

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಮಾತಿದೆ. ಇದರ ಜತೆಗೆ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು ಮತ್ತು ಕೃತಕ ಬುದ್ಧಿಮತ್ತೆ (ಚ್ಟಠಿಜ್ಛಿಜ್ಚಿಜಿಚ್ಝ ಜ್ಞಿಠಿಜ್ಝಿ್ಝಜಛ್ಞಿ್ಚ) ರಂಗದಲ್ಲಿ ಜ್ಞಾನ ಗಳಿಸಬೇಕು ಹಾಗೂ ಸಂಶೋಧನಾತ್ಮಕ ಗುಣ ಬೆಳೆಸಿಕೊಳ್ಳಬೇಕು. ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನದೊಂದಿಗೆ ಇತರೆ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಆಲಸ್ಯಕ್ಕೆ ಅವಕಾಶ ನೀಡದೆ ಚಟುವಟಿಕೆಯಿಂದ ಇದ್ದರೆ ಕಲಿಕೆಗೆ ಹೆಚ್ಚು ಸಮಯ ಸಾಧ್ಯ. ಹಾಗಾಗಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು.
ಇನ್ನೊಬ್ಬರು ಮಾಡಿದ ಕೆಲಸವನ್ನೇ ತಾವೂ ಮಾಡುವ ಬದಲಿಗೆ ಭವಿಷ್ಯದಲ್ಲಿ ಉದಯಿಸುವ ಹೊಸ ಕ್ಷೇತ್ರದತ್ತ ಗಮನ ಹರಿಸಿದರೆ ಮುಂದೆ ಅವರೇ ನಾಯಕರಾಗಿ ಮಿಂಚಬಹುದು. ಉದಾಹರಣೆಗೆ- ಭವಿಷ್ಯದಲ್ಲಿ ಸೇನೆಯಿಂದ ಮೊದಲುಗೊಂಡು ಮಾಧ್ಯಮದವರೆಗೆ ಎಲ್ಲ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆಯೇ ಆವರಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಯುವಜನರು ಈಗಿನಿಂದಲೇ ಇಂತಹ ಕ್ಷೇತ್ರದಲ್ಲಿ ಸಂಶೋಧನೆ, ಆಳವಾದ ಅಧ್ಯಯನ ಕೈಗೊಂಡರೆ ವಿಶ್ವಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಬಹುದು. ಇಂತಹ ನವೀನ ಆಲೋಚನೆಗಳೇ ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ.
ಐಷಾರಾಮಿ ಜೀವನ ಬಯಸಬೇಡಿ: ಸರ್ ಎಂ. ವಿಶ್ವೇಶ್ವರಯ್ಯ, ಎ.ಪಿ.ಜೆ. ಅಬ್ದುಲ್ ಕಲಾಂ ಹೀಗೆ ಯಾರೆಲ್ಲ ಮಹನೀಯರ ಹೆಸರನ್ನು ಹೇಳಿದರೂ ಅವರ ಹಿಂದೆ ಒಂದು ಕಷ್ಟಮಯ ಜೀವನ ಇದ್ದೇ ಇರುತ್ತದೆ. ಇತರರಿಗೆ ಇಲ್ಲದ ಅನೇಕ ಕಷ್ಟಗಳು ಇರುತ್ತವೆ. ಅವರು ಅದನ್ನೆಲ್ಲ ಮೀರಿ ಸಾಧನೆ ಮಾಡಿರುತ್ತಾರೆ. ಅತ್ಯಂತ ಸಾಮಾನ್ಯ ಊರಿನ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ದೇಶದ ಅತ್ಯುನ್ನತ ವಿಜ್ಞಾನಿ ಆಗುವ ಕನಸು ಕಾಣುವುದೇ ಒಂದು ಪವಾಡ. ಮನೆಯಲ್ಲಿ ಓದಲು ಬೆಳಕೇ ಇಲ್ಲದಿದ್ದರೂ ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯನವರು ಕೈಗೊಂಡ ಕಾರ್ಯಗಳು ಶತಮಾನಗಳಾದರೂ ಅಚ್ಚಳಿಯದೆ ಉಳಿಯುತ್ತವೆ. ಕಷ್ಟವಿದ್ದರೂ ಅವರಿಗೆ ಗುರಿ ಇರುತ್ತಿತ್ತು. ಅದನ್ನು ಈಡೇರಿಸಿಕೊಳ್ಳುವ ಛಲ ಇರುತ್ತಿತ್ತು. ಆದರೆ ಇಂದು ಅನೇಕ ಮಕ್ಕಳು ಬಾಲ್ಯದಿಂದಲೇ ಐಷಾರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದು, ಕಷ್ಟಪಡುವ ಮನಸ್ಥಿತಿಯಲ್ಲಿಯೇ ಇಲ್ಲ. ಅದು ಓದಿಗೂ ಅನ್ವಯವಾಗುತ್ತದೆ. ಹೀಗೆ ಸುಖವಾಗಿ ಬೆಳೆಯುವವರಿಗೆ ಭವಿಷ್ಯದಲ್ಲಿ ಇಂತಹುದೇ ನಿರ್ದಿಷ್ಟ ಗುರಿ ಎನ್ನುವುದು ಇರುವುದು ಕಡಿಮೆ. ಅವರು ಕಷ್ಟಪಡುವ ಗೋಜಿಗೆ ಹೋಗುವುದೇ ಇಲ್ಲ. ಅಂತಹವರಿಂದ ದೇಶಕ್ಕೆ ಯಾವುದೇ ಕೊಡುಗೆ ನಿರೀಕ್ಷಿಸಲೂ ಸಾಧ್ಯವಿಲ್ಲ.
ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅದು ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವವರು ಯಶಸ್ಸು ಕಾಣುತ್ತಾರೆ. ಹಾಗಾಗಿ ನಮ್ಮ ಯುವಪೀಳಿಗೆ ಅಪ್ಪ ಮಾಡಿದ ಆಸ್ತಿ ಕರಗಿಸುವ ಬದಲು, ಸ್ವಂತ ಶ್ರಮದಿಂದ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು. ಅದು ಐಷಾರಾಮಿ ಜೀವನದಿಂದ ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬರುವುದನ್ನು ಕಲಿಯಬೇಕು. ಅದಕ್ಕೆ ಜ್ಞಾನವನ್ನು ಮೆಟ್ಟಿಲಾಗಿಸಿಕೊಳ್ಳಬೇಕು.
ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ‘ಹತ್ತಿದರೆ ಕಾರು, ಇಳಿದರೆ ಬಾರು, ಮತ್ತೆ ಕಾರುಬಾರು’ ಇದು ಜೀವನವಲ್ಲ. ಇಂದಿನ ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಪೋಷಕರ ಪಾತ್ರ ಮಹತ್ವವಾದದ್ದು. ಹಾಗಾಗಿ ಮಕ್ಕಳಿಗೆ ಆಸ್ತಿ ಮಾಡಿ ಇಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಆ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಮೌಲ್ಯಗಳನ್ನು ಕಲಿಸಿ. ದೇಶಭಕ್ತಿ ಬೆಳೆಸಿ, ಇತರರನ್ನು ಗೌರವದಿಂದ ನೋಡುವಂತಹ ಗುಣಗಳನ್ನು ರೂಢಿಸಿ. ಪರಿಸರದ ಬಗ್ಗೆ ಜಾಗೃತಿ ಮೂಡಿಸಿ.
ದೇಶಭಕ್ತಿ ಇರಲಿ: ದಕ್ಷಿಣ ಕೊರಿಯಾ ದೇಶದಲ್ಲಿ ಡಿಮಾನಟೈಸೇಷನ್ ಆದಾಗ ಅಲ್ಲಿನ ಪ್ರಜೆಗಳು ಕೈಗೊಂಡ ನಿಲುವು ನಿಜವಾದ ದೇಶಭಕ್ತಿ. ಆ ಸಂದರ್ಭದಲ್ಲಿ ಅವರು ಹೊರ ದೇಶಗಳ ವಸ್ತುಗಳ ವ್ಯಾಮೋಹ ತೊರೆದು ಸ್ವದೇಶಿಪ್ರೇಮ ಮೆರೆದರು. ಆ ಸಂದರ್ಭದಲ್ಲಿ ವಿಶ್ವದಾದ್ಯಂತ ಮನೆಮಾತಾಗಿದ್ದ ‘ಟೈಟಾನಿಕ್’ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಅದು ಕೊರಿಯಾ ನಿರ್ಮಾಣ ಮಾಡಿದ ಚಿತ್ರ ಅಲ್ಲ ಎಂಬ ಕಾರಣಕ್ಕೆ ಜನರು ತಿರಸ್ಕರಿಸಿದರು. ಇಡೀ ದೇಶದಲ್ಲಿ ಒಂದು ಟಿಕೆಟ್ ಸಹ ಯಾರೂ ಕೊಳ್ಳಲಿಲ್ಲ. ಇದು ನಿಜವಾದ ದೇಶಪ್ರೇಮ. ನಮ್ಮಲ್ಲೂ ಅಂತಹ ದೇಶಪ್ರೇಮ, ಭಾಷಾಪ್ರೇಮ, ಬೆಳೆಸಿಕೊಳ್ಳಬೇಕು. ಆ ಮೂಲಕ ‘ಮೇಕ್ ಇಂಡಿಯಾ’ ಯಶಸ್ಸು ಕಾಣಲು ಸಾಧ್ಯ.
