ವರುಷಕ್ಕೊಮ್ಮೆ ದರ್ಶನ ಕರುಣಿಸುವ ದೇವಿ ಹಾಸನಾಂಬೆ

ವಿಜಯವಾಣಿ (2)
Published on

ವಿಶ್ವದಾದ್ಯಂತ ಜನಜನಿತವಾಗಿರುವ ಹಾಸನಾಂಬೆ ಇಂದಿನಿಂದ (ಅ.9) ಹದಿನೈದು ದಿನಗಳ ಕಾಲ ದರ್ಶನ ನೀಡಲಿದ್ದಾಳೆ. ತಾಯಿಯ ದರ್ಶನಕ್ಕೆ ಲಕ್ಷಾಂತರ ಜನರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಯೋಜಿತ ತಯಾರಿ ಮಾಡಿಕೊಳ್ಳುತ್ತಿದೆ. ತಂತ್ರಜ್ಞಾನಾಧಾರಿತ ಹತ್ತು ಹಲವು ಅನುಕೂಲಗಳುಳ್ಳ ಅದ್ದೂರಿ ವ್ಯವಸ್ಥೆಯಡಿ ದೇವಿ ದರ್ಶನ ಕೊಡಲು ಸಜ್ಜಾಗಿದ್ದಾಳೆ.

ಅತ್ಯಂತ ಮಡಿಯ ದೇವತೆ ಹಾಸನಾಂಬೆ. ಆಕೆಗೆ ನೇಮನಿಷ್ಠೆ, ಸ್ನಾನ, ಉಪವಾಸ, ನೈವೇದ್ಯ ಮತ್ತು ಪೂಜಾ ಕೈಂಕರ್ಯಗಳೆಲ್ಲಾ ಶಿಸ್ತುಬದ್ಧವಾಗಿಯೇ ನಡೆಯಬೇಕು. ಅದೇ ಕಾರಣಕ್ಕೆ ವರುಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆಯುವ ಪದ್ಧತಿ ಬಂದಿರಬಹುದು ಎನ್ನುತ್ತಾರೆ ದೇವಿಯ ಸೇವೆಯನ್ನು ಮಾಡುವ ಅರ್ಚಕರು. ದೇವಿಯು ವರ್ಷದಲ್ಲಿ ಒಂದು ಸರ್ತಿ, ಅಂದರೆ ಆಶ್ವೀಜ ಮಾಸದ ಪೌರ್ಣಮಿ ನಂತರ ಬರುವ ಗುರುವಾರದಂದು ಭಕ್ತರ ದರ್ಶನಕ್ಕೆ ಒದಗಿ ಬರುತ್ತಾಳೆ. ಅಲ್ಲಿಂದ ಕನಿಷ್ಠ 9 ದಿನಗಳು, ಗರಿಷ್ಠ 15 ದಿನಗಳ ಕಾಲ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಬಿದಿಗೆಯ ದಿವಸ ಪುರ ಪ್ರಮುಖರಾದ ಜಿಲ್ಲಾಧಿಕಾರಿ, ತಹಸೀಲ್ದಾರರು, ಶಾಸಕರು, ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗುತ್ತದೆ.

ಸಪ್ತಮಾತೃಕೆಯೇ ಈ ದೇವಿ: ಹಾಸನಾಂಬೆಯನ್ನು ಸಪ್ತಮಾತೃಕೆ ಅಂತಲೂ ಕರೆಯಲಾಗುತ್ತದೆ. ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕೌಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ದೇವತೆಯರು ವಾರಾಣಸಿ ಕಡೆಯಿಂದ ದಕ್ಷಿಣದತ್ತ ವಿಹಾರಕ್ಕೆ ಬಂದಾಗ ಮಲೆನಾಡ ಸೌಂದರ್ಯಕ್ಕೆ ಮಾರುಹೋಗಿ ಇಲ್ಲೇ ನೆಲೆಸಲು ನಿರ್ಧರಿಸಿದರಂತೆ. ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆ, ಚಾಮುಂಡಿ, ವರಾಹಿ ಮತ್ತು ಇಂದ್ರಾಣಿಯರು ನಗರದ ಹೃದಯ ಭಾಗದಲ್ಲಿರುವ ದೇವಿಗೆರೆಯ ಬಳಿ ನೆಲೆಸಿದ್ದಾರೆ. ಇನ್ನು ಹಿರಿಯವಳಾದ ಬ್ರಾಹ್ಮೀದೇವಿಯು ತಾಯಿ ಕೆಂಚಾಂಬ ಎನ್ನುವ ಹೆಸರಿನಲ್ಲಿ ಆಲೂರು ತಾಲೂಕಿನ ಹೊಸಕೋಟೆಯಲ್ಲಿ ನೆಲೆಸಿದ್ದು, ಈಗ ಅದನ್ನು ಕೆಂಚಮ್ಮನ ಹೊಸಕೋಟೆ ಎಂದೇ ಕರೆಯಲಾಗುತ್ತದೆ ಎನ್ನುವುದು ಪೌರಾಣಿಕ ಹಿನ್ನೆಲೆ.

ಐತಿಹಾಸಿಕವಾಗಿ ಈಗಿನ ಹಾಸನ, ಆಗಿನ ಸಿಂಹಾಸನಪುರಿ ಚೋಳರ ಅರಸ ಬುಕ್ಕನಾಯಕನ ಆಳ್ವಿಕೆಯ ನಂತರದಲ್ಲಿ ಕೃಷ್ಣಪ್ಪ ನಾಯಕನ ಪಾಳೆಗಾರಿಕೆಗೆ ಸೇರಿತ್ತು. ಕೃಷ್ಣಪ್ಪ ನಾಯಕ ಒಮ್ಮೆ ಪ್ರಯಾಣ ಹೊರಟಿದ್ದಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತ್ತು. ಅದನ್ನು ಅಪಶಕುನ ಎಂದು ಭಾವಿಸಿ ಆತ ನೊಂದುಕೊಂಡಾಗ ದೇವಿ ಪ್ರತ್ಯಕ್ಷಳಾಗಿ ‘ಖಿನ್ನ ಮನಸ್ಸು ತೊರೆದು, ಈ ಸ್ಥಳದಲ್ಲಿ ಒಂದು ಕೋಟೆ ಕಟ್ಟು, ಒಳಿತಾಗುತ್ತದೆ’ ಅಂದಳಂತೆ. ಆಗ ಕೃಷ್ಣಪ್ಪ ನಾಯಕ ಹಾಗೇ ಮಾಡಿ ‘ಹಾಸನಾಂಬೆ’ ಎಂದು ಕರೆದನೆಂದು ಹಾಸನ ತಾಲೂಕು ಕುದುರುಗುಂಡಿಯಲ್ಲಿರುವ ಕ್ರಿ.ಶ. 1140ರ ವೀರಗಲ್ಲು ಶಿಲಾ ಶಾಸನದಿಂದ ತಿಳಿದು ಬರುತ್ತದೆ.

ಮಾತೃಪ್ರಧಾನ ಸಂಸ್ಕೃಯ ಶಕ್ತಿ ದೇವತೆಯಾದ ಹಾಸನದ ಅಮ್ಮನಿಗೆ ಎಲ್ಲ್ಲ ಧರ್ಮದವರೂ ನಡೆದುಕೊಳ್ಳುತ್ತಾರೆ ಎನ್ನುವುದು ವಿಶೇಷ. ದೇವಿಯ ಬಾಗಿಲು ತೆರೆಯುವ ದಿನ ತಳವಾರ ಮನೆತನದವರು ಹಾಜರಿದ್ದು ದೇವಿಯ ಮುಂದೆ ಗೊನೆಯುಳ್ಳ ಬಾಳೆಕಂದು ನೆಟ್ಟು ದೇವಿಯನ್ನು ಭಜಿಸುತ್ತಾ ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲು ತೆರೆಯುವುದು ರೂಢಿಯಲ್ಲಿದೆ. ವರ್ಷಗಳ ಕಾಲ ಕತ್ತಲಲ್ಲಿ ದರ್ಶನ ನೀಡದೆ ಕೂತ ತಾಯಿಯ ದಿವ್ಯಶಕ್ತಿಯನ್ನು ಹುಲು ಮನುಷ್ಯರು ತಡೆಯಲಾಗುವುದಿಲ್ಲ. ಹಾಗಾಗಿ ಗರ್ಭಗುಡಿಯ ಬಾಗಿಲು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು, ಅದರಿಂದ ಅಪಾಯದ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯದಂತೆ ದೇವಿ ಗುಡಿಯ ಬಾಗಿಲು ತೆಗೆದ ಕೂಡಲೇ ಬಾಳೆ ಕಂದನ್ನು ಬಲಿಯ ಸಂಕೇತವಾಗಿ ಕಡಿದು ನಂತರ ಗುಡಿಯ ಒಳಗೆ ಹೋಗಲಾಗುತ್ತದೆ. ಹಾಸನಮ್ಮನವರಲ್ಲದೇ 21 ಪರಿವಾರ ದೇವತೆಗಳು ಗರ್ಭಗುಡಿಯ ಸುತ್ತ ನೆಲೆಗೊಂಡಿದ್ದಾರೆ.

ಆರದ ದೀಪ : ವಿಶ್ವರೂಪ ಅವತಾರದಲ್ಲಿ ದೇವಿಯು ಕಡೆಯ ದಿನ ದರ್ಶನ ಮುಗಿಸಿ, ಬಾಗಿಲು ಹಾಕುವಾಗ ದೇವಿಯ ಎದುರಲ್ಲಿ ಕಲ್ಲಿನ ಕೊಳಗದಂಥ ದೀಪವನ್ನು ಉರಿಸಲಾಗುತ್ತದೆ. ಆ ದೀಪವು ಮುಂದಿನ ವರ್ಷ ಗುಡಿಯ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಎನ್ನುವುದೇ ದೇವಿಯ ಪವಾಡ. ಆದರೆ ಗುಡಿಯಲ್ಲಿ ಇಟ್ಟ ಅನ್ನ ಹಳಸುವುದಿಲ್ಲ ಎನ್ನುವುದೆಲ್ಲಾ ಕಟ್ಟುಕತೆ. ದೇವಿಯ ಸೇವಕರೇ ಸ್ಪಷ್ಟನೆ ನೀಡಿದಂತೆ, ‘ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆ ದಿವಸ ಬಾಗಿಲು ಮುಚ್ಚುವಾಗ ತಾಯಿಯು ಮೂಲರೂಪದಲ್ಲಿದ್ದು ಮಂಗಳದ್ರವ್ಯ, ಕರಿಮಣಿ ಸರ, ಬಳೆ-ಬಿಚ್ಚೋಲೆ, ಅರಿಶಿಣ- ಕುಂಕುಮದ ಹೊರತಾಗಿ ಅಲ್ಲಿ ನೈವೇದ್ಯ ಪ್ರಸಾದವನ್ನು ಇಡುವುದೇ ಇಲ್ಲ . ವಾಸ್ತವವಾಗಿ ಹೆಸರು ಮತ್ತು ಕಡಲೇ ಬೇಳೆಯಿಂದ ಮಾಡಿದ ಪ್ರಸಾದವನ್ನು ನೈವೇದ್ಯ ಮಾಡಲಾಗುತ್ತದೆ. ಅದನ್ನೇ ಭಕ್ತಾದಿಗಳಿಗೆ ಹಂಚಲಾಗುತ್ತದೆ. ಇದನ್ನೇ ಕಳೆದ ವರ್ಷ ಬಾಗಿಲು ಹಾಕಿದ ಸಂದರ್ಭದಲ್ಲಿ ಒಳಗಿಟ್ಟ ಪ್ರಸಾದ ಎಂದು ತಪ್ಪಾಗಿ ಭಾವಿಸಿದ್ದಾರೆ’

ಡಾ. ಭವ್ಯಾ ನವೀನ್ ಹಾಸನ (ಲೇಖಕರು ಉಪನ್ಯಾಸಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net