

| ಚಿದಾನಂದ ಮಾಯಪ್ಪಾ ಪಡದಾಳೆ
ಪ್ರಾಜೆಕ್ಟ್ ಟೈಗರ್ 1973, ಏಪ್ರಿಲ್ 1 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಆರಂಭವಾಯಿತು. ಈ ಯೋಜನೆ ಉತ್ತರಾಖಂಡದ ಜಿಮ್ಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾರಂಭಿಸಲಾಯಿತು. ಇಂದಿರಾ ಗಾಂಧಿ: ಎ ಲೈಫ್ ಇನ್ ನೇಚರ್ ಎಂಬ ಪುಸ್ತಕದಲ್ಲಿ ಪ್ರಾಜೆಕ್ಟ್ ಟೈಗರ್ ಕುರಿತಾಗಿ ದಾಖಲಾದಂತೆ ಪರಿಸರ, ನಮ್ಮ ದೀರ್ಘಕಾಲದ ನಿರ್ಲಕ್ಷ್ಯದ ಬಗ್ಗೆ ಮತ್ತು ಪ್ರಕೃತಿಯ ಅತ್ಯಂತ ಭವ್ಯವಾದ ಸಂಪತ್ತಿನಲ್ಲಿ ಒಂದು ಜೀವಿಯನ್ನು ಉಳಿಸುವ ಮಹತ್ವವಾದ ನಿರ್ಧಾರ ಎಂದು ಇಂದಿರಾ ಗಾಂಧಿ ಬಣ್ಣಿಸಿದ್ದರು.
ಪ್ರಾಜೆಕ್ಟ್ ಟೈಗರ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಗೊತ್ತುಪಡಿಸಿದ ಹುಲಿ ಮೀಸಲು ಪ್ರದೇಶಗಳಲ್ಲಿ ಹುಲಿ ಸಂರಕ್ಷಣೆಗಾಗಿ ಹುಲಿ ರಾಜ್ಯಗಳಿಗೆ ಕೇಂದ್ರ ಸಹಾಯ ಒದಗಿಸುತ್ತದೆ. ಹುಲಿ ಪ್ರಪಂಚದಲ್ಲಿ ಅಳಿವಿನಂಚಿನಲ್ಲಿರುವ ಜಾತಿಯಾಗಿದೆ. 20ನೇ ಶತಮಾನದಲ್ಲಿ, ಭಾರತವು 20,000 ರಿಂದ 40,000ವರೆಗಿನ ಹುಲಿಗಳ ಜನಸಂಖ್ಯೆಯನ್ನು ಹೊಂದಿತ್ತು. ಮಹಾರಾಜರು ಮತ್ತು ಬ್ರಿಟಿಷರ ಬೇಟೆಯಾಡುವ ಚಟುವಟಿಕೆಗಳಿಂದಾಗಿ ಎಪ್ಪತ್ತರ ದಶಕದಲ್ಲಿ ಅವುಗಳ ಸಂಖ್ಯೆಯು ತೀವ್ರವಾಗಿ 1820ಕ್ಕೆ ಕ್ಷೀಣಿಸಿತ್ತು!
ಏನಿದು ಪಾಜೆಕ್ಟ್ ಟೈಗರ್?: ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಸರ್ಕಾರವು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಿತು. ದೇಶದಲ್ಲಿ ಹುಲಿಯ ಜನಸಂಖ್ಯೆಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಾಜೆಕ್ಟ್ ಟೈಗರ್ ಅನ್ನು ಏಪ್ರಿಲ್ 1, 1973ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ನ್ಯಾಷನಲ್ ಟೈಗರ್ ಕನ್ಸರ್ವೆಶನ್ ಅಥಾರಿಟಿ (ಘಖಇಅ) ನಿರ್ವಹಿಸುತ್ತದೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ಅತ್ಯಂತ ಕಡಿಮೆ ಬಜೆಟ್ನಿಂದ ಅಂದರೆ, 5.8 ಕೋಟಿಯಿಂದ ರೂಪಾಯಿಗಳಿಂದ ಆರಂಭವಾಗಿ ಪ್ರಸ್ತುತ 2023-24ರಲ್ಲಿ 300 ಕೋಟಿ ರೂಪಾಯಿಗಳನ್ನು ದಾಟಿದೆ. ಈ ಯೋಜನೆಯು ಹುಲಿಗಳ ಆವಾಸಸ್ಥಾನಗಳನ್ನು ಅವುಗಳ ಪರಿಸರ ಶುದ್ಧತೆಯಲ್ಲಿ ಸಂರಕ್ಷಿಸುವುದರ ಜತೆಗೆ, ದೇಶದಲ್ಲಿ ಹುಲಿ ಗಣತಿಯನ್ನು ನಡೆಸುವ ಕೆಲಸ ಸಹ ಮಾಡುತ್ತದೆ. ಇದು ಕಳ್ಳಬೇಟೆಯ ವಿರುದ್ಧವೂ ಹೋರಾಡುತ್ತದೆ.