ಸಮಯಕ್ಕೆ ಬೆಲೆ ಕೊಡಿ: ಮಕ್ಕಳು ಹಾಗೂ ಯುವಜನರ ಸಮಗ್ರ ಅಭಿವೃದ್ಧಿ ಹಾಗೂ ಯಶಸ್ಸಿಗೆ ಕಲಿಕೆಯ ಜತೆಗೆ ಕ್ರೀಡೆ, ಕಲೆ ಇತ್ಯಾದಿ ನಾನಾ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆದರೆ ಇಂದಿನ ಮಕ್ಕಳು ಮೊಬೈಲ್, ವಿಡಿಯೋ ಗೇಮ್ ನಂತಹ ಸಾಮಾಜಿಕ ಜಾಲತಾಣದ ಬಲೆಗೆ ಸಿಲುಕಿ ಸಮಯ ವ್ಯರ್ಥ ಮಾಡುವುದರ ಜತೆಗೆ ಚಟುವಟಿಕೆಗಳಿಂದ ಹಿಂದುಳಿಯುತ್ತಿದ್ದಾರೆ. ಹಾಗೆ ಮಾಡದೆ ಸಮಯಕ್ಕೆ ಮಹತ್ವ ನೀಡಿ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೆ, ಅಂದಿನ ಕೆಲಸ ಅಂದೇ ಮಾಡಿ ಮುಗಿಸುವ ಸಂಕಲ್ಪ ಮಾಡಿ. ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ. ಹಾಗಾಗಿ ಪ್ರತಿ ಕ್ಚಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಅದಕ್ಕಾಗಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ನಿದ್ರೆ, ಆಹಾರ, ವಿಶ್ರಾಂತಿಯ ಜೀವನಶೈಲಿ ಸಹ ಮುಖ್ಯ.
ದುಶ್ಚಟಗಳಿಂದ ದೂರವಿರಿ: ಆಧುನಿಕ ಜೀವನದಲ್ಲಿ ಕೌಟುಂಬಿಕ ವ್ಯವಸ್ಥೆ ನಶಿಸುತ್ತಿದೆ. ಹಾಗಾಗಿ ಗುರಿ ಸಾಧನೆ, ಯಶಸ್ಸಿನ ಜತೆಗೆ ಸಂಬಂಧಗಳಿಗೂ ಮಹತ್ವ ನೀಡಬೇಕು. ಕಲಿಕೆಯ ದಿನಗಳಲ್ಲಿ ಕೆಟ್ಟದ್ದು ಬೇಗ ಆಕರ್ಷಿಸುವ ಸಾಧ್ಯತೆಗಳು ಹೆಚ್ಚು. ಅಂತಹವುಗಳಿಂದ ದೂರವಿರುವ ಪ್ರಯತ್ನ ಮಾಡಿ. ನಮ್ಮವೈದ್ಯಕೀಯ ವೃತ್ತಿಜೀವನದಲ್ಲಿ ಅನೇಕ ರೋಗಿಗಳನ್ನು ನೋಡುವ ಸಂದರ್ಭ ಬರುತ್ತದೆ. ತಮಗೆ ಅರಿವೇ ಇಲ್ಲದ ಕಾರಣಕ್ಕೆ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾದ ಯುವಜನರು ನರಳುವುದನ್ನು ಕಂಡಾಗ ಬೇಸರವಾಗುತ್ತದೆ. ಯಾರೋ ಧೂಮಪಾನ ಮಾಡಿದ್ದನ್ನು ಒಳಸೆಳೆದುಕೊಂಡು ಅನೇಕರು ತಮ್ಮ ಜೀವನವನ್ನು ಸಂಕಷ್ಟಕ್ಕೆ ಒಡ್ಡಿಕೊಳ್ಳುತ್ತಾರೆ. ಇನ್ನು, ನೇರವಾಗಿ ತಾವೇ ದುಶ್ಚಟಗಳಿಗೆ ಬಲಿಯಾಗಿ ಕಾಯಿಲೆಗಳನ್ನು ಆಹ್ವಾನಿಸುವ ಯುವಜನರೂ ಇದ್ದಾರೆ. ಸರ್ಕಾರ, ವೈದ್ಯರು ಪದೇಪದೆ ಎಚ್ಚರಿಕೆ ನೀಡಿದರೂ, ಸಿಗರೇಟ್ ಪ್ಯಾಕಿನ ಮೇಲೆ ಅಪಾಯದ ಚಿಹ್ನೆ ಮುದ್ರಿಸಿದರೂ ಅದನ್ನು ಲೆಕ್ಕಿಸದೆ ಜೀವನವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವವರಿದ್ದಾರೆ.
ಯುವಜನರು ಇಂತಹ ದುಶ್ಚಟಗಳಿಂದ ದೈಹಿಕವಾಗಿಯಷ್ಟೆ ಅಲ್ಲದೆ ಮಾನಸಿಕವಾಗಿಯೂ ದುರ್ಬಲರಾಗುತ್ತಾರೆ. ಜೈವಿಕವಾಗಿಯೂ ದುರ್ಬಲವಾಗಿ, ಮುಂದಿನ ಪೀಳಿಗೆಯೇ ದುರ್ಬಲವಾಗುವ ಅಪಾಯವಿದೆ. ಮನುಕುಲ ಬೆಳವಣಿಗೆ ಹೊಂದಬೇಕು ಎಂದರೆ ಪ್ರತಿ ಪೀಳಿಗೆಯೂ ಆರೋಗ್ಯಕರವಾಗಿ ಹಾಗೂ ಉನ್ನತ ಬುದ್ಧಿಮತ್ತೆಯಿಂದ ಕೂಡಿರಬೇಕು. ದುಶ್ಚಟಗಳಿಂದ ದೂರವಿದ್ದಾಗ ಹೊಸ ಆಲೋಚನೆಗಳೆಡೆಗೆ ಮನಸ್ಸು ಹೊರಳುತ್ತದೆ. ಕೇವಲ ಉದ್ಯೋಗ, ಸಂಬಳದ ಹಿಂದೆಯೇ ಬಿದ್ದು ಅನೇಕ ಯುವಜನರು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇನ್ನು ದುಶ್ಚಟಗಳಿಂದ ದೂರಾಗಬೇಕು ಎಂದಾಕ್ಷಣ, ‘ನಾನು ನನ್ನ ದೇಹ. ಹೇಗೆ ಬೇಕಾದರೂ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ಅನೇಕರು. ಇದು ಅವರೊಬ್ಬರ ಜೀವನದ ವಿಚಾರವಲ್ಲ. ಅವರು, ನಿರಂತರ ಚಲನಶೀಲವಾದ ಸಮಾಜದ ಒಂದು ಭಾಗ. ಅವರು ಆರೋಗ್ಯಕರ ಜೀವನವನ್ನು ಸಾಗಿಸಿ ಮುಂದಿನ ಪೀಳಿಗೆಯನ್ನೂ ಆರೋಗ್ಯಕರವಾಗಿಸಿ, ಕುಟುಂಬ, ಗ್ರಾಮ ಹಾಗೂ ದೇಶಕ್ಕೆ ವಿಶಿಷ್ಟ ಕೊಡುಗೆ ಕೊಡಬೇಕಾಗಿರುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯೂ ಹೌದು. ಈ ನಿಟ್ಟಿನಲ್ಲಿ ಯುವಜನತೆ ಆಲೋಚಿಸಬೇಕು.
(ಲೇಖಕರು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರು)