ಇಂದು ವಿಶ್ವ ಆಹಾರ ದಿನ: ಮನೆ ಆಹಾರಕ್ಕೆ ಇರಲಿ ಆದ್ಯತೆ

Experts opinion
Published on

ಕರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಗೂ ಮನೆಯಲ್ಲಿ ತಯಾರಿಸುವ ಆಹಾರ ಪದ್ಧತಿ ಮತ್ತೆ ಮುನ್ನೆಲೆಗೆ ಬಂದಿದೆ. ಇದಲ್ಲದೆ, ರಾಗಿ, ಆರ್ಕ, ನವಣೆ, ಸಾವೆಯಂತಹ ಸಿರಿಧಾನ್ಯಗಳ ಬಳಕೆಯೂ ಹೆಚ್ಚಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ರೋಗನಿರೋಧಕ ಶಕ್ತಿ ಅತೀ ಮುಖ್ಯವಾಗಿದ್ದು, ಇದನ್ನು ಹೆಚ್ಚಿಸುವಲ್ಲಿ ಸಮರ್ಪಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ.

ಸಮತೋಲಿತ ಆಹಾರ ಹೇಗಿರಬೇಕು?: ಪೌಷ್ಟಿಕಾಂಶ ಇದೆ ಎಂದು ಒಂದೇ ಆಹಾರವನ್ನು ಅತಿಯಾಗಿ ಸೇವಿಸಬಾರದು. ಎಲ್ಲ ಬಗೆಯ ಹಣ್ಣು, ತರಕಾರಿ, ಸೋಪ್ಪು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹಾಲಿನ ಉತ್ಪನ್ನಗಳು (ಮಿತವಾಗಿರಲಿ) ಮೊಟ್ಟೆ, ಮಾಂಸ ಈ ಎಲ್ಲವನ್ನು ಸಮತೋಲಿತವಾಗಿ ಸೇವಿಸಬೇಕು. ಊಟದ ತಟ್ಟೆಯಲ್ಲಿ ಅರ್ಧ ಭಾಗ ತರಕಾರಿ ಇರಬೇಕು. ಅದರಲ್ಲಿ ಕಾಲು ಭಾಗ ಹಸಿ ತರಕಾರಿ, ಕಾಲು ಭಾಗ ಪ್ರೋಟೀನ್ ಅಂಶ ಇರುವ ಬೇಳೆಕಾಳುಗಳು ಇರಬೇಕು. ಉಳಿದಂತೆ ರಾಗಿ ಅಥವಾ ಗೋಧಿ ಹಾಗೂ ಅಕ್ಕಿ ಮತ್ತು ಹಾಲಿನ ಉತ್ಪನ್ನಗಳನ್ನು ಹೊಂದಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ತಜ್ಞರು ಏನೆನ್ನುತ್ತಾರೆ?

ಕೋವಿಡ್ ವಿರುದ್ಧದ ಹೋರಾಟ ದಲ್ಲಿ ರೋಗನಿರೋಧಕ ಶಕ್ತಿಯೊಂದಿಗೆ ದೇಹವನ್ನು ಸದೃಢವಾಗಿಟ್ಟು ಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ತರಕಾರಿ, ಹಣ್ಣುಗಳು, ಒಣಹಣ್ಣುಗಳು, ಹಾಲಿನ ಉತ್ಪನ್ನ ಸೇರಿ ಪೌಷ್ಟಿಕಾಂಶ ಉಳ್ಳ ಸಮತೋಲಿತ, ರಾಸಾಯನಿಕರಹಿತ ಆಹಾರ ಸೇವಿಸಬೇಕು. ಗರ್ಭಿಣಿಯರು ಕಬ್ಬಿಣಾಂಶ, ಪೋ›ಟೀನ್​ಯುುಕ್ತ ಆಹಾರ ತೆಗೆದುಕೊಳ್ಳಬೇಕು. ತಂಪು ಪಾನೀಯಗಳು ಹಾಗೂ ಸಕ್ಕರೆಮಿಶ್ರಿತ ಹಣ್ಣಿನ ಜ್ಯೂಸ್ ಬದಲಿಗೆ ಹಾಗೆಯೇ ಹಣ್ಣು ತಿನ್ನಬೇಕು. ಎಳನೀರು ಕುಡಿಯಬಹುದು. ವೃದ್ಧರು ಹಾಗೂ ಬಹು ಆರೋಗ್ಯ ಸಮಸ್ಯೆ ಹೊಂದಿರುವವರು ಮಿತ ಆಹಾರ ಸೇವಿಸಬೇಕು. ಕ್ಯಾನ್ಸರ್, ಮೂತ್ರಪಿಂಡ ತೊಂದರೆ ಇತ್ಯಾದಿ ಆರೋಗ್ಯ ಸಮಸ್ಯೆ ಇರುವವರು ಸಮತೋಲನ ಆಹಾರ ಸೇವಿಸಬೇಕು.

| ಉಷಾ ಧರ್ವನಂದ್ ಆಹಾರ ತಜ್ಞೆ, ವಿಕ್ರಂ ಆಸ್ಪತ್ರೆ

ಪ್ರಸ್ತುತ ಎದುರಾಗಿರುವ ಸಾಂಕ್ರಾಮಿಕ ಸಂದರ್ಭದಲ್ಲಿ ಆಹಾರ ಮತ್ತು ಶುದ್ಧ ನೀರು ಅತ್ಯಂತ ಮಹತ್ವ ಪಡೆದುಕೊಂಡಿವೆ. ಈ ವೇಳೆ ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ. ನವಜಾತ ಶಿಶುಗಳಿಗೆ ತಾಯಿಹಾಲು ತಪ್ಪಿಸಬಾರದು. 6 ತಿಂಗಳ ನಂತರ ರಾಗಿ ಸರಿ, ಬೇಳೆಗಳ ಮಾಲ್ಟ್​ ಜತೆಗೆ ಬೇಯಿಸಿದ ತರಕಾರಿ ನೀಡುವುದು ಉತ್ತಮ. ದೊಡ್ಡ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಶುದ್ಧ ಹಾಗೂ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳನ್ನು ಜಂಕ್​ಫುಡ್​ನಂತಹ ಹೊರಗಿನ ಆಹಾರ ಸೇವನೆಯಿಂದ ದೂರವಿಡಬೇಕು. ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ನೀಡಬೇಕು.

| ಡಾ. ಲಕ್ಷ್ಮೀಪತಿ ಮಕ್ಕಳ ತಜ್ಞ

ಮಾರುಕಟ್ಟೆಯಲ್ಲಿ ಬೇಳೆಕಾಳುಗಳು, ಹಣ್ಣು ತರಕಾರಿ ಆದಿಯಾಗಿ ಎಲ್ಲವೂ ಬಣ್ಣಗಳಿಂದ ಕೂಡಿದ್ದು ಆಕರ್ಷಕವಾಗಿ ಕಾಣುತ್ತವೆ. ಬಹತೇಕ ಆಹಾರ ಉತ್ಪನ್ನಗಳಿಗೆ ಕೃತಕ ಬಣ್ಣ ಲೇಪನ ಮಾಡಲಾಗಿರುತ್ತದೆ. ಅಂತಹ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಜತೆಗೆ ಮಾರುಕಟ್ಟೆಯಲ್ಲಿ ರೆಡಿಮೇಡ್ ಆಹಾರಕ್ಕೆ ಬೇಡಿಕೆ ಹೆಚ್ಚಿದ್ದು, ಇದರ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮವಾಗುತ್ತದೆ. ಹಾಗಾಗಿ ಎಚ್ಚರ ವಹಿಸಬೇಕು. ಆಹಾರ ಪದಾರ್ಥದ ಉತ್ಪಾದನೆ ದಿನಾಂಕ, ಅವಧಿಯ ಬಗ್ಗೆ ಗಮನ ಇರಲಿ. ರೆಡಿಮೇಡ್ ಹಾಗೂ ಹೊರಗಿನ ಆಹಾರಕ್ಕಿಂತ ಮನೆಆಹಾರಕ್ಕೆ ಒತ್ತು ನೀಡಬೇಕು.

| ಕೆ.ಸಿ.ರಘು ಆಹಾರ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net