

ಕ್ರೀಡೆ ಅಂದರೆ, ಜೀವನೋತ್ಸಾಹ, ಜೀವನಪ್ರೀತಿಯ ಸಂಭ್ರಮಾಚರಣೆ ಎಂಬ ಮಾತಿದೆ. ಕ್ರೀಡಾಪಟುಗಳು ನಮ್ಮೊಳಗೆ ಒಬ್ಬರಾಗಿದ್ದರೂ, ಕಠಿಣ ಪರಿಶ್ರಮ, ತ್ಯಾಗ, ಛಲ, ಏಕಾಗ್ರತೆ, ಹೋರಾಟದಿಂದ ನಮಗಿಂತ ಭಿನ್ನರಾಗಿ ಮಿನುಗುವವರು. ಕ್ರೀಡೆಯ ಕಣದಲ್ಲಿ ಶಿಫಾರಸು, ಸ್ವಜನಪಕ್ಷಪಾತಕ್ಕೆ ಭವಿಷ್ಯವಿಲ್ಲ. ಸಚಿನ್ ತೆಂಡುಲ್ಕರ್ ಮಗನೇ ಆಗಿದ್ದರೂ, ಮೈದಾನದಲ್ಲಿ ಚೆನ್ನಾಗಿ ಆಡಿದರಷ್ಟೇ ಉಳಿಗಾಲ. ಭಾರತದಂಥ ದೇಶದಲ್ಲಿ ಒಬ್ಬೊಬ್ಬ ಕ್ರೀಡಾಪಟುವಿನ ಹಿನ್ನೆಲೆಯೂ ‘ಕಥೆಯಲ್ಲ ಜೀವನ’ ಎಂಬಂತೆಯೇ ಇರುತ್ತದೆ. ಕಳೆದ ತಿಂಗಳು ಪ್ಯಾರಿಸ್ನಲ್ಲಿ ನಡೆದ ಅಂಗವಿಕಲ ಕ್ರೀಡಾಪಟುಗಳ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತೀ ಹೆಚ್ಚು 29 (7 ಚಿನ್ನ, 9 ಬೆಳ್ಳಿ, 13 ಕಂಚು) ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಒಬ್ಬೊಬ್ಬ ಕ್ರೀಡಾಪಟುವೂ ಕಷ್ಟಗಳ ಬೆಂಕಿಯಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಅರಳಿದವರು. ಈ ಸಾಧಕರ ಹೋರಾಟ ಜಗತ್ತಿಗೇ ಪ್ರೇರಣೆ. ಇಂಥ ಕೆಲವು ಪ್ಯಾರಾಲಿಂಪಿಕ್ಸ್ ತಾರೆಗಳ ಪ್ರೇರಣಾದಾಯಿ ಕಥೆಗಳ ಗೊಂಚಲು ಇಲ್ಲಿದೆ.
ನೃತ್ಯ ಎಂದರೆ ಆಸೆ ಪಡುತ್ತಿದ್ದ ಆ ಹುಡುಗಿ ಎರಡೂ ಕಾಲುಗಳನ್ನೇ ಕಳೆದುಕೊಂಡು ಏಳು ತಿಂಗಳ ಕಾಲ ಹಾಸಿಗೆ ಹಿಡಿದಿದ್ದಳು. ಮುಂದಿನ ಎರಡು ವರ್ಷ ಆ ಹುಡುಗಿ ಮನೆಯಿಂದ ಆಚೆಗೇ ಬರಲಾಗಲಿಲ್ಲ. ಖಿನ್ನತೆ ಆವರಿಸಿತ್ತು. ಮಾತು, ನಗು ಎಲ್ಲವೂ ಮರೆತೇ ಹೋಗಿತ್ತು. ಹಲವು ಶಸ್ತ್ರಚಿಕಿತ್ಸೆಗಳ ಬಳಿಕ ಆರೋಗ್ಯ ಒಂದು ಹದಕ್ಕೆ ಬಂದರೂ, ಎರಡೂ ಕಾಲು ಕಳೆದುಕೊಂಡಿದ್ದ ಆ ಬಾಲಕಿ ಕುಳಿತುಕೊಳ್ಳುವುದು ಹೇಗೆ ಎಂದು ಕಲಿಯಬೇಕಿತ್ತು. ಕುಣಿದಾಡಿಕೊಂಡು ಶಾಲೆಗೆ ಹೋಗುತ್ತಿದ್ದ ಆಕೆ ಮೊದಲ ಬಾರಿ ಗಾಲಿಕುರ್ಚಿಯಲ್ಲಿ ಕುಳಿತು ಶಾಲೆಗೆ ಹೋಗಿದ್ದೇ ಮತ್ತೊಂದು ವಿಚಿತ್ರ ಅನುಭವ. ಇದೆಲ್ಲ ಎಷ್ಟೇ ಸವಾಲಾಗಿದ್ದರೂ, ಮಗಳು ಬದುಕಿನಲ್ಲಿ ವಿಶ್ವಾಸ ಕಳೆದುಕೊಳ್ಳದಂತೆ ಆಕೆಯ ಅಪ್ಪ-ಅಮ್ಮ ಎಲ್ಲ ಪ್ರಯತ್ನ ಪಟ್ಟರು. ಶೂಟಿಂಗ್ ಕ್ರೀಡೆಗೆ ಆಕೆಯನ್ನು ಸೇರಿಸಿದರು. ಆದರೆ, ಅದೂ ಸುಲಭವಾಗಿರಲಿಲ್ಲ.
ರೈಫಲ್ ಎತ್ತಿ ಹಿಡಿಯುವಷ್ಟು ಆಕೆಗೆ ದೈಹಿಕ ಶಕ್ತಿ ಇರಲಿಲ್ಲ. ಸ್ವಂತದ ರೈಫಲ್ ಇರಲಿಲ್ಲ. ಶೂಟಿಂಗ್ ಸ್ಪರ್ಧೆಗೆ ಅನುಕೂಲವಾಗುವಂಥ ವೀಲ್ಚೇರ್ ಇರಲಿಲ್ಲ. ಸೂಕ್ತ ಕೋಚ್ಗಳೂ ಇರಲಿಲ್ಲ. ಇಷ್ಟರ ಜತೆಗೆ, ಶೂಟಿಂಗ್ಗೆ ಒಲವು ಕೂಡ ಆಕೆಗಿರಲಿಲ್ಲ. ಆ ಸಂದರ್ಭದಲ್ಲಿ ಒಲಿಂಪಿಕ್ಸ್ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರ ಆತ್ಮಕಥೆಯನ್ನು ಓದುವಂತೆ ಅಪ್ಪ ಪ್ರೇರೇಪಿಸಿದ್ದರು. ಆ ಪುಸ್ತಕ ಓದು ಆಕೆಯ ಬದುಕಿಗೊಂದು ಮಹತ್ವಾಕಾಂಕ್ಷೆ ತಂದುಕೊಟ್ಟಿತ್ತು. ಆ ಬಾಲಕಿ ಅಪಘಾತದಿಂದ ಕಾಲು ಕಳೆದುಕೊಂಡಿದ್ದು 2012 ಫೆಬ್ರವರಿ 20ರಂದು. ಅದಾದ ಒಂಬತ್ತು ವರ್ಷಗಳಲ್ಲಿ, ಅಂದರೆ, 2021 ಆ. 30ರಂದು ಆಕೆ ಟೋಕಿಯೋ ಒಲಿಂಪಿಕ್ಸ್ನಲ್ಲಿ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಬಂಗಾರಕ್ಕೆ ಕೊರಳೊಡ್ಡಿದ್ದಳು. ಕಳೆದ ತಿಂಗಳು ಪ್ಯಾರಿಸ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ನಲ್ಲೂ ಅದೇ ಯುವತಿ ಮತ್ತೆ ಬಂಗಾರ ಗೆಲ್ಲುವ ಮೂಲಕ ಸತತ ಎರಡು ಪ್ಯಾರಾಲಿಂಪಿಕ್ಸ್ ಗಳಲ್ಲಿ ಶೂಟಿಂಗ್ ಬಂಗಾರ ಗೆದ್ದ ಇತಿಹಾಸ ನಿರ್ವಿುಸಿದಳು. ವಿಧಿ ನನ್ನ ಕಾಲುಗಳನ್ನು ಕಿತ್ತುಕೊಂಡರೇನಂತೆ, ಮನೋಬಲದಿಂದ ಜಗತ್ತನ್ನೇ ಗೆಲ್ಲುವೆ ಎಂದ ಆ ಬಂಗಾರದ ಹುಡುಗಿಯೇ ಆವನಿ ಲೇಖರ. ಈಕೆಯ ಸಾಧನೆ ಜಗತ್ತಿಗೇ ಪ್ರೇರಣೆ.
ಎರಡು ಹೆಣ್ಣು ಮಕ್ಕಳೇ ಹುಟ್ಟಿದ ಬಳಿಕ, ಮೂರನೇ ಮಗುವೂ ಹೆಣ್ಣು ಎಂದು ಗೊತ್ತಾದಾಗ ಆ ಕುಟುಂಬದಲ್ಲಿ ಸಂಭ್ರಮಿಸಿದವರಿಗಿಂತ ಶಾಪ ಹಾಕಿದವರೇ ಹೆಚ್ಚು. ನಮ್ಮ ಬಡತನ ಹೆಚ್ಚಿಸಲು ಹುಟ್ಟಿದ ದರಿದ್ರ ಎಂದೇ ಆ ದೊಡ್ಡ ಕುಟುಂಬದ ಸದಸ್ಯರೆಲ್ಲರೂ ಮೂದಲಿಸುತ್ತಿದ್ದರು. ಮಗುವಿನ ಗ್ರಹಚಾರಕ್ಕೆ ಹುಟ್ಟಿದ ಎಂಟೇ ತಿಂಗಳಲ್ಲಿ ಪೋಲಿಯೋ ಮಾರಿಗೆ ಎರಡೂ ಕಾಲು ವೈಕಲ್ಯ ಅನುಭವಿಸಿದ ಮೇಲಂತೂ ಯಾಕಾದರೂ ಬದುಕಿದೆಯೋ ಎಂಬ ನಿಂದನೆ. ಯಾರಿಗೂ ಬೇಡವಾದ ಮಗುವನ್ನು ಸ್ವಲ್ಪ ಕಾಳಜಿ ಮಾಡಿದ್ದರೆ ಅದು ಅಜ್ಜಿ ಮಾತ್ರ. ಅದೇ ನತದೃಷ್ಟ ಮಗು ಇಂದು ಅಂಗವಿಕಲರ ಶೂಟಿಂಗ್ನಲ್ಲಿ ಹಾಲಿ ವಿಶ್ವಚಾಂಪಿಯನ್. ಮೊನ್ನೆ ಪ್ಯಾರಿಸ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ಕಂಚು ಗೆದ್ದಾಗ ಇಡೀ ದೇಶ ಭಾವುಕವಾಗಿ ಸಂಭ್ರಮಿಸಿತು. ಇದು ರಾಜಸ್ಥಾನದ ದಿಟ್ಟ ಯುವತಿ ಮೋನಾ ಅಗರ್ವಾಲ್ ಕಥೆ.
ಯಾರಿಗೂ ಬೇಡವಾದವರೇ ದೇವರಿಗೆ ಹೆಚ್ಚು ಪ್ರಿಯರಾಗಿರುತ್ತಾರೆ. ವಿಧಿ ಎಲ್ಲರಂತೆ ಸಹಜವಾಗಿ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಂಡರೂ, ಬಂದಿದ್ದೆಲ್ಲವನ್ನೂ ದಿಟ್ಟವಾಗಿ ಎದುರಿಸುವ ಆತ್ಮಶಕ್ತಿಯನ್ನು ಕರುಣಿಸಿತ್ತು. ಬದುಕು ಛಲವನ್ನು, ಆತ್ಮಬಲವನ್ನು, ಹೋರಾಟ ಮನೋಭಾವವನ್ನು ಕಲಿಸಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೇ ಹಲ್ಲುಕಚ್ಚಿ ವಿದ್ಯಾಭ್ಯಾಸ ಪೂರೈಸಿದ ಮೋನಾ ರಾಜಸ್ಥಾನ ವಿವಿಯಲ್ಲಿ ಮನಶಾಸ್ತ್ರದಲ್ಲಿ ಪದವಿ ಗಳಿಸಿದ್ದಾರೆ. ವಿದ್ಯಾಭ್ಯಾಸದ ಬಳಿಕ ಅಂಗವಿಕಲರ ಜಾವೆಲಿನ್, ಶಾಟ್ಪುಟ್, ಪವರ್ಲಿಫ್ಟಿಂಗ್, ಸಿಟ್ಟಿಂಗ್ (ಕುಳಿತು ಆಡುವ) ವಾಲಿಬಾಲ್ ಆಡಿದ ಮೋನಾ, ಅಂತಿಮವಾಗಿ ರೈಫಲ್ ಶೂಟಿಂಗ್ನಲ್ಲಿ ಒಲಿಂಪಿಕ್ಸ್ ಕಂಚು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮೋನಾ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರ ಪತಿ ರವೀಂದ್ರ ಚೌಧರಿ ಕೂಡ ಅಂಗವಿಕಲ ಬ್ಯಾಸ್ಕೆಟ್ಬಾಲ್ ಆಟಗಾರ. ಇತ್ತೀಚೆಗೆ ಅಪಘಾತವೊಂದರಲ್ಲಿ ಮೆದುಳಿಗೆ ಗಾಯವಾಗಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಆದರೆ, ಮೋನಾ ವಿಧಿಯ ಸವಾಲುಗಳಿಗೆ ಹೆದರದೆ, ಬಂದಿದ್ದನ್ನೆಲ್ಲ ನಗುಮೊಗದಿಂದ ಎದುರಿಸುತ್ತ ಮಾದರಿಯೆನಿಸಿದ್ದಾರೆ.
ಪ್ರೀತಿ ಪಾಲ್ ಉತ್ತರ ಪ್ರದೇಶದ ಮುಜಾಫರಪುರದ ರೈತ ಕುಟುಂಬದ ಯುವತಿ. ಪ್ರೀತಿ ಜನಿಸಿದ ಸಂದರ್ಭದಲ್ಲಿ ಕಾಲುಗಳಿನ್ನೂ ಸರಿಯಾಗಿ ಬೆಳೆದಿರಲಿಲ್ಲ. ಪಾದಗಳ ಆಕಾರ ವಿಚಿತ್ರವಾಗಿತ್ತು. ಹೀಗಾಗಿ ಕೆಲವು