ಸನಾತನ ಧರ್ಮದ ಜಾಗತಿಕ ಪ್ರಭಾವ

ವಿಜಯವಾಣಿ (10)
Published on
ಇಂದು ನಾವು ಬಹು ವಿಭಜಿತ ಜಗತ್ತಿನಲ್ಲಿ ಬದುಕುತ್ತಿದ್ದು, ಹಲವಾರು ಕಾರಣಗಳಿಂದಾಗಿ, ವರ್ತಮಾನ ಕಾಲದಲ್ಲಿ ನಮ್ಮ ಜಗತ್ತು ಹೆಚ್ಚೆಚ್ಚು ವಿಭಜಿತವಾಗುತ್ತಲೇ ಇದೆ. ಇಂತಹ ವಿಷಮ ಸನ್ನಿವೇಶದಲ್ಲಿ, ವಿವಿಧತೆಯಲ್ಲಿ ಏಕತೆಯನ್ನು ಕಾಣಬಲ್ಲ ಒಂದು ಸರ್ವಮಾನ್ಯ ಸಾಮಾನ್ಯ ಸಂಸ್ಕೃತಿಯು ಮಾತ್ರ ಎಲ್ಲರನ್ನೂ ಪುನಃ ಒಗ್ಗೂಡಿಸುವ ಮಹತ್ಕಾರ್ಯವನ್ನು ಸಾಧಿಸಬಹುದು. ಭಾರತ ದೇಶದ ಪುರಾತನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯು, ಬಹು ಹಿಂದಿನಿಂದಲೂ ಜಗತ್ತಿನ ಇತಿಹಾಸದಲ್ಲಿ ವಿವಿಧ ದೇಶಗಳ ತಾತ್ತಿ ್ವ ನಿಲುವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಹಲವಾರು ಸಹಸ್ರಮಾನಗಳಿಂದ ಅವಿಚ್ಛಿನ್ನವಾಗಿ ಮುಂದುವರಿಯುತ್ತ ಇಂದಿಗೂ ಜೀವಂತವಾಗಿರುವ ಒಂದು ಪುರಾತನ ಸಂಸ್ಕೃತಿಯೆಂದರೆ, ಭಾರತೀಯ ಸಂಸ್ಕೃತಿ. ಇದು ಅನಂತ ಜ್ಞಾನ ಮತ್ತು ಆಳವಾದ ಸಿದ್ಧಾಂತಗಳ ಆಗರವೂ ಆಗಿದೆ.

‘ಇತಿಹಾಸ’ವೆಂದು ಕರೆಯಲ್ಪಡುವ ರಾಮಾಯಣ ಮಹಾಕಾವ್ಯದ ಸನ್ನಿವೇಶಗಳನ್ನು, ಖಗೋಳಶಾಸ್ತ್ರೀಯ ಲೆಕ್ಕಾಚಾರಗಳೊಂದಿಗೆ ಹೊಂದಿಸಿದಾಗ, ಭಾರತದಲ್ಲಿ ಅಯೋಧ್ಯೆಯಂತಹ ಒಂದು ಪ್ರಬುದ್ಧ ನಾಗರಿಕ ರಾಜ್ಯವು ಸುಮಾರು ಕ್ರಿ.ಪೂ. 7000-8000 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಅದರರ್ಥ, ನಮ್ಮ ದೇಶದ ನಾಗರಿಕತೆಯು, ಆಧುನಿಕ ಚರಿತ್ರೆಯ ಪ್ರಕಾರ ದಾಖಲಿಸಲಾದ ಕ್ರಿ.ಪೂ. 2500-3000 ವರ್ಷಗಳ ಹಿಂದಿನ ‘ಸಿಂಧೂ ಕಣಿವೆ ನಾಗರಿಕತೆ’ಗಿಂತಲೂ ಬಹಳಷ್ಟು ಪ್ರಾಚೀನವಾದದ್ದೆಂದು ತಿಳಿದುಬರುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಇಂಡೋನೇಷ್ಯಾ ಮತ್ತು ಕಾಂಬೋಡಿಯಾವರೆಗೆ, ಪಶ್ಚಿಮದಲ್ಲಿ ಟರ್ಕಿ ಹಾಗೂ ಪೂರ್ವ ಆಫ್ರಿಕಾದವರೆಗೆ ತನ್ನ ಭೌಗೋಳಿಕ ವಿಸ್ತಾರವನ್ನು ಹೊಂದಿದ್ದ ಪ್ರಾಚೀನ ಭಾರತವನ್ನು ಹಲವಾರು ಸಮರ್ಥ ರಾಜರು ಹಲವು ಶತಮಾನಗಳ ಕಾಲ ಆಳಿದ್ದಾರೆ. ಅಲ್ಲದೆ, ಆಗ ಭಾರತವು ಗ್ರೀಸ್ ಹಾಗೂ ಹಲವಾರು ಯುರೋಪ್ ದೇಶಗಳೊಂದಿಗೆ ವಿಪುಲವಾಗಿ ನಡೆಸುತ್ತಿದ್ದ ಸಮುದ್ರ ವ್ಯಾಪಾರವು ಹೊರ ಜಗತ್ತಿನ ಮೇಲೆ ಭಾರತದ ಪ್ರಭಾವವನ್ನು ವೃದ್ಧಿಗೊಳಿಸಿತ್ತು. ಹೀಗೆ, ಜಗತ್ತಿನಲ್ಲಿ ಪುರಾತನವಾದ ಭಾರತೀಯ ಸಂಸ್ಕೃತಿಯು, ಪ್ರಪಂಚದ ಹಲವು ಪ್ರದೇಶಗಳ ಮೇಲೆ ತನ್ನ ಪ್ರಭಾವದ ಅಚ್ಚನ್ನು ಒತ್ತಿತ್ತು.

ಕ್ರಿ. ಪೂ. 2000ದಿಂದಲೂ, ಭಾರತವು ಹಿಂದೂ ಮಹಾಸಾಗರ ವ್ಯಾಪಾರಜಾಲಗಳ ಕೇಂದ್ರವಾಗಿದ್ದು, ಭಾರತೀಯ ವ್ಯಾಪಾರಿಗಳು ಮಸಾಲೆ, ಜವಳಿ ಹಾಗೂ ಅಮೂಲ್ಯ ಹರಳುಗಳನ್ನು ಆಫ್ರಿಕಾ, ಆಗ್ನೇಯ ಏಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ ಸರಬರಾಜು ಮಾಡುತ್ತಿದ್ದರು. ಹೀಗಾಗಿ, ಹಿಂದೂ ಮಹಾಸಾಗರದ ಜಲಮಾರ್ಗಗಳ ಮೂಲಕ ನಡೆಯುತ್ತಿದ್ದ ವ್ಯಾಪಾರವು, ಭಾರತದೊಂದಿಗೆ ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಪೂರ್ವ ಆಫ್ರಿಕಾದ ಸಮುದ್ರತೀರ ನಗರಗಳ ಆರ್ಥಿಕ ಸಂಬಂಧವನ್ನು ಮಾತ್ರವಲ್ಲದೆ, ಸಾಂಸ್ಕೃತಿಕ ಸಂಬಂಧವನ್ನೂ ವೃದ್ಧಿಗೊಳಿಸಿತು.

ಭಾರತೀಯ ಸಾಮಗ್ರಿಗಳೊಂದಿಗೆ, ಭಾರತೀಯ ಸಂಸ್ಕೃತಿಯೂ ಆ ರಾಷ್ಟ್ರಗಳನ್ನು ತಲುಪಿತ್ತು. ಹತ್ತಿ, ಮಸಾಲೆ (ವಿಶೇಷವಾಗಿ ಕರಿಮೆಣಸು) ಮತ್ತು ಜವಳಿಗಳಂತಹ ಭಾರತೀಯ ಉತ್ಪನ್ನಗಳಿಗೆ ಪ್ರಾಚೀನ ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾಗಳಲ್ಲಿ ಬಹು ಬೇಡಿಕೆಯಿತ್ತು. ಬದಲಾಗಿ, ಭಾರತೀಯ ವ್ಯಾಪಾರಿಗಳು ಚಿನ್ನ, ದಂತ ಹಾಗೂ ಇನ್ನಿತರ ಅಮೂಲ್ಯ ವಸ್ತುಗಳನ್ನು ಆಫ್ರಿಕಾ ದೇಶಗಳಿಂದ ಆಮದು ಮಾಡುವ ಮೂಲಕ ಪರಸ್ಪರ ಆರ್ಥಿಕ ಅವಲಂಬನೆಯನ್ನು ಬಲಪಡಿಸಿದ್ದರು. ದೇಶ-ದೇಶಗಳ ನಡುವೆ ವ್ಯಾಪಾರಿಗಳ ಹಾಗೂ ಪ್ರವಾಸಿ ಇತಿಹಾಸಕಾರರ ಸಂಚಾರವು ಧಾರ್ವಿುಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೂ ಅನುವು ಮಾಡಿಕೊಟ್ಟಿತ್ತು.

ಸನಾತನ ಧರ್ಮವು ಬೌದ್ಧಮತದ ಮೂಲಕ ಪೂರ್ವ-ಪಶ್ಚಿಮ ದೇಶಗಳಲ್ಲಿ, ಮುಖ್ಯವಾಗಿ ಆಗ್ನೇಯ ಹಾಗೂ ಮಧ್ಯ ಏಷ್ಯಾಗಳಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿತು. ಮುಖ್ಯವಾಗಿ ಸಾಮ್ರಾಟ ಅಶೋಕನ ಆಳ್ವಿಕೆಯ ಸಮಯದ ಭಾರತೀಯ ಬೌದ್ಧಭಿಕ್ಷುಗಳು ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಬೌದ್ಧಧರ್ಮವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೌದ್ಧ ಧರ್ಮವು ಪಸರಿಸಿದಂತೆ ಬೌದ್ಧವಿಹಾರಗಳು, ಸ್ತೂಪಗಳು ಮತ್ತು ಬೌದ್ಧಕಲೆಗಳೂ ಅಲ್ಲಿ ಅಸ್ತಿತ್ವಕ್ಕೆ ಬಂದವು. ಹೀಗೆ, ಆ ಪ್ರದೇಶಗಳಲ್ಲಿ ಭಾರತೀಯ ಆಧ್ಯಾತ್ಮಿಕ ಪರಂಪರೆ ನೆಲೆಯೂರಿತು.

ಆಗ್ನೇಯ ಏಷ್ಯಾದಲ್ಲಿ ಬೌದ್ಧಧರ್ಮದ ಪ್ರಭಾವವು ಮಾತ್ರವಲ್ಲದೆ, ಹಿಂದೂಧರ್ಮದ ಮತ್ತು ಅದರ ಸಂಸ್ಕೃತಿ ಮತ್ತು ಕಲೆಗಳ ನೇರ ಪ್ರಭಾವವೂ ವ್ಯಾಪಕವಾಗಿ ಕಂಡುಬರುತ್ತದೆ. ಭಾರತೀಯ ವ್ಯಾಪಾರಿಗಳು ಮತ್ತು ಪುರೋಹಿತ-ಅರ್ಚಕರು ಅಲ್ಲಿಯ ಸ್ಥಳೀಯ ಜನತೆಗೆ ತಮ್ಮ ಧರ್ಮ, ಸಂಸ್ಕೃತಿ ಮತ್ತು ಕಲೆಗಳನ್ನು ಪರಿಚಯಿಸಿ ಪಸರಿಸಿದರು. ಆಗ್ನೇಯ ಏಷ್ಯಾ ರಾಷ್ಟ್ರಗಳ ರಾಜರು ಹಿಂದೂಧರ್ಮವನ್ನು ಸ್ವೀಕರಿಸಿದುದು, ಇಂಡೋನೇಷ್ಯಾ (ಬಾಲಿ), ಕಾಂಬೋಡಿಯಾ (ಆಂಗ್ಕೋರ್ ವ್ಯಾಟ್) ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಹಿಂದೂ-ಬೌದ್ಧ ಸಮನ್ವಯ ಸಮಾಜದ ಉಗಮಕ್ಕೆ ಎಡೆ ಮಾಡಿಕೊಟ್ಟಿತು. ಕಾಂಬೋಡಿಯಾದ ಆಂಗ್ಕೋರ್ ವ್ಯಾಟ್ ಪ್ರದೇಶದಲ್ಲಿರುವ ಬೃಹತ್ ಹಿಂದೂ ದೇವಾಲಯ ಸಮುಚ್ಚಯ ಮತ್ತು ಇಂಡೋನೇಷ್ಯಾದ ಪ್ರಂಬನನ್ ದೇವಾಲಯಗಳಂತಹ ಹಲವು ಪ್ರಾಚೀನ ಹಿಂದೂ ದೇವಾಲಯಗಳು, ಅಲ್ಲಿಯ ಸಮಾಜದ ಮೇಲೆ ಭಾರತೀಯ ಧಾರ್ವಿುಕ-ಸಾಂಸ್ಕೃತಿಕ ಪ್ರಭಾವಕ್ಕೆ ಸಾಕ್ಷಿಯಾಗಿ ಇಂದಿಗೂ ನಿಂತಿವೆ.

ಅಲ್ಲದೆ, ಸನಾತನ ಧರ್ಮದ ಧಾರ್ವಿುಕ ಸಿದ್ಧಾಂತಗಳು ಆ ಪ್ರದೇಶಗಳ ನೈತಿಕ ಹಾಗೂ ಸಾಮಾಜಿಕ ವ್ಯವಸ್ಥೆಗೆ ದಾರಿದೀಪಗಳಾದವು. ಸನಾತನ ಧರ್ಮದ ತತ್ವಗಳಾದ ಧರ್ಮ, ಕರ್ಮ ಮತ್ತು ಅಹಿಂಸೆಗಳು ಪ್ರಪಂಚದ ದಕ್ಷಿಣಾರ್ಧ ದೇಶಗಳಲ್ಲಿ ಪಸರಿಸಿದವಲ್ಲದೆ, ಅಲ್ಲಿನ ಸಂಸ್ಕೃತಿ ಹಾಗೂ ನಂಬಿಕೆಗಳ ಮೇಲೆ ಮೇಲೆ ಅಗಾಧ ಪ್ರಭಾವ ಬೀರಿವೆ. ಭಾರತೀಯ ತಾತ್ತಿ ್ವಕ ಸಂಪ್ರದಾಯಗಳಾದ ವೇದಾಂತ ಹಾಗೂ ಜೈನಧರ್ಮಗಳು ಆಗ್ನೇಯ ಏಷ್ಯಾದಿಂದ ಹಿಡಿದು ಮಧ್ಯ ಏಷ್ಯಾದವರೆಗೆ ಹಲವಾರು ಪ್ರದೇಶಗಳ ಆಧ್ಯಾತ್ಮಿಕ ಹಾಗೂ ನೈತಿಕ ಚೌಕಟ್ಟನ್ನು ರೂಪಿಸಿವೆ.

ಭಾರತೀಯ ಕಲೆ, ವಾಸ್ತುಶಿಲ್ಪ ಹಾಗೂ ಭಾಷೆಗಳು ಆ ಪ್ರದೇಶಗಳಲ್ಲಿನ ಭಾಷೆ ಹಾಗೂ ಸಂಸ್ಕೃತಿಗಳ ಮೇಲೆ ಬೀರಿದ ಪ್ರಭಾವವನ್ನು ಇಂದಿಗೂ ಕಾಣಬಹುದು. ಉದಾಹರಣೆಗೆ, ಭಾರತೀಯ ವಾಸ್ತುಶಿಲ್ಪ ಶೈಲಿ ಹಾಗೂ ಆಗ್ನೇಯ ಏಷ್ಯಾದ ಹಲವಾರು ದೇವಾಲಯಗಳ ವಾಸ್ತುಶಿಲ್ಪ ಶೈಲಿಗಳ ನಡುವೆ ಸಾಕಷ್ಟು ಸಾಮ್ಯತೆ ಇದೆ. ಅದೇ ರೀತಿ ಹಿಂದೂ ಹಾಗೂ ಬೌದ್ಧ ಸಂಪ್ರದಾಯಗಳ ಆಧಾರದಲ್ಲಿ ನಿರ್ವಿುಸಲ್ಪಟ್ಟ ಕಾಂಬೋಡಿಯಾ ದೇಶದ ಆಂಗ್ಕೋರ್ ವ್ಯಾಟ್​ನಲ್ಲಿರುವ ಮೂಲತಃ ವಿಷ್ಣು ದೇವಾಲಯ ಮತ್ತು ಇಂಡೋನೇಷ್ಯಾದ ಬೋರೋಬುದುರ್ ದೇವಾಲಯಗಳು ಭಾರತೀಯ ವಾಸ್ತುಶಿಲ್ಪ ವಿನ್ಯಾಸ ಮತ್ತು ಧಾರ್ವಿುಕ ಸಾಂಕೇತಿಕತೆಗೆ ಸಾಕ್ಷಿಗಳಾಗಿವೆ.

ಸಂಸ್ಕೃತ ಭಾಷೆ ಮತ್ತು ಅದರ ಉಪಭಾಷೆಗಳು ಆಗ್ನೇಯ ಏಷ್ಯಾ ದೇಶಗಳ ಬರವಣಿಗೆ ವ್ಯವಸ್ಥೆ ಮೇಲೆ ಪ್ರಭಾವವನ್ನು ಬೀರಿವೆ. ಉದಾಹರಣೆಗೆ, ಥಾಯ್ಲೆಂಡ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ದೊರೆತಿರುವ ಪ್ರಾಚೀನ ಶಾಸನಗಳಲ್ಲಿ ಭಾರತೀಯ ಬ್ರಾಹ್ಮೀ ಹಾಗೂ ಪಲ್ಲವ ಲಿಪಿಗಳ ಪ್ರಭಾವವು ಎದ್ದುಕಾಣುತ್ತದೆ. ಅಲ್ಲದೆ, ಅಲ್ಲಿಯ ಪ್ರಾದೇಶಿಕ ಭಾಷೆಗಳ ವಿಕಾಸ ಮತ್ತು ಆಡಳಿತ ವ್ಯವಸ್ಥೆಯ ಪರಿಭಾಷೆಯ ಮೇಲೂ ಸಂಸ್ಕೃತದ ಪ್ರಭಾವವನ್ನು ನೋಡಬಹುದಾಗಿದೆ. ಮುಖ್ಯವಾಗಿ, ಅಲ್ಲಿಯ ಧಾರ್ವಿುಕ ಗ್ರಂಥಗಳಲ್ಲಿ ಮತ್ತು ಅರಸೊತ್ತಿಗೆಯ ಬಿರುದುಗಳಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ಕಾಣಬಹುದು.

ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು, ಆಗ್ನೇಯ ಏಷ್ಯಾ ದೇಶಗಳ ಸಾಂಸ್ಕೃತಿಕ ತಳಹದಿಯಾಗಿ ರೂಪುಗೊಂಡು, ಅಲ್ಲಿನ ಪ್ರಾದೇಶಿಕ ಜಾನಪದ, ನಾಟಕ ಮತ್ತು ಸಾಹಿತ್ಯಗಳ ಕಥಾವಸ್ತುಗಳಾದವು. ಅಲ್ಲಿಯ ರಾಜರು ತಮ್ಮ ಆಳ್ವಿಕೆಯನ್ನು ಪ್ರಜೆಗಳ ದೃಷ್ಟಿಯಲ್ಲಿ ನ್ಯಾಯಸಮ್ಮತವಾಗಿಸುವ ಉದ್ದೇಶದಿಂದ ಈ ಮಹಾಕಾವ್ಯಗಳ ರಾಜಮನೆತನಗಳ ಆದರ್ಶವನ್ನು ಅಂಗೀಕರಿಸಿದರು, ಹಾಗೂ ಅಲ್ಲಿಯ ಸಾಹಿತ್ಯ ಮತ್ತು ನೃತ್ಯ-ನಾಟಕ ಕಲೆಗಳಲ್ಲಿ ಇದನ್ನೇ ಪ್ರೋತ್ಸಾಹಿಸಿದರು. ಉದಾಹರಣೆಗೆ, ಥಾಯ್ಲೆಂಡ್​ನ ‘ರಾಮಕೀನ್’ ಮತ್ತು ‘ಜಾವನೀಸ್’ ನೆರಳು-ಗೊಂಬೆಯಾಟಗಳಲ್ಲಿ ಇದರ ಪ್ರಭಾವವು ನಿಚ್ಚಳವಾಗಿ ತೋರುತ್ತದೆ.

ಕಳೆದ ಎರಡು-ಮೂರು ಶತಮಾನಗಳ ಐರೋಪ್ಯ ವಸಾಹತುಶಾಹಿ ಕಾಲದಲ್ಲಿ, ಪೂರ್ವ ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಕ್ಯಾರಿಬಿಯನ್ ಪ್ರದೇಶಗಳಲ್ಲಿ ನೆಲೆಸಿದ ಭಾರತೀಯ ವ್ಯಾಪಾರಿಗಳು ಮತ್ತು ಕಾರ್ವಿುಕರು, ಅಲ್ಲಿನ ಸ್ಥಳೀಯ ಆರ್ಥಿಕತೆ, ಸಂಸ್ಕೃತಿ ಮತ್ತು ಆಹಾರ ಪದ್ಧತಿಗೆ ವಿಪುಲ ಕೊಡುಗೆಯನ್ನು ನೀಡಿ, ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸಿದರು. 19 ಹಾಗೂ 20ನೆಯ ಶತಮಾನಗಳಲ್ಲಿ ಮೊರೀಷಿಯಸ್, ಟ್ರಿನಿಡಾಡ್, ಗಯಾನಾ, ದಕ್ಷಿಣ ಆಫ್ರಿಕಾ ಮತ್ತು ಫಿಜಿಗಳಂತಹ ದೇಶಗಳಿಗೆ ವಲಸೆ ಹೋದ ಭಾರತೀಯ ಕಾರ್ವಿುಕರು, ಅಲ್ಲಿ ಭಾರತೀಯ ಸಮುದಾಯಗಳ ಉಗಮ ಮತ್ತು ಸಾಂಸ್ಕೃತಿಕ ಪ್ರಸಾರಕ್ಕೆ ಕಾರಣರಾದರು.

ಪ್ರಪಂಚದ ದಕ್ಷಿಣಾರ್ಧ ದೇಶಗಳಲ್ಲಿ ನೆಲೆಗೊಂಡ ಭಾರತೀಯರು, ಆ ಪ್ರದೇಶಗಳಿಗೂ ತಮ್ಮ ಆಹಾರ ಪದ್ಧತಿಗಳು, ದೀಪಾವಳಿ ಹಬ್ಬದ ಆಚರಣೆಗಳಂತಹ ಹಲವು ಧಾರ್ವಿುಕ ಆಚರಣೆಗಳು ಮತ್ತು ದೇವಾಲಯಗಳ ನಿರ್ಮಾಣ ಇತ್ಯಾದಿಗಳನ್ನು ಕೊಂಡೊಯ್ದರು. ಇವೆಲ್ಲವೂ ಇಂದಿಗೂ ಅಲ್ಲಿಯ ಸಮುದಾಯಗಳ ಸಾಂಸ್ಕೃತಿಕ ಚೌಕಟ್ಟಿನ ಒಂದು ಭಾಗವಾಗಿವೆ. ಇಂತಹ ಸಮ್ಮಿಶ್ರ ಸಂಸ್ಕೃತಿಯು ಮೊರೀಷಿಯಸ್, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಎದ್ದು ಕಾಣುತ್ತದೆ. ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿಯೂ, ಅಹಿಂಸೆಯಂತಹ ಸನಾತನ ಧರ್ಮದ ಆದರ್ಶಗಳು ಜಗತ್ತಿನಾದ್ಯಂತ ಹಲವಾರು ದೇಶಗಳ ನಾಯಕರ ಮೇಲೆ ಪ್ರಭಾವ ಬೀರಿವೆ. ಮುಖ್ಯವಾಗಿ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾರಂಭಿಸಿದ ಅಹಿಂಸಾತ್ಮಕ ಚಳವಳಿ, ಸತ್ಯಾಗ್ರಹವು ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಅಲ್ಲಿಯ ನಾಯಕರಿಗೆ ಸ್ಪೂರ್ತಿಯನ್ನು ನೀಡಿ, ಅಲ್ಲಿಯೂ ಇಂತಹ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳು ನಡೆದು ಜಯಶಾಲಿಯಾಗಿವೆ. ಇವುಗಳ ಪೈಕಿ, ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಮತ್ತು ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್​ರವರು ಮುನ್ನಡೆಸಿದ ಅಹಿಂಸಾತ್ಮಕ ಚಳವಳಿಗಳು ಸ್ಪೂರ್ತಿದಾಯಕವಾಗಿವೆ.

19 ಹಾಗೂ 20ನೇ ಶತಮಾನಗಳಲ್ಲಿ ಭಾರತೀಯ ಆಧ್ಯಾತ್ಮಿಕತೆಯು, ಸ್ವಾಮಿ ವಿವೇಕಾನಂದರಿಂದ ಪ್ರಾರಂಭಿಸಿ ಹಲವು ಆಧ್ಯಾತ್ಮಿಕ ನಾಯಕರ ಪ್ರಭಾವದಿಂದಾಗಿ ದೂರದ ದೇಶಗಳಲ್ಲಿ ನೆಲೆಯೂರಿತು. ಭಾರತೀಯ ಆಧ್ಯಾತ್ಮಿಕ ಸಿದ್ಧಾಂತಗಳ ಆಧಾರದಲ್ಲಿ, ಸ್ಥಾಪಿಸಲ್ಪಟ್ಟ ಥಿಯೊಸಾಫಿಕಲ್ ಸೊಸೈಟಿಯು ಪಶ್ಚಿಮ ಮತ್ತು ಜಾಗತಿಕ ದಕ್ಷಿಣಾರ್ಧ ದೇಶಗಳಲ್ಲಿ ವ್ಯಾಪಕವಾಗಿ ಬೆಳೆದು, ಅಲ್ಲಿಯ ಬುದ್ಧಿಜೀವಿಗಳಿಗೆ ಭಾರತೀಯ ಧರ್ಮದ ಆಧ್ಯಾತ್ಮಿಕ ತತ್ವಗಳನ್ನು ತಲುಪಿಸಿತು. ಇಂತಹ ಚಳವಳಿಗಳಿಂದಾಗಿ ಇಂದು ಭಾರತೀಯ ಧರ್ಮ ಮತ್ತು ಆಧ್ಯಾತ್ಮಿಕತೆಗಳು ಬಹು ದೇಶಗಳಲ್ಲಿ ಜನಪ್ರಿಯವಾಗಿವೆ.

ಸನಾತನ ಧರ್ವಧಾರಿತ ಭಾರತೀಯ ವಿಚಾರಗಳು ಇಂದು ಹೆಚ್ಚುಹೆಚ್ಚು ವಿಶ್ವಮಾನ್ಯತೆ ಪಡೆಯುತ್ತಿರುವುದು ವ್ಯಾಪಕವಾಗಿ ಗೋಚರವಾಗುತ್ತಿದೆ. ಪ್ರಾಚೀನ ಧರ್ಮದಿಂದ ಹಿಡಿದು ನವ ಸಾಮಾಜಿಕ ವ್ಯವಸ್ಥೆಗಳವರೆಗೂ, ಪ್ರಾಚೀನ ಸಂಪ್ರದಾಯಗಳಿಂದ ಆಧುನಿಕ ಸಂಸ್ಕೃತಿಯವರೆಗೂ ಮತ್ತು ವೇದಾಂತದಂತಹ ಆಳವಾದ ಆಧ್ಯಾತ್ಮಿಕ ಸಿದ್ಧಾಂತಗಳಿಂದ ಹಿಡಿದು ಪ್ರಸ್ತುತ ಜಾಗತಿಕವಾಗಿ ಅಂಗೀಕರಿಸಲ್ಪಟ್ಟರುವ ಆಯುರ್ವೆದ ಮತ್ತು ಯೋಗಾಭ್ಯಾಸಗಳವರೆಗೂ, ಭಾರತೀಯ ವಿಚಾರಧಾರೆಯು ಮಾನವತೆಯ ಜೀವನವನ್ನು ಶ್ರೀಮಂತಗೊಳಿಸಿದೆ. ನಮ್ಮ ದೇಶದ ಇಂತಹ ‘ಮೃದುಶಕ್ತಿ’ಯ ಆಧಾರದಲ್ಲಿ ಇಡೀ ಜಗತ್ತನ್ನು ಒಂದು ಕುಟುಂಬವನ್ನಾಗಿ ಒಗ್ಗೂಡಿಸುವ ದಿಶೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ‘ವಸುಧೈವ ಕುಟುಂಬಕಮ್ ಒಂದು ಜಗತ್ತು, ಒಂದು ಕುಟುಂಬ’ - ಈ ಮಹಾನ್ ಆದರ್ಶವು ಭಾರತೀಯ ವಿಚಾರಧಾರೆಯೇ ಅಲ್ಲವೇ?

ನಮ್ಮ ಪೂರ್ವಜರು ‘ಕೃಣ್ವಂತೋ ವಿಶ್ವಂ ಆರ್ಯಮ್ (ಋಗ್ವೇದ 9.63.5)- ‘ಇಡೀ ವಿಶ್ವದ ಉದಾತ್ತೀಕರಣವಾಗಲಿ!’ ಎಂಬ ಘೊಷಣೆಯನ್ನು ಜಗತ್ತಿಗೆ ನೀಡಿದಾಗ, ಅವರು ಸನಾತನ ಧರ್ಮದ ಸಾರಸರ್ವಸ್ವವಾದ ಭಾರತೀಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೃದುಶಕ್ತಿಯ ಬಗ್ಗೆಯೇ ಉಲ್ಲೇಖಿಸಿದ್ದಾರೆ. ಇಡೀ ಜಗತ್ತು ಸನಾತನ ಧರ್ಮದ ಆಶ್ರಯದಡಿಯಲ್ಲಿ ಒಗ್ಗೂಡಿ ನಲಿಯುವ ದಿನವು ಬಹು ದೂರವಿಲ್ಲವೆಂಬುದು ನನ್ನ ದೃಢ ನಂಬಿಕೆ. ಅದು ಎಷ್ಟು ಬೇಗ ಸಂಭವಿಸುತ್ತದೆಯೆಂಬುದು, ಭಾರತೀಯರಾದ ನಾವು, ಎಷ್ಟು ಬೇಗ ನಮ್ಮ ತಾಯಿಬೇರಾದ ಸನಾತನ ಧರ್ಮದ ಸಂಸ್ಕೃತಿಯನ್ನು ಪುನಃ ಆಲಂಗಿಸಿ, ಆಚರಿಸಿ, ಅಮೃತಪುತ್ರರಾಗಿ ಆನಂದದಿಂದ ಮೆರೆಯುತ್ತೇವೆಯೆಂಬುದರ ಮೇಲೆ ಅವಲಂಬಿತವಾಗಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net