ಸಂಪಾದಕೀಯ: ರೈತರ ಹಿತಕ್ಕೆ ಆದ್ಯತೆ ನೀಡಿ

untitled-design-3-690b8e9a494e2
Published on

ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಕಬ್ಬು ಕೃಷಿಕರ ಪ್ರತಿಭಟನೆ ತೀವ್ರಗೊಂಡಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ, ಧರಣಿ ನಡೆಸುತ್ತಿದ್ದಾರೆ. ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ವಿವಿಧ ಕನ್ನಡ ಪರ ಸಂಘಸಂಸ್ಥೆಗಳು ಮತ್ತು ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ಕೂಡ ಬೆಂಬಲ ನೀಡಿರುವುದರಿಂದ ಈ ಚಳವಳಿ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಕಬ್ಬಿಗೆ ಪ್ರತಿ ಟನ್​ಗೆ 3,500 ರೂ. ಬೆಂಬಲ ಬೆಲೆ ಘೊಷಿಸಬೇಕು ಎಂಬುದು ಪ್ರತಿಭಟನಕಾರರ ಮುಖ್ಯ ಬೇಡಿಕೆ. ಈಗ ಸಕ್ಕರೆ ಕಾರ್ಖಾನೆಗಳು 2,700 ರೂ.ಗಳಿಂದ 3,200 ರೂ.ವರೆಗೆ ಮಾತ್ರ ನೀಡುತ್ತಿವೆ. ಬೀಜ, ಗೊಬ್ಬರ, ನೀರು ಮುಂತಾಗಿ ಕೃಷಿಗೆ ಇನ್​ಪುಟ್ ವೆಚ್ಚ ಹೆಚ್ಚಿರುವುದರಿಂದ ಈ ದರ ಏನೇನೂ ಸಾಲದು ಎಂಬುದು ರೈತರ ವಾದ.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಬ್ಬಿನ ಬೆಂಬಲ ಬೆಲೆ ಕಡಿಮೆ ಇರುವುದು ಅಂಕಿಸಂಖ್ಯೆಗಳಿಂದ ದೃಢಪಡುತ್ತದೆ. 2025-26ಕ್ಕೆ ಕೇಂದ್ರದ ಫೇರ್ ಆಂಡ್ ರೆಮ್ಯುನರೇಟಿವ್ ಪ್ರೖೆಸ್ (ಎಫ್​ಆರ್​ಪಿ) ಮಾನದಂಡದ ಪ್ರಕಾರ, ಮಹಾರಾಷ್ಟ್ರದಲ್ಲಿ 3,550 ರೂ. ಇದ್ದು, ಅಲ್ಲಿಗೆ ಕೆಲವು ರೈತರು ಬೆಳೆ ರವಾನಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ 3,600-3,700 ರೂ. ಇದೆ. ಪಂಜಾಬ್, ಉತ್ತರಾಖಂಡ ಸಹ ಹೆಚ್ಚು ನೀಡುತ್ತಿವೆ. ಹಾಗಾಗಿ ಕರ್ನಾಟಕದ ರೈತರೂ ಹೆಚ್ಚಿನ ಬೆಲೆಗೆ ಆಗ್ರಹಿಸುತ್ತಿದ್ದು, ಆ ಬೇಡಿಕೆ ನ್ಯಾಯಯುತವಾಗಿದೆ. ಹಲವಾರು ಕಾರ್ಖಾನೆಗಳು ಅಷ್ಟು ಮೊತ್ತ ನೀಡಲು ಒಪ್ಪುತ್ತಿಲ್ಲ. ಕೆಲವು ಕಾರ್ಖಾನೆಗಳು 3300 ರೂ.ವರೆಗೆ ನೀಡಲು ಸಹಮತ ವ್ಯಕ್ತಪಡಿಸುತ್ತಿವೆ. ಇದಕ್ಕೆ ರಾಜ್ಯ ಸರ್ಕಾರ 200 ರೂ. ಸೇರಿಸಿ, ಒಟ್ಟು 3500 ರೂ. ಮಾಡುವಂತೆ ವಿರೋಧ ಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿಯೇ ಇವೆ. ಅವುಗಳ ಆಡಳಿತ ಮಂಡಳಿಗಳನ್ನು ರೈತರ ಹಿತಕ್ಕೆ ಪೂರಕವಾಗಿ ಮಣಿಸುವ ಎದೆಗಾರಿಕೆಯನ್ನು ಸರ್ಕಾರ ತೋರಬೇಕಿದೆ.

ಈ ಹೋರಾಟ ರೈತರ ಆರ್ಥಿಕ ಸಮಸ್ಯೆಗಳನ್ನು ಮಾತ್ರವಲ್ಲ, ರಾಜಕೀಯ ವ್ಯವಸ್ಥೆಯ ವೈಫಲ್ಯಕ್ಕೂ ಸಾಕ್ಷಿಯಾಗಿದೆ. ಕಬ್ಬು ಕೃಷಿಕರಿಂದ ರಾಜ್ಯದ ಆರ್ಥಿಕತೆಗೂ ಸಾಕಷ್ಟು ಕೊಡುಗೆ ಸಿಗುತ್ತಿರುವುದನ್ನು ಸರ್ಕಾರ ಮರೆಯಬಾರದು. ಆರ್ಥಿಕ ಸಂಕಷ್ಟದಿಂದ ಒಬ್ಬ ರೈತ ಈಗಾಗಲೇ ಪ್ರಾಣ ತೆತ್ತಿರುವ ಘಟನೆಯೂ ನಡೆದಿದ್ದು, ಈ ವಿಷಯವನ್ನು ಈಗಲಾದರೂ ರಾಜ್ಯ ಸರ್ಕಾರ ಸಹಾನುಭೂತಿಯ ದೃಷ್ಟಿಯಿಂದ ನೋಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ರೈತರ ಒಕ್ಕೊರಲ ಕೂಗಿಗೆ ಕಿವಿಗೊಡಬೇಕಾಗಿದೆ. ರೈತರ ಹಿತ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net