ತಿಂಗಳ ಕಾಲ ಸೊಂಟದಿಂದ ಕೆಳಗೆ ದೇಹಕ್ಕೆ ಪ್ಲಾಸ್ಟರ್ ಸುತ್ತಿ ಚಿಕಿತ್ಸೆ ನೀಡಲಾಗಿತ್ತು. ಈ ಮಗು ಹೆಚ್ಚು ದಿನ ಬದುಕುವುದು ಕಷ್ಟ ಎಂದು ವೈದ್ಯರೇ ಹೇಳಿದ್ದರು. ಕಾಲು ಸರಿಯಾಗಿ ಬೆಳವಣಿಗೆ ಆಗದೆ ಬಲವಿರದ ಕಾರಣ, 5 ವರ್ಷದ ಮಗುವಿನ ಕಾಲಿಗೆ ಕಬ್ಬಿಣದ ರಾಡ್ ಅಳವಡಿಸಲಾಗಿತ್ತು. ಸುಮಾರು ಎಂಟು ವರ್ಷ ಮಗು ಈ ಹಿಂಸೆ ಅನುಭವಿಸಿತ್ತು. ಇಷ್ಟೆಲ್ಲ ದೈಹಿಕ, ಮಾನಸಿಕ ಯಾತನೆಗಳ ನಡುವೆಯೂ, ಆ ಹುಡುಗಿ ಸಾವನ್ನು ಗೆದ್ದಿದ್ದಳು. ಆಕೆಯೊಳಗಿನ ಛಲಗಾತಿಗೆ ಇನ್ನೂ ಏನಾದರೂ ಸಾಧಿಸಬೇಕೆಂಬ ಹಂಬಲವಿತ್ತು. 17ನೇ ವಯಸ್ಸಿನಲ್ಲಿ ಪ್ಯಾರಾಲಿಂಪಿಕ್ಸ್ ಕೂಟದ ಬಗ್ಗೆ ತಿಳಿದಾಗ, ತಾನೂ ಏಕೆ ಆಡಬಾರದು ಎಂಬ ಪ್ರಶ್ನೆ ಮೂಡಿತ್ತು. ಪ್ಯಾರಾ ಅಥ್ಲೀಟ್ ಫಾತಿಮಾ ಖತೂನ್ ಪರಿಚಯವಾದಾಗ ಕನಸಿಗೆ ರೆಕ್ಕೆ ಬಲಿತಿತ್ತು. ದೆಹಲಿಗೆ ಸ್ಥಳಾಂತರಗೊಂಡು ಕೋಚ್ ಗಜೇಂದ್ರ ಸಿಂಗ್ ಮಾರ್ಗದರ್ಶನ ದೊರೆತ ಮೇಲೆ ಪ್ರೀತಿ ಪಾಲ್ ಒಳಗಿನ ಓಟದ ಛಲಕ್ಕೆ ಬಲ ಬಂದಿತ್ತು. ಮೊನ್ನೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಆಕೆ 100 ಮೀ. ಮತ್ತು 200 ಮೀ. ಓಟಗಳೆರಡರಲ್ಲೂ ಕಂಚಿನ ಪದಕ ಗೆದ್ದಾಗ ಸ್ವರ್ಗಕ್ಕೆ ಮೂರೇ ಗೇಣು. ಇಡೀ ದೇಶ ಪ್ರೀತಿ ಸಾಧನೆಗೆ ಚಪ್ಪಾಳೆ ತಟ್ಟಿತ್ತು.
ರೈತನ ಮಗ ನಿಷಾದ್ ಕುಮಾರ್ಗೆ ಬಾಲ್ಯದಿಂದ ಸೈನ್ಯಕ್ಕೆ ಸೇರುವ ಕನಸು. ಆದರೆ ಅದೊಂದು ದಿನ ತೋಟದಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಿದ್ದ 8 ವರ್ಷದ ಬಾಲಕ ಗೊತ್ತಾಗದೆ ಮೇವು ಕತ್ತರಿಸುವ ಯಂತ್ರಕ್ಕೆ ಕೈ ಇಟ್ಟಿದ್ದ. ಕ್ಷಣಮಾತ್ರದಲ್ಲಿ ಬಲಗೈ ತುಂಡಾಗಿ ಹೋಗಿತ್ತು. ಕೈ ಎರಡು ತುಂಡಾಗಿ ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದಾಗಲೂ ಆ ಬಾಲಕ ನೋವಿನಿಂದ ಅಳುತ್ತಿರಲಿಲ್ಲ. ಬದಲಿಗೆ ನಾನು ಸೇನೆಗೆ ಈಗಲೂ ಸೇರಬಹುದೇ ಎಂದು ವೈದ್ಯರ ಬಳಿ ಪ್ರಶ್ನಿಸುತ್ತಿದ್ದ. ಸಿಂಹದ ಮರಿ ನಿಷಾದ್ನ ದೇಶ ಕಾಯುವ ಕನಸು ನನಸಾಗದಿದ್ದರೂ, ದೇಶಕ್ಕಾಗಿ ಪ್ಯಾರಾಲಿಂಪಿಕ್ಸ್ನಲ್ಲಿ ಹೈಜಂಪ್ ಬೆಳ್ಳಿ ಗೆಲ್ಲುವ ಮೂಲಕ ಶತಕೋಟಿ ಜನರ ಪದಕದ ಕನಸು ನನಸಾಗಿಸಿದ್ದು ಅಪೂರ್ವ ಸಾಧನೆ. ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲೂ ಬೆಳ್ಳಿ ಗೆದ್ದಿದ್ದ ನಿಷಾದ್ ಸಾಧನೆಯನ್ನು ಟಿವಿಯಲ್ಲಿ ಕಣ್ತುಂಬಿಕೊಂಡ ಅಪ್ಪ-ಅಮ್ಮನ ಕಣ್ಣಲ್ಲಿ ಆನಂದಬಾಷ್ಪ. ಅದೇ ರೀತಿ ವಿಕಲಾಂಗರ ಟಿ64 ವಿಭಾಗದ ಹೈಜಂಪ್ನಲ್ಲಿ ಚಿನ್ನವನ್ನೇ ಗೆದ್ದ ನೋಯ್ಡಾದ ಪ್ರವೀಣ್ಕುಮಾರ್ ಸಾಧನೆಯೂ ಅಪರೂಪವೇ. ಹುಟ್ಟುವಾಗಲೇ ಒಂದು ಕಾಲು ಗಿಡ್ಡ ಎಂಬ ಕಾರಣಕ್ಕೆ ಬೆಳೆಯುತ್ತ ಬೆಳೆಯುತ್ತ ಕೀಳರಿಮೆ ಬೆಳೆಸಿಕೊಂಡಿದ್ದ ಪ್ರವೀಣ್ಗೆ,ತಾನು ಯಾರಿಗಿಂತ ಕಡಿಮೆ ಏನಿಲ್ಲ ಎಂಬ ಆತ್ಮವಿಶ್ವಾಸ ತಂದುಕೊಟ್ಟಿದ್ದೇ ಕ್ರೀಡೆ. ಪ್ಯಾರಿಸ್ನಲ್ಲಿ ಪ್ರವೀಣ್ ಹೈಜಂಪ್ನಲ್ಲಿ ಬಂಗಾರ ಗೆದ್ದ ಪರಿಗೆ ಇಡೀ ದೇಶ ಬೆರಗಾಗಿತ್ತು.
ಅದೃಷ್ಟ ಗಟ್ಟಿ ಇರುವಾಗ ಸಾವಿನ ದವಡೆಯಿಂದ ಪಾರಾಗುತ್ತಾರೆ. ಅದೇ ದುರದೃಷ್ಟ ವಕ್ಕರಿಸಿದಾಗ ಊಹೆ ಮಾಡಲೂ ಸಾಧ್ಯವಿಲ್ಲದಂಥ ಎಡವಟ್ಟುಗಳೆಲ್ಲ ಸಂಭವಿಸುತ್ತವೆ. ತಮಿಳುನಾಡಿನ ಮನೀಷಾ ರಾಮದಾಸ್ ಕೂಡ ತನ್ನದಲ್ಲದ ತಪ್ಪಿನಿಂದ, ಜೀವನಪೂರ್ತಿ ಅಂಗವಿಕಲೆ ಆಗುವಂತಾಯಿತು. ಮನೀಷಾ ಜನ್ಮದ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯದಿಂದ ಹೆಚ್ಚು ಬಲಪ್ರಯೋಗ ಮಾಡಿ ಶಿಶುವನ್ನು ಜೋರಾಗಿ ಎಳೆದಿದ್ದರಿಂದ ಬಲಗೈಗೆ ಹಾನಿಯಾಯಿತು. ಪ್ರಸವದ ಸಂದರ್ಭದಲ್ಲೇ ಶಿಶುವಿನ ಕೈಗೆ ಗಾಯವಾದ ಕಾರಣ, ಕೈ ನೆಟ್ಟಗೆ ಮಾಡಲು ಆಗುತ್ತಲೇ ಇರಲಿಲ್ಲ. 4ನೇ ವರ್ಷದಲ್ಲಿ ಒಮ್ಮೆ, 12ನೇ ವರ್ಷದಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೂ, ಕೈ ಸರಿಹೋಗಲಿಲ್ಲ. ಈಗಲೂ ಕೈ ಶೇ. 60ರಷ್ಟು ಸರಿಹೋಗಿದ್ದು ಬಿಟ್ಟರೆ ವೈಕಲ್ಯ ಸರಿಹೋಗಿಲ್ಲ. ಈ ನಿರಾಸೆ ಮರೆಯಲು ಮನೀಷಾಗೆ ನೆರವಾಗಿದ್ದು ಬ್ಯಾಡ್ಮಿಂಟನ್. ಪ್ಯಾರಿಸ್ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಮನೀಷಾ ಗೆದ್ದ ಕಂಚಿಗೆ ಚಿನ್ನದ ತೂಕವಿದೆ.
ಉತ್ತರ ಪ್ರದೇಶದ ಸಿಮ್ರನ್ ಶರ್ಮ ಅವಧಿಗೆ ಮುನ್ನವೇ ದೃಷ್ಟಿದೋಷ ಹೊತ್ತು ಹುಟ್ಟಿದವರು. ವಿಚಿತ್ರವೆಂದರೆ, ಸಮೀಪದಲ್ಲಿರುವುದನ್ನಷ್ಟೇ ನೋಡಬಲ್ಲ, ಸಿಮ್ರನ್ಗೆ 6 ಅಡಿ ದೂರದಿಂದ ಆಚೆ ಕಾಣುವುದೆಲ್ಲ ಅಂಧಕಾರ. ಅಂಧತ್ವದಿಂದಾಗಿ ನೆರೆಹೊರೆ ಮಕ್ಕಳಿಂದ ಸಹಾನುಭೂತಿ ಬದಲು ನಿಂದನೆ ಅನುಭವಿಸಿದ ಸಿಮ್ರನ್ಗೆ ಮನೆಯಲ್ಲಿ ಅಪ್ಪ-ಅಮ್ಮನ ಸಾಂತ್ವನವೇ ಬಲ. ದುರದೃಷ್ಟಕ್ಕೆ ಅಪ್ಪನೂ ಕಾಯಿಲೆಯಿಂದ ಮರಣಿಸಿದಾಗ ಉಳಿದಿದ್ದು, ಅಮ್ಮ, ಕಷ್ಟ ಮತ್ತು ಸಿಮ್ರನ್ಳ ಅಂಧತ್ವ ಮಾತ್ರ. ಆದರೆ, ಛಲ ಬಿಡದೆ ಶಾಲಾ ಮಟ್ಟದಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡ ಸಿಮ್ರನ್ಗೆ ಯೋಧ ಗಜೇಂದ್ರಸಿಂಗ್ ತರಬೇತುದಾರರಾಗಿ ದೊರೆತ ಬಳಿಕ ಜೀವನವೇ ಬದಲಾಯಿತು. ಇವರಿಬ್ಬರು ಮುಂದೆ ವಿವಾಹವೂ ಆದರು. ಸಿಮ್ರನ್ರಕನಸುಗಳ ರೆಕ್ಕೆಗೆ ಬಲ ತುಂಬಿದ ಗಜೇಂದ್ರ ಸಿಂಗ್, ಹಣಕಾಸು ಹೊಂದಿಸಲು ಜಮೀನು ಮಾರಲೂ ಹಿಂಜರಿಯಲಿಲ್ಲ. ಅದರ ಫಲವೇ ಪ್ಯಾರಿಸ್ನಲ್ಲಿ ಮಹಿಳೆಯರ 200 ಮೀ. ಟಿ12 ವಿಭಾಗದ ಓಟದಲ್ಲಿ ಸಿಮ್ರನ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಬಡವರಿಗೆ ಕಷ್ಟ ಜಾಸ್ತಿ. ಜಮ್ಮು ಕಾಶ್ಮೀರದ ಕಿಷ್ತ್ವಾರ್ ಜಿಲ್ಲೆಯ ಗುಡ್ಡಗಾಡು ಪ್ರದೇಶ ಲೊಯ್ಧರ್ ಎಂಬ ಕುಗ್ರಾಮದಲ್ಲಿ ಕಡುಬಡ ಕುಟುಂಬದಲ್ಲಿ ಜನಿಸಿದವರು ಶೀತಲ್ ದೇವಿ. ಫೋಕೊಮೆಲಿಯ ಎಂಬ ಅಪರೂಪದ ಜನ್ಮದೋಷದಿಂದ ಶೀತಲ್ಗೆ ಎರಡೂ ಕೈಗಳೂ ಬೆಳವಣಿಗೆಯೇ ಆಗದೆ ಕೈಗಳಿಲ್ಲದೆ ಬೆಳೆದವರು. ವಿಧಿ ಕೈಗಳನ್ನು ಕಿತ್ತುಕೊಂಡರೂ, ಏನಾದರೂ ಸಾಧಿಸಲೇಬೇಕು ಎಂಬ ಜೀವನಸ್ಪೂರ್ತಿ ಆ ಯುವತಿಯಲ್ಲಿತ್ತು. ಅದೇ ರೀತಿ ಶೀತಲ್ ತಮ್ಮ ದೈಹಿಕ ವೈಕಲ್ಯ ಮೀರಿ ಬೆಳೆದರು. ಕೇವಲ ಕಾಲುಗಳು ಹಾಗೂ ದೇಹದ ಆಸರೆ ಬಳಸಿಕೊಂಡು ಮರ ಏರುವುದನ್ನು ಕಲಿತರು. ಇಷ್ಟೇ ಅಲ್ಲ, ಭಾರತೀಯ ಸೇನೆ ಹಾಗೂ ದಾನಿಗಳ ನೆರವಿನಿಂದ ಆರ್ಚರಿ ಕ್ರೀಡೆಯಲ್ಲಿ ಪ್ರಾವೀಣ್ಯ ಸಾಧಿಸಿದರು. ಎರಡೂ ಕೈಗಳಿಲ್ಲದಿದ್ದರೂ, ಕೇವಲ ಕಾಲುಗಳು ಹಾಗೂ ಕುತ್ತಿಗೆ ನೆರವಿನಿಂದ ಬಿಲ್ಲಿಗೆ ಬಾಣ ಹೂಡಿ, ಬುಲ್ಸ್ ಐಗೆ ಗುರಿ ಇಡುವ ಚಾತುರ್ಯ ಸಿದ್ಧಿಸಿಕೊಂಡಿರುವ ಶೀತಲ್ ಮೊನ್ನೆ ಪ್ಯಾರಾಲಿಂಪಿಕ್ಸ್ ಕೂಟದ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಎಲ್ಲ ಸರಿ ಇದ್ದೂ, ಗೆಲ್ಲುವ ಮನೋಬಲವೊಂದಿಲ್ಲದೆ, ಸೋತ ಬಳಿಕ ಇಲ್ಲಸಲ್ಲದ ನೆಪಗಳನ್ನು ಹುಡುಕುವ ಜಾಗತಿಕ ಕ್ರೀಡಾಪಟುಗಳ ನಡುವೆ ಶೀತಲ್ ಅಪರೂಪದ ನಕ್ಷತ್ರ.