ಈ ಯೋಜನೆಯು ಪ್ರಾರಂಭವಾದಾಗಿನಿಂದ ಅದರ ವ್ಯಾಪ್ತಿ ಪ್ರದೇಶವು ಈಗ ಅನೇಕ ಪಟ್ಟು ಬೆಳೆದಿದೆ. ಆರಂಭಿಕ ವ್ಯಾಪ್ತಿ 18,278 ಚದರ ಕಿ.ಮೀ.ಗಳಷ್ಟು ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿತ್ತು. ಇಂದು, ಯೋಜನೆಯಡಿಯಲ್ಲಿ 75,000 ಚದರ ಕಿ.ಮೀ ಗಿಂತ ಹೆಚ್ಚು 53 ಹುಲಿ ಸಂರಕ್ಷಿತ ಪ್ರದೇಶಗಳಿವೆ. ದೇಶದ ಭೌಗೋಳಿಕ ಪ್ರದೇಶದ ಸರಿಸುಮಾರು 2.4%ರಷ್ಟು ಹುಲಿ ಆವಾಸಸ್ಥಾನಗಳಿವೆ. 1970ರ ದಶಕದಲ್ಲಿ ಹುಲಿಗಳ ಸಂಖ್ಯೆ ಕೇವಲ ಒಂದು ಸಾವಿರದ ಇನ್ನೂರರಷ್ಟಿತ್ತು. ಆದರೆ ಇತ್ತೀಚಿನ ಜನಗಣತಿಯ ಪ್ರಕಾರ, ಇದು ಮೂರು ಸಾವಿರಕ್ಕೆ ಏರಿದೆ. ವಾಸ್ತವವಾಗಿ, ಕಳೆದ ಎಂಟು ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಮೂವತ್ತು ಶೇಕಡ ಏರಿಕೆಯಾಗಿದೆ.
ಹುಲಿ ಮೀಸಲು ಸಂರಕ್ಷಿತ ಪ್ರದೇಶಗಳು ಜೀವಿವೈವಿಧ್ಯತಾ ಸಂರಕ್ಷಣೆಯ ಪ್ರಮುಖ ಅಂಶಗಳಾಗಿವೆ. ಪ್ರಾದೇಶಿಕ ಜಲ ಭದ್ರತೆ, ಇಂಗಾಲದ ಪ್ರತ್ಯೇಕತೆ ಹಾಗೂ ಹವಾಮಾನ ಬದಲಾವಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇವು ಗಮನಾರ್ಹ ಕೊಡುಗೆಯನ್ನು ನೀಡುತ್ತವೆ. ಜಾಗತಿಕವಾಗಿ ಹುಲಿ ಜನಸಂಖ್ಯೆಯ 70%ಕ್ಕಿಂತ ಹೆಚ್ಚು ಪ್ರಮಾಣವನ್ನು ಭಾರತ ಹೊಂದಿದೆ. ಇದು ವಾರ್ಷಿಕ 6% ದರದಲ್ಲಿ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಸೇಂಟ್ ಪೀಟರ್ಸ್ಬರ್ಗ್ ಘೊಷಣೆಯ ಪ್ರಕಾರ, ಸುಮಾರು 12 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆಯು 2022ರ ಗುರಿಯ ವರ್ಷಕ್ಕಿಂತ ಮುಂಚೆಯೇ ದ್ವಿಗುಣಗೊಂಡಿರುವುದು ಪರಿಸರಾತ್ಮಕವಾಗಿ ಬಹು ಧನಾತ್ಮಕ ವಿಚಾರವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಕಾರ 2008ರಲ್ಲಿ 1,411 ಹುಲಿಗಳಿದ್ದು, 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ.