ದಿವಸಾ ಸ್ಟೇಟಸ್​ಗಳ ಸಮಾರಾಧನೆ...

Girmit F
Published on
ಇದ ಒಂದ ವರ್ಷದ ಹಿಂದಿನ ಮಾತ, ನಮ್ಮ ಪಮ್ಯಾ ಮುಂಜ-ಮುಂಜಾನೆ ಫೋನ್ ಮಾಡಿ, ‘ನಾಡದ ನಮ್ಮಪ್ಪನ ಸೀಮ ಇಟ್ಗೋಳೊದ ಅದ. ನಿಮ್ಮವ್ವನ ಕರಕೊಂಡ ಬಾ’ ಅಂದಾ. ನಂಗ ಒಮ್ಮಿಕ್ಕಲೇ ಗಾಬರಿ ಆತ, ನಂಗ ಅವರಪ್ಪ ಹೋಗಿದ್ದ ಗೊತ್ತ ಇದ್ದಿದ್ದಿಲ್ಲ, ಇಂವಾ ಡೈರೆಕ್ಟ್ ವೈಕುಂಠ ಸಮಾರಾಧನಿಗೆ ಕರದನಲಾ ಅಂತ, ‘ನಿಮ್ಮಪ್ಪ ಯಾವಾಗ ಹೋದಾ ನಂಗ ಗೊತ್ತ ಇಲ್ಲಲಾ’ ಅಂತ ನಾ ಅಂದರ, ‘ಇವತ್ತಿಗೆ ಹನ್ನೊಂದ ದಿವಸ ಆತ. ನಿಂಗ ಗೊತ್ತಾಗಿಲ್ಲೇನ, ನಾ ನೀ ಅವತ್ತ ಬಂದಿ ಅಂತ ತಿಳ್ಕೊಂಡ ಕರದೆ’ ಅಂತ ಅಂದಾ. ಅಲ್ಲಾ ಪಾಪ ಅಂವಾ ಅವರಪ್ಪ ಸತ್ತಾಗ ಬಿಜಿ ಇದ್ದಾ. ಹಿಂಗಾಗಿ ಯಾರ ಬಂದಿದ್ರು, ಯಾರ ಬಿಟ್ಟಿದ್ರು ಅಂತ ಗೊತ್ತಾಗಿದ್ದಿಲ್ಲ. ಅಂವಾ ನಾನೂ ಅವತ್ತ ಬಂದ ಹೆಗಲ ಕೊಟ್ಟೇನಿ ಅಂತ ತಿಳ್ಕೊಂಡ ಆ ಭಿಡೆಕ್ಕ ವೈಕುಂಠ ಸಮಾರಾಧನಿಗೆ ಕರದಿದ್ದಾ.

ಹಂಗ ಅಂವಾ ನಮಗ ದೂರಿಂದ ರಿಲೇಟಿವ್, ಆದರ ಇದ್ದೂರಾಗ ಇದ್ವಿ. ಅದರಾಗ ಅವರಪ್ಪ ನಮ್ಮಪ್ಪನ ದೋಸ್ತ್ ಬ್ಯಾರೆ. ನಾ ನನಗ ಯಾಕ ಯಾರೂ ಹೇಳೇಲಾ ಅಂತ ಒಂದ ಮೂರ-ನಾಲ್ಕ ಮಂದಿಗೆ ಕೇಳಿದರ, ‘ನಮಗೂ ಏನ ಹೇಳಿದ್ದಿಲ್ಲ. ಅಂವಾ ಏನ ಅವರಪ್ಪ ಸತ್ತಾಗ ವಾಟ್ಸ್​ಆಪ್ ಸ್ಟೇಟಸ್ ಇಟ್ಟಿದ್ದನಲಾ ನಾವ ಅದನ್ನ ನೋಡೆ ಹೋಗಿದ್ವಿ, ನೀ ಸ್ಟೇಟಸ್ ನೋಡಲಿಲ್ಲೇನ’ ಅಂದಬಿಟ್ಟರ. ನಂಗ ತಲಿ ಗರಮ್ ಆತ.

ಅಲ್ಲರಿ ಹೆಂತಾ ಜನಾ ಅಂತೇನಿ, ಅಂವಾ ‘ನಮ್ಮಪ್ಪ ಸತ್ತಾನ’ ಅಂತ ಸ್ಟೇಟಸ್ ಇಟ್ಟಿದ್ದನಂತ ನಾವ ಅದನ್ನ ನೋಡಿ ಹೋಗಬೇಕಂತ. ಏನ ಕಾಲ ಬಂತ ಅಂತೇನಿ. ನಾ ಒಟ್ಟ ವಾಟ್ಸ್​ಆಪ್ ಒಳಗ ಸ್ಟೇಟಸ್ ನೋಡಂಗಿಲ್ಲ, ಇಡಂಗಿಲ್ಲ. ಆದರ ಮಂದಿಗೆ ಈ ಸುಡಗಾಡ ಸ್ಟೇಟಸ್ ಇಡೋದ, ನೋಡೊದ ಅದ ಒಂದ ಸ್ಟೇಟಸ್ ಆಗೇದ. ಇನ್ನ ನಂದೇನಿದ್ದರು ಫೇಸಬುಕ್ ಸ್ಟೇಟಸ್ ಇಷ್ಟ. ಅದು ಆವಾಗ ಇವಾಗ ಇಷ್ಟ, ಇವತ್ತ ನಿಮ್ಮ ಜೊತಿ ಒಂದಿಷ್ಟ ನನ್ನ ಫೇಸಬುಕ್ ಸ್ಟೇಟಸ್ ಹಂಚಗೋತೇನಿ ಓದರಿ.

ಒಂದ ಸರತೆ ನನ್ನ ಹೆಂಡತಿ ಫೋನ್ ಮಾಡಿದ್ದ ವಿಷಯ ಸ್ಟೇಟಸ್ ಹಾಕಿದ್ದೆ, ಆ ಸ್ಟೇಟಸ್ ಏನಿತ್ತಂದರ-

‘ರ್ರೀ, ಎಲ್ಲಿದ್ದೀರಿ?’

‘ಆಫೀಸನಾಗ, ಯಾಕ ಏನಾತ?’

‘ಏನಿಲ್ಲ, ಮಂಗಳಸೂತ್ರ ಕಟಗರಸ್ತ, ಅದಕ್ಕ ಆರಾಮ ಇದ್ದಿರೀಲ್ಲೊ ಅಂತ ಕೇಳಲಿಕ್ಕೆ ಫೋನ್ ಮಾಡಿದೆ’.

‘ಭಾಳ ಶಾಣ್ಯಾಕಿದ್ದಿ, ಫೋನ್ ಇಡ’

‘ರ್ರೀ, ಅನ್ನಂಗ ಬರಬೇಕಾರ ಮಂಗಳಸೂತ್ರಾ ಪೋಣಸಲಿಕ್ಕೆ ನೈಲನ್ ದಾರ ತೊಗಂಡ ಬರ್ರೀ’

‘ಮೂರ ತಿಂಗಳ ಹಿಂದ ಒಂದ ದೊಡ್ಡ ದಾರದುಂಡಿನ ತಂದ ಕೊಟ್ಟಿದ್ನೇಲಾ’

‘ಅದ ಖಾಲಿ ಆಗೇದ. ನೀವು ಗಟಾಯಿಸಿದ್ದ ಮಂಗಳಸೂತ್ರ ಮಾಡಸೊತನಕ ಇದ ಹಿಂಗ ಕಟಗರಸ್ಕೋತ ಇರೋದ’.

ಇದ ನನ್ನ ಸ್ಟೇಟಸ್ ಇತ್ತ. ಇದಕ್ಕ ಕೆಳಗ ಹೆಂತಿಂತಾ ಕಮೆಂಟ್ ಬಂದ್ವ ಅಂದರ

‘ಅಲ್ಲಾ ಎರಡ ಮಕ್ಕಳ ಆಗಿ ಆಪರೇಶನ್ ಆದರೂ ಇನ್ನೂ ಮಂಗಳಸೂತ್ರ ಕಟಗರಸೋದ ನಿಲ್ಲವಲ್ತಲೋ’ ಅಂತ ನಮ್ಮ ಅತ್ಯಾ ಕಮೆಂಟ್ ಮಾಡಿದರ, ‘ಹೆಂಡ್ತಿಗೆ ಒಂದ ಗಟಾಯಿಸಿದ್ದ ಮಂಗಳಸೂತ್ರ ಮಾಡಸಲಿಕ್ಕೆ ಆಗಂಗಿಲ್ಲ ಅಂದರ ನೀ ಹೆಂತಾ ಗಂಡ(ಸ)ಲೇ’ ಅಂತ ಬೀಗರ ಕಡೆದವರ ಕಮೆಂಟ್ ಮಾಡಿದರ. ಏನ್ಮಾಡ್ತೀರಿ, ಯಾಕರ ಫೇಸಬುಕ್ ನಾಗ ಸ್ಟೇಟಸ್ ಹಾಕಿದ ಅನ್ನೊ ಹಂಗ ಆತ.

ಮತ್ತೊಂದ ಸ್ಟೇಟಸ್ ನೋಡ್ರಿ: ಮುಂಜಾನೆ ಹಾಸಗಿಂದ ಎದ್ದ ಕೂಡಲೇ ಹೆಂಡತಿ ಗಂಡಗ ನಮಸ್ಕಾರ ಮಾಡಿ ಮುಂದಿನ ಕೆಲಸಕ್ಕ ಹೋಗಬೇಕು ಅಂತ ಪದ್ಧತಿ... ಯಾಕ ಗೊತ್ತೆನ? ಯಾಕಂದರ ಹೆಂಡ್ತಿ ರಾತ್ರಿ ಬೆಳತನಕ ಗಂಡಗ ಹಾಸಿಗ್ಯಾಗ ಹಾಕಿ ಒದ್ದಿರತಾಳ ಅದಕ್ಕ. ಹಿಂಗ ಬೆಳತನಕ ಒದ್ದ ಮುಂಜಾನೆ ಎದ್ದ ನಮಸ್ಕಾರ ಮಾಡೋ ಹೆಂಡ್ತಿಗೆ ಆದರ್ಶ ಹೆಂಡ್ತಿ ಅಂತ ಕರಿತಾರ. ಹಂಗ ಯಾರದರ ಹೆಂಡ್ತಿ ಮುಂಜಾನೆ ಎದ್ದ ಗಂಡಗ ನಮಸ್ಕಾರ ಮಾಡಂಗಿಲ್ಲಾ ಅಂದರ ಅಕಿ ಆದರ್ಶ ಅಲ್ಲಾ ಅಂತ ಅಲ್ಲ ಮತ್ತ... ಅದರ ಅರ್ಥಾ ಅಕಿ ರಾತ್ರಿ ಗಂಡಗ ಒದ್ದಿಲ್ಲಾ ಅಂತ....

ಇದನ್ನ ನೋಡಿ ಜಗ್ಗೆ ಮಂದಿ ಕಮೆಂಟ್ ಮಾಡಿದರ, ಕಮೆಂಟ್ ಏನ- ‘ಮುಂಜಾನೆ ಎದ್ದ ಕೂಡಲೇ ಹೆಂಡತಿ ಗಂಡಗ ನಮಸ್ಕಾರ ಮಾಡಬೇಕೊ ಇಲ್ಲೋ’ ಅಂತ ಡಿಬೇಟ್ ಮಾಡಿದರ. ಅಲ್ಲಾ ಇದ ಕಲಿಯುಗ ಯಾ ಹೆಂಡ್ತಿ ಗಂಡಗ ಎದ್ದ ಕೂಡಲೇ ನಮಸ್ಕಾರ ಮಾಡ್ತಾಳ ಹೇಳ್ರಿ, ನಾ ದೊಡ್ಡಿಸ್ತನಾ ಮಾಡಿ ಏನ ದಿವಸಾ ನನ್ನ ಹೆಂಡ್ತಿ ಎದ್ದ ಕೂಡಲೇನ ನಮಸ್ಕಾರ ಮಾಡ್ತಾಳ ಅನ್ನೋರಗತೆ ಸ್ಟೇಟಸ್ ಹಾಕಿದ್ದೆ.

ಮುಂದ ಒಂದ ಸರತೆ ಅಕ್ಟೋಬರ್ 4ಕ್ಕ ನನ್ನ ಹೆಂಡ್ತಿದ ಮೂವತ್ತ ನಾಲ್ಕನೇ ಬರ್ತ್​ಡೇ ಇತ್ತ, ಅವತ್ತ ಮಹಾಲಯ ಅಮವಾಸಿ ಬ್ಯಾರೆ ಬಂದಿತ್ತ, ಅವತ್ತ ಹೆಂಡ್ತಿಗೆ ವಿಶ್ ಮಾಡ್ಲಿಕ್ಕೆ ಈ ಸ್ಟೇಟಸ್ ಹಾಕಿದ್ದೆ.

ಇವತ್ತ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ. ನಮ್ಮ ಪೂರ್ವಜರನೆಲ್ಲ ನೆನಪ ಮಾಡ್ಕೊಂಡ ಮಾಡ್ಕೊಂಡ ಪಕ್ಷ ಮಾಡಿ ನೀರ ಬಿಡೋದು... ಮ್ಯಾಲೆ ನನ್ನ ಹೆಂಡತಿ ಪ್ರೇರಣಾನ ಬರ್ತ್​ಡೇ... ಇದನ್ನೇನ ನೆನಪ ಮಾಡ್ಕೋಳೊ ಪ್ರಸಂಗ ಬರಂಗಿಲ್ಲ. ಅಲ್ಲಾ ಅಕಿ ಮರಿಲಿಕ್ಕೆ ಬಿಡಂಗಿಲ್ಲ. ಅದ ಅಲ್ಲದ ಇವತ್ತ world animal day ಬ್ಯಾರೆ... ನನಗರ ಏನ ಸೆಲೆಬ್ರೆಟ್ ಮಾಡ್ಬೇಕು ಏನ ಬಿಡಬೇಕು ತಿಳಿವಲ್ತು. ಹಂಗ ಹೆಂಡತಿ ಬರ್ತ್​ಡೇ ಸೆಲೆಬ್ರೆಟ್ ಮಾಡಿದರ ನಮ್ಮ ಪೂರ್ವಜರ ತಪ್ಪ ತಿಳ್ಕೋತಾರ. ಇನ್ನ ಹೆಂಡ್ತಿ ಬರ್ತ್​ಡೇ ದಿವಸ world animal day celebrate ಮಾಡಿದರ ಹೆಂಡತಿ ತಪ್ಪ ತಿಳ್ಕೋತಾಳ. ಹಂಗ ಹೆಂಡತಿ ಬರ್ತ್​ಡೇ ಮತ್ತ world animal day ಎರಡು ಕ್ಲಬ್ ಮಾಡಿ ಸೆಲೆಬ್ರೆಟ್ ಮಾಡಬಹುದು. ಆದರ ಪೂರ್ವಜರ ಪಕ್ಷ ಮಾತ್ರ ಪ್ರತ್ಯೇಕ ಮಾಡಬೇಕು. ಅಂತ ಸ್ಟೇಟಸ್ ಹಾಕಿದ್ದೆ, ಈ ಸ್ಟೇಟಸ್ ನೋಡಿ ಮಂದಿ ನನ್ನ ಹೆಂಡ್ತಿಗೆ ವಿಶ್ ಮಾಡಿದರ ಖರೆ ಆದರ ಕೆಳಗ ಹೆಂತಿಂತಾ ಕಮೆಂಟ್ ಮಾಡಿದರ ಅಂದ್ರಿ

ಯಾರೊ ಹಿರೇಮನಷ್ಯಾರ- ‘ಏನಪಾ ಹೆಂಡ್ತಿ ಬರ್ತ್​ಡೇ ದಿವಸ ಪಿತೃಪಕ್ಷದ ಬಗ್ಗೆ ಬರದಿ ಅಲಾ, ವಳತ ಅನ್ನ’ ಅಂತ ಅಂದರು, ಅಲ್ಲಾ ಅಕಿ ಬರ್ತ್​ಡೇ ದಿವಸ ಸರ್ವಪಿತೃ ಅಮವಾಸಿ ಬಂದರ ನಾ ಏನ್ಮಾಡಬೇಕ.

ಮತ್ತೊಬ್ಬರ, ‘ಹೆಂಡ್ತಿ ಬರ್ತ್​ಡೇಕ್ಕ ಡಿಟ್ಟ್ಝ ಚ್ಞಜಿಞಚ್ಝ ಛಚಢ ಅಂತ ಬರದಿ ಅಲಾ’ ಅಂದರು.

ಇನ್ನ ಭಾಳ ಮಂದಿಗೆ ಸಿಟ್ಟ ಬಂದದ್ದ ಹೆಂಡ್ತಿ ವಯಸ್ಸ್ ಓಪನ್ ಆಗಿ 34 ಅಂತ ಬರದ ಕಾಟ ಹೊಡದ ಹಾಕಿದ್ದ. ಹಂಗ ಹೆಣ್ಣಮಕ್ಕಳಿಗೆ ವಯಸ್ಸ ಕೇಳಬಾರದಂತ. ಅದರಾಗ ನಾ ಡೈರೆಕ್ಟ್ ಫೇಸಬುಕ್ ಒಳಗ ಹಾಕಿ ಅಕಿ ಫ್ರೇಂಡ್ಸ್ ಕಡೆ ಬೈಸ್ಗೊಂಡೆ. ಅಲ್ಲಾ ಅವತ್ತ ಲಾಸ್ಟ್ ಬಿಡ್ರಿ, ಹಂಗ ಆ ಮಾತಿಗೆ ಈಗ ಎಂಟ ವರ್ಷ ಆತ ನಾ ಮತ್ತೊಬ್ಬರದ ಬಿಡ್ರಿ ನನ್ನ ಹೆಂಡ್ತಿ ವಯಸ್ಸ ಸಹಿತ ಕೇಳಲಿಕ್ಕೆ ಹೋಗಿಲ್ಲಾ. ಹಿಂಗೆಲ್ಲ ಹುಚ್ಚುಚಾಕಾರ ಫೇಸಬುಕ್ ಸ್ಟೇಟಸ್ ಹಾಕಿ ನಾ ಏನೇನರ ಕಂಟ್ರೋವರ್ಸಿ ಮಾಡ್ಕೋತಿರ್ತೆನಿ. ಆದರೂ ನಾ ಏನ ಸ್ಟೇಟಸ್ ಹಾಕೋದ ಬಿಟ್ಟಿಲ್ಲ ಮತ್ತ.

ಆದರೂ ಜನಾ ಏನ ಅನ್ನರಿ ತಮಗೊಂದ ಸ್ವಂತ ಸ್ಟೇಟಸ್ ಇರಲಿ ಬಿಡಲಿ ಫೇಸಬುಕ್, ವಾಟ್ಸ್​ಆಪ್ ಒಳಗ ಸ್ಟೇಟಸ್ ಹಾಕೋದ ಬಿಡಂಗಿಲ್ಲ. ನನ್ನ ಹಿಡಕೊಂಡ ಹೇಳಲಿಕತ್ತೇನಿ ಮತ್ತ. ಇದು ಒಂದ ಚಟಾ ಆಗೇದ ಅಂದರೂ ಅಡ್ಡಿಯಿಲ್ಲ. ಮುಂಜಾನೆ ಎದ್ದ ಕೂಡ್ಲೇನ ಮಂದಿ ಸ್ಟೇಟಸ್ ನೋಡೊದ, ಕಮೆಂಟ್ ಮಾಡೋದು. ಒಂಥರಾ ದಿವಸಾ ಬೆಳಕ ಹರದರ ಈ ಸ್ಟೇಟಸಗೊಳದ್ದ ಸಮಾರಾಧನೆ ಶುರು ಆಗ್ತದ. ಎಲ್ಲ ಬಿಟ್ಟ ಇವತ್ತ ಈ ಸ್ಟೇಟಸ್ ವಿಷಯ ಬರಿಲಿಕ್ಕೆ ಎರಡ ಕಾರಣ ಒಂದೂ ಈ ಫೇಸಬುಕ್, ವಾಟ್ಸ್ ಆಪ್ ಎರಡೂ ಬಂದಿದ್ದ ಈ ಫೆಬ್ರುವರಿ ತಿಂಗಳ ಒಳಗ.

ಇನ್ನೊಂದ ಆ ಪಮ್ಯಾನ ಅಪ್ಪಂದ ಮೊನ್ನೆ ವರ್ಷಾಂತಕ ಇತ್ತಂತ, ಅಂವಾ ಇನ್ವಿಟೇಶನ್ ಕಾರ್ಡ್ ಸ್ಟೇಟಸ್ ಇಟ್ಟಿದ್ದನಂತ, ಇನ್ನ ನಾ ವಾಟ್ಸ್​ಆಪ್ ಸ್ಟೇಟಸ್ ನೋಡಂಗಿಲ್ಲಾ. ಹಿಂಗಾಗಿ ನಾ ಹೋಗಲಿಲ್ಲಾ. ಸ್ಟೇಟಸ್ ನೋಡಲಾರದ ತಪ್ಪಿಗೆ ರವಾಪಾಯಸ, ಕುಂಬಳಕಾಯಿ ಘಾರ್ಗಿ ತಪ್ಪಿಸ್ಗೊಂಡೆ ಅನ್ನರಿ.

(ಲೇಖಕರು ಹಾಸ್ಯ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net