

ಕುಟುಂಬ ಸದಸ್ಯರೆಲ್ಲರೂ ವಿವಿಧ ಊರುಗಳಲ್ಲಿ, ಒಂದೇ ಸ್ಥಳದಲ್ಲಿದ್ದರೂ ಪ್ರತ್ಯೇಕ ಮನೆಗಳಲ್ಲಿ ವಾಸಿಸುವ ವಿಭಕ್ತ ಕುಟುಂಬದ ಪರಿಕಲ್ಪನೆ ಬಲವಾಗುತ್ತಿರುವ ಭಾರತೀಯ ಸಮಾಜದಲ್ಲಿ ಎಲ್ಲರದ್ದೂ ಒಂದು ಸ್ವಂತ ಮನೆ ಇರಬೇಕೆಂಬ ಅಭಿಲಾಷೆ ಇದೆ. ತನ್ನ ದುಡಿಮೆಯಲ್ಲಿ ಮನೆಯೊಂದನ್ನು ಕಟ್ಟುವ ಅಥವಾ ಖರೀದಿಸುವ ಮೂಲಕ ತನ್ನ ಸ್ವಾಭಿಮಾನ ಮೆರೆಯುವ ಯುವ ಉದ್ಯೋಗಿಗಳು, ಉದ್ಯಮಿಗಳಿದ್ದಾರೆ. ಸರ್ಕಾರದಿಂದ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನಿಂದ(ಆರ್ಬಿಐ) ದೊರಕುತ್ತಿರುವ ಹಣಕಾಸು ಸೌಲಭ್ಯ ಗಮನದಲ್ಲಿರಿಸಿಕೊಂಡರೆ, ಮನೆ ಖರೀದಿ ಹಾಗೂ ನಿರ್ವಣಕ್ಕೆ ಈಗಿನದ್ದಕ್ಕಿಂತ ಸುವರ್ಣ ಕಾಲ ಮತ್ತೊಂದಿಲ್ಲ ಎಂಬುದು ರಿಯಲ್ ಎಸ್ಟೇಟ್ ತಜ್ಞರ ಅಭಿಪ್ರಾಯ.
ಇಳಿಮುಖದತ್ತ ಬಡ್ಡಿ ದರ
ಮನೆ ಸಾಲ ಪಡೆಯಲು ಪ್ರಮುಖ ಮಾನದಂಡ, ಆ ಸಾಲಕ್ಕೆ ಬ್ಯಾಂಕ್ ವಿಧಿಸುವ ಬಡ್ಡಿ ದರ. 5 ರಿಂದ 25 ವರ್ಷ ಅವಧಿಯ ಸಾಲವಾದ್ದರಿಂದ, ಸಾಲದ ಕಂತು ಮುಕ್ತಾಯವಾಗುವುದರ ವೇಳೆಗೆ ಅಸಲಿಗಿಂತ ಬಡ್ಡಿ ಪ್ರಮಾಣವೇ ಅಧಿಕವಾಗಿರುತ್ತದೆ. ಸಾಲದ ಬಡ್ಡಿಯಲ್ಲಿ ಆಗುವ ಸಣ್ಣ ಏರಿಕೆಯೂ ದೀರ್ಘಕಾಲಿಕವಾಗಿ ಅಗಾಧ ಹೊರೆಯಾಗುತ್ತದೆ. ಅದೇ ರೀತಿ ಸಣ್ಣ ಪ್ರಮಾಣದಲ್ಲಿ ಬಡ್ಡಿ ದರ ಕಡಿಮೆಯಾದರೂ ಲಕ್ಷಾಂತರ ರೂ. ಉಳಿತಾಯವಾಗುತ್ತದೆ. ಬ್ಯಾಂಕ್ಗಳಿಗೆ ಅಗತ್ಯವಿದ್ದಾಗ ಅಲ್ಪಾವಧಿಗೆ ಆರ್ಬಿಐ ಸಾಲ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನು ರೆಪೊ ದರ ಎನ್ನಲಾಗುತ್ತದೆ. ರೆಪೊ ದರ ಹೆಚ್ಚಳವಾದಷ್ಟೂ, ವಾಣಿಜ್ಯ ಬ್ಯಾಂಕ್ಗಳು ಗ್ರಾಹಕರಿಗೆ ನೀಡುವ ಬಡ್ಡಿ ದರವನ್ನು ಏರಿಕೆ ಮಾಡುತ್ತವೆ. ರೆಪೊ ದರ ಕಡಿಮೆಯಾದರೆ ಬಡ್ಡಿ ಹೊರೆಯೂ ಕಡಿಮೆಯಾಗುತ್ತದೆ. 2008ರಲ್ಲಿ ಆರ್ಬಿಐ ರೆಪೊ ದರ ಶೇ.9 ಇತ್ತು. ಆರ್ಥಿಕತೆಗೆ ಚೇತರಿಕೆ ಹಾಗೂ ಖರೀದಿದಾರರಿಗೆ ಉತ್ತೇಜನ ನೀಡುವ ಸಲುವಾಗಿ ಈ ದರವನ್ನು ಸತತ ಇಳಿಕೆ ಮಾಡುತ್ತ ಬಂದಿರುವ ಆರ್ಬಿಐ ಇದೀಗ ಶೇ.4 ರೆಪೊ ದರ ನಿಗದಿಪಡಿಸಿದೆ. ಅತಿ ಹೆಚ್ಚು ಬಡ್ಡಿ ಪಾವತಿಸುತ್ತಿದ್ದ ಕೆಲವು ಬ್ಯಾಂಕ್ಗಳ ಗ್ರಾಹಕರು ಇದೀಗ ಗೃಹ ಸಾಲದ ಮೇಲೆ ಶೇ.8ಕ್ಕಿಂತ ಕಡಿಮೆ ಬಡ್ಡಿ ಪಾವತಿಸುತ್ತಿದ್ದಾರೆ. 2003-04ರಲ್ಲಿ ಶೇ.8ಕ್ಕಿಂತ ಕಡಿಮೆ ಇದ್ದ ಗ್ರಾಹಕರ ಬಡ್ಡಿ ಹೊರೆ ಇದೀಗ ಮತ್ತೆ ಶೇ.8ಕ್ಕಿಂತ ಕಡಿಮೆಯಾಗಿದೆ. ದೇಶದ ಆರ್ಥಿಕ ಆರೋಗ್ಯದ ಹಿತದೃಷ್ಟಿಯಿಂದ ಇದಕ್ಕಿಂತ ಕಡಿಮೆ ರೆಪೊ ದರವನ್ನು ಆರ್ಬಿಐ ವಿಧಿಸುವುದು ಬಹು ಕಷ್ಟ. ಆರ್ಥಿಕತೆ ಚೇತರಿಕೆ ಕಾಣುತ್ತ ಸಾಗಿದರೆ, ರೆಪೊ ದರವನ್ನು ಏರಿಕೆ ಮಾಡುವ ಸಂಭವವೂ ಇರುತ್ತದೆ. ಹೀಗಾಗಿ ಈಗಿನ ಅತಿ ಕಡಿಮೆ ಬಡ್ಡಿ ದರದ ಲಾಭ ಪಡೆದು ಗ್ರಾಹಕರು ಮನೆ ನಿರ್ಮಾಣ ಅಥವಾ ಖರೀದಿಗೆ ಮುಂದಾಗಬೇಕು ಎಂಬುದು ತಜ್ಞರ ಅಭಿಪ್ರಾಯ.
ಇಎಂಐ ಹಾಗೂ ಆದಾಯದ ಅನುಪಾತ
ಮನೆಯನ್ನು ಖರೀದಿಸಲು ಬ್ಯಾಂಕ್ಗಳು ಯಥೇಚ್ಛವಾಗಿ ಸಾಲ ನೀಡಲು ಮುಂದೆ ಬರುತ್ತಿವೆ. ಸೂಕ್ತ ದಾಖಲೆಗಳಿರುವ ಹಾಗೂ ಮೌಲ್ಯವರ್ಧನೆಯಾಗುವ ಆಸ್ತಿಗಳನ್ನು ಖರೀದಿಸಲು ಮುಂದಾಗಬೇಕು ಅಷ್ಟೆ. ಜತೆಗೆ ಖರೀದಿಸುತ್ತಿರುವವರ ಆದಾಯದ ಮೇಲೆ ಸಾಲದ ಮೊತ್ತವನ್ನು ನಿರ್ಧಾರ ಮಾಡಲಾಗುತ್ತದೆ. ಖರೀದಿದಾರರ ಒಟ್ಟು ವೇತನದ ಬದಲಿಗೆ, ಪಿಎಫ್, ಇತರೆ ಇಎಂಐಗೆ ಕಡಿತ ಸೇರಿ ಕೈಗೆ ಎಷ್ಟು ವೇತನ ಸಿಗುತ್ತಿದೆ ಎಂಬುದನ್ನು ಆಧಾರವಾಗಿಟ್ಟುಕೊಳ್ಳುತ್ತವೆ. ಮನೆಯನ್ನು ಖರೀದಿಸುವ ಸಲುವಾಗಿ ಇತರೆ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುದು ನಿಜವಾದರೂ ತೀರಾ ದೈನಂದಿನ ಅವಶ್ಯಕತೆಗಳಲ್ಲಿ ರಾಜೀ ಮಾಡಿಕೊಂಡರೆ ಜೀವನ ಕಷ್ಟವಾಗುತ್ತದೆ. ಇದನ್ನು ಲೆಕ್ಕ ಮಾಡಲು ಇಎಂಐ ಹಾಗೂ ಆದಾಯದ ನಡುವಿನ ಅನುಪಾತ ಎಂಬ ಮಾನದಂಡ ರೂಪಿಸಲಾಗಿದೆ. ಐರೋಪ್ಯ ದೇಶಗಳಲ್ಲಿ, ವೇತನದ ಶೇ.45-50 ಹಣವನ್ನು ಮನೆಯ ಇಎಂಐಗೆ ವ್ಯಯಿಸುತ್ತಾರೆ. ಆದರೆ, ಭಾರತದಲ್ಲಿ ಕುಟುಂಬದ ನಿರ್ವಹಣೆ, ಪ್ರವಾಸ, ಹಬ್ಬ ಹರಿದಿನಗಳ ವೆಚ್ಚವೂ ಸರಿದೂಗಬೇಕಿರುವುದರಿಂದ, ವೇತನದ ಶೇ.25-30 ಹಣವನ್ನು ಮನೆ ಸಾಲದ ಇಎಂಐಗೆ ವ್ಯಯಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ. ಕಳೆದ ದಶಕದಲ್ಲಿ ಇಎಂಐ ಹಾಗೂ ಆದಾಯದ ನಡುವಿನ ಅನುಪಾತ ಶೇ.60 ಇತ್ತು. ಅಂದಿನ ಬ್ಯಾಂಕ್ ಬಡ್ಡಿಗಳು ಅತಿ ಹೆಚ್ಚಾಗಿದ್ದವು. ನಂತರದ ದಿನಗಳಲ್ಲಿ ವೇತನದಲ್ಲಿ ಹೆಚ್ಚಳವಾಗುತ್ತಿದೆಯಾದರೂ ಬ್ಯಾಂಕ್ ಬಡ್ಡಿ ದರ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಎಂಐ ಹಾಗೂ ಆದಾಯದ ನಡುವಿನ ಅನುಪಾತವು ಶೇ.30ರ ಆಸುಪಾಸಿಗೆ ಬಂದಿದೆ. ಹಾಗಾಗಿ ಮನೆ ಖರೀದಿಗೆ ಇದು ಸೂಕ್ತ ಕಾಲವಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಮಧ್ಯಮ ವರ್ಗವು ಮನೆ ಹೊಂದಬೇಕು ಎಂಬ ಅಭಿಲಾಷೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ) ಜಾರಿ ಮಾಡಿದೆ. ವಾರ್ಷಿಕ 6-12 ಲಕ್ಷ ರೂ. ಆದಾಯವಿರುವ ಗ್ರಾಹಕರು 20 ವರ್ಷ ಅವಧಿಗೆ ಗೃಹ ಸಾಲ ಪಡೆದರೆ ಬಡ್ಡಿ ದರದ ಮೇಲೆ ಅಂದಾಜು 2.3 ಲಕ್ಷ ರೂ. ಉಳಿತಾಯ ಮಾಡಬಹುದು. ಗ್ರಾಹಕರು ಮನೆ ಖರೀದಿಸಲು ಇದೂ ಸಹ ಒಂದು ಕಾರಣ ಎನ್ನುತ್ತಾರೆ ರಿಯಲ್ ಎಸ್ಟೇಟ್ ವಿಶ್ಲೇಷಕರು.
ರಾಯಲ್ ಪ್ರಾಪರ್ಟಿಸ್ನಿಂದ ಮೂರು ಪ್ರಾಜೆಕ್ಟ್
ಬೆಂಗಳೂರು: ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅಂತಹವರ ಕನಸು ನನಸುಗೊಳಿಸುವ ನಿಟ್ಟಿನಲ್ಲಿ ‘ರಾಯಲ್ ಪ್ರಾಪರ್ಟಿಸ್’ ರಿಯಾಲ್ಟಿ ಕಂಪನಿಯು ರಾಯಲ್ ಪ್ಯಾರೆಡೈಸ್, ರಾಯಲ್ ಆರ್ಕೆಡ್, ರಾಯಲ್ ಗ್ರ್ಯಾವಿಟಿ ಪ್ರಾಜೆಕ್ಟ್ಗಳ ಮೂಲಕ ಕೈಗೆಟುಕುವ ದರದಲ್ಲಿ ನಿವೇಶನ ನೀಡಲು ಮುಂದಾಗಿದೆ.
ಚಿಕ್ಕಮಧುರೈ ಸುತ್ತಮುತ್ತಲ ವಿಶಾಲವಾದ ಪ್ರದೇಶದಲ್ಲಿ ನಿವೇಶನ ನಿರ್ವಿುಸಿ ಮಾರಾಟ ಮಾಡುತ್ತಿದೆ. ನೆಲಮಂಗಲದಿಂದ ಚಿಕ್ಕಮಧುರೈ ಮೂಲಕ ಏರ್ಪೋರ್ಟ್ಗೆ ರಸ್ತೆ ನಿರ್ವಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ನಿವೇಶನಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.
ರಾಯಲ್ ಪ್ಯಾರಡೈಸ್, ರಾಯಲ್ ಆರ್ಕೆಡ್, ರಾಯಲ್ ಗ್ರ್ಯಾವಿಟಿ ಪ್ರಾಜೆಕ್ಟ್ ಗಳ ಮೂಲಕ 4.50 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೂ ವಿವಿಧ ಬಗೆಯ ನಿವೇಶನಗಳು ಲಭ್ಯ ಇವೆ. ಇದು ಮಧ್ಯಮ ವರ್ಗದವರಿಗೆ ಸಹಾಯವಾಗಲಿದೆ. ದಾಬಸ್ಪೇಟೆ ಸೇರಿ ಹಲವು ಶಾಲಾ-ಕಾಲೇಜು, ಕೈಗಾರಿಕಾ ಪ್ರದೇಶಗಳು ನಿವೇಶನದ ಸಮೀಪದಲ್ಲಿವೆ. ನಿವೇಶನಗಳು ಡಿಸಿ ಕನ್ವರ್ಷನ್ ಆಗಿದ್ದು, ನಿವೇಶನದ ಸುತ್ತ-ಮುತ್ತ ಹಲವು ಗ್ರಾಮಗಳಿರುವುದರಿಂದ ಗ್ರಾಹಕರು ನಿರಾತಂಕವಾಗಿರಬಹುದು.
ಅತ್ಯಂತ ವಿಶ್ವಾಸಾರ್ಹ ರಿಯಾಲ್ಟಿ ಡೆವಲಪರ್ಸ್ ಆಗಿ ಬೆಳೆಯುತ್ತಿರುವ ‘ರಾಯಲ್ ಪ್ರಾಪರ್ಟಿಸ್’ ಈವರೆಗೂ ಸಹಸ್ರಾರು ಗ್ರಾಹಕರಿಗೆ ನಿವೇಶನ ನೀಡಿದೆ. ನಿವೇಶನದಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ರಾಯಲ್ ಪ್ರಾಪರ್ಟಿಸ್ನ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಮಹಾಲಕ್ಷ್ಮೀ ತಿಳಿಸಿದ್ದಾರೆ.