, ಒಂದು ಸೈಟ್ ಹೀಗೆ ಸಂಪತ್ತಿನ ಸಂರಕ್ಷಣೆ ಮಾಡುತ್ತಿದ್ದೇನೆ ಎಂದ. ‘ಹೌದೇ. ಏನಾದರೂ ದಾನ-ಧರ್ಮಗಳಲ್ಲಿ ತೊಡಗುತ್ತೀಯಾ’ ಎಂದಾಗ ‘ಅದಕ್ಕೆಲ್ಲಿ ಸಮಯ ಸ್ವಾಮೀ. ಹಗಲಿಡೀ ದುಡಿಯೋದು, ರಾತ್ರಿ ಮನೆಗೆ ಬಂದು ಮಲಗೋದು, ಹೆಂಡತಿ ಮಕ್ಕಳನ್ನು ವಿಚಾರಿಸೋದೇ ಆಗಿದೆ’ ಎಂದನಂತೆ. ನಾವು ದುಡಿಯುವುದು ನಮ್ಮ ಜೀವನ ಚೆನ್ನಾಗಿರಬೇಕು, ಕುಟುಂಬದವರ ಬೇಕು-ಬೇಡಗಳನ್ನು ತೀರಿಸಲೆಂದು. ಅದು ಎಲ್ಲರ ಕರ್ತವ್ಯವೂ ಹೌದು. ಕೇವಲ ದುಡಿಮೆ, ಸಂಪತ್ತಿನ ಸಂಗ್ರಹದಿಂದ ಜೀವನ ನೆಮ್ಮದಿ, ಸಂತೋಷ ಹೊಂದಬಹುದು ಎಂದಿದ್ದರೆ ಖಂಡಿತಾ ತಪ್ಪು. ಹಾಸ್ಯ ದೃಶ್ಯಗಳನ್ನು ನೋಡುವಾಗ ಆಗುವ ಸಂತೋಷ-ನಗುವಿಗೂ, ನಮ್ಮಿಂದಾಗಿ ಇನ್ನೊಬ್ಬರ ಮೊಗದಲ್ಲಿ ಸಂತಸ ಕಂಡಾಗ ನಮಗಾಗುವ ಖುಷಿಗೂ ವ್ಯತ್ಯಾಸವಿದೆ. ಸತ್ಕಾರ್ಯಗಳು, ಸದ್ವಿಚಾರಗಳು, ಬಾಳನ್ನು ಸಾರ್ಥಕತೆಯತ್ತ ಕೊಂಡೊಯ್ಯುತ್ತವೆ.

ಒಮ್ಮೆ ನನ್ನನ್ನು ಭೇಟಿಯಾದ ಒಬ್ಬ ವ್ಯಕ್ತಿ ‘ನಾನು ದುಡಿಮೆಯ ಒಂದಿಷ್ಟು ಹಣದಿಂದ ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ-ಬರೆಗಳನ್ನು ಕೊಡಿಸಿದೆ. ಆ ಮಕ್ಕಳ ಮುಖದಲ್ಲಿ ಕಂಡ ಸಂತೋಷ ಇಂದಿಗೂ ಕಣ್ಣ ಮುಂದಿದೆ. ನಮ್ಮೂರಿನ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಕೊಟ್ಟೆ. ಹೀಗೆ ನನ್ನ ಕೈಯಿಂದ ಆಗುವಷ್ಟು ಸಣ್ಣ-ಪುಟ್ಟ ಕೆಲಸ ಮಾಡಿದೆ. ಹಿಂದಿಗಿಂತ ಈಗ ಬದುಕು ಸಂತೃಪ್ತಿಯಾಗಿದೆ. ನಮ್ಮ ಹೊಲದಲ್ಲಿ ಬೆಳೆದ ತರಕಾರಿಯನ್ನು ಕ್ಷೇತ್ರಕ್ಕೆ ಅರ್ಪಿಸಲು ತಂದಿದ್ದೇವೆ’ ಎಂದು ಹಸನ್ಮುಖದಿಂದ ನುಡಿದ. ಆತನ ಮಾತನ್ನು ಕೇಳಿದಾಗ ನನಗೂ ಸಂತೋಷವಾಯಿತು.

ನಮ್ಮ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ದೇವರಿಗೆ ಸೇವೆ ಮಾಡಿ ಕಾಣಿಕೆಗಳನ್ನು ನೀಡಿ ಭಕ್ತಿಯನ್ನು ಪ್ರಕಟಿಸುತ್ತಾರೆ. ಅಕ್ಕಿ, ತರಕಾರಿಗಳನ್ನು ಕ್ಷೇತ್ರಕ್ಕೆ ಅರ್ಪಿಸಿ ಧನ್ಯತೆ ಹೊಂದುತ್ತಾರೆ. ಇವೆಲ್ಲವೂ ಭಕ್ತರ ನಿಷ್ಕಲ್ಮಶ ಭಕ್ತಿ. ನಾವು ಕೂಡ ಕ್ಷೇತ್ರದಿಂದ ಗ್ರಾಮಾಭಿವೃದ್ಧಿ ಯೋಜನೆ, ರುಡ್​ಸೆಟ್ ಮೂಲಕ ವಿವಿಧ ಸೇವಾಕಾರ್ಯಗಳನ್ನು ನಡೆಸುತ್ತೇವೆ ಎಂದು ಲೆಕ್ಕ ನೀಡಬಹುದು. ಆದರೆ ಭಕ್ತರು ಶ್ರೀ ಕ್ಷೇತ್ರದ ಮೇಲೆ ಇಟ್ಟಿರುವ ಪ್ರೀತಿ, ಭಕ್ತಿ, ಅಭಿಮಾನವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ನಮ್ಮ ನಾಡಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಸಂತರು, ಸ್ವಾಮೀಜಿಗಳು ಜನ್ಮ ತಳೆದಿದ್ದಾರೆ. ಅವರ ತತ್ವಾದರ್ಶಗಳನ್ನು ಇಂದಿಗೂ ನಾವೆಲ್ಲ ಗುರುತಿಸುವುದು ಅವರ ಸತ್ಕಾರ್ಯಗಳಿಂದ. ಮಹಾತ್ಮ ಗಾಂಧಿಯವರು ಅಹಿಂಸಾ ಮಾರ್ಗದ ಮೂಲಕ ಹೋರಾಟಕ್ಕೆ ಧುಮುಕಿದಾಗ ಸಾಕಷ್ಟು ಟೀಕೆ, ನಿಂದೆಗಳನ್ನು ಪಡೆದರು. ಆದರೂ ಛಲ ಬಿಡದೆ ಸತ್ಯಾಗ್ರಹದ ಹೋರಾಟವನ್ನು ಮುಂದುವರಿಸಿದ್ದಲ್ಲದೆ ವಿಜಯವನ್ನೂ ಪಡೆದರು. ಅಂತಹ ಮಹಾತ್ಮರು, ದಾರ್ಶನಿಕರು, ಸಂತರು ಮತ್ತೆ-ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಿರುತ್ತೇವೆ.

ನಿಂದಕರು ಇರಬೇಕೆಂದು ಪುರಂದರದಾಸರು ಹೇಳಿದ್ದಾರೆ. ಅನೇಕ ಸಮಯದಲ್ಲಿ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂತಹ ಸಮಯದಲ್ಲಿ ನಿಂದಕರಿದ್ದರೆ ಖಂಡಿತವಾಗಿ ಸಹಾಯವಾಗುತ್ತದೆ. ನಮ್ಮ ತಪ್ಪನ್ನು ಎತ್ತಿ ತೋರಿಸಿದಾಗ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಇವರು ಶುಭ್ರ ಕನ್ನಡಿಯು ಮುಖದಲ್ಲಿರುವ ಮಣ್ಣು-ಮಸಿಗಳನ್ನು ತೋರಿಸಿ ತಿದ್ದಿಕೊಳ್ಳಲು ಸಹಾಯವಾಗುವ ರೀತಿಯ ನಿಂದಕರು. ಕೆಲವರು ಇರುತ್ತಾರೆ. ಅಂತಹವರು ಸರಿಯೇ ಇರಲಿ, ತಪ್ಪೇ ಇರಲಿ ನಿಂದೆ ಮಾಡಿಯೇ ಮಾಡುತ್ತಾರೆ. ಇದು ಹೇಗೆಂದರೆ ಅಶುಭ್ರವಾದ ಕನ್ನಡಿಯಂತೆ. ಇದರಲ್ಲಿ ಸ್ಪಷ್ಟವಾದ ನೋಟ ಸಿಗಲಾರದು.

ಒಬ್ಬಾತ ದಾರಿಬದಿಯಲ್ಲಿ ನಿರಾಳವಾಗಿ ಮಲಗಿದ್ದನಂತೆ. ಪಕ್ಕದಲ್ಲೇ ಶ್ರಮವಹಿಸಿ ದುಡಿಯುವ ವ್ಯಕ್ತಿಯೊಬ್ಬ ನಿಂತಿದ್ದ. ಮಲಗಿದ್ದವನನ್ನು ಉದ್ದೇಶಿಸಿ ‘ಅಲ್ಲಯ್ಯಾ ಮೈ-ಕೈ ಎಲ್ಲ ಗಟ್ಟಿಯಾಗಿದೆ, ಏನಾದರೂ ದುಡಿದು ನೆಮ್ಮದಿಯಾಗಿರಬಾರದೇ? ಯಾಕೆ ಹೀಗೆ ಇಲ್ಲಿ ಮಲಗಿ ದಿನ ಕಳೆಯುತ್ತಿದ್ದೀಯಾ’ ಎಂದನಂತೆ. ಅದಕ್ಕೆ ಆತ ಮಲಗಿದ್ದಲ್ಲಿಂದಲೇ ‘ಸ್ವಾಮೀ ನೀವೇನು ಮಾಡುತ್ತಿರುವಿರಿ? ಯಾಕಾಗಿ ಮಾಡುತ್ತಿರುವಿರಿ’ ಎಂದ. ‘ನಾನು ವ್ಯಾಪಾರ ಮಾಡುತ್ತಿದ್ದೇನೆ. ಮನೆ, ಕಾರು, ಆಸ್ತಿಗಳನ್ನು ದುಡಿದು ಸಂಪಾದಿಸಿ ಬಳಿಕ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದಿರಲು ಕಷ್ಟಪಡುತ್ತಿದ್ದೇನೆೆ’ ಎಂದ. ಅದಕ್ಕೆ ಬೀದಿಯಲ್ಲಿದ್ದಾತ ‘ಸ್ವಾಮಿ ನಾನೀಗಲೇ ಇಲ್ಲೇ ನೆಮ್ಮದಿಯಾಗಿದ್ದೇನೆ’ ಎಂದ. ಇದು ಅಲ್ಪತೃಪ್ತವಾಗಿ ಬದುಕುವ ಜೀವನ. ಮಾನವ ಜನ್ಮ ದೊಡ್ಡದು. ಇದನ್ನು ವ್ಯರ್ಥವಾಗಿಸಬಾರದು.

ಯಾರೂ ಕೂಡ ಹುಟ್ಟುವಾಗಲೇ ಮಹಾನ್ ವ್ಯಕ್ತಿಗಳಾಗಿರುವುದಿಲ್ಲ. ಅವರು ಕಾರ್ಯಗಳಿಂದ ಮಹಾತ್ಮರಾಗುತ್ತಾರೆ. ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುವುದು ಸಹಜ. ಕೆಟ್ಟ ಗುಣಗಳನ್ನು ಬೆಳೆಸಿಕೊಂಡಲ್ಲಿ ರಾಕ್ಷಸ ಗುಣಗಳನ್ನು ಕಾಣಬಹುದು. ರಾಕ್ಷಸ ಅಥವಾ ಅಸುರೀ ಗುಣಗಳು ಯಾವತ್ತೂ ಹೆಚ್ಚು ಬಾಳುವುದಿಲ್ಲ. ಗೆಲ್ಲುವುದೂ ಇಲ್ಲ. ಉದಾಹರಣೆಯಾಗಿ ರಾಮಾಯಣ, ಮಹಾಭಾರತ, ಪುರಾಣದ ಅನೇಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಧರ್ಮವು

ನಾನಾ ರೀತಿಯಲ್ಲಿ, ನಾನಾ ರೂಪದಲ್ಲಿ ಅವತಾರ ತಾಳುವುದು. ಹಾಗೂ ಎಂದಿಗೂ ಧರ್ಮದ ಕೈಯೇ ಮೇಲಾಗುವುದನ್ನು ಕಂಡಿದ್ದೇವೆ.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಶಕ್ತಿ, ಸಾಮರ್ಥ್ಯ, ಪ್ರತಿಭೆಗಳಿರುತ್ತವೆ. ಹನುಮಂತನಿಗೆ ತನ್ನ ಶಕ್ತಿ ಸಾಮರ್ಥ್ಯದ ಅರಿವಿರಲಿಲ್ಲ. ಜಾಂಬವಂತನು ಹೇಳಿದ ಮೇಲಷ್ಟೇ ಆತ ಸಮುದ್ರೋಲ್ಲಂಘನ ಮಾಡಿದ್ದು, ಲಂಕೆಗೆ ಕಾಲಿಟ್ಟು ದಹನ ಮಾಡಿದ್ದು, ಸೀತೆಯನ್ನು ಕಾಪಾಡಲು ನೆರವಾಗಿದ್ದು. ಹೀಗೆ ನಮ್ಮ-ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಂಡು ಮುನ್ನಡೆಯಬೇಕು. ಕೃಷಿಕ, ಉದ್ಯಮಿ, ಕಾರ್ವಿುಕ, ಚಾಲಕ... ಹೀಗೆ ನಾವು ಮಾಡುವ ಕೆಲಸಗಳಲ್ಲೇ ಸಾಧನೆ ಮಾಡಬಹುದು.

‘ಇತರರನ್ನು ಅರಿತವ ಜಾಣ, ತನ್ನನ್ನು ತಾನೇ ಅರಿತವನು ಜ್ಞಾನಿ’ ಎಂಬ ಮಾತಿದೆ. ಅನೇಕರು ಇತರರ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಆದರೆ ಅವರಿಗೆ ಕೆಲವೊಮ್ಮೆ ತಮ್ಮ ಬಗ್ಗೆಯೇ ತಿಳಿದಿರುವುದಿಲ್ಲ. ತಾನು ಮಾಡುತ್ತಿರುವ ಕಾರ್ಯ ಸರಿಯೇ? ತನ್ನಿಂದ ಏನಾದರೂ ತಪ್ಪಾಗಿದೆಯೇ? ಅನ್ಯಾಯವಾಗಿದೆಯೇ ಎಂದು ಪರಾಮಶಿಸಿಕೊಂಡು ತಾನು ಬದುಕುವುದರೊಂದಿಗೆ ಇತರರಿಗೂ ಬದುಕಲು ಅವಕಾಶ ಮಾಡಿಕೊಡುವುದೇ ತನ್ನನ್ನು ತಾನು ಅರಿತುಕೊಳ್ಳುವುದು. ಇದನ್ನು ಧರ್ಮದ ಮಾರ್ಗದಲ್ಲಿ ನಡೆಯುವುದು ಎನ್ನಬಹುದು. ಸ್ವಾಮಿ ವಿವೇಕಾನಂದರು ‘ಧರ್ಮವೆಂದರೆ ಸಾಕ್ಷಾತ್ಕಾರ, ತನ್ನನ್ನು ತಾನು ದರ್ಶಿಸುವಂತೆ, ಕಂಡುಕೊಳ್ಳುವಂತೆ ಮಾಡುವುದು ಧರ್ಮದ ಗುರಿ’ ಎಂದಿದ್ದಾರೆ.

ಮಾನವ ಇಷ್ಟೆಲ್ಲ ಕಷ್ಟಪಡುವುದು ಯಾತಕ್ಕಾಗಿ? ಸುಖ-ಸಂತೋಷ, ನೆಮ್ಮದಿಗಳ ಅನ್ವೇಷಣೆಗಾಗಿ. ಕೇವಲ ಐಶ್ವರ್ಯ, ಸಿರಿ ಸಂಪತ್ತುಗಳಿಂದ ದೊರೆಯುವ ಸುಖಗಳೆಲ್ಲ ಕ್ಷಣಿಕ. ನಮ್ಮೊಳಗೆ ಕಂಡುಕೊಳ್ಳುವ ಆನಂದ ಸದಾ ಕಾಲ ಇರುವಂಥದ್ದು. ಅದು ಕಾಡು ಹೂವೋ, ಉದ್ಯಾನದ ಹೂವೋ ಎಂದು ಯಾವ ಭೇದಭಾವ ಮಾಡದೆ ಎಲ್ಲ ಹೂವುಗಳಿಂದ ಜೇನುನೊಣ ಮಕರಂದವನ್ನು ಹೀರಿ ಜೇನುತುಪ್ಪವನ್ನು ನೀಡುತ್ತದೆ. ನಾವೂ ಅದರಂತೆಯೇ ಎಲ್ಲರಿಂದ ಒಳ್ಳೆಯದನ್ನು ಸ್ವೀಕರಿಸಬೇಕು. ಹಾಗೂ ಇತರರಿಗೂ ಒಳ್ಳೆಯದನ್ನೇ ನೀಡುವಂತಾಗಬೇಕು.

ಬದುಕಿನಲ್ಲಿ ಏಳು-ಬೀಳುಗಳು, ಟೀಕೆ-ನಿಂದೆ, ಪುರಸ್ಕಾರಗಳು ಸಹಜ. ನಾವು ಮುಂದಕ್ಕೆ ಸಾಗಬೇಕಾದರೆ, ಕೆಲವೊಮ್ಮೆ ಸ್ವಲ್ಪ ಹಿಂದಕ್ಕೆ ಸರಿದು ಮತ್ತಷ್ಟು ವೇಗದಿಂದ ಮುನ್ನುಗ್ಗಬೇಕಾಗುತ್ತದೆ. ಬಾಣಕ್ಕೆ ಹೂಡಿದ ಬಿಲ್ಲನ್ನು ಎಷ್ಟು ಹಿಂದಕ್ಕೆ ಎಳೆಯುತ್ತೇವೆಯೋ ಅಷ್ಟು ಮುಂದಕ್ಕೆ ಚಲಿಸಿ ಗುರಿ ತಲುಪಬಲ್ಲುದು. ಅಂತೆಯೇ ನಮಗೆ ಬದುಕಿನಲ್ಲಿ ಎದುರಾಗುವ ಸೋಲು, ಅಡ್ಡಿ ಆತಂಕಗಳು ನಮ್ಮನ್ನು ಮತ್ತಷ್ಟು ಕೆಲಸ-ಕಾರ್ಯಗಳಲ್ಲಿ, ಧರ್ಮದ ಮಾರ್ಗದಲ್ಲಿ ಮುಂದುವರಿಯಲು ಪ್ರೇರಣೆಯನ್ನಾಗಿಸಿಕೊಳ್ಳಬೇಕು. ಅನೇಕ ಬಾರಿ ಅಭಿವೃದ್ಧಿ ಕೆಲಸ, ಉತ್ತಮ ಕಾರ್ಯಗಳನ್ನು ಮಾಡುವಾಗ ಟೀಕೆ, ಹೀಯಾಳಿಕೆ, ನಿಂದೆಗಳನ್ನು ಕೇಳಬೇಕಾಗುತ್ತದೆ.

ಅವುಗಳಿಗೆ ಮಾತಿಗಿಂತ ಕೃತಿಯಿಂದ ಉತ್ತರಕೊಡುವುದು ಸೂಕ್ತ. ‘ಜೀವನದಲ್ಲಿ ಓಡಬೇಕು. ಓಡಲಾಗದಿದ್ದರೆ ನಡೆಯಬೇಕು’ ಎಂಬಂತೆ ಒಮ್ಮೆಲೇ ಸಾಧನೆ ಮಾಡುತ್ತೇನೆ, ಒಮ್ಮೆಲೇ ಕೋಟಿಗಟ್ಟಲೆ ಸಂಪಾದಿಸುತ್ತೇನೆ ಎಂಬಿತ್ಯಾದಿ ಭ್ರಮೆ ಹೊಂದದೆ, ಸಣ್ಣ-ಸಣ್ಣ ಪ್ರಯತ್ನಗಳಿಂದ, ಸಿಗುವ ಅವಕಾಶ ಬಳಸಿಕೊಳ್ಳುತ್ತ ಗುರಿಯತ್ತ ಮುನ್ನಡೆಯಬೇಕು. ಅಂಥ ಮನೋಭಾವನೆ ನಮ್ಮಲ್ಲಿ ಬೆಳೆಯಬೇಕು